ಕನ್ನಡ ಸಾಹಿತ್ಯ ಪರಂಪರೆಯ ಧ್ವನಿಗಳು (ಭಾಗ ೧)

ಕನ್ನಡ ರಾಜ್ಯೋತ್ಸವ ಇನ್ನೇನು ಒಂದು ವಾರವಷ್ಟೇ. ಆದ್ದರಿಂದ ಕನ್ನಡ ಸಾಹಿತ್ಯದ ಕಿರು ಪರಿಚಯ ಮಾಡಿಕೊಡುವ ಆಸೆಯೊಂದಿಗೆ ಬರೆಯುತ್ತಿರುವ ಲೇಖನವಿದು. ಯಾವಾಗಲೋ ಆಕಾಶವಾಣಿಯಲ್ಲಿ ಕೇಳಿದ ನೆನಪು “ಕನ್ನಡ ಸಾಹಿತ್ಯ ಪರಂಪರೆಯ ಧ್ವನಿಗಳು-ಜೀವ ಧ್ವನಿಗಳು” ಎನ್ನುವ ಶೀರ್ಷಿಕೆಯಿಂದ ಕೆಲವು ಶ್ರವಣ ಧಾರಾವಾಹಿಗಳು ಬಂದವು. ಸುಮಾರು 15 ವರ್ಷಗಳ ಹಿಂದೆ ಇರಬೇಕು, ನಾನಾವಾಗ ಹೈಸ್ಕೂಲ್ ವಿದ್ಯಾರ್ಥಿನಿ. ಆಗ ನಾನು ಏನು ಕೇಳಿದೆ- ಯಾವುದರ ಬಗ್ಗೆ ಕೇಳಿದೆ ನೆನಪಿಲ್ಲವಾದರೂ, ಆ ಶೀರ್ಷಿಕೆ ನೆನಪಿದೆ. ಮತ್ತು ಇಂದು ನನ್ನ ಈ ಲೇಖನಕ್ಕೆ ಆ ಹೆಸರು ಬರಲು ಕಾರಣ ಆಕಾಶವಾಣಿ. ಆದ್ದರಿಂದ ಮೊದಲಿಗೆ ಆಕಾಶವಾಣಿಗೆ ಧನ್ಯವಾದಗಳು!

ಇನ್ನು ಸುಮಾರು ೨೦೦೦ ವರ್ಷಗಳ ಇತಿಹಾಸವಿರುವ ಕನ್ನಡ ಸಾಹಿತ್ಯವನ್ನು ಕೇವಲ ಒಂದೇ ಒಂದು ಲೇಖನದಲ್ಲಿ ಹೇಳುವುದು ಕಷ್ಟಸಾಧ್ಯ. ಆದುದರಿಂದಲೇ ಈ ಲೇಖನಕ್ಕೆ ಭಾಗ ೧ ಎಂಬ ಅಡಿ ಶೀರ್ಷಿಕೆ ಇರುವುದು. ಹಾಗಾದರೆ ಎಷ್ಟು ಭಾಗಗಳು ಬರಬಹುದು? ಗೊತ್ತಿಲ್ಲ.. ಇಷ್ಟು ಮಾತ್ರ ಹೇಳಬಲ್ಲೆ ಅದೇನೆಂದರೆ ಇನ್ನೊಂದು ಭಾಗವಂತೂ ಬರೆಯುತ್ತೇನೆ.

ಕನ್ನಡ ದ್ರಾವಿಡ ಭಾಷೆಗಳಲ್ಲಿ ಒಂದು. ತಮಿಳು ಭಾಷೆ ಪ್ರಾಚಿನ ದ್ರಾವಿಡ ಭಾಷೆಯಾದರೆ ಅದರ ನಂತರದ ಸ್ಥಾನವೇ ಕನ್ನಡದ್ದು. ಕನ್ನಡ ಭಾಷೆ ೨೦೦೦ ವರ್ಷ ಪುರಾತನವಾದದ್ದು ಎಂದು ಕೆಲವರು, ೨೫೦೦ ವರ್ಷ ಎಂದು ಮತ್ತೆ ಕೆಲವರು. ಅದೇನೇ ಇರಲಿ ಆದರೆ ೧೫೦೦ ವರ್ಷಗಳಷ್ಟು ಮಾತ್ರ ನಿರ್ವಿವಾದವಾಗಿ, ನಿಸ್ಸಂದೇಹವಾಗಿ ಪುರಾತನವಾದದ್ದು.

ಇಷ್ಟು ವರ್ಷಗಳ ಅದಮ್ಯ ಇತಿಹಾಸವಿರುವ ಈ ಕನ್ನಡ ಭಾಷೆಯ ಸಾಹಿತ್ಯ ಚರಿತ್ರೆಯನ್ನು, ಸೊಗಡನ್ನು ಕೇವಲ ಒಂದು ಲೇಖನದಲ್ಲಿ ಹೇಳಲಾಗುವುದಿಲ್ಲ. ಭಾಷೆ ಕೇವಲ ಸಂವಹನ ಮಾಧ್ಯಮವಲ್ಲ. ಅದು ನಮ್ಮ ಗುರುತು, ಅಸ್ಮಿತೆಯ ಸಂಕೇತ, ಸಂಸ್ಕೃತಿಯ ಪ್ರತೀಕ, ಬೆಸೆಯುವ ಕೊಂಡಿ. ಇದು ಹೊರದೇಶದಲ್ಲಿರುವ ಕನ್ನಡಿಗರಿಗೆ ಚೆನ್ನಾಗಿ ಅರ್ಥವಾಗುತ್ತೆ.

ಈ ಎಲ್ಲ ಕಾರಣಗಳಿಂದಲೇ ನಮ್ಮ ದೇಶದಲ್ಲಿ ಮಾತೃಭಾಷೆಗೆ ಅಷ್ಟೊಂದು ಪ್ರಾಧಾನ್ಯತೆ ಇರುವುದು. ಮಾತೃ ಭಾಷೆಯಲ್ಲಿ ಪರಿಪೂರ್ಣವಾಗಿ ಅಭ್ಯಾಸ ಮಾಡಿದವರು ಬೇರೆ ಯಾವ ಭಾಷೆಯನ್ನು ಬೇಕಾದರೂ ಸರಳವಾಗಿ ಕಲಿಯಬಲ್ಲರು. ಇಷ್ಟೇ ಇದರ ಪ್ರಾಮುಖ್ಯತೆ ಅಲ್ಲ. ನೀವು ನಿಮ್ಮೊಳಗಿರುವ ಭಾವವನ್ನು ಬೇರೆಯವರಿಗೆ ಮನದಟ್ಟಾಗುವಂತೆ ಹೇಳಬೇಕೆಂದರೆ ನಿಮಗೆ ಮಾತೃ ಭಾಷೆಯೇ ಬೇಕೇ ಹೊರತು ಬೇರೆ ಭಾಷೆಯಲ್ಲಿ ಅಷ್ಟು ಸರಾಗವಾಗಿ ಹೇಳಲಾಗುವುದಿಲ್ಲ. ಈ ಕಾರಣದಿಂದಾಗಿಯೇ ವರಕವಿ ಬೇಂದ್ರೆಯವರು ಹೀಗೆ ಹೇಳುತ್ತಾರೆ “ಬಿಂಬವನ್ನು ಮೂಡಿಸುವುದು ಕನ್ನಡಿ, ಭಾವ ಬಿಂಬವನ್ನು ಒಡಮೂಡಿಸುವುದು ಕನ್ನಡ”.

ಇಂತಹ ಕನ್ನಡ ಭಾಷೆ ಜಗತ್ತಿನ ಶ್ರೇಷ್ಠ ೨೦ ಭಾಷೆಗಳಲ್ಲಿ ಒಂದು. ನಮಗೆ ನಮ್ಮತನದ ಮೇಲೆ ಅಭಿಮಾನ ಮೂಡಬೇಕಾದರೆ ಅದರ ಅರಿವು ಅಗತ್ಯ. ಆದ್ದರಿಂದ ಈ ಬಾರಿಯ ಕನ್ನಡ ರಾಜ್ಯೋತ್ಸವದಲ್ಲಿ ನಾನು ಎಷ್ಟು ಕನ್ನಡವನ್ನು ಅರಿತಿರುವೆ ಎಂದು ತಿಳಿಯಪಡಿಸುತ್ತಾ, ಆಸಕ್ತಿ ಇರುವವರಿಗೂ ಕೂಡ ಅದರ ಸವಿಯನ್ನು ತಿಳಿಸಬಯಸುತ್ತೇನೆ.

ಈ ಬರವಣಿಗೆಗಳನ್ನು ನೀವು ಓದಿ, ಇಷ್ಟವಾದರೆ ನಿಮ್ಮವರಿಗೂ ಓದಿಸಿ. ಏಕೆಂದರೆ ಬರೆದ ಮನಸ್ಸಿಗೆ ಓದುಗರೇ ಪುರಸ್ಕಾರ. ಶೀಘ್ರದಲ್ಲೇ ಸವಿಸ್ತಾರವಾದ ಲೇಖನದೊಂದಿಗೆ ಮತ್ತೆ ಸಿಗುತ್ತೇನೆ.

ಕನ್ನಡಿಗರುಸಿರಾಗಿ ಕನ್ನಡಂ ಬಾಳ್ಗೆ. ಸಿರಿಗನ್ನಡಂ ಗೆಲ್ಗೆ!

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s