ಸಂಧ್ಯಾರಾಗ

ಮೊದಲ ಸಲ ‘ಕಾದಂಬರಿ ಸಾರ್ವಭೌಮ’ ಎಂದೇ ಹೆಸರಾದ, ಕನ್ನಡ ಸಾಹಿತ್ಯದ ಪ್ರಗತಿಶೀಲ ಚಳುವಳಿಯ ರೂವಾರಿಯಾದ ಅ.ನ.ಕೃಷ್ಣರಾಯರ “ಸಂಧ್ಯಾರಾಗ” ಕಾದಂಬರಿಯನ್ನು ಓದಿದೆ. ಕಾದಂಬರಿಯಲ್ಲಿ ಕೆಲವು ಇಷ್ಟವಾದವು, ಇನ್ನು ಕೆಲವು ಕಷ್ಟವಾದವು. ಬಹುಶಃ ಎಪ್ಪತ್ತು-ಎಂಬತ್ತು ವರ್ಷದಷ್ಟು ಹಿಂದಿನ ಕಾದಂಬರಿಯನ್ನು ಈಗಿನ ಯುವ ಪೀಳಿಗೆಯಾದ ನಾನು, ಓದಿ ಅರ್ಥ ಮಾಡಿಕೊಂಡ ಪರಿಯಲ್ಲಿರುವ  ವ್ಯತ್ಯಾಸಗಳೇ ಕೆಲವು ವಿಷಯ ಇಷ್ಟ ಆಗದೇ ಇರುವುದಕ್ಕೆ ಕಾರಣವೂ ಇರಬಹುದು. ಪ್ರಪ್ರಥಮವಾಗಿ ಇಷ್ಟವಾದ ಸಂಗತಿಗಳ ಪಟ್ಟಿ ಮಾಡುವ.

ಮೊದಲಿಗೆ, ಕಾದಂಬರಿ ಓದಿಸಿಕೊಂಡು ಹೋಗುವ ರೀತಿ. ಎಲ್ಲಿಯೂ ನೀರಸ ಅನಿಸುವುದಿಲ್ಲ. ಓದುತ್ತಿರುವಷ್ಟರಲ್ಲೇ ಕಾದಂಬರಿ ಮುಗಿದದ್ದೂ ಸಹ ತಿಳಿಯುವುದಿಲ್ಲ. ಹಾಗೇ ಒಂದು ಸನ್ನಿವೇಶದಿಂದ ಇನ್ನೊಂದು ಸನ್ನಿವೇಶಕ್ಕೆ ಅದು ಬದಲಾವಣೆ ಹೊಂದುವ ರೀತಿ ತುಂಬಾ ಇಷ್ಟವಾಯಿತು. ಕಾದಂಬರಿಯ ವಿಷಯ ಅತ್ಯದ್ಭುತ, ಒಂದೊಂದು ಪಾತ್ರ ನಮ್ಮಲ್ಲಿರುವ ಒಂದೊಂದು ಗುಣಗಳ ಪ್ರತಿನಿಧಿಯಾಗಿವೆಯೇನೋ ಎನ್ನಿಸುತ್ತದೆ. ಕರುಣೆಗೆ ಮೀನಾಕ್ಷಮ್ಮನವರ ಪಾತ್ರ, ಎಲ್ಲರನ್ನೂ ಆದರದಿಂದ ಕಾಣಲು ಇರುವ ರಾಯರ ಪಾತ್ರ, ದುರಹಂಕಾರದ ಪ್ರತೀಕವಾಗಿ ರಾಮುವಿನ ಪಾತ್ರ, ಸಂಗೀತದ ಅದಮ್ಯ ಕಲಾಭಿಮಾನಿಯ ಪಾತ್ರದಲ್ಲಿ ಲಕ್ಷ್ಮಣ, ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವ ಪಾತ್ರದಲ್ಲಿ ಸಾವಿತ್ರಮ್ಮ, ಆದರ್ಶ ಪತ್ನಿ, ಸೊಸೆಯಾಗಿ ಜಯ, ವಿಧೇಯರಾಗಿ ಶಾಮಣ್ಣನವರು, ಮುಗ್ಧಳಾಗಿ ಶಾಂತ ಹೀಗೆ ಪ್ರತಿಯೊಂದು ಪಾತ್ರ ತನ್ನದೇ ಆದ ವೈಶಿಷ್ಟ್ಯತೆಯಿಂದ ಮನಸಲ್ಲಿ ನಿಲ್ಲುತ್ತವೆ. ಎಲ್ಲೂ ಯಾವ ಪಾತ್ರವನ್ನು ನಿರ್ಲಕ್ಷಿಸಿದರು ಎಂದೆನ್ನಿಸುವುದಿಲ್ಲ. ಮುಕ್ತಾಯದ ಹೊತ್ತಿಗೆ ಎಲ್ಲವೂ ಸಮರ್ಪಕವಾಗಿ ಮುಗಿಯುತ್ತವೆ. ಯಾವ ಪಾತ್ರವನ್ನೂ ಕಡೆಗಣಿಸಿಲ್ಲ.

ಮನುಷ್ಯನ ವ್ಯಕ್ತಿತ್ವ ರೂಪುಗೊಳ್ಳುವದರಲ್ಲಿ ನಾವು ತುಂಬಾ ಮೆಚ್ಚಿದ ವ್ಯಕ್ತಿಯನ್ನು ಅನುಸರಿಸುವುದು ಸಹಜ. ಇದನ್ನು ಶ್ರೀನಿವಾಸ ರಾಯರ ವ್ಯಕ್ತಿತ್ವ ರೂಪುಗೊಂಡ ಬಗೆಯಲ್ಲಿ ಕಾಣಬಹುದು. ಮಹಾಭಾರತದ ಕರ್ಣನ ಪಾತ್ರವನ್ನು ತುಂಬಾ ಮೆಚ್ಚಿದ್ದ ರಾಯರು ದಯಾಮಯರಾಗಿದ್ದರು ಎನಿಸುತ್ತದೆ. ಕರ್ಣನ ಮೇಲಿದ್ದ ತಮಗಿದ್ದ ಭಕ್ತಿ ಪ್ರೀತಿಗಳನ್ನು ಅವರು ಜೀವನದಲ್ಲಿಯೂ ಅಳವಡಿಸಿಕೊಂಡಂತೆ ತೋರುತ್ತದೆ. ಎರಡನೇ ಮದುವೆಗೆ ತಮ್ಮ ಪತ್ನಿಯೇ ಬಲವಂತ ಪಡಿಸಿದಾಗ, ತಾಯಿಯ ಮಾತಿಗೆ ಬೆಲೆಕೊಟ್ಟು ಕರ್ಣ ದುರ್ಯೋಧನನನ್ನು ಬಲಿ ಕೊಟ್ಟಂತೆ, ತಾವು ತಮ್ಮ ಮೊದಲ ಪತ್ನಿಯನ್ನು ಬಲಿ ಕೊಡುತ್ತೆವೇನೋ ಎಂದು ನೊಂದುಕೊಳ್ಳುತ್ತಾರೆ. ರಾಯರ ಔದಾರ್ಯ, ತುಂಬು ಕುಟುಂಬದ ಚಿತ್ರಣ, ಹಳ್ಳಿಯ ಬದುಕು, ಅದು ಒಂದಕ್ಕೊಂದು ಬೆಸೆದುಕೊಂಡ ರೀತಿ, ನಂತರ ಬೆಂಗಳೂರು ನಗರದ ವಾಸ, ಬದಲಾವಣೆಗೆ ಒಗ್ಗಿಕೊಳ್ಳುವ ಮನುಷ್ಯನ ಜೀವನ ಎಲ್ಲವೂ ಕಾದಂಬರಿಯಲ್ಲಿ ಸುಲಲಿತವಾಗಿ ನದಿಯ ಒಳ ಹರಿವಿನಂತೆ ಮೂಡಿ ಬಂದಿದೆ.

ಲಕ್ಷ್ಮಣನ ಸಂಗೀತ ಕಲೆಯನ್ನು ಹೇಳುವಲ್ಲಿ ಅ.ನ.ಕೃ ರವರು ಸೂಕ್ಷ್ಮವಾಗಿ ಮೀಮಾಂಸೆಯ ಭಾಗಗಳನ್ನೂ ಪರಿಚಯಿಸಿದ್ದಾರೆ. “ಕಲಿಯುವವರೆಲ್ಲರಿಗೂ ಶಾಸ್ತ್ರ ಬರುತ್ತೆ, ಅದು ಬುದ್ಧಿಗೋಚರ. ಆದರೆ, ಕಲೆ ಬರುವುದಿಲ್ಲ, ಅದು ಚಿತ್ತವೇದ್ಯ”. ಈ ಮಾತು ನನಗೆ ಪ್ರತಿಭೆ ಮತ್ತು ಪಾಂಡಿತ್ಯಕ್ಕೆ ಇರುವ ವ್ಯತ್ಯಾಸವನ್ನು ಹೇಳಿದಂತಿದೆ. ಅದೇ ರೀತಿ ಗೋಪಾಲನ ಬಾಯಿಂದ ಶಿಕ್ಷಣ ಪದ್ಧತಿಯ ಬಗೆಗೆ ನುಡಿಸುವ ಮಾತು ಇಂದಿಗೂ ಅನ್ವಯಿಸುತ್ತದೆ, “ಅಚ್ಚಿನ ಇಟ್ಟಿಗೆಗಳನ್ನು ತಯಾರಿಸಿದಂತೆ ಎಲ್ಲಾ ವಿದ್ಯಾರ್ಥಿಗಳಿಗೂ ಒಂದೇ ಬಗೆಯ ಶಿಕ್ಷಣವನ್ನಿತ್ತು, ಒಂದೇ ಎರಕದಲ್ಲಿ ಅವರನ್ನು ಹುಯ್ಯುತ್ತಿರುವುದು ಕಾರ್ಖಾನೆಯ ಪದ್ಧತಿ”. ಈ ಮಾತು ಈಗಿನ ನಮ್ಮ ಶಿಕ್ಷಣ ಪದ್ಧತಿಗೆ, ಬದಲಾಗದಿದ್ದರೆ, ಇನ್ನು ಮುಂದಕ್ಕೂ  ಅನ್ವಯಿಸುತ್ತದೆ.

ಸಂಧ್ಯಾರಾಗ ಮುಖ್ಯವಾಗಿ ಒಬ್ಬ ಕಲಾವಿದನ ಜೀವನವನ್ನು ಕೇಂದ್ರವಾಗಿಟ್ಟುಕೊಂಡು, ಅದರ ಸುತ್ತಲೂ ಬೇರೆಲ್ಲ ಪಾತ್ರಗಳನ್ನೂ ಹೆಣೆದಿರುವುದರಿಂದ ಸಹಜವಾಗಿ ಕಲೆಯ ಕುರಿತಾದದನ್ನು ಮನಮುಟ್ಟುವಂತೆ ಹೇಳಿದ್ದಾರೆ. “ಜನತೆಯ ಆಸೆ ಮುಗಿಯುವಲ್ಲಿ ಕಲಾವಿದನ ಆಸೆ ಪ್ರಾರಂಭವಾಗುತ್ತದೆ. ಜನತೆಗೆ ಯಾವುದು ಹಿತವಾಗುತ್ತದೋ ಅದು ಕಲಾವಿದನಿಗೆ ಅಹಿತವಾಗುತ್ತದೆ. ಜನತೆಗೆಲ್ಲಿ ತೃಪ್ತಿ ತೋರುವುದೋ ಕಲಾವಿದನಲ್ಲಿ ಅತೃಪ್ತಿ ಮೊಳೆಯುತ್ತದೆ”- ಈ ವಾಕ್ಯ ಇಡೀ ಕಲಾ ಸಮುದಾಯಕ್ಕೆ ಅಂದರೆ ಸಂಗೀತ, ಸಾಹಿತ್ಯ, ಶಿಲ್ಪಕಲೆ ಮುಂತಾದ ಎಲ್ಲರಿಗೂ ಅನ್ವಯಿಸುತ್ತದೆ. ಇನ್ನೇನೋ ಮಾಡಬೇಕು, ಮತ್ತೇನನ್ನೋ ಹೇಳಬೇಕು ಎನ್ನುವ ಮನಸ್ಸಿನ ಹಂಬಲವನ್ನು ಸೂಚಿಸುತ್ತದೆ. ಮನಸ್ಸಿನಲ್ಲಿ ಮೂಡಿದ ಎಲ್ಲವನ್ನು ಕಲೆಯ ಮೂಲಕ ವ್ಯಕ್ತಪಡಿಸುವುದು ಅಸಾಧ್ಯ. ಎಣಿಸಿದಷ್ಟನ್ನು ಅಭಿವ್ಯಕ್ತಪಡಿಸುವುದು ಸಾಧ್ಯವಾಗದಿರುವುದು ಬುದ್ಧಿಗಿರುವ ಸಹಜ ಕುಂಟುತನ.

ಶ್ರೀನಿವಾಸ ರಾಯರ ಮನೆಯಲ್ಲಿ ಪೂರ್ವಜರು ಯಾರು ಅಂತಹ ಸಂಗೀತ ವಿದ್ವಾನರಿಲ್ಲದಿದ್ದರೂ ಲಕ್ಷ್ಮಣನಲ್ಲಿ ಅವ್ಯಾಹತವಾಗಿ ಬಂದ ಸಂಗೀತ ವಿದ್ಯೆ ಪೂರ್ವ ಜನ್ಮದ ಸಂಸ್ಕಾರದ ಫಲ ಎಂಬುದನ್ನು ಎತ್ತಿ ತೋರಿಸುತ್ತದೆ. ನಾದದೇವಿ ಎಲ್ಲರಿಗೂ ಸುಲಭಕ್ಕೆ ಒಲಿಯುವುದಿಲ್ಲ, ಬಹು ಜನ್ಮದ ಸಂಸ್ಕಾರವಿದ್ದರೆ ಮಾತ್ರ ಆಕೆ ಬಂದು ನಮ್ಮಲ್ಲಿ ನೆಲೆಸುತ್ತಾಳೆ. ಈ ನಿಟ್ಟಿನಲ್ಲಿ ಅನಕೃ ರವರು ಅಲ್ಲಲ್ಲಿ ಮಾಡಿಕೊಡುವ ರಾಗಗಳ ಪರಿಚಯ, ಕೀರ್ತನೆಗಳ ಸಾಲುಗಳು ಕಾದಂಬರಿಯನ್ನು ಮತ್ತಷ್ಟು ಕಳೆಗಟ್ಟಿಸುತ್ತವೆ.

ಇನ್ನು ಕೇವಲ ಪತಿವ್ರತೆಯರ ಕಥೆಗಳನ್ನು ಕೇಳಿದ್ದ ನಮಗೆ ಅಪೂರ್ವ ಎನಿಸುವಂತಹ ಸತಿವ್ರತರು ಇದ್ದಾರೆ ಎಂಬುದನ್ನು ರಾಯರ ಪಾತ್ರದ ಮೂಲಕ ತೋರಿಸಿದ್ದಾರೆ. ನನಗೆ ಕೃತಿಯಲ್ಲಿ ಸ್ವಲ್ಪ ಅಸಮಾಧಾನ ಮೂಡಿಸಿದ ಸಂಗತಿ ಈ ವಿಷಯದಲ್ಲೇ, ಅದೂ ಲಕ್ಷ್ಮಣನ ವಿಷಯದಲ್ಲಿ. ಶ್ರೀನಿವಾಸ ರಾಯರ ಮರಣಾನಂತರ  ತಾನಾಯ್ತು, ತನ್ನ ಸಂಗೀತಾಭ್ಯಾಸವಾಯ್ತು ಎಂದು ಅದರಲ್ಲೇ ತಲ್ಲೀನನಾದ ಲಕ್ಷ್ಮಣ, ಗರ್ಭಿಣಿಯಾದ ತನ್ನ ಹೆಂಡತಿಯ ಕಾಳಜಿಯನ್ನು ತಾನು ಮಾಡಬೇಕಿತ್ತಲ್ಲವೇ? ತನ್ನ ಅಣ್ಣ ಮತ್ತು ಅತ್ತಿಗೆ, ತನ್ನ ಹೆಂಡತಿಯನ್ನು ಹೀನಾಯವಾಗಿ ದುಡಿಸಿಕೊಳ್ಳುತ್ತಿದ್ದಾರೆ ಎಂದು ನೋಡಿಯೂ ಏನೂ ಮಾಡದೇ ಇದ್ದದ್ದು ಎಷ್ಟು ಸರಿ? ಆಕೆಗೆ ತಾನು ಸಹಾಯಕನಾಗಿ ನಿಲ್ಲಬಹುದಿತ್ತಲ್ಲವೇ? ಹೆಂಡತಿಯ ಮರಣಾನಂತರ ಊರೂರಲೆದು ತಂಜಾವೂರಿಗೆ ಬಂದು ಅಲ್ಲಿ ಗುರುಗಳ ಸೇವೆ ಮಾಡುತ್ತಾ, ಗುರು ಪತ್ನಿಯನ್ನು ತಾಯಿ ಸ್ಥಾನದಲ್ಲಿ ನೋಡುತ್ತಾ ಅಲ್ಲಿ ಮನೆ ಕೆಲಸವನ್ನೆಲ್ಲವನ್ನೂ ಮಾಡುವಷ್ಟು ವಿವೇಚನೆ ಇದ್ದ ವ್ಯಕ್ತಿ, ಹೆಂಡತಿಗೂ ಸಹಾಯ ಮಾಡಬಹುದಿತ್ತಲ್ಲ? ತನ್ನ ಹೆಂಡತಿಯ ಸಾವಿಗೆ ತನ್ನ ಅಣ್ಣ ಮತ್ತು ಅತ್ತಿಗೆಯ ಕ್ರೂರ ನಡತೆ ಮಾತ್ರ ಹೊಣೆ ಎಂದು ತನಗೆ ತಾನೇ ಸಾಂತ್ವನ ಮಾಡಿಕೊಂಡು, ತನ್ನ ತಪ್ಪೇನೂ ಇಲ್ಲ ಎಂದು, ಕೇವಲ ಹೆಂಡತಿಯನ್ನು ನೆನೆದು ದುಃಖ ಪಡುವ ಲಕ್ಷ್ಮಣನ ಈ ಮುಖ ನನಗಷ್ಟು ಇಷ್ಟವಾಗಲಿಲ್ಲ.

ಹಿಂಸೆಯಿಂದ ದೊಡ್ದವರಾಗುವುದಕ್ಕಿಂತ ಕ್ಷಮಿಸಿ ಚಿಕ್ಕವರಾದರೂ ಚಿಂತೆಯಿಲ್ಲ ಎನ್ನುವ ಮನೋಭಾವ ಶಾಂತ ಮೂರ್ತಿಯಾದ ಶಾಂತಾಳಲ್ಲಿ ಕಾಣಿಸುತ್ತದೆ. ಅದೇ ಗಂಡನಿಗೆ ಪ್ರೇರಣೆಯಾಗಿ ವೆಂಕಟೇಶ, ರಾಮುವಿಗೆ ಸಹಾಯ ಮಾಡಲು ಕಾರಣವಾಗುತ್ತದೆ. ರಾಮುವಿನ ಪಾತ್ರ ಮೊದಲಿಗೆ ಕ್ರೂರಿಯಾಗಿ, ಭ್ರಷ್ಟನಾಗಿ ಕೊನೆಗೆ ಜೀವನದಲ್ಲಿ ಸಹಬಾಳ್ವೆಯ ಪಾಠ ಕಲಿತು ಬದಲಾವಣೆಯ ಗಾಳಿ ಬೀಸಿ ನೆಮ್ಮದಿಯಿಂದಿರುವದನ್ನು ಚಿತ್ರಿಸಿದ್ದಾರೆ. ಇದು ನಮ್ಮ ಜೀವನಕ್ಕೂ ಅನ್ವಯಿಸುತ್ತದೆ. ದ್ವೇಷ ಮತ್ತೆ ದ್ವೇಷಕ್ಕೆ ಮರಿ ಹಾಕುತ್ತದೆಯೇ ವಿನಃ ಮುಕ್ತಾಯವಾಗುವುದಿಲ್ಲ.

ದಕ್ಷಿಣಾದಿ ಸಂಗೀತವೆಂದರೆ ಕೇವಲ ಲಯ ಪ್ರಧಾನವಾದ ಸಂಗೀತವೆಂಬುದು ಈಗಲೂ ಮನೆ ಮಾಡಿದಂತಿದೆ. ಆದರೆ ನಿಜವಾದ ಸಂಗೀತ ಶ್ರುತಿ ಮತ್ತು ಲಯ ಎರಡಕ್ಕೂ ಸಮಾನ ಪ್ರಾಶಸ್ತ್ಯ ನೀಡುತ್ತದೆ ಎಂಬುದನ್ನು ಸ್ಥೂಲವಾಗಿ ಲೇಖಕರು ತಿಳಿಸಿದ್ದಾರೆ. ಸೂಕ್ಷ್ಮವಾಗಿ ಹಿಂದುಸ್ತಾನಿ ಮತ್ತು ಕರ್ನಾಟಕ ಸಂಗೀತದ ಪರಿಚಯವನ್ನೂ ಮಾಡಿಕೊಡುತ್ತಾರೆ. ನಮ್ಮಲ್ಲಿರುವ ಭಂಡಾರವನ್ನು ನಾವು ನಿರ್ಲಕ್ಷಿಸಿ ಕೇವಲ ಬೇರೆ ಭಾಷೆಗಳಿಂದ ಮಾತ್ರ ಕೀರ್ತನೆಗಳನ್ನು ಎರವಲು ಪಡೆಯಬಾರದು, ನಮ್ಮಲ್ಲಿರುವ ದಾಸರ ಕೀರ್ತನೆಗಳು, ಶರಣರ ವಚನಗಳನ್ನು, ಪಂಡಿತರಾದವರು ಸೂಕ್ತ ಸಂಗೀತಕ್ಕೆ ಅಳವಡಿಸಿ ಜನಮಾನಸಕ್ಕೆ ಉಣಬಡಿಸಬೇಕೆಂಬುದನ್ನು ಸಾರಿದ್ದಾರೆ ಲೇಖಕರು.

ಒಟ್ಟಿನಲ್ಲಿ, ಸಂಧ್ಯಾರಾಗ ಒಂದು ಅಪೂರ್ವ ಕೃತಿ. ಕನ್ನಡ ಸಾರಸ್ವತ ಲೋಕಕ್ಕೆ ಅನಕೃ ರವರ ಅತ್ಯಮೂಲ್ಯ ಕೊಡುಗೆ. ಕೊನೆಯಲ್ಲಿ ಕಾದಂಬರಿ ಮುಗಿಯುವ ಹೊತ್ತಿಗೆ ಡಾ.ರಾಜ್ ಕುಮಾರ್ ಅಭಿನಯದ ‘ಸಂಧ್ಯಾರಾಗ’ದ ಪಾತ್ರಗಳು ಕಣ್ಣ ಮುಂದೆ ಬಂದಿದ್ದವು, ಮತ್ತು ಇಬ್ಬರು ಮಹಾನ್ ದಿಗ್ಗಜರಾದ ಪಂಡಿತ್ ಬಾಲಮುರಳಿಕೃಷ್ಣ ಮತ್ತು ಪಂಡಿತ್ ಭೀಮಸೇನ್ ಜೋಶಿ ಅವರ ಕಂಠದಲ್ಲಿ ಅಪೂರ್ವವಾಗಿ ಮೂಡಿ ಬಂದ ‘ನಂಬಿದೆ ನಿನ್ನ ನಾದದೇವತೆಯೆ……..’ ಹಾಡು ಕಿವಿಯಲ್ಲಿ ಮೊಳಗುತ್ತಿತ್ತು.

 

ವಿ.ಸೂ: ನನ್ನ ಅನಿಸಿಕೆ ಅಭಿಪ್ರಾಯಗಳನ್ನು ಮಾತ್ರ ನಾನು ಬರೆದಿರುವುದು. ಇನ್ನೂ ಸಾಹಿತ್ಯದ ಅಧ್ಯಯನದಲ್ಲಿ ಪುಟ್ಟ ಹೆಜ್ಜೆಯನ್ನಿರಿಸುತ್ತಿರುವ ನಾನು, ಯಾರನ್ನೂ ವಿಮರ್ಶೆ ಮಾಡಿ ಅಳೆದು ನೋಡುವ ಎಂಬ ದೃಷ್ಟಿಯಿಂದ ಬರೆದುದಲ್ಲ. ನೀವು ಕಾದಂಬರಿಯನ್ನು ಓದಿದ್ದಾದಲ್ಲಿ ಸಲಹೆ, ಸೂಚನೆಗಳಿಗೆ ಸ್ವಾಗತ!

ಕೊಡಚಾದ್ರಿ-ನನ್ನ ತಂಗಿಯ ಕೊಡುಗೆ

ಹೆಚ್ಚಿನ ಊರು ಕೇರಿಗಳನ್ನ ತಿರುಗಿದವಳು ನಾನಲ್ಲ. ಹಾ! ತಿರುಗಬೇಕೆಂಬ ಆಸೆ ತುಂಬಾ ಇದೆ, ಆದರೆ ಅವಕಾಶ ಸಿಕ್ಕಿಲ್ಲ ಅಥವಾ ನಾನು ಅವಕಾಶ ಕಲ್ಪಿಸಿಕೊಂಡಿಲ್ಲ. ಈಗ ನಾನು ಹಂಚಿಕೊಳ್ಳ ಹೊರಟಿರುವುದು ಒಂದು ವಿಶೇಷವಾದ ಅನುಭವವನ್ನ. ಈ ಅನುಭವವನ್ನ ನನಗೆ ಕೊಡುಗೆಯಾಗಿ ಕೊಟ್ಟದ್ದು ನನ್ನ ಪ್ರೀತಿಯ ತಂಗಿ.

ಈಗ್ಗೆ ಐದು ತಿಂಗಳ ಹಿಂದೆ ಅಂದರೆ ಜೂನ್ 9 ಮತ್ತು 10ನೇ ತಾರೀಖು ಕೊಡಚಾದ್ರಿ ಪರ್ವತಕ್ಕೆ ಚಾರಣಕ್ಕೆ ಹೋಗಿದ್ದೆವು. ಸುಮಾರು ಐದು ವರ್ಷಗಳಿಂದ ನಾನು ನನಗಾಗಿ, ನನ್ನ ಮನರಂಜನೆಗಾಗಿಯೇ ಎಂದು ಸಮಯವನ್ನು ಮೀಸಲಿಟ್ಟಿರಲಿಲ್ಲ. ಆ ಎರಡು ದಿನದ ಅನುಭವ ಮಾತ್ರ ನನಗೆ ಇನ್ನಷ್ಟು, ಮತ್ತಷ್ಟು ತಿರುಗಬೇಕೆಂಬ ಹೊಸ ಆಸೆಯನ್ನು ಮತ್ತೆ ಚಿಗುರಿಸಿದವು.

ಕರ್ನಾಟಕದ ಹತ್ತನೇ ಎತ್ತರದ ಪರ್ವತ ಈ ಕೊಡಚಾದ್ರಿ, ಸಮುದ್ರದಿಂದ ಸುಮಾರು 1300 ಮೀ ಎತ್ತರದಲ್ಲಿರುವ ಈ ಪರ್ವತವನ್ನು, ಅದು ಕೂಡ ಮೊದಲ ಬಾರಿಗೆ ಚಾರಣಕ್ಕೆ ಹೊರಟ ನಾನು ಮತ್ತು ನನ್ನ ತಂಗಿ ಏರಿದ್ದು ಒಂದು ಸಾಹಸವೇ ಸರಿ. ಬೆಳಗ್ಗೆ 8 ಗಂಟೆಯ ಹೊತ್ತಿಗೆ ತಿಂಡಿ ಮುಗಿಸಿ ಹೊರಡಲು ಅಣಿಯಾದ ನಮ್ಮ ಗುಂಪಿನಲ್ಲಿದ್ದಿದ್ದು 10 ಜನ, ಗೈಡ್ ಒಬ್ಬರನ್ನು ಸೇರಿಸಿ 11 ಜನ.

ಜಿಟಿ ಜಿಟಿ ಮಳೆ, ಹುಲ್ಲು ಹಾಸಿದ ಹಾದಿ, ಸುತ್ತಲೂ ಆಕಾಶದೆತ್ತರಕ್ಕೆ ನಿಂತ ಮರಗಳು, ಕಾಟ ಕೊಡಲು ತಯಾರಾಗಿದ್ದ ತಿಗಣೆಗಳು, ಚೀರಲು ಅಣಿಯಾದ ಹುಡುಗಿಯರ ತಂಡ ಆಹಾ ಅದೊಂದು ಮಧುರ ಅನುಭವ! ಬಯಲುಸೀಮೆಯ ಒಣ ನೆಲ, ಬೆಂಗಳೂರಿನ ಕಾಂಕ್ರೀಟ್ ಕಾಡನ್ನು ಮಾತ್ರ ನೋಡಿದ್ದ ನಮಗೆ ಈ ಹಸಿರು ವನದೇವಿಯೇ ಮೈದಳೆದು ನಿಂತ ಕಾಡನ್ನು ನೋಡುತ್ತಾ ಸಾಗುವುದು ಬಹು ಸುಂದರವಾದ ಸಂಗತಿ. ನನ್ನ ತಲೆಯಲ್ಲಿ ಮಾತ್ರ ಕಾರಂತರ, ಕುವೆಂಪು ಅವರ ಕೃತಿಗಳಲ್ಲಿ ಬಂದ ಮಲೆನಾಡಿನ ವರ್ಣನೆ ರಮ್ಯವಾಗಿ ಕಣ್ಣ ಮುಂದೆ ಧಾರಾವಾಹಿಯ ಹಾಗೆ ನಿರಂತರವಾಗಿ ಹಾದು ಹೋಗುತ್ತಿತ್ತು.

ಅರ್ಧ ಹಾದಿ ಆದ ನಂತರ ಬಂದ ಹೀಡ್ಲು ಜಲಪಾತ ನಮ್ಮ ಅಲ್ಲಿಯವರೆಗಿನ ಆಯಾಸವನ್ನು ಪರಿಹಾರ ಮಾಡಲೆಂದೇ ಬಂದ ಜಲಧಾರೆಯಾಗಿತ್ತು. ಜಾರುತ್ತಿರುವ ಬಂಡೆಗಳನ್ನು ಹಿಡಿದು ಹತ್ತಿದ ಆ ಅನುಭವ ನೆನೆದರೆ ಈಗಲೂ ಒಂದು ಕ್ಷಣ ಮೈ ನವಿರೇಳುತ್ತದೆ. ಕಡಿದಾದ ದಾರಿ, ಸ್ವಲ್ಪ ಆಯ ತಪ್ಪಿದರೆ ಜಾರಿ ಕೆಳಗೆ ಬೀಳುವ ಸಂದರ್ಭ ಆದರೂ ಮೇಲೆ ಏರಬೇಕೆಂಬ ಹುಮ್ಮಸ್ಸು ಮಾತ್ರ ಕಡಿಮೆಯಾಗದ ನಮ್ಮ ತಂಡ ಜೊತೆ ಜೊತೆಯಾಗಿ ನಡೆಯುತ್ತಲೇ ಇದ್ದೆವು.

ಅಕ್ಕಂದಿರು ತಂಗಿಯರನ್ನು ನೋಡಿಕೊಳ್ಳುವುದು ರೂಢಿ. ನಾನೂ ಸಹಜವಾಗಿ ಅದೇ ಮಾಡುತ್ತೇನೆ. ಆದರೆ ಆ ದಿನ ಮಾತ್ರ ವಿಶೇಷ. ನನ್ನ ಸಂಪೂರ್ಣ ಕಾಳಜಿಯನ್ನು ವಹಿಸಿದ್ದು ನನ್ನ ತಂಗಿ. ಡೆಂಗ್ಯೂ ಬಂದು ಗುಣಮುಖವಾದ ನಂತರ ಮೊದಲ ಬಾರಿಗೆ ಇಷ್ಟು ದೊಡ್ಡ ಚಾರಣವಾದ್ದರಿಂದ ನಾನು ತುಂಬಾ ಸೋತು ಹೋಗುತ್ತಿದ್ದೆ. ನನಗಾಗಿ ನಿಂತು, ಸುಧಾರಿಸಿಕೊಂಡ ನಂತರ ಮತ್ತೆ ಮುನ್ನಡೆಯಲು ಸಹಕರಿಸಿದ್ದೇ ನನ್ನ ಕೂಸು (ನನ್ನ ತಂಗಿಗೆ ನಾನು ಪ್ರೀತಿಯಿಂದ ಕರೆಯುವುದು ಕೂಸು ಎಂದು).

ಸುಮಾರು 9.5 ಕೀ.ಮೀ ನಡೆಯುವ ಹೊತ್ತಿಗೆ, ಸಮಯ ಎರಡೂ ಮುಕ್ಕಾಲು. ಭಯಂಕರ ಹಸಿವೆಯಾಗಿತ್ತು. ನಾವು ತೆಗೆದುಕೊಂಡು ಬಂದ ಬುತ್ತಿಯಿಂದ ಎಲ್ಲರೂ ಒಂದೇ ಸಮನೆ ತಿನ್ನಲಾರಂಭಿಸಿದೆವು. ಸತತವಾಗಿ ಮಳೆ ಸುರಿಯುತ್ತಿದೆ, ಮೋಡಗಳು ನಮ್ಮನ್ನೇ ಹಾದು ಹೋಗುತ್ತಿವೆ, ಒಂದೊಂದು ತುತ್ತು ಊಟ ಹೊಟ್ಟೆ ಸೇರಿದ ಹಾಗೆಲ್ಲ ಮೈ ನಡುಕ ಇನ್ನಷ್ಟು ಜಾಸ್ತಿ ಆಗುತ್ತಿತ್ತೇ ವಿನಃ ಕಡಿಮೆಯಾಗುವ ಯಾವ ಸುಸಂದರ್ಭಗಳು ಇರಲಿಲ್ಲ. ಹಾಗೆಯೇ ಊಟ ಮುಗಿಸಿ ಅಲ್ಲಿಯೇ ಇದ್ದ ದೇವಸ್ಥಾನಕ್ಕೆ ಬಂದು ಕುಳಿತೆವು. ಇನ್ನು ಸ್ವಲ್ಪ ಮೇಲೆ ಏರಲು ಕೆಲವರು ಅಣಿಯಾದರು, ನಾನು ಇನ್ನಿಬ್ಬರ ಜೊತೆ ದೇವಸ್ಥಾನದಲ್ಲಿಯೇ ಕುಳಿತೆ. ಅವರು ತುತ್ತತುದಿ ಮುಟ್ಟಿ ಬಂದರು. ಜೀಪ್ ಹತ್ತಿ ಕೆಳಗೆ ಬಂದು ನಮ್ಮ ರೂಮ್ ಸೇರುವ ಹೊತ್ತಿಗೆ ಏಳು ಗಂಟೆಯಾಗಿತ್ತು. ರೂಮ್ ತಲುಪಿದ ನಂತರ ನನ್ನ ತಂಗಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಮತ್ತೆ ನನ್ನ ಮೇಲೆ ಬಂದಿತು ;)… ಹಾ ಹಾ ಹಾ…..

ಮರುದಿನ ಶಿವಪ್ಪ ನಾಯಕನ ಒಂದು ಕೋಟೆಯನ್ನು ನೋಡಿ ಮತ್ತೆ ಬೆಂಗಳೂರಿಗೆ ಪ್ರಯಾಣ ಬೆಳೆಸಿದೆವು. ಆರಾಮವಾಗಿ, ಮನಸ್ಸಿಗೆ ಮುದ ನೀಡುವ ಹಾಗೆ ಕಾಲ ಕಳೆಯುವುದೆಂದರೆ ಹೀಗೆ ಎಂದು, ಎಲ್ಲ ರೀತಿಯ ಬುಕಿಂಗ್ ಅನ್ನು ಮಾಡಿ ನನ್ನನ್ನು ಕರೆದುಕೊಂಡು ಹೋದ ನನ್ನ ತಂಗಿಗೆ ನನ್ನದೊಂದು ಪುಟ್ಟ ಸಲಾಂ!! ಮತ್ತೆ ಮತ್ತೆ ನಿನ್ನೊಡನೆ ತಿರುಗುವೆ ಕೂಸೇ, ಆದರೆ ಮುಂದಿನ ಬಾರಿ ನನ್ನಿಂದ ದೊಡ್ಡದಾದ ಖರ್ಚನ್ನೇ ಮಾಡಿಸು, ಪೂರ್ತಿ ಪ್ಲಾನಿಂಗ್ ನ ಹೊಣೆ ನಿನ್ನದು.

ಒಂದು ಬಾರಿಯಾದರೂ ಜೀವನದಲ್ಲಿ ಮಲೆನಾಡಿನ ಆ ಬೆಟ್ಟ ಗುಡ್ಡಗಳನ್ನು ದಾಟಿ, ಸುಸ್ತಾದರು ಸಂತೋಷ ಪಡುವ ಅನುಭವವನ್ನು ನೀವು ಪಡೆಯಿರಿ, ನಿಮ್ಮವರಿಗೂ ಆ ಅನುಭವವನ್ನು ಮಾಡಿಸಿ. ಸುಂದರ ಚಾರಣ ಸ್ಥಳ ಈ ಕೊಡಚಾದ್ರಿ. ಸಹ್ಯಾದ್ರಿ ಬೆಟ್ಟಗಳ ಮೋಹಕ ನೋಟಕ್ಕೆ ನಿಮ್ಮಲ್ಲಿಯ ಕವಿ ಜಾಗೃತನಾದರೂ ಆಗಬಹುದು. ಪ್ರಯತ್ನಿಸಿ………!!!

ಸಂಕು(ಚ)ಚಿತ

ಎಲ್ಲೆಡೆ ಹಬ್ಬಿರುವ “ಮೀ ಟೂ” ಅಭಿಯಾನದ ಸದ್ದಿನಲ್ಲಿ, ಬಹು ದಿನಗಳಿಂದ ಹೇಳಬೇಕೆಂದಿದ್ದ ಒಂದು ವಿಚಾರವನ್ನು ತಮ್ಮ ಮುಂದೆ, ಮಹಿಳೆಯರ ಪರವಾಗಿ ಮೀಟುವ ದನಿಯಲ್ಲಿ ನಿಂತು ಹೇಳಲು ಹೊರಟಿರುವೆ. ಏನಂತಹ ಗಹನವಾದ ವಿಚಾರ ಎಂದಿರಾ? ಇದು, ಬಹು ಸೂಕ್ಷ್ಮವಾದ ಸಂಗತಿ. ಸಮಾಜದಲ್ಲಿ ನಮಗೆ ತಿಳಿಯದೆಯೇ ಇದನ್ನು ಅತಿ ಸಹಜ ಎನ್ನುವಷ್ಟರ ಮಟ್ಟಿಗೆ ನಾವಿದನ್ನು ಒಪ್ಪಿಕೊಂಡು ಬಿಟ್ಟಿದ್ದೇವೆ. ಯಾವುದರ ಬಗ್ಗೆ ಮಾತನಾಡುತ್ತಿರುವೆ ಎಂದು ಯೋಚಿಸುತ್ತಿರುವಿರಾ? ಪ್ರೀತಿ, ಪ್ರೇಮ, ತ್ಯಾಗ, ಗಂಡು-ಹೆಣ್ಣಿನ ಅನೈತಿಕ ಸಂಬಂಧ ಇತ್ಯಾದಿ ಯಾವುದು ಅಲ್ಲ. ಹೆಣ್ಣಿನ ಸ್ತನದ ಗಾತ್ರದ ಕುರಿತು. ಹೌದು! ಗಾತ್ರದ ಕುರಿತು. Size does matter!!!!

 

ಇತ್ತೀಚಿಗೆ ‘ಸ್ತನ ಕ್ಯಾನ್ಸರ್’ನ (Breast cancer) ಕುರಿತು ಬಹಳಷ್ಟು ಪ್ರಚಾರಗಳು, ತಿಳುವಳಿಕೆಯ ಬರಹಗಳು, awareness campaignಗಳು ಸಾಕಷ್ಟು ನಡೀತಾ ಇವೆ. ಅದರಲ್ಲೂ ಈಗಿನ ಕೆಲವಷ್ಟು ನಟಿಯರು, ನಟರ ಪತ್ನಿಯರು ಈ ಮಾರಕ ರೋಗಕ್ಕೆ ಬಲಿಯಾಗಿ, ಗುಣಮುಖರಾಗಿ ಬಂದ ನಂತರ ಅದರ ಕಷ್ಟ-ನಷ್ಟಗಳು, ಮಾನಸಿಕ ತೊಳಲಾಟಗಳು ಎಲ್ಲದರ ಬಗ್ಗೆ ಮುಕ್ತವಾಗಿ ಹಂಚಿಕೊಳ್ಳುತ್ತಿದ್ದಾರೆ. ಇದರಿಂದ ಬಹಳಷ್ಟು ಅರಿವು ಸಹ ಮೂಡುತ್ತಿದೆ. ಮುಂಜಾಗ್ರತೆ ಕ್ರಮದ ಕುರಿತು ಚರ್ಚೆಗಳು ನಡೆಯುತ್ತಿವೆ. ಎಲ್ಲವೂ ಶ್ಲಾಘನೀಯ!

 

ಆದರೆ ನಾನು ಈಗ ಹೇಳುತ್ತಿರುವ ವಿಚಾರ ಸ್ತನ ಕ್ಯಾನ್ಸರ್ ಗೆ ಸಂಬಂಧ ಪಟ್ಟ ವಿಚಾರ ಅಲ್ಲ. ಸ್ತನದ ಗಾತ್ರದ ಒಂದೇ ಒಂದು ಕಾರಣಕ್ಕೆ ಅನೇಕ ರೀತಿಯ ಮಾನಸಿಕ, ದೈಹಿಕ ಹಿಂಸೆಗೆ ಒಳಗಾದವರ ಕುರಿತು. ಈಚೆಗೆ ನಾನೊಂದು ಬೆಂಗಾಲಿ ಸಿನಿಮಾ ನೋಡಿದೆ, ಇದೇ ವಿಷಯದ ಮೇಲೆ ತೆಗೆದ ಹೃದಯ ಸ್ಪರ್ಶಿ ಚಿತ್ರ ಎನ್ನಬಹುದು- “shunyo e bukey” (empty canvas) ಅಂತ ಸಿನೆಮಾದ ಹೆಸರು. ಪುರುಷರಲ್ಲಿ ಮಹಿಳೆಯ ಸ್ತನದ ಗಾತ್ರದ ಬಗ್ಗೆ ಇರುವ fantasy ಮತ್ತು ಅದರಿಂದ ಆಗುವ ಅನಾಹುತವನ್ನು, ಒಬ್ಬ ಮಹಿಳೆ ಅನುಭವಿಸುವ ಮಾನಸಿಕ ತುಮುಲವನ್ನು ಈ ಚಿತ್ರ ಬಹು ಸೂಕ್ಷ್ಮವಾಗಿ ವಿವರಿಸುತ್ತದೆ.

 

ಶ್ರೇಷ್ಠ ಚಿತ್ರಕಾರನಾಗಬೇಕು ಎಂದಿದ್ದ ಒಬ್ಬ ವ್ಯಕ್ತಿ ‘ಖುಜುರಾಹೋ ದೇವಸ್ತಾನ’ದ ಶಿಲ್ಪಕಲೆಯ ಮೋಹಕ ಕಲೆಯಿಂದ ಪ್ರೇರಣೆ ಹೊಂದೋಣ ಎಂದು ಹೊರಡುತ್ತಾನೆ. ವೀಕ್ಷಣೆಯ ಸಂದರ್ಭದಲ್ಲಿ ನಾಯಕಿಯನ್ನು ಭೇಟಿ ಮಾಡುತ್ತಾನೆ. ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿ ಬದಲಾಗುತ್ತದೆ. ಶ್ರೀಮಂತರ ಮನೆಯ ಹುಡುಗಿಯಾದರೂ, ಮನೆಯವರನ್ನು ಧಿಕ್ಕರಿಸಿ, ಶ್ರೇಷ್ಠ ಕಲಾಕಾರನಾಗಲು ಶ್ರಮ ಪಡುತ್ತಿರುವ ಈ ಮಧ್ಯಮ ವರ್ಗದ ಹುಡುಗನನ್ನು ಮದುವೆ ಆಗುತ್ತಾಳೆ.

 

ಮದುವೆಯಾದ ಮೊದಲ ರಾತ್ರಿ ಹೆಂಡತಿಯ ಚಪ್ಪಟೆ ಎದೆಯನ್ನು (flat chest) ನೋಡಿ ದಿಗ್ಭ್ರಾಂತನಾಗುತ್ತಾನೆ. ಆತನ ಕಲ್ಪನೆಯ ಸುಂದರಿ, ಶಿಲ್ಪಕಲೆಗಳಲ್ಲಿ ಇರುವಂತೆ ಕುಂಭ ಕುಚದವಳಾಗಿರದುದಕ್ಕೆ ಬೇಸರಿಸಿ, ಭ್ರಮನಿರಸನವಾಗಿ, ಹತಾಶನಾಗಿ ನೀನು ನನಗೆ ಮೋಸ ಮಾಡಿದೆ ಎಂದು ನಾಯಕಿಯ ಮೇಲೆ ಕಿಡಿ ಕಾರುತ್ತಾನೆ. ಅಲ್ಲಿಂದ ಹೊರಟು ಹೋಗುತ್ತಾನೆ. ಮರುದಿನ ಆತನ ಸ್ನೇಹಿತರ ಎದುರಿಗೆ ಹಿಂದಿನ ದಿನ ರಾತ್ರಿ ನಡೆದ ವಿಷಯವನ್ನೆಲ್ಲ ಹೇಳಿ ಗೇಲಿ ಮಾಡುತ್ತಾನೆ. ಬುದ್ಧಿವಾದ ಹೇಳಲು ಬಂದ ಸ್ನೇಹಿತನಿಗೆ ಅಸಹ್ಯವಾಗಿ ಬಯ್ಯುತ್ತಾನೆ. ಮದುವೆಗೆ ಮುಂಚೆ ಒಮ್ಮೆ ಆಕೆಯೊಂದಿಗೆ ಮಲಗಿದ್ದಿದ್ದರೆ ಇಂದು ಮದುವೆ ಮಾಡಿಕೊಂಡು ಈ ಯಾತನೆ ಅನುಭವಿಸುವ ಪ್ರಸಂಗವಿರುತ್ತಿರಲಿಲ್ಲ ಎಂಬ ಬಿರುಸಿನ ನುಡಿಯಾಡುತ್ತಾನೆ. ಗಂಡನ ಸ್ನೇಹಿತನಿಂದ ಈ ವಿಷಯ ತಿಳಿದ ನಾಯಕಿ ಆತನಿಗೆ ವಿಚ್ಛೇದನ ನೀಡುತ್ತಾಳೆ.

 

ಕೆಲವು ವರ್ಷಗಳ ನಂತರ ಆಕಸ್ಮಿಕವಾಗಿ ಮತ್ತೆ ಈ ಕಲಾಕಾರ ನಾಯಕಿಯನ್ನು ಭೇಟಿಯಾಗುತ್ತಾನೆ. ಆಕೆ ಒಂದು ಮಗುವಿನ ತಾಯಾಗಿರುತ್ತಾಳೆ. ಕಲಾಕಾರನ ಸ್ನೇಹಿತನೇ ಆಕೆಯನ್ನು ಮದುವೆಯೂ ಆಗಿರುವುದು ಗೊತ್ತಾಗುತ್ತದೆ. ಈತನ ಹತ್ತಿರ ಬಂದು ಆಕೆ ಆಡುವ ಆ ಮಾತುಗಳನ್ನು ಸಿನಿಮಾ ನೋಡಿಯೇ ಸವಿಯಬೇಕು! ಆಕೆ ಹೇಳುತ್ತಾಳೆ ‘ನೀನು ತಿರಸ್ಕರಿಸಿದ ಈ ಮೊಲೆಗಳಿಂದಲೇ ಈ ನನ್ನ ಕಂದನಿಗೆ ಹಾಲೂಡಿಸಿ ಆರೋಗ್ಯವಂತನನ್ನಾಗಿ ಮಾಡಿರುವೆ, ಸುಖ ಸಂಸಾರವನ್ನು ಮಾಡುತ್ತಿರುವೆ’ ಎಂದಾಗ ಅವನಿಗೆ ನಾಚಿಕೆಯಾಗುತ್ತದೆ. ನಾಯಕಿಗೆ ಕ್ಷಮೆ ಯಾಚಿಸುತ್ತಾನೆ. ಆದರೆ ಆಕೆ, ಕ್ಷಮಿಸಲರ್ಹವಾದ ತಪ್ಪು ನಿನ್ನದಲ್ಲ, ಕ್ಷಮಿಸುವಷ್ಟು ದೊಡ್ಡ ವ್ಯಕ್ತಿ ನಾನಲ್ಲ ಎಂದು ಹೇಳಿ ಹೊರಟು ಹೋಗುತ್ತಾಳೆ.

ಈ ಕಥೆಯನ್ನು ವಿವರಿಸುವುದರ ಹಿಂದಿನ ಉದ್ದೇಶ ಒಂದೇ, ಹೆಣ್ಣಿನ ವ್ಯಕ್ತಿತ್ವ, ಆಕೆಯ ಬುದ್ಧಿವಂತಿಕೆ, ಜಾಣ್ಮೆ ಎಲ್ಲ ಮೀರಿ ಆಕೆ ಕೇವಲ ಒಂದು ಭೋಗದ ವಸ್ತು, ಅಲ್ಲ ಸ್ತನದ ಗಾತ್ರದಿಂದ ಮಾತ್ರ ಅಳೆಯುವ ಒಂದು ಸಾಮಗ್ರಿಯಾಗಿ ಇಳಿದುಬಿಡುತ್ತಾಳೆಯೇ? ಎತ್ತರ, ರೂಪ, ಬಣ್ಣ, ಆರೋಗ್ಯವಂತ ದೇಹ ಇದೆಲ್ಲ ದೇವರ ಕೃಪೆ ಅಲ್ಲವೇ? ನಮ್ಮ ಕೈಯಲ್ಲಿ ಇರುತ್ತದೆಯೇ? ಬಣ್ಣದ ಅಸಮಾನತೆ racism, ಜಾತಿಯ ಆಧಾರದ ತಾರತಮ್ಯ castism, ಲಿಂಗ ತಾರತಮ್ಯ gender bias ಮತ್ತೆ ಈ ಸ್ತನದ ಗಾತ್ರದಿಂದಾಗುವ ತಾರತಮ್ಯ ಯಾವುದು??

 

ಒಂದು ಸಮೀಕ್ಷೆಯ ಪ್ರಕಾರ ಈಗಲೂ ಶೇಕಡಾ 55 ಕ್ಕೂ ಹೆಚ್ಚು ಪುರುಷರು ಸ್ತನದ ಗಾತ್ರದ ಆಧಾರದ ಮೇಲೆಯೇ ತಮ್ಮ ಪತ್ನಿ, ಪ್ರೇಯಸಿಯನ್ನು ಆರಿಸುತ್ತಾರಂತೆ. ಮದುವೆಯಾಗುವ ಹುಡುಗಿಯ ಅಥವಾ girl friend ನ ಸ್ತನದ ಗಾತ್ರವೇ ಮುಖ್ಯ ಎಂದು ಒಪ್ಪಿಕೊಳ್ಳುತಾರಂತೆ. ಲೈಂಗಿಕ ಜೀವನದಲ್ಲಿ ಹೆಣ್ಣಿನ ಸ್ತನ ಗಂಡಿಗೆ ಆಕರ್ಷಣೆ ನಿಜ, ಆದರೆ ಅದೇ ಅವಳಲ್ಲ. ಅವಳಲ್ಲಿಯೂ ಮನಸ್ಸಿದೆ, ಪ್ರೀತಿ-ಅಂತಃಕರಣ, ಅನುಕಂಪ, ಬುದ್ಧಿಮತ್ತೆ, ವ್ಯಕ್ತಿತ್ವ ಈ ಎಲ್ಲವೂ ಸೇರಿ ಅವಳಾಗಿರುತ್ತಾಳೆ! ಆದರೆ ಇದನ್ನು ಎಷ್ಟು ಜನ ಅರ್ಥ ಮಾಡಿಕೊಳ್ಳುತ್ತಾರೆ? ನಾಲ್ಕು ಗೋಡೆಯ ಮಧ್ಯೆ ನಡೆಯುವ ಅತ್ಯಂತ ಆಪ್ತ ಸುಖ ಘಳಿಗೆಯಲ್ಲಿ, ಗಂಡನಿಂದ ಈ ರೀತಿಯ ತಿರಸ್ಕಾರದ ಮಾತುಗಳನ್ನು ಕೇಳಿಸಿಕೊಂಡು, ಸಹಿಸಿಕೊಂಡು ಬದುಕುತ್ತಿರುವ ಹೆಣ್ಣುಮಕ್ಕಳದೆಷ್ಟು ಜನ?

 

ಈಗಿನ ಫ್ಯಾಷನ್ ಶೋಗಳು, ಸಿನೆಮಾಗಳು ಇವನ್ನೇ ಬಿಂಬಿಸುತ್ತವೆ. ದೇಹದ ಕೈ, ಕಾಲು, ಹೊಟ್ಟೆ ಒಟ್ಟಾರೆಯಾಗಿ ಎಲ್ಲೆಡೆ zero size ಬಂದಾಯಿತು. ಆದರೆ ಸ್ತನದ ಗಾತ್ರಕ್ಕೆ ಇದೆಯೇ zero size? ಇನ್ನು ಅದಕ್ಕೆ ಸರ್ಜರಿ ಮಾಡಿಸಿಯಾದರು ದೊಡ್ದದಾಗಿಸುತ್ತಾರೆ. ಇದೆಲ್ಲಿಯ ಹುಚ್ಚುತನ? ಒಂದು ವರದಿಯ ಪ್ರಕಾರ plastic surgeryಯಲ್ಲಿ ಮೊದಲ ಸ್ಥಾನದಲ್ಲಿರುವುದೇ ಈ breast augmentation ಸರ್ಜರಿ.

 

ಹೆಣ್ಣನ್ನು ಒಂದು ವಸ್ತುವಾಗಿ ಅಲ್ಲದೆ, ಪರಿಪೂರ್ಣ ವ್ಯಕ್ತಿಯನ್ನಾಗಿ ನೋಡಿ ಪ್ರಶಂಸಿಸುವ ಮನಸ್ಥಿತಿ ಯಾವಾಗ ಬರುತ್ತದೆಯೋ? ಸಂಕುಚಿತ ಮನೋಭಾವದ ಜನ ಕುಚದ ಮೋಹ ಬಿಟ್ಟು ಬಾಳುವ ದಿನ ಬರುತ್ತದೆಯೇ? ಬೇಗ ಬರಲಿ ಎಂದು ಆಶಿಸುತ್ತೇನೆ…………

ಸಂತೋಷವೆಂದರೆ

ತುಂಬಾ ದಿನಗಳಿಂದ ಈ ಸಂತೋಷ ಎಂದರೇನು? ಎನ್ನುವ ವಿಷಯದ ಬಗ್ಗೆ ಬರೆಯುವ ಆಸೆ ಇತ್ತು. ಸಂತರು, ದಾಸರು, ಶರಣರು, ಅನುಭಾವಿಗಳು ಇದರ ಬಗ್ಗೆ ತುಂಬಾ ಹೇಳಿದ್ದಾರೆ. ನಾನು ನನಗೆ ತಿಳಿದ ಮಟ್ಟಿಗೆ ಸಂತೋಷದ ಪರಿಭಾಷೆಯನ್ನು ನಿರೂಪಿಸೋಣ ಎಂದು ಹೊರಟಿರುವೆ.

ಈಗಿನ ಈ ಅಂತರ್ಜಾಲದ ಯುಗದಲ್ಲಿ, ಜನರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಬರಹ, ಚಿತ್ರಗಳಿಗೆ ಬರುವ ಮೆಚ್ಚುಗೆಯ ಆಧಾರದ ಮೇಲೆ ಸಂತೋಷ ಕಂಡುಕೊಳ್ಳುವ ಪರಿಪಾಠ ರೂಢಿಗೆ ಬಂದಂತಿದೆ. ಇದರ ತಳ-ಬುಡ ನನಗೆ ಅರ್ಥವಾಗಲಿಲ್ಲ. ಸಂತೋಷವನ್ನು ಎಲ್ಲರೊಂದಿಗೆ ಹಂಚಿಕೊಳ್ಳಬೇಕು, ಒಪ್ಪಬೇಕಾದದ್ದೇ! ಆದರೆ ನೋವು, ಸಂಕಟವನ್ನು ಕೂಡ ಪೋಸ್ಟ್ ಮಾಡುವವರನ್ನು ಏನನ್ನೋಣ? ಅದಕ್ಕೆ ಲೈಕ್ ಮಾಡುವವರ ಒಂದು ದೊಡ್ಡ ಗುಂಪೇ ಇದೆ. ಇದರಿಂದ ನಿಮ್ಮ ನೋವಿಗೆ, ಅಥವಾ ಸಮಸ್ಯೆಗೆ ಪರಿಹಾರ ಸಿಕ್ಕ ಹಾಗಾಯಿತೇನು? ಅಥವಾ ಇಷ್ಟು ಜನ ಇದನ್ನು ನೋಡಿದರಲ್ಲ ಅಂತ ಸಂತೋಷವಾಯಿತೇ?

ನಮ್ಮ ಈಗಿನ ಯುವಜನ ಮೊಬೈಲ್, ಟೀವಿ, ಕಂಪ್ಯೂಟರ್ ಎನ್ನುವ ಗೋಡೆಗಳನ್ನು ಕಟ್ಟಿಕೊಂಡು ಅದರೊಳಗೆ ಜೀವಿಸುತ್ತಿದ್ದಾರೆ. “ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗೆ ಅಂಜಿದರೆಂತಯ್ಯ” ಎನ್ನುವ ಹಾಗೆ ಸಾಮಾಜಿಕ ಜಾಲತಾಣದೊಳಗೊಂದು ಮನೆಯ ಮಾಡಿ, ಖಿನ್ನತೆಗೆ ಅಂಜಿದರೆಂತಯ್ಯ ಎನ್ನುವ ಸಮಯ ಬಂದಿದೆ. ಪ್ರತಿ ನಿಮಿಷಕ್ಕೊಮ್ಮೆ ಮೊಬೈಲ್ ನೋಡುವುದು, ಫೇಸ್ಬುಕ್, whatsapp, instagram ಅಂತೆಲ್ಲ ಭಯಂಕರ ಬ್ಯುಸಿ ಆಗಿರೋ ಈಗಿನ ಜನತೆಗೆ ಸಂತೋಷವನ್ನು ಹೇಗೆ ಕಲಿಸುವುದು?

ಬೆಳಿಗ್ಗೆ ಎದ್ದ ತಕ್ಷಣ ಮೊಬೈಲ್ ಮೂಲಕ ಎಲ್ಲರಿಗೆ ಶುಭೋದಯ ಹೇಳುವದರಲ್ಲೇ ಕಾಲ ಕಳೆಯುವ ಬದಲು, ಮನೆಯಲ್ಲಿರುವವರನ್ನು ಮೊದಲು ನೋಡಿ, ನಕ್ಕು, ಅವರೊಂದಿಗೆ ಕಾಫಿ ಕುಡಿತಾ ಮಾತನಾಡಿ, ದಿನ ಪತ್ರಿಕೆ ಓದೋದರಲ್ಲಿ ಇರುವ ಆನಂದವನ್ನು ತಿಳಿಯ ಹೇಳುವವರಾರು? ಎಲ್ಲರ ಜೀವನದಲ್ಲಿ ಒಂದಲ್ಲ ಒಂದು ರೀತಿಯ ಕಷ್ಟಗಳು ಇರುತ್ತವೆ, ಅದಿರದಿದ್ದರೆ ಜೀವನ ಅನುಭವಿಸುವ ಮಜಾ ಎಲ್ಲುಂಟು? ಆದರೆ ಸಾಮಾಜಿಕ ಜಾಲಗಳಲ್ಲಿ ಕೇವಲ ಊರು ತಿರುಗಿದ, ಹೊಸ ಮನೆ, ಕಾರು ತೆಗೆದುಕೊಂಡ ಚಿತ್ರಗಳನ್ನು ನೋಡಿ ತಮ್ಮ ಜೀವನವನ್ನು ಬೈದುಕೊಂಡವರು ಎಷ್ಟು ಜನ ಇದ್ದಾರೆ… ಇದೆಲ್ಲ ಯಾಕೆ ಬೇಕು? ನಮ್ಮ ಜೀವನವನ್ನು ಇನ್ನೊಬ್ಬರೊಂದಿಗೆ ಹೋಲಿಸಿಕೊಂಡು ಇರುವ ಸಂತೋಷವನ್ನು ಹಾಳು ಮಾಡಿಕೊಳ್ಳುವವರಿಗೆ ಏನು ಹೇಳಬೇಕು? ನಮ್ಮನ್ನು ನಾವು ನಮ್ಮೊಂದಿಗೆ ಮಾತ್ರ ಹೋಲಿಸಿ ನೋಡಬೇಕು. ಹೋದ ವರ್ಷ ಈ ಸಮಯ ನಾನು ಹೇಗಿದ್ದೆ, ಈಗ ಹೇಗಿದ್ದೇನೆ. ಬೆಳವಣಿಗೆ ಆಗಿದೆ, ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ, ಚಿಕ್ಕ ವಾಹನ ಕೊಂಡಿರುವೆ, ಮನೆಯಲ್ಲಿ ಮಕ್ಕಳ ಮದುವೆ ಆಗುತ್ತಿದೆ. ಸಾಕಲ್ಲವೇ ಈ ಅಭಿವೃದ್ಧಿ ಸಂತೋಷ ಪಡಲಿಕ್ಕೆ? ಇದು ಬಿಟ್ಟು ಪಕ್ಕದ ಮನೆಯವರು ಹೊರ ದೇಶಕ್ಕೆ ಹೋಗಿ ಬಂದರು, ಎದುರು ಮನೆಯವರು ಕಾರು ಕೊಂಡರು, ಇನ್ನೊಬ್ಬರು ಇನ್ನೇನೋ ಮಾಡಿದರು ಅಂತ ಖಿನ್ನತೆಗೆ ಒಳಗಾಗುವುದು ಎಷ್ಟು ಸರಿ?

ಪ್ರತಿಯೊಬ್ಬ ಮನುಷ್ಯನ ವ್ಯಕ್ತಿತ್ವ, ಬುದ್ಧಿವಂತಿಕೆ, ಜೀವನಾನುಭವ ಎಲ್ಲವೂ ವಿಭಿನ್ನ, ವಿಭಿನ್ನತೆಯೇ ಪ್ರಕೃತಿ ನಿಯಮ. ಊಹಿಸಿ ನೋಡಿ, ಎಲ್ಲ ಒಂದೇ ತೆರನಾದ ಮನೆಗಳು, ಮನೆಯ ಮುಂದೆ ಒಂದೇ ತೆರನಾದ ಮರಗಳು, ಒಂದೇ ರೀತಿಯ ಕಾರು… ಇಡೀ ಜಗತ್ತೇ ಹೀಗಿದ್ದಿದ್ದರೆ ಏನಾಗುತ್ತಿತ್ತು ಪರಿಸ್ಥಿತಿ? ಬೇರೆ ಬೇರೆ ಇರುವುದೇ ಸೃಷ್ಟಿ ನಿಯಮ. ವಿವಿಧತೆಯಲ್ಲಿ ಏಕತೆಯನ್ನು ಕಾಣುವುದು ನಮ್ಮ ಸಂವಿಧಾನದ ಮೂಲಭೂತ ತತ್ವ ಮಾತ್ರವಲ್ಲ ಜೀವನದ ಅವಿಭಾಜ್ಯ ಅಂಗ.

ಒಂದೊಳ್ಳೆ ಮುಗುಳ್ನಗೆ, ಜೀವನದ ಬಗ್ಗೆ ಗೌರವ, ಪ್ರೀತಿ ಮತ್ತು ಧನಾತ್ಮಕ ಚಿಂತನೆ, ನಮ್ಮ ಮೇಲೆ ನಮಗೆ ವಿಶ್ವಾಸ, ನಮ್ಮವರ ಬಗ್ಗೆ ಅಭಿಮಾನ ಇಷ್ಟಿದ್ದರೆ ಸಾಕಲ್ಲವೇ ಸಂತೋಷವಾಗಿರಲು?  ಸಂತೋಷವಾಗಿರಲು ಕಲಿಯಲು ಒಳ್ಳೆ ಗುರು ಯಾರು ಗೊತ್ತೇ? ಮಗು.. ಮಗುವನ್ನು ನೋಡಿ ಅದು ಯಾವಾಗಲು ಉತ್ಸಾಹದಿಂದ, ಹೊಸತನವನ್ನು ಹುಡುಕುತ್ತಿರುತ್ತದೆ, ಕಲಿಯುತ್ತಿರುತ್ತದೆ ಮತ್ತು ಸಂತೋಷವಾಗಿರುತ್ತದೆ, ನಡೆಯುವಾಗ ಬಿದ್ದರೆ, ಬಿದ್ದೆ ಎಂಬ ಅವಮಾನವಿಲ್ಲ, ಸೋತೆ ಎನ್ನುವ ಅಂಜಿಕೆಯಿಲ್ಲ. ಮತ್ತೆ, ಮತ್ತೆ ಪ್ರಯತ್ನ ಮಾಡುತ್ತದೆ, ಗೆಲ್ಲುತ್ತದೆ. ಹಾಗೆಯೇ ನಾವು ಆಗಬೇಕು. ನಮ್ಮೊಳಗಿನ ಮಗುವನ್ನು ಸದಾ ಜಾಗೃತವಾಗಿಟ್ಟುಕೊಳ್ಳಬೇಕು.

ಸಂತೋಷ ಎನ್ನುವುದೊಂದು ನಮ್ಮೊಳಗೆ ಇರುವ ಪರಿಕಲ್ಪನೆ, ಅದೊಂದು ಅನುಭೂತಿ. ಸಂತೋಷವಾಗಿದ್ದೇನೆ ಎಂದರೆ ಇದ್ದೇನೆ, ಇಲ್ಲ ಎಂದರೆ ಇಲ್ಲ. ಆಸೆಗಳ ಕುದುರೆಗೆ ನಮ್ಮ ಸಂತೋಷವನ್ನು ಕಟ್ಟಿ ಓಡಲು ಬಿಟ್ಟರೆ ನಾವು ಎಂದಿಗೂ ಸಂತೋಷವಾಗಿರುವುದಿಲ್ಲ. ಕುವೆಂಪುರವರು ಹೇಳಿದ ಹಾಗೆ “ಆನಂದಮಯ ಈ ಜಗ ಹೃದಯ”!!ಅದನ್ನು ನೋಡುವ, ತಿಳಿದುಕೊಳ್ಳುವ ಒಳಗಣ್ಣನ್ನು ನಾವು ಬೆಳೆಸಿಕೊಳ್ಳಬೇಕು. ಅನಾರೋಗ್ಯವಾದ ಈ ಹುಚ್ಚು ಜಗತ್ತಿನ ಬೆಪ್ಪು ಸ್ಪರ್ಧೆಗೆ ಒಳಗಾಗದೇ ಎಲ್ಲರೂ ಸಂತೋಷವಾಗಿರಿ, ನಗು ನಗುತ್ತಾ ಇರಿ!

“ಪಾಸಾಯಣ ” ನಾನು ಒಂದನೇ ತರಗತಿಯಿಂದ ಡಿಗ್ರಿವರೆಗೆ ನಮ್ಮೂರಲ್ಲೇ ಓದಿದ್ದೆ. ನಮ್ಮದು ರಾಯಚೂರು, ಚಿಕ್ಕ ನಗರ. ನಾಲ್ಕಾರು ಊರು ತಿರುಗಿದ ಅನುಭವವೂ ನನಗಿರಲಿಲ್ಲ. ನಾನು 2016 ರಲ್ಲಿ ಕೆಲಸಕ್ಕಾಗಿ ಹೈದರಾಬಾದ್ ನ ‘ಅಶೋಕ್ ನಗರ್’ ನಲ್ಲಿ ವಾಸವಾಗಿದ್ದೆ. ಸ್ವಂತ ಊರು ಬಿಟ್ಟು ಮೆಟ್ರೋ ಸಿಟಿಗೆ ಬಂದದ್ದು ಇದೇ ಮೊದಲು. ಮೆಟ್ರೋ ನಗರದ ಗಿಜು ಗಿಜು ಮೊದಲ ಬಾರಿಗೆ ಕೇಳಿಸತೊಡಗಿತ್ತು, ಅನುಭವವಾಗಿರಲಿಲ್ಲ. ನನ್ನ ಪಿ.ಜಿ(ಪೇಯಿಂಗ್ ಗೆಸ್ಟ್) ಇಂದ ಆಫೀಸ್ ಗೆ ಬಹು ಹತ್ತಿರ, ಕಾಲ್ನಡಿಗೆಯ ಹಾದಿ. ಆರು ತಿಂಗಳಾಗಿತ್ತು ಆಗಲೇ ನಾನು ಹೈದರಾಬಾದ್ ನಲ್ಲಿರಲು, ಆದರೆ ಆಫೀಸ್ ಮತ್ತು ರೂಮ್ ಬಿಟ್ಟು ಹೈದರಾಬಾದ್ ನ ಬಹಳಷ್ಟು ಪರಿಚಯ ನನಗಾಗಲಿಲ್ಲ. ಆಗಲಿಲ್ಲ ಎನ್ನುವದಕ್ಕಿಂತ ಪರಿಚಯ ಮಾಡಿಕೊಳ್ಳುವ ಪ್ರಯತ್ನ ನಾನು ಮಾಡಲಿಲ್ಲ. ಅದರಿಂದ ಸಮಯ ವ್ಯರ್ಥವಾಗುತ್ತೆ, ಅದೇ ಸಮಯದಲ್ಲಿ ಓದಿಕೊಳ್ಳಬಹುದಲ್ಲ(ಸರ್ಕಾರಿ ನೌಕರಿಗಾಗಿ) ಎಂದೆಲ್ಲ ಅಂದುಕೊಂಡು ಹೊರಗೆ ಸ್ನೇಹಿತರ ಜೊತೆ ಬಹಳಷ್ಟು ತಿರುಗಾಡಲೇ ಇಲ್ಲ. ಇದರಿಂದ ಕಲಿಯಬಹುದಾದ ಸಾಕಷ್ಟು ವಿಷಯಗಳಿಂದ ವಂಚಿತಳಾದೆ ಎಂದು ಈಗ ಅನಿಸುತ್ತಿದೆ. ನಾನು ಪ್ರೈವೇಟ್ ಇನ್ಸ್ಟಿಟ್ಯೂಟ್ ಒಂದರಲ್ಲಿ ಸಿವಿಲ್ ಇಂಜಿನಿಯರಿಂಗ್ instuctor ಆಗಿ ಕೆಲಸ ಮಾಡುತ್ತಿದ್ದೆ. ಸರ್ಕಾರಿ ಕೆಲಸ ಪಡೆಯಬೇಕೆಂಬುದು ನನ್ನ ಬಹು ದೊಡ್ಡ ಕನಸಾಗಿತ್ತು. ನನ್ನ ಕೆಲಸದ ವಿಷಯಕ್ಕೆ ಅನುಕೂಲವಾಗಲೆಂದು ಕೆಲವು ತಂತ್ರಾಂಶಗಳನ್ನು(software) ಕಲಿಯಬೇಕೆಂದು ನಿರ್ಧರಿಸಿದೆ. ನಾನು ವಾಸವಿರುವುದು ಅಶೋಕ್ ನಗರದಲ್ಲಿ. ಆದರೆ ಕಲಿಕೆಯ ಕೇಂದ್ರಗಳಿರುವುದು ‘ಮೈತ್ರಿವನಂ’ ಎಂಬಲ್ಲಿ. ಆಹಾ! ಎಂತಹ ಸೊಗಸಾದ ಹೆಸರು.’ಮೈತ್ರಿವನಂ’. ಆದರೆ ಅಲ್ಲಿ ಮೈತ್ರಿಯೂ ಇಲ್ಲ, ವನವೂ ಇಲ್ಲ. ಕೇವಲ ಕೋಚಿಂಗ್ ನ ಒಂದು ದೊಡ್ಡ ಸಂತೆ. ಕೊನೆಗೂ ಹೋಗಿ ಒಂದು ಕೋಚಿಂಗ್ ಗೆ ಸೇರಿಕೊಂಡೆ. ಹೊಸ ಸಮಸ್ಯೆಯೊಂದು ತಲೆದೋರಿತು. ಈಗಿರುವ ನನ್ನ ಸ್ಥಳದಿಂದ (ಅಶೋಕ್ ನಗರ್) ಈ ಮೈತ್ರಿವನಂಗೆ ಸುಮಾರು ಒಂದು ಗಂಟೆಯ ಬಸ್ ಪ್ರಯಾಣ ಮಾಡಬೇಕು. ಹಾಗೆಯೇ ಇಲ್ಲಿ ಸಂಜೆ 5.30ರಿಂದ 7.30 ರ ವರೆಗೆ ತರಗತಿಗಳು ನಡೆಯುತ್ತವೆ. ಸಂಜೆ 7.30 ರ ನಂತರ ಈ ಮಹಾನಗರದಲ್ಲಿ ಬಸ್ ಪ್ರಯಾಣ! ನನಗೋ ಎಲ್ಲವು ಹೊಸತು. ಇನ್ನೇನಾದರು ಉಪಾಯ ಮಾಡಲೇಬೇಕಲ್ಲ. ಅತ್ತ ಅಶೋಕ್ ನಗರ್ ನಲ್ಲಿ ಬೆಳಗ್ಗೆ ಇಂದ ಸಂಜೆ ವರೆಗೆ ಕೆಲಸ, ಸಂಜೆ ಇಲ್ಲಿ ತರಗತಿಗಳು. ಈ ಎರಡು ಏರಿಯಗಳ ಮಧ್ಯೆ ‘ಪಂಜಗುಟ್ಟ’ ಎಂಬಲ್ಲಿ ಪಿ.ಜಿ. ಗೆ ಬಂದೆ. ಅಪ್ಪ ಅಮ್ಮನ ಅನುಮತಿಯೂ ದೊರೆಯಿತು. ಇಲ್ಲಿಂದ ಶುರುವಾಯ್ತು ನೋಡಿ, ನನ್ನ ಮೆಟ್ರೋ ಜೀವನದ ಅನುಭವ. ಬೆಳಿಗ್ಗೆ ಬಸ್ ಸ್ಟಾಂಡ್ ನಲ್ಲಿ 8 ಗಂಟೆಗೆ ಬರುವುದು, 9 ಕ್ಕೆ ಅಶೋಕನಗರ್ , ಅಲ್ಲಿ ಸಂಜೆ 4 ಗಂಟೆವರೆಗೆ ಕೆಲಸ. 4.15 ಕ್ಕೆ ಬಸ್ ಹಿಡಿದು 5.30ರ ಒಳಗೆ ಮೈತ್ರಿವನಂ ಬಂದು ಸೇರುವುದು. ಇಲ್ಲಿ 5ನೇ ಮಹಡಿಯವರೆಗೆ ಹತ್ತುವುದು, ಏಕೆಂದರೆ ಲಿಫ್ಟ್ ಯಾವಾಗಲು ಫುಲ್. 7.30 ಕ್ಕೆ ಇಲ್ಲಿಂದ ಹೊರಟು 8 ಗಂಟೆ ಅಷ್ಟೊತ್ತಿಗೆ ನನ್ನ ರೂಮ್ ಸೇರುವುದು. ಇದು ನನ್ನ ದಿನಚರಿಯಾಯಿತು. ಈ ಮಧ್ಯೆ ನನಗೊಂದು ಭಯಂಕರವಾದ ಉಪಾಯವೊಂದು ಹೊಳೆಯಿತು. (ಭಯಂಕರವಾದ ಅನುಭವವಾದ್ದರಿಂದ) ದಿನವೂ ಸಿಟಿ ಬಸ್ ಹಿಡಿದು ಓಡಾಡುತ್ತಿರುವ ನನಗೆ ಈ ಚಿಲ್ಲರೆ (change) ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಬಸ್ ಪಾಸ್ ಮಾಡಿಸೋಣವೆಂದು ನಿರ್ಧರಿಸಿದೆ. ಬಸ್ ಪಾಸ್ ನಿಂದ ಅಲ್ಪ ಸ್ವಲ್ಪ ದುಡ್ಡೂ ಉಳಿಯುತ್ತವೆ. ಇಷ್ಟೇ ನನ್ನ ಯೋಚನೆಗೆ ಬಂದದ್ದು. ಒಂದು ದಿನ ಸಂಜೆ ಕ್ಲಾಸ್ ಇರಲಿಲ್ಲ. ಇನ್ನು ಬಸ್ ಪಾಸ್ ಯೋಚನೆಯನ್ನು ಕಾರ್ಯರೂಪಕ್ಕೆ ತರೋಣವೆಂದು ನಿರ್ಧರಿಸಿದೆ.ಎಂದಿನಂತೆ 4 ಗಂಟೆಗೆ ಹೊರಡಲು ಅಣಿಯಾದೆ. ಆಫೀಸ್ ನಲ್ಲೇ ಇದ್ದ ಒಬ್ಬರ ಬಳಿ ಹೋದೆ. ಅವರು ಕನ್ನಡಿಗರು ಎಂಬುದು ಮಾತ್ರ ನನಗೆ ಗೊತ್ತಿತ್ತು. ಹೋಗಿ ಕುಳಿತು ಹೆಸರು- ಊರು ಕುಶಲೋಪರಿ ಕೇಳಿದ ನಂತರ, ನಾನು ಬಸ್ ಪಾಸ್ ಮಾಡಿಸಬೇಕೆಂದಿದ್ದೇನೆ. ಹೈದರಾಬಾದ್ ನನಗೆ ಅಷ್ಟು ತಿಳಿಯದು. ತಮಗೆ ಗೊತ್ತಿದ್ದರೆ ಎಲ್ಲಿ ಮತ್ತು ಹೇಗೆ ಎಂದು ತಿಳಿಸುವಿರಾ ಎಂದು ಕೇಳಿದೆ. ಅದಕ್ಕೆ ಆ ವ್ಯಕ್ತಿ, ಹೇಗೆ ಎಂದರೆ ಎಂದು ಮುಖ ಗಂಟಿಕ್ಕಿ ನನ್ನನ್ನು ನೋಡಿದಳು. ಅದಕ್ಕೆ ನಾನು ‘ಅಂದರೆ ಪಾಸ್ ಪೋರ್ಟ್ ಸೈಜ್ ಫೋಟೋ ಎಷ್ಟು ಕೊಡಬೇಕು, ವೋಟರ್ ಐ.ಡಿ, ಆಧಾರ್ ಏನಾದರು ಕೇಳುತ್ತಾರೆಯೇ. ಏಕೆಂದರೆ ನೋಡಿ ಈಗ ಎಲ್ಲ ಕಡೆ ಆಧಾರ್ ಕಡ್ಡಾಯ ಬೇರೆ ಮಾಡಿದ್ದಾರೆ. ನನ್ನ ಬಳಿ ಎರಡೂ ಇ…..ದೆ……’ ಅಷ್ಟರಲ್ಲೇ ಮಾತು ತಡೆದ ಆ ವ್ಯಕ್ತಿ ‘ಕೋಟಿ’ ಬಸ್ ಸ್ಟಾಂಡ್ ನಲ್ಲಿ ಬಸ್ ಪಾಸ್ ಸಿಗುತ್ತೆ. ಇಲ್ಲಿಂದ ಇಂತಹ ಬಸ್ ನಂಬರ್ ಎಂದು ಹೇಳಿ, ತನ್ನ ಫೋನ್ ನಲ್ಲಿ ತಾನು ಮಗ್ನಳಾದಳು. ಆಗಲೇ ನನಗೆ ಅನಿಸಿದ್ದು ಓಹ್, ಬ್ಲೂಟೂತ್ ನಲ್ಲಿ ಯಾರೊಟ್ಟಿಗೋ ಮಾತಿನಲ್ಲಿದ್ದಳು, ನನ್ನಿಂದ ಭಂಗವಾಯಿತು ಎಂದು. ಸರಿ, ಈಗ ಬಸ್ ಪಾಸ್ ನ ಮೋಹ ಹೊಕ್ಕಿದೆ. ಅದು ತೀರುವುದೆಂತು? ‘ಕೋಟಿ’ ಎಲ್ಲಿದೆ? ಅಶೋಕ್ ನಗರದಿಂದ ಎಷ್ಟು ದೂರ ಎಂಬುದು ಎಲ್ಲೋ ಕೇಳಿದ ನೆನಪಾಗಿ, ನೋಡಿಯೇ ಬಿಡುವ ಎಂದು, ಆಕೆ ಹೇಳಿದ ಬಸ್ ನಲ್ಲಿ ಏರಿದೆ. ಬೇರೆ ಯಾರಿಗಾದರೂ ಕೇಳಲು ಅಲ್ಲಿ ಸ್ನೇಹಿತರಾರು ಇಲ್ಲ. ಟಿಕೆಟ್ ತೆಗೆದುಕೊಂಡು, ಬಸ್ ಕಂಡಕ್ಟರ್ ಗೆ ಕೋಟಿ ಬಸ್ ಸ್ಟಾಪ್ ಬಂದ ಕೂಡಲೇ ತಿಳಿಸಿ ಎಂದು ನನಗೆ ಬರುತ್ತಿದ್ದ ಅರ್ಧ ತೆಲುಗು ಮಿಶ್ರಿತ ಇಂಗ್ಲೀಷ್ ನಲ್ಲಿ ಹೇಳಿದೆ. ಅದಕ್ಕಾತ ಅದೇ ಕೊನೆಯ ಸ್ಟಾಪ್, ನಿಮಗೇ ತಿಳಿಯುತ್ತದೆ ಎಂದು ಹೇಳಿ ಹೊರಟುಹೋದ. ಸುಮಾರು ಮೂವತ್ತೈದು ನಿಮಿಷಗಳ ನಂತರ ಬಂತು ಸ್ಟಾಪ್. ಇಳಿದು, ಬಸ್ ಸ್ಟಾಪ್ ನಲ್ಲಿ ‘ಬಸ್ ಪಾಸ್’ ಗಾಗಿ ವಿಚಾರಿಸಿದೆ. ಅದಕ್ಕವರು ಇಲ್ಲಿ ವಿತರಿಸುವುದಿಲ್ಲ. ಮುಂದೆ MGBS(Mahatma Gandhi Bus Station)ನ ಎದುರಿನ ಸಿಟಿ ಬಸ್ ಸ್ಟಾಪ್ ನಲ್ಲಿ ಸಿಗುತ್ತೆ ಎಂದರು. ಇಲ್ಲಿಂದ 5 ನಿಮಿಷದ ಹಾದಿ ಎಂದು ಅವರಿಂದಲೇ ತಿಳಿದು ಹೊರಗಡೆ ಬಂದೆ. ಸ್ವಲ್ಪ ನಿರಾಶೆಯಾಗಿತ್ತು. ಗಡಿಯಾರ 5.15 ಎಂದು ತೋರಿಸುತ್ತಿತ್ತು. ಮನಸಿನಲ್ಲಿ ಎರಡು ಪ್ರಶ್ನೆ ಮೂಡಿದ್ದವು. ಮುಂದಕ್ಕೆ ಹೋಗುವುದೇ ಅಥವಾ ಹಿಂತಿರುಗಿ ರೂಮ್ ಗೆ ಹೋಗುವುದೇ ಎಂದು. ಆದರೆ ‘ಬಸ್ ಪಾಸ್’ನ ಪೆಡಂಭೂತ ಬಿಡಬೇಕಲ್ಲ. ಇಟ್ಟ ಹೆಜ್ಜೆ ಹಿಂದೆ ತೆಗೆಯುವುದೇ? ಛೇ.. ಛೇ.. ಆಟೋ ಮಾಡಿಕೊಂಡು ಬಂದದ್ದಾಯಿತು. ಇಲ್ಲಿ ನೋಡಿದರೆ ಹನುಮಂತನ ಬಾಲದ ಹಾಗೆ ನಿಂತಿದ್ದಾರೆ ಜನ. ಅಬ್ಬಾ! ಹೈದರಾಬಾದ್ ನಿಜಕ್ಕೂ ಮಹಾ ನಗರ ಎಂದುಕೊಂಡೆ. ಈ ಬಾಲದ ಕೊನೆಗೆ ನಾನು ಸೇರಿಕೊಂಡು ಬಾಲದ ಭಾಗವಾಗಿ ಪಾಸ್ ಪಡೆಯುವುದೇ? ಅದು ಯಾವಾಗ ದೊರಕುತ್ತೇ? ಈ ಜನರ ನಡುವೆ ನನ್ನ ಸರದಿ ಬರಲು ಸುಮಾರು ಮೂರು ಗಂಟೆ ಆಗಬಹುದಾ? ಎಂಬಿವೇ ಪ್ರಶ್ನೆಗಳ ಮಧ್ಯೆ, ನನ್ನ ಮುಂದಿರುವ ಒಬ್ಬರನ್ನು ಕೇಳಿಯೇ ಬಿಟ್ಟೆ. ಇಲ್ಲಿಯೇ ಬಸ್ ಪಾಸ್ ಸಿಗುತ್ತೋ ಅಥವಾ ಬೇರೆ ಕಡೆಯೂ ಉಂಟೋ ಎಂದು. ಅದಕ್ಕವರು ‘ಸಿಕಿಂದ್ರಾಬಾದ್ ‘ ನಲ್ಲಿ ಸಿಗುತ್ತೆ ಹಾಗೂ ಅಲ್ಲಿ ಇಲ್ಲಿಗಿಂತಲೂ ಜನ ಸ್ವಲ್ಪ ಕಡಿಮೆ ಎಂದು ಸೇರಿಸಿ ತಿಳಿಸಿದರು. ಬಸ್ ನಂಬರ್ ಕೂಡ ಹೇಳಿದರು ಮತ್ತು ನಲವತ್ತೈದು ನಿಮಿಷದ ಹಾದಿ ಎಂದು ತಿಳಿಸಲು ಮರೆಯಲಿಲ್ಲ. ಮರು ಯೋಚನೆ ಮಾಡದೆ ಬಸ್ ಹತ್ತಿದೆ. ಸಿಕಿಂದ್ರಾಬಾದ್ ಬಸ್ ಸ್ಟಾಪ್ ತಲುಪಿದಾಗ ಸಮಯ 6.30. ಇಲ್ಲಿ ಬಸ್ ಪಾಸ್ ಕೌಂಟರ್ ಹತ್ತಿರ ಬಂದು ನೋಡುತ್ತೇನೆ, ಇಲ್ಲಿಯೂ ಜನವೋ ಜನ. ಮೊದಲ ಬಾರಿಗೆ ನನಗೆ ನಮ್ಮ ದೇಶದ ಜನಸಂಖ್ಯೆಯ ಸ್ಪಷ್ಟ ಚಿತ್ರಣ ಕಣ್ಣ ಮುಂದೆ ಬಂದಿತು. ಹಿಂದಿನ ಸ್ಟಾಪ್ ನಲ್ಲಿ ಅವರು ಹೇಳಿದ ‘ಸ್ವಲ್ಪ ಕಡಿಮೆ ಜನ’ ಅನುಭವಕ್ಕೆ ಬಂತು. ಏನು ಮಾಡಲೂ ತೋಚದೆ, ಕ್ಯೂ ಸೇರಿಕೊಂಡೆ. ಅಲ್ಲಿಯಷ್ಟೇ ಇಲ್ಲಿಯೂ ಜನ. ತನ್ನಷ್ಟಕ್ಕೆ ತಾನೇ ಕ್ಯೂ ಆಮೆ ಗತಿಯಲ್ಲಿ ಮುಂದೆ ಸಾಗುತ್ತಾ ಇತ್ತು. ಸುತ್ತಲೂ ನೋಡಿದೆ. ಯಾರಿಗೆ ಯಾರೋ!! ಅವರ ಪಾಡಿಗೆ ಅವರು ಸ್ಮಾರ್ಟ್ ಫೋನ್ ನಲ್ಲಿ ಬ್ಯುಸಿ. ಒಂದು ಕ್ಷಣ ದಂಗು ಬಡಿದ ಹಾಗಾಯಿತು. ನಾನು ನಮ್ಮೂರಲ್ಲಿ ‘ದೇವರ ದರ್ಶನ’ಕ್ಕೂ ಇಷ್ಟು ದೊಡ್ಡ ಕ್ಯೂ ನಿಂತಿರಲಿಲ್ಲ. ಹಿಂದೆ ತಿರುಗಿದೆ, ನನ್ನ ಹಿಂದೆ ಮತ್ತೆ ಜನ ಬಂದು ಕ್ಯೂ ಸೇರಿಕೊಳ್ಳುತಿದ್ದಾರೆ. ಅಷ್ಟರಲ್ಲಿ ನನ್ನ ಹಿಂದಿನ ಅಂಕಲ್ ನನ್ನನ್ನು ಮಾತನಾಡಿಸಿದರು. ಸಂಕ್ಷಿಪ್ತ ಪರಿಚಯದ ನಂತರ ಎಲ್ಲಿಂದ ಎಲ್ಲಿಯವರೆಗೆ ಪಾಸ್ ಎಂದು ಕೇಳಿದರು, ಹೇಳಿದೆ. ನಂತರ ಯಾವ ಬಸ್ ಗಾಗಿ? ಆರ್ಡಿನರಿಯೋ, ಮೆಟ್ರೋ ನಾ ಅಥವಾ ಡೀಲಕ್ಸಾ ಎಂದರು. ಆ ತಕ್ಷಣಕ್ಕೆ ಡೀಲಕ್ಸ್ ಎಂದೇ. ಆದರೆ ನನ್ನ ತಲೆಯಲ್ಲಿ ರೆಕಾರ್ಡ್ ಓಡಲು ಶುರುವಾಯಿತು. ಮೂರಕ್ಕೂ ಏನು ವ್ಯತ್ಯಾಸ. ಹದಿನೈದು ದಿನಗಳಿಂದ ಓಡಾಡುತಿದ್ದೇನೆ ಬಸ್ ನಲ್ಲಿ. ನಾನು ಯಾವತ್ತು ಈ ವ್ಯತ್ಯಾಸ ಗಮನಿಸಿಲ್ಲವಲ್ಲ. ನನ್ನ ಗಮನಿಸುವ ಶಕ್ತಿಯೇ ಕಡಿಮೆಯೇ ಅಥವಾ ನಾನು ಹತ್ತಿದ ಬಸ್ ಗಳು ಒಂದೇ ತೆರನಾದುವಾ? ಎಷ್ಟೊಂದು ಪ್ರಶ್ನೆಗಳು. ಅಷ್ಟರಲ್ಲಿ , ಅವರೇ ನನ್ನ ಯೋಚನಾ ಲಹರಿಯನ್ನು ಮುರಿಯುತ್ತಾ ಒಂದು ವಿಷಯ ಹೇಳಲಾ ಎಂದರು. ಹೇಳಿ ಎಂದೇ. ನೀನು ಓಡಾಡುವ ಆ ದಾರಿಗೆ ಬಸ್ ಪಾಸ್ ನ ಅವಶ್ಯಕತೆ ಇಲ್ಲ. ಬಸ್ ಪಾಸ್ ನ ಖರ್ಚಿಗೂ, ದಿನದ ಬಸ್ ವೆಚ್ಚಕ್ಕೂ ಅಂತ ವ್ಯತ್ಯಾಸವೇನಿಲ್ಲ. ಬೇಕಿದ್ದರೆ ಈ ಚೇಂಜ್ ಸಮಸ್ಯೆಗೆ ಬೇಕಾದರೆ ನೀನು ಪಾಸ್ ಮೊರೆ ಹೋಗಬಹುದು ಎಂದರು. ನನ್ನ ಪಾಲಿಗೆ ದೇವರೇ ಬಂದ ಹಾಗಾಯಿತು. ಸಮಯ ಆಗಲೇ 7.15. ಇನ್ನು ಈ ಕ್ಯೂ ಮುಗಿಯುವುದೇ ಇಲ್ಲ ಎನಿಸಿ , ಥ್ಯಾಂಕ್ಸ್ ಅಂಕಲ್ ಎಂದು ಹೇಳಿ ಕ್ಯೂ ನಿಂದ ಹೊರಬಿದ್ದೆ. ಈ ಜನಗಳ ಜಾತ್ರೆಯಲ್ಲಿ ನಿಂತು ಪಾಸ್ ಪಡೆಯುವುದಕ್ಕಿಂತ, ದಿನವೂ ಚಿಲ್ಲರೆ ಕೊಡುವುದು ಉತ್ತಮವೆನಿಸಿತು. ಇನ್ನು ನಾನು ನನ್ನ ರೂಮ್ ಸೇರಬೇಕಲ್ಲ. ಬರುವಾಗ ಹೇಗೋ ‘ಅವರ್ ಬಿಟ್ಟ್ ಇವರ್ ಬಿಟ್ಟ್ ಇವರ್ ಯಾರ್’ ಅಂತ ಬಸ್ ಹಿಡಿದು ಬಂದು ಬಿಟ್ಟಿದ್ದೆ. ಈಗ ಇಲ್ಲಿಂದ ಹೋಗುವುದು ಹೇಗೆ. ನನ್ನ ಮೊಬೈಲ್ ಡಾಟಾ ದ ಸಹಾಯದೊಂದಿಗೆ ಸ್ಮಾರ್ಟ್ ಫೋನ್ ಅನ್ನು ಕೇಳಿದೆ. ಅದು ಎರಡು ಗಂಟೆಯ ಹಾದಿ ಎಂದು ತೋರಿಸಿತು. ಇನ್ನು ನಾನು ಮುಟ್ಟಿದ ಹಾಗೆ ಎಂದುಕೊಂಡೆ. ಅದರೊಂದಿಗೆ, ಹೌದಲ್ಲ ಎಂತಹ ಪೆದ್ದು ನಾನು, ಆಫೀಸ್ ನಿಂದ ಹೊರಡುವ ಘಳಿಗೆಯಿಂದಲೇ ಈ ಗೂಗಲ್ ಸರ್ಚ್ ಮಾಡಬಹುದಿತ್ತಲ್ಲ. ನನಗೆ ಹೊಳೆಯಲೇ ಇಲ್ಲವಲ್ಲಾ… ಹೀಗೆ ಯೋಚಿಸುತ್ತ ಅಲ್ಲಿರುವ ಬಸ್ ಗಳ ನಡುವೆ ಬಂದು ಹಾಗೂ ಹೀಗೂ ವಿಚಾರಿಸಿ ಬಸ್ ಹತ್ತಿದೆ. ನನ್ನ ಪುಣ್ಯಕ್ಕೆ ನೇರ ಬಸ್ ಸಿಕ್ಕಿತು, ಇಲ್ಲವಾದರೆ ಎರಡು ಬಸ್ ಬದಲಾಯಿಸಬೇಕಂತೆ. ಟಿಕೆಟ್ ಪಡೆದು ನಿಂತೆ, ಕೂರಲು ಸ್ಥಳವಿರಲಿಲ್ಲ. ಮೊಬೈಲ್ ಒಂದು ಕೈಯಲ್ಲಿ ಹಿಡಿದು ಇನ್ನೊಂದು ಕೈಯಿಂದ ಮೇಲಿನ ಬಸ್ ನ ಸರಳಿ ಹಿಡಿದು ನೇತಾಡುವುದು ಅಸಾಧ್ಯವೆನಿಸಿತು, ಮೊಬೈಲ್ ಅನ್ನು ಬ್ಯಾಗ್ ನಲ್ಲಿ ಹಾಕಿದೆ. ಮತ್ತದೇ ಹೇಳಿದೆ ಕಂಡಕ್ಟರ್ ಗೆ ‘ಪಂಜಗುಟ್ಟ’ ಸ್ಟಾಪ್ ಬರಲು ತಿಳಿಸಿ, ಹೊಸತು , ನನಗೆ ತಿಳಿಯುವುದಿಲ್ಲ ಎಂದು, ನಾನು ಏರಿದ ಅಷ್ಟೂ ಬಸ್ ಗಳಲ್ಲೂ ಆಟೋಮ್ಯಾಟಿಕ್ ವಾಯ್ಸ್ ರೆಕಾರ್ಡರ್ ಇರಲಿಲ್ಲ, ಸ್ಟಾಪ್ ಗಳನ್ನು ತಿಳಿಸಲು. ಸರಿ, ಸುಮಾರು ಒಂದು ಮುಕ್ಕಾಲು ಗಂಟೆ ಸಂದಿತ್ತು. ‘ಹೈದರಾಬಾದ್ ಸೆಂಟ್ರಲ್, ಹೈದರಾಬಾದ್ ಸೆಂಟ್ರಲ್’ ಅಂತ ಕೂಗಿ ಕಂಡಕ್ಟರ್ ನನ್ನನ್ನು ನೋಡಿದರು, ನಾನು ಪ್ರಶ್ನಾರ್ಥಕವಾಗಿ ಅವರನ್ನೇ ನೋಡಿದೆ. ಅದಕ್ಕವರು ಪಂಜಗುಟ್ಟ ಇಳಿಬೇಕು ಅಂದ್ರಲ್ಲ ಅಂದ್ರು. ನಾನು ಹೌದು ಅಂದೇ. ಇದೇ ಮತ್ತೆ ಅಂದರು. ಹೈದರಾಬಾದ್ ಸೆಂಟ್ರಲ್ ಅಂದಿರಲ್ಲ ಅಂದೆ. ಅಯ್ಯೋ ಇಳಿಯಮ್ಮ ಬೇಗ ಹೈದರಾಬಾದ್ ಸೆಂಟ್ರಲ್ ಅಂದ್ರು ಒಂದೇ ಪಂಜಗುಟ್ಟ ಅಂದ್ರು ಒಂದೇ. ಇಳಿ ಇಳಿ ಅಂತ ರೇಗಿದರು. ಪೆಚ್ಚಾಗಿ ಇಳಿದು, ಒಳಗಿನ ಗಲ್ಲಿಯೊಳಗೆ ಹಾದು ಅಂತು ರೂಮ್ ತಲುಪುವುದರೊಳಗೆ ರಾತ್ರಿ 9.30. ಅಮ್ಮನ ನಾಲ್ಕು ಮಿಸ್ಸ್ಡ್ ಕಾಲ್ ಆಗಿದ್ದವು. ಮಾತನಾಡಿದೆ. ನಂತರ ಐದು ನಿಮಿಷ ಮೌನವಾಗಿ ಕುಳಿತೆ. ಸಂಜೆ ನಾಲ್ಕು ಗಂಟೆ ಇಂದ ಇಲ್ಲಿಯವರೆಗಿನ ಎಲ್ಲವು ಕಣ್ಣ ಮುಂದೆ ಬಂದು ಹೋದವು. ಇನ್ನ್ಯಾವುದೋ ಬಸ್ ಹತ್ತಿದ್ದರೆ ಏನು ಗತಿ, ಎಂದು ಸಣ್ಣಗೆ ಒಂದು ಕ್ಷಣ ಮೈ ನಡುಗಿತು. ‘ಬಸ್ ಪಾಸ್’ ನ ಅವಾಂತರಕ್ಕೆ ನನ್ನ ಮೇಲೆ ನನಗೆ ಕೋಪ ಬಂತು. ನಗೆಯೂ ಬಂತು. ಒಂದೇ ಬಾರಿ ಇಡೀ ಹೈದರಾಬಾದ್ ಸುತ್ತಿದ ಅನುಭವವಾಯಿತು. ಒಂದು ಚಿಂತನೆಯೂ ಬಂದಿತು. ಸಣ್ಣ ಪಟ್ಟಣದಿಂದ ಮಹಾನಗರಗಳಿಗೆ ಓದಿಗಾಗಿಯೋ, ಕೆಲಸಕ್ಕಾಗಿಯೋ ಹೋಗುವ ಹುಡುಗಿಯರು ಎಷ್ಟು ಜಾಗರೂಕರಾಗಿದ್ದರು ಸಾಲದು. ನಂಬಿಕಸ್ಥ ಕೆಲವೇ ಸ್ನೇಹಿತರನ್ನು ಮಾಡಿಕೊಳ್ಳಬೇಕು. ಅವರೊಂದಿಗೇ ಊರು ಸುತ್ತಬೇಕು. ಅಪ್ಪ ಅಮ್ಮಂದಿರಿಗೆ ಸಮಯ ಸಮಯಕ್ಕೆ ನಾವು ಎಲ್ಲಿದ್ದೇವೆ ಎಂದು ತಿಳಿಸಬೇಕು. ಯಾವುದೇ ಊರಲ್ಲಿ ಸ್ನೇಹಿತರು, ಬಂಧುಗಳಿದ್ದರೆ ಒಳ್ಳೆಯದು. ತುರ್ತು ಪರಿಸ್ಥಿತಿಯಲ್ಲಿ ಸಹಾಯಕ್ಕಾದರೂ ಇರುತ್ತಾರೆ. ಸಣ್ಣ ಕೆಲಸವೇ ಆಗಿರಲಿ ಅಭ್ಯಾಸ ಆಗುವವರೆಗೆ ನಾಲ್ಕು ಜನರೊಂದಿಗೆ ಚರ್ಚಿಸಿ, ತಿಳಿದುಕೊಂಡು ಮುಂದುವರೆಯಬೇಕು. ಎಷ್ಟು ಓದಿ ತಿಳಿದರು ಅನುಭವ ಕಲಿಸುವ ಪಾಠ ದೊಡ್ಡದು. ಅಷ್ಟಿಲ್ಲದೇ ಹೇಳುತ್ತಾರೆಯೇ ದೊಡ್ಡವರು ‘ಗಿಳಿಯೋದು ಪುಸ್ತಕ ಜ್ಞಾನ, ನಿನ್ನನುಭವವೇ ನಿನಗೆ ಧರುಮದ ದೀಪ’ ಎಂದು. ಊಟದ ಶಾಸ್ತ್ರ ಮುಗಿಸಿದೆ. ತುಂಬಾ ಸುಸ್ತಾದ್ದರಿಂದ ಮಲಗಿಕೊಂಡೆ. ನಿದ್ದೆ ಯಾವಾಗ ಹತ್ತಿತೋ ತಿಳಿಯಲಿಲ್ಲ. ಎಲ್ಲಿ ನೋಡಿದರೆ ಅಲ್ಲಿ ಬಸ್ ಬಸ್ ಬಸ್! ಜನ ಓಡುತ್ತಿದ್ದಾರೆ. ಎಷ್ಟೊಂದು ಜನ ಓಡುತಿದ್ದಾರೆ. ಎಲ್ಲಿಗೆ ಓಡುತ್ತಿದ್ದಾರೆ? ಏಕೆ ಓಡುತ್ತಿದ್ದಾರೆ? ತಿಳಿಯದು. ನಾನೂ ಓಡುತ್ತಿದ್ದೇನೆ. ನನಗೂ ಏಕೆಂದು ತಿಳಿಯದು. ಬಸ್ ಹಿಡಿಯಲು ಓಡುವಾಗ ಜಾರಿ ಬಿದ್ದೆ. ತಕ್ಷಣ ಎಚ್ಚರವಾಯಿತು. ಓಹ್ ಕನಸು! ಆಗಲೇ ಬೆಳಗ್ಗೆ 7 ಗಂಟೆ. ಆಫೀಸ್ ಗೆ ಹೊರಡಬೇಕೆಂದು ದಡಬಡನೆ ಎದ್ದೆ!!