“ಸಾವಿನೊಂದಿಗೆ ಹೋರಾಟ ಮತ್ತು ಹಾಸ್ಯ”

ಇತ್ತೀಚಿಗೆ ಒಂದು ಅದ್ಭುತ ಕೃತಿಯನ್ನು ಓದಿದೆ. ಎರಡು ವಿಷಯಗಳಿಂದಾಗಿ ಇದು ಅದ್ಭುತ. ಒಂದು ಸಾವನ್ನು ಎದುರು ನೋಡುತ್ತಿರುವಾಗಲೂ ಕೂಡ ಹೇಗೆ ನಗು ನಗುತ್ತಾ ಇರಬಹುದು ಎಂಬುದಾದರೆ, ಎರಡನೆಯದು ಈ ಕೃತಿಯ ಲೇಖಕರಾದ ಮಾಯ.ಬಿ.ನಾಯರ್ ಅವರು ನಮ್ಮ ಕಾವೇರಿ ನಿಗಮದವರು, ನನಗೆ ಪರಿಚಯದವರು ಎಂಬುದು. ಕೃತಿಯ ಹೆಸರೇ ಬಹು ಸೊಗಸಾಗಿದೆ, “ಸಾವಿನ ಮನೆಯ ಕದವ ತಟ್ಟಿ-ಕ್ಯಾನ್ಸರ್ ಗೆ ಹಾಸ್ಯೌಷಧಿ”.

ಮಲಯಾಳಿ ಕೃತಿಯನ್ನು ಕನ್ನಡಕ್ಕೆ ಬಹು ಸೊಗಸಾಗಿ ಅನುವಾದವನ್ನು ಮಾಡಿದ್ದಾರೆ. ಮಲಯಾಳಂನ ಪ್ರಸಿದ್ಧ ಹಾಸ್ಯ ನಟರಾದ ‘ಇನ್ನಸೆಂಟ್’ ಎಂಬುವರು ಕ್ಯಾನ್ಸರ್ ವಿರುದ್ಧ ಹೋರಾಡಿ ಜಯಿಸಿದ್ದು, ಮಾತ್ರವಲ್ಲ ಅವರ ಪತ್ನಿಯವರು ಕೂಡ ಇದರಿಂದ ಹೊರ ಬಂದ ಒಂದು ರೋಚಕ ನೈಜ ಕಥನ. ನಿಜವಾಗಿ ನೋಡಿದರೆ ಇದನ್ನು ಕಥನ ಎಂದು ಕರೆಯಬಾರದು ಆದರೆ ಇದನ್ನು ಓದಿದ ಮೇಲೆ ಒಬ್ಬ ಮನುಷ್ಯ ಧನಾತ್ಮಕ ಚಿಂತನೆಯಿಂದ ಹಾಗೂ ಮುಖ್ಯವಾಗಿ ಹಾಸ್ಯದಿಂದ ಹೇಗೆ ಬಹು ಕ್ರೂರ ರೋಗದಿಂದ ಕೂಡ ಆಚೆ ಬರಬಹುದು ಎಂದು ತಿಳಿಯುತ್ತದೆ, ಹಾಗೂ ಓಹ್ ಇದು ನಿಜವಾ, ಅದ್ಭುತ! ಎನಿಸುತ್ತದೆ.

ಅವರಿಗೆ ಕ್ಯಾನ್ಸರ್ ಎಂದು ತಿಳಿದ ತಕ್ಷಣ ಅವರು ಅದರಿಂದ ಗುಣಮುಖರಾಗಲೇ ಬೇಕು ಎಂದು ತೀರ್ಮಾನ ಮಾಡಿ, ಒಂದು ನಿರ್ಧಾರಕ್ಕೆ ಬರುತ್ತಾರೆ. ಅದೇನೆಂದರೆ ‘ಬದುಕು ಕಾದಿರುವಾಗ ನಮಗೆ ಸಾಯಲು ಹೇಗೆ ಸಾಧ್ಯ?’ ಎಂದು. ನಿಜವಲ್ಲವೇ? ಬದುಕು ಕೈ ಬೀಸಿ ಇನ್ನು ಬಹಳಷ್ಟು ಬದುಕು ಕಾದಿದೆ ಎಂದು ಸ್ವಾಗತಿಸುತ್ತಿರುವಾಗ, ಬದುಕುವ ಉತ್ಕಟ ಉತ್ಸಾಹ ಮನೆ ಮಾಡಿರುವಾಗ ಸಾವು ಹೇಗೆ ತಾನೇ ಬರಲು ಸಾಧ್ಯ?

ಕೆಲವರು ಕ್ಯಾನ್ಸರ್ ಬಂದಾಗ ಬೇರೆಯವರಿಗೆ ಹೇಗೆ ಹೇಳುವುದು ಎಂದು ಮುಚ್ಚಿಡುತ್ತಾರೆ. ನಿಜ, ಅದೇನು ಮಹಾ ಸಾಧನೆಯಲ್ಲ ಹೇಳಿಕೊಳ್ಳಲು, ಆದರೆ ಹಾಗಂತ ಮುಚ್ಚಿಡುವಂತಹುದು ಅಲ್ಲವಲ್ಲ. ಅದಕ್ಕೆ ಇನ್ನಸೆಂಟ್ ತುಂಬಾ ಚೆನ್ನಾಗಿ ಹೇಳುತ್ತಾರೆ, ‘ಮುಚ್ಚಿಡಲು ನಾನಿದನ್ನು ಯಾವುದೋ ಚರ್ಚ್ ಅಥವಾ ದೇವಸ್ಥಾನದಿಂದ ಕದ್ದು ತಂದಿರುವುದಲ್ಲವಲ್ಲ, ಎಲ್ಲರಿಗೂ ಬರುವ ಹಾಗೆಯೇ ನನಗೂ ಬಂದದ್ದು’ ಎಂದು. ಆ ದುಃಖದ ಸನ್ನಿವೇಶದಲ್ಲೂ ಕೂಡ ಅವರ ಹಾಸ್ಯ ಪ್ರಜ್ಞೆ ಮೆಚ್ಚುವಂತಹುದು.

ಕ್ಯಾನ್ಸರ್ ಒಂದೇ ಅಲ್ಲ, ಅವರಿಗೆ ಹೃದಯ ರೋಗವೂ ಕೂಡ ಬಂದು ಸೇರುತ್ತದೆ. ಆದರೆ ಮೊದಲು ಕ್ಯಾನ್ಸರ್ ಗೆ ಚಿಕಿತ್ಸೆ ನಂತರ ಹೃದ್ರೋಗದ ಕಾಳಜಿ ಎನ್ನುತ್ತಾರೆ ವೈದ್ಯರು. ಅದನ್ನು ಇನ್ನಸೆಂಟ್ ಹೀಗೆ ಹೇಳುತ್ತಾರೆ, ‘ದೊಡ್ಡವರು ಬಂದಾಗ ಚಿಕ್ಕವರು ದಾರಿ ಬಿಟ್ಟು ಕೊಡುತ್ತಾರೆ, ಕ್ಯಾನ್ಸರಿನ ದೊಡ್ದಾಟದ ಮುಂದೆ ಹಾರ್ಟಿನ ಮಕ್ಕಳಾಟಕ್ಕೆ ಸ್ಥಾನವಿಲ್ಲ’. ಅವರು ಒಬ್ಬ ನಟನಾಗಿ ಅನುಭವಿಸುತ್ತಿರುವ ತೊಳಲಾಟವನ್ನು ಕೂಡ ತುಂಬಾ ಚೆನ್ನಾಗಿ ಹೇಳುತ್ತಾರೆ. ಆಸ್ಪತ್ರೆಯ ಕಾರಿಡಾರ್ ನಲ್ಲಿ ಇವರು ಔಷಧಿ ಹಿಡಿದುಕೊಂಡು ಟೆನ್ಶನ್ ನಲ್ಲಿ ನಡೆಯುತ್ತಿರಬೇಕಾದರೆ, ಹಾಸ್ಯ ನಟರಾದ ಇವರನ್ನು ನೋಡಿ ಜನ ನಗುತ್ತಾರೆ. ಸತ್ತು ಮಲಗಿದರೂ ಜನ ನೋಡಿ ನಗ್ತಾರೆ ಎಂಬುದು ಈ ಭೂಮಿಯಲ್ಲಿ ಒಬ್ಬ ಹಾಸ್ಯ ನಟನ ದುರ್ವಿಧಿಯಾಗಿರಬಹುದು ಎಂದು ಕೊರಗುತ್ತಾರೆ. ನಮ್ಮ ಜನ ಎಷ್ಟು insensitive ಎನಿಸಿತು ನನಗೆ.

ಇನ್ನಸೆಂಟ್ ರವರ ಬಹು ಮಹತ್ವದ ಸಂದೇಶ ಈ ಪುಸ್ತಕದ ಮೂಲಕ ಎಂದರೆ, ವೈಜ್ಞಾನಿಕವಾಗಿ ಸಿದ್ಧವಾದ ಚಿಕಿತ್ಸೆಯನ್ನೇ ನಂಬಿದರು ಮತ್ತು ಡಾಕ್ಟರ್ ಒಬ್ಬ ದೇವರ ಸ್ವರೂಪ ಎಂದು ತಿಳಿದು ಚಿಕಿತ್ಸೆ ಪಡೆದರೇ ಹೊರತು ಯಾವುದೇ ರೀತಿಯ ಬೂಟಾಟಿಕೆ, ಮಾಯಾ-ಮಂತ್ರಗಳಿಗೆ ಅವರು ಬೆಲೆ ಕೊಡಲಿಲ್ಲ ಮತ್ತು ಬಲಿ ಆಗಲಿಲ್ಲ. ಒಂದು advertisement ಗಾಗಿ ಅವರು ಒಪ್ಪಿದಾಗ ಅವರು ಮೊಟ್ಟ ಮೊದಲ ಬಾರಿಗೆ ತಮ್ಮನ್ನು ತಾವು ಕೂಲಂಕಷವಾಗಿ ಒಮ್ಮೆ ನೋಡಿಕೊಳ್ಳುತ್ತಾರೆ. ಸಣಕಲಾದ ದೇಹ, ಉದುರಿದ, ಅರ್ಧ ಬರಿದಾದ ತಲೆ, ಬಿಳುಚಿದ ಮುಖ, ಇವೆಲ್ಲವನ್ನು ಗಮನಿಸಿ ತಲೆಗೆ ಒಂದು ವಿಗ್ ಹಾಕಿಕೊಂಡು, ಯಾವಾಗಲೂ ಹಾಕುವ ಜುಬ್ಬಾ ಬಿಟ್ಟು T-shirt ಹಾಕಿಕೊಂಡು, powder ಬಳೆದುಕೊಂಡು ಕೂಡುತ್ತಾರೆ. ಆಗ ಅವರು ಹೋಲಿಸಿ ಹೇಳುವ ಮಾತು ಎಂತಹವರ ಮನಸ್ಸನ್ನು ಕೂಡ ಕಲಕುತ್ತದೆ. ‘ ನಿಜಕ್ಕೂ ಮುಂಬೈ ರೆಡ್ ಸ್ಟ್ರೀಟ್ ನಲ್ಲಿ ವಿರೂಪವಾಗಿರುವ ಸೆಕ್ಸ್ ವರ್ಕರ್, ಸಂಜೆ ವೇಳೆ ತನ್ನ ಗಿರಾಕಿಗಳನ್ನು ಆಕರ್ಷಿಸಲು ನಿಲ್ಲುವ ಅದೇ ಅವಸ್ಥೆ ಎಂದು’. ಅಬ್ಬಾ ಎಂತಹ ತೊಳಲಾಟವಿರಬಹುದು ಮನದಲ್ಲಿ.

ಇವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೂ ಕ್ಯಾನ್ಸರ್ ಬರುತ್ತದೆ, ಇವರ ಪತ್ನಿಗೂ ಕೂಡ ಕ್ಯಾನ್ಸರ್ ಎಂದು ತಿಳಿದುಬರುತ್ತದೆ. ಕ್ಯಾನ್ಸರ್ ಹರಡುವ ರೋಗವಲ್ಲ ಎಂದು ವಿವೇಕ ಹೇಳುತ್ತಿದ್ದರೂ ಕೂಡ ತಮ್ಮ ಜೊತೆ ಇರುವವರಿಗೆ ಬಂದ ರೋಗವನ್ನು ಕಂಡು ಇನ್ನಸೆಂಟ್ ಅವರು ತಮ್ಮ ಮೊಮ್ಮಕಳನ್ನು ಹತ್ತಿರ ಸೇರಿಸಲು ಕೂಡ ಹೆದರುತ್ತಾರೆ. ಅವರ ಈ ಅವಸ್ಥೆಯಲ್ಲಿ ಒಂದೇ ಒಂದು ಆಶಾಕಿರಣವಾಗಿ ನಿಂತ ಮೊಮ್ಮಕಳಿಗೂ ಏನಾದರು ಆದರೆ ಎಂಬ ಭಯ ಅವರಿಗೆ ಕಾಡಲು ಶುರುವಾಗುತ್ತದೆ.

ಇವರ ಮನೆಯವರಿಗೆ ಬರುವವರೆಲ್ಲರೂ ಹಣ್ಣುಗಳನ್ನು ತೆಗೆದುಕೊಂಡು ಬರುತ್ತಿರುವುದು ಯಾವ ಮಟ್ಟಿಗೆ ಹೆಚ್ಚಾಗುತ್ತದೆಂದರೆ ಇವರ ಬೀದಿಯಲ್ಲಿರುವ ಹಣ್ಣಿನ ವ್ಯಾಪಾರಿಯ ವ್ಯಾಪಾರ ದಿನೇ-ದಿನೇ ಏಳಿಗೆ ಕಾಣುತ್ತಾ ಹೋಗುತ್ತದೆ. ಎಲ್ಲವನ್ನೂ ಹಾಸ್ಯದ ಲೇಪನದೊಂದಿಗೆ ಬಹು ಚಂದವಾಗಿ ಸ್ವೀಕರಿಸುತ್ತಾರೆ ಮತ್ತು ಅದನ್ನು ಬರೆಯುತ್ತಾರೆ ಕೂಡ. ಇವರು ತಮ್ಮ ಪತ್ನಿಯೊಂದಿಗೆ ಇಬ್ಬರು ‘ಕಿಮೋ’ ಚಿಕಿತ್ಸೆಗೆ ಹೋಗುವಾಗ ‘ನಮ್ಮದೊಂದು ಸಂತುಷ್ಟ ಕ್ಯಾನ್ಸರ್ ಕುಟುಂಬ ಎನ್ನುತ್ತಾರೆ’. ಎಂತಹ ವಿಡಂಬನೆ!

ವೈದ್ಯರ ಮೇಲಿಟ್ಟ ಅವರ ವಿಶ್ವಾಸ, ಹಾಸ್ಯ, ಕುಟುಂಬದ, ಸ್ನೇಹಿತರ ಹಾರೈಕೆ ಎಲ್ಲವೂ ಒಟ್ಟುಗೂಡಿ ಕೊನೆಗೆ ಲಿಂಫೋಮಾದಿಂದ ಸಂಪೂರ್ಣ ಗುಣಮುಖರಾಗಿ ಮತ್ತೆ action-cut ಗೆ ಮರಳುತ್ತಾರೆ. ಮೊನ್ನೆಯ 2014 ರ ಲೋಕಸಭೆಗೆ ಕೂಡ ಅವರು ಆರಿಸಿ ಬಂದಿದ್ದರು.

ಜೀವನದಲ್ಲಿ ಕ್ಯಾನ್ಸರ್ ನಿಂದ ನರಳುತ್ತಿರುವ ಪ್ರತಿಯೊಬ್ಬ ವ್ಯಕ್ತಿ ಹಾಗೂ ಜೀವನದಲ್ಲಿ ಇನ್ನೇನೂ ಇಲ್ಲ ಎಂದು ಮನೋವ್ಯಾಧಿಗೆ ಒಳಗಾದ ಎಲ್ಲರೂ ಈ ಪುಸ್ತಕವನ್ನು ಒಮ್ಮೆಯಾದರು ಓದಲೇಬೇಕು, ಕನ್ನಡಕ್ಕೆ ಅನುವಾದ ಮಾಡಿದ ಮಾಯರವರಿಗೆ ಹೃತ್ಪೂರ್ವಕ ಧನ್ಯವಾದಗಳು. ಅಷ್ಟಿಲ್ಲದೇ ಡಿ.ವಿ.ಜಿ. ಅವರು ಹೇಳುತ್ತಾರೆಯೇ ‘ನಗುವೊಂದು ರಸಪಾಕ’ ಎಂದು. ನಗುವಾತ್ಮ ಪರಿಮಳವ ಪಸರಿಸುವ ಕುಸುಮ. ನಗು ಆರೋಗ್ಯ ಎನ್ನುವ ಪರಿಮಳವನ್ನೂ ಪಸರಿಸುತ್ತದೆ. ಆದ್ದರಿಂದ ನಗು-ನಗುತಾ ಬಾಳ್ ತೆರಳ್ –ಮಂಕುತಿಮ್ಮ!!

ಅಪಸ್ವರ-ಅಪಜಯ

‘ಅಪಸ್ವರ’ ಇದು ತ್ರಿವೇಣಿ ಅವರ ಕಾದಂಬರಿ. ಈ ಕಾದಂಬರಿ ಬಗ್ಗೆ ಮೊದಲು ನಾನು ‘ಬೆಂಕಿಯಲ್ಲಿ ಅರಳಿದ ಹೂವು’ ಚಿತ್ರದಲ್ಲಿ ಕೇಳಿದ್ದೆ. ಮೊನ್ನೆ ಆಕಸ್ಮಿಕವಾಗಿ ಈ ಕಾದಂಬರಿ ಓದುವ ಭಾಗ್ಯ ದೊರೆಯಿತು. ಆಗಲೇ ತಿಳಿದದ್ದು ಇದರ ಮುಂದುವರಿದ ‘ಅಪಜಯ’ ಎನ್ನುವ ಕಾದಂಬರಿಯೂ ಇದೆ ಎಂದು.
ಶೀರ್ಷಿಕೆಯನ್ನು ಓದಿದ ತಕ್ಷಣ ನನಗನಿಸಿದ್ದು ಇದೊಂದು ವಿಶಾದವಾದ ಅಂತ್ಯವನ್ನು ಹೊಂದಿರುತ್ತದೆ ಎಂದು . ಹಾಗೆಯೇ ಇದೆ! ಆದರೆ ದುರಂತದಲ್ಲಿ ಕೊನೆಗೊಳ್ಳುವುದೇನೋ ಎಂದೆಣಿಸಿದ್ದೆ, ಆದರೆ ಹಾಗೇನೂ ಆಗುವುದಿಲ್ಲ.
ಅದೇಕೋ ಈ ಕಾದಂಬರಿಯ ನಾಯಕಿಯ ಜೀವನ ದುಃಖದಲ್ಲಿ ಕೊನೆಗೊಳ್ಳುವುದಾದರೂ ನಾಯಕಿ ‘ಮೀರ’ಳ ಪಾತ್ರ ಮನಸ್ಸಿಗೆ ತುಂಬಾ ಹಿಡಿಸಿತು. ಚಿಕ್ಕಂದಿನಲ್ಲೇ ತಂದೆ ತಾಯಿಯನ್ನು ಕಳೆದುಕೊಂಡು ಚಿಕ್ಕಪ್ಪನ ಆಶ್ರಯದಲ್ಲಿ, ಚಿಕ್ಕಮ್ಮನ ತಿರಸ್ಕಾರದ ನುಡಿ ಕೇಳುತ್ತಾ ಬೆಳೆಯುವ ಮೀರ ಭಾವುಕ ಜೀವಿಯಾಗುತ್ತಾಳೆ ಎಂದುಕೊಂಡಿದ್ದೆ. ಆದರೆ ಆಕೆಯ ಆಲೋಚನಾ ಲಹರಿ, ತೆಗೆದುಕೊಳ್ಳುವ ನಿರ್ಧಾರ, ದಿಟ್ಟ ಹೆಜ್ಜೆ, ಬದುಕನ್ನು ಸ್ವೀಕರಿಸುವ ಬಗೆ, ಮನಸ್ಸಿನ ನೂರೊಂದು ಗೊಂದಲಗಳು, ವೃತ್ತಿಪರತೆ ಇವೆಲ್ಲವನ್ನು ನೋಡಿದಾಗ ಆಕೆ ಇಂದಿನ ಇಪ್ಪತ್ತೊಂದನೇ ಶತಮಾನದ ವಾಸ್ತವ ಮಹಿಳೆಯಾಗಿ ಕಂಗೊಳಿಸುತ್ತಾಳೆ.
ಇನ್ನೊಂದು ಬಹು ಆಶ್ಚರ್ಯಕರವಾದ ಸಂಗತಿ ಎಂದರೆ ಶಾಮು ತನ್ನ ಹೆಂಡತಿ ಮೀರಳಿಗಿಂತ ಕಡಿಮೆ ಓದಿದ್ದರೂ ಸಹ, ಆಕೆಯನ್ನು ಚುಚ್ಚು ಮಾತಿನಿಂದ ನೋಯಿಸುವುದಾಗಲಿ ಅಥವಾ ಮುಂದೆ ಓದಲು ಹಿಂದೇಟು ಹಾಕುವುದಾಗಲಿ ಮಾಡುವುದಿಲ್ಲ. Of course, ಮೊದಮೊದಲು ಅವನು ಅವಳನ್ನು ಓದಲು ಬಿಡುವುದಿಲ್ಲ. ಏಳೆಂಟು ವರ್ಷಗಳ ದಾಂಪತ್ಯದಲ್ಲಿ ಮಗಳ ಅಗಲಿಕೆಯ ನೋವಿನಿಂದ ಅವನು ಮುಂದೆ ಅವಳಿಗೆ ಓದಲು ಸಹಕರಿಸಿದರೂ ಕೂಡ, ಆಗಲಾದರೂ ಒಪ್ಪಿಗೆ ನೀಡಿದನಲ್ಲ! ನಿನ್ನ ಹಣೆಬರಹ ಹೀಗೆಯೇ ಬದುಕು ಎಂದು ನಿರ್ಬಂಧ ಹೇರಲಿಲ್ಲವಲ್ಲ ಎಂದು ಸಂತೋಷವಾಗುತ್ತದೆ. ಮೀರಳಿಗೆ ಅವನು ಮದುವೆಯಾದ ತಕ್ಷಣ ಓದಿಸದೇ ಇರಲು ಕಾರಣ ಅವನ ಹುಚ್ಚು ಪ್ರೀತಿ ಅಷ್ಟೇ ವಿನಃ ಅವನಿಗೆ ಇದ್ದ ಸಹಜವಾದ ಪುರುಷ ಪ್ರಾಧಾನ್ಯ ಅಹಂ ಅಲ್ಲ, ಓದಿನಿಂದ ಯಾವ ಕಾರ್ಯ ತಾನೇ ಸಾಧಿಸಬೇಕಾಗಿದೆ ಎಂಬ ಔದಾಸೀನ್ಯವೇ ಕಾರಣ.
ಇನ್ನು ಮೀರ ತಾನು ವೈದ್ಯಳಾಗಲೇಬೇಕೆಂಬ ದೃಢ ನಿರ್ಧಾರದಿಂದ, ತನ್ನಿಂದ ಇನ್ನು ಗೃಹಿಣಿ ಆಗಿರಲು ಸಾಧ್ಯವಿಲ್ಲವೆಂದು ತಿಳಿದು, ತಾನೇ ಮುಂದೆ ನಿಂತು ಗಂಡನಿಗೆ ಮದುವೆ ಮಾಡುವುದು. ಕಾಲೇಜಿನಲ್ಲಿ ಉತ್ತಮ ವಿದ್ಯಾರ್ಥಿಯಾಗುವುದು. ಒಂದು ಬಹುಮುಖ ಪ್ರತಿಭೆಯ ತುಂಟ ಹುಡುಗಿಯಿಂದ, ಜೀವನದಲ್ಲಿ ಹತಾಶೆಯಿಂದ ಬೆಂದು, ಆ ದುಃಖದ ಪಾಕದಲ್ಲಿ ಮಿಂದು ಸಿಹಿಯಾದ ಗಟ್ಟಿ ಮಹಿಳೆಯಾಗಿ ಹಾಗೂ ಡಾಕ್ಟರ್ ಆಗಿ ಹೊರಹೊಮ್ಮುವ ಆ ಪರಿವರ್ತನೆಯ ಜೀವನ ಬಹು ಸೊಗಸಾಗಿದೆ. ಬದುಕಿನಲ್ಲಿ ಬೆಂದು ಪಕ್ವವಾಗಿ ಮತ್ತೆ ಜೀವನದ ಕಡೆ ಆಶಾಭಾವನೆಯಿಂದ ಮರುಳುವುದಿದೆಯಲ್ಲ ಅದೇ ಜೀವನದ ಬಹು ದೊಡ್ಡ ಸಾಧನೆ ಮತ್ತು ಇಂದಿನ ನಮ್ಮ ಶಿಕ್ಷಣದಲ್ಲಿ ನಮ್ಮ ಮಕ್ಕಳಿಗೆ ಚಿಕ್ಕಂದಿನಿಂದಲೇ ನಾವು ಹೇಳಿಕೊಡಬೇಕಾಗಿರುವ ಪಾಠ.
‘ಅಪಸ್ವರ’ ಕಾದಂಬರಿ ಕೊನೆಗೆ ಆಕೆ ಮಗಳನ್ನು ಕಳೆದುಕೊಳ್ಳುವ ದುರ್ಘಟನೆಯಿಂದ ಮುಗಿದರೆ, ‘ಅಪಜಯ’ ಆಕೆ ವೈದ್ಯಳಾಗಿ ಸಂಸಾರವನ್ನೇ ತೊರೆದುಬಿಡುವ ಜಿತೇ೦ದ್ರಿಯತ್ವಕ್ಕೆ ಸನ್ನಿಹಿತವಾಗುವ ಘಟನೆಯಿಂದ ಮುಕ್ತಾಯಗೊಳ್ಳುತ್ತದೆ. ಬದುಕಿನಲ್ಲಿ ಇಂತಹುದೇ ನನಗೆ ಬಹು ಮುಖ್ಯ ಎಂಬ ದೃಢ ಸಂಕಲ್ಪದಿಂದ ಬದುಕುವ ಒಂದು ದಿಟ್ಟ ಮನೋಧೈರ್ಯವುಳ್ಳ ವ್ಯಕ್ತಿತ್ವವನ್ನು ಮೀರಳಲ್ಲಿ ಕಾಣಬಹುದು. ಗಾಳಿ ಬಂದ ಕಡೆ ತೂರಿಕೋ, ಅದು ಕೂಡ ಹೇಗೆ ಬೇಕಾದರೂ ತೂರಿಕೋ ಎಂಬುದನ್ನು ಸರಸಳ ವ್ಯಕ್ತಿತ್ವದಲ್ಲಿ ಕಾಣಬಹುದು.
ಈ ಎಲ್ಲದರ ಮಧ್ಯೆ ಬುದ್ಧಿ ಮತ್ತು ವಿವೇಕಕ್ಕಿಂತ, ಭಾವೋದ್ವೇಗಕ್ಕೆ ಮತ್ತು ಪಂಚೇಂದ್ರಿಯಗಳ ಸಂವೇದನೆಗೆ ತಕ್ಕಂತೆ, ಬದುಕುವ ವ್ಯಕ್ತಿಚಿತ್ರವನ್ನು ಶಾಮುವಿನಲ್ಲಿ ಕಾಣಬಹುದು. ಒಟ್ಟಾರೆಯಾಗಿ ನಮ್ಮನ್ನು ತಲ್ಲೀನಗೊಳಿಸಿ, ನಮ್ಮನ್ನು ಸರಸರನೆ ಓದಿಸಿಕೊಂಡು ಹೋಗುವ ಪುಸ್ತಕಗಳಿವು.
ತ್ರಿವೇಣಿಯವರ ‘ಬೆಳ್ಳಿಮೋಡ’ ನಾನು ಮೊದಲು ಓದಿದ ಕಾದಂಬರಿ. ಆ ಚಿತ್ರವನ್ನು ಕೂಡ ನೋಡಿದ್ದೇ. ಕಲ್ಪನಾ ಅವರ ಮನೋಜ್ಞ ಅಭಿನಯ , ಆಹ್ ಮತ್ತದೊಂದು ಬೇರೆಯೇ ಲೋಕ ಬಿಡಿ. ನನಗೆ ಆಶ್ಚರ್ಯವಾದುದು, ಈ ಕಾದಂಬರಿ ಏಕೆ ಸಿನಿಮಾ ಆಗಲಿಲ್ಲ ಎಂಬುದು. ಆದರೆ, ನಾನು ನನ್ನ ಕಲ್ಪನೆಯಲ್ಲಿಯೇ ಪಾತ್ರ ಸೃಷ್ಟಿ ಮಾಡಿಕೊಂಡೇ ಕಾದಂಬರಿ ಓದಿದೆ, ಅದು ಬೇರೆ ವಿಷಯ. ನವಿರಾದ ಅಂತಃಕರಣವನ್ನು ಕೊನೆಯಲ್ಲಿ ನಮ್ಮ ಮನದಲ್ಲಿ ಮೂಡಿಸಿ, ಕನಿಕರ, ಕರುಣೆ ಮತ್ತು ಹೆಮ್ಮೆ ಈ ಮೂರರ ಮಧ್ಯದ ಒಂದು ಭಾವಕ್ಕೆ ತಂದು ನಮ್ಮನ್ನು ಹಚ್ಚಿಸಿ ಕಾದಂಬರಿ ಕೊನೆಗೊಳ್ಳುತ್ತದೆ. ನೀವೂ ಒಮ್ಮೆ ಓಡಿ ನೋಡಿ!

-ಮಾನಸ ಆರ್ ಕುಲಕರ್ಣಿ