ಕನ್ನಡ ಸಾಹಿತ್ಯ ಪರಂಪರೆಯ ಧ್ವನಿಗಳು (ಭಾಗ ೨)

ಈ ಶೀರ್ಷಿಕೆಯ ೨ನೇಯ ಭಾಗ ಬರೆಯುವುದು ಸ್ವಲ್ಪ ತಡವಾಯಿತು. ಮೊನ್ನೆ ಎಂದರೆ ರಾಜ್ಯೋತ್ಸವದ ದಿನದಂದೇ ಇದರ ೨ನೇಯ ಭಾಗ ಬರಬೇಕಾಗಿತ್ತು. ಸಾಹಿತ್ಯ ಪರಂಪರೆಯ ಜೀವಧ್ವನಿಗಳಲ್ಲಿ ಮೊದಲು ಹೇಳಲೇ ಬೇಕಾಗಿರುವುದು, ಕನ್ನಡದ ಆದಿಕವಿ ಪಂಪನ ಕುರಿತು. ಪಂಪನೇ ನಮಗೆ ಆದಿಕವಿ. ಅದಕ್ಕ ಮುಂಚೆ ಕವಿಗಳಿರಲಿಲ್ಲವೇ? ಬಹುಶಃ ಇದ್ದರು. ಆದರೆ ಅವರ ಯಾವ ಕೃತಿಗಳು ನಮಗೆ ಇದುವರೆಗೂ ಲಭ್ಯವಾಗಿಲ್ಲ. ಲಭ್ಯವಿರುವ ಪಂಪ ಪೂರ್ವದ ‘ಕವಿರಾಜ ಮಾರ್ಗ’ ಒಂದು ಲಕ್ಷಣ ಗ್ರಂಥ. ಲಕ್ಷಣ ಗ್ರಂಥ ಎಂದರೆ ಒಂದು ಕಾವ್ಯ ಹೇಗಿರಬೇಕು ಎಂದು ತಿಳಿಸಿಕೊಡುವ ಒಂದು ಗ್ರಂಥ. ಕಾವ್ಯ ಸೃಷ್ಟಿಯಾಗದೇ ಕಾವ್ಯ ಲಕ್ಷಣಗಳನ್ನು ಹೇಳುವುದಿಲ್ಲ ತಾನೇ? ಹಾಗಾಗಿ ‘ಕವಿರಾಜ ಮಾರ್ಗ’ದಿಂದ ನಮಗೆ ತಿಳಿಯುವ ಅಂಶವೆಂದರೆ ಪಂಪನ ಪೂರ್ವದಲ್ಲಿ ಕವಿಗಳಿದ್ದರು. ಆದರೆ ಅವರ ಇರುವಿಕೆಯ ನಿಖರ ಮಾಹಿತಿಯಾಗಲಿ, ಅವರ ಕಾವ್ಯಗಳಾಗಲಿ ನಮಗೆ ಲಭ್ಯವಿಲ್ಲ. ಲಭ್ಯವಿರುವ ಮೊಟ್ಟ ಮೊದಲ ಕೃತಿಗಳೇ ಪಂಪನ ಕೃತಿಗಳು. ಅಷ್ಟೇ ಅಲ್ಲದೆ ಬಹು ಪ್ರೌಢಿಮೆಯಿಂದ ಕೂಡಿದ ಕೃತಿಗಳು. ಆದ್ದರಿಂದ ನಮಗೆ ಪಂಪನೇ ಆದಿ ಕವಿ, ಅನಾದಿ ಕವಿ. ಇನ್ನು ಮುಂಬರುವ ದಿನಗಳಲ್ಲಿ ಇದನ್ನು ಹುಸಿಯಾಗಿಸಿ ಬೇರೊಬ್ಬ ಕವಿ ದೊರಕಿದುದೇ ಆದರೆ ಅದು ಕನ್ನಡಿಗರ ಭಾಗ್ಯವಲ್ಲದೇ ಮತ್ತಿನ್ನೇನು ಅಲ್ಲ. ಏಕೆಂದರೆ ನಮ್ಮ ಸಾಹಿತ್ಯದ ಇರುವಿಕೆಯ ದಿನಗಳು ಇತಿಹಾಸದ ಕಾಲಘಟ್ಟದಲ್ಲಿ ಮತ್ತಷ್ಟು ಹಿಂದೆ ಹೋಗುತ್ತದೆ.

ಇನ್ನು ಪಂಪನ ಕುರಿತು ಹೇಳುವುದಾದರೆ ಆತ ಒಬ್ಬ ವೈದಿಕ ಹಿನ್ನಲೆಯುಳ್ಳ ಜೈನ ಕವಿ. ನಮ್ಮ ಕವಿಗಳಿಗೆ ಇತಿಹಾಸ ಪ್ರಜ್ಞೆ ಇಲ್ಲ ಎಂಬುದು ಕಹಿಯಾದ ಒಂದು ಸತ್ಯ. ಆದರೆ ಪಂಪ ಇದಕ್ಕೆ ತದ್ವಿರುದ್ಧವಾಗಿ ನಿಲ್ಲುತ್ತಾನೆ. ಅಂದಿನ ಕವಿಗಳು ತಮ್ಮ ಕಾಲದ ಬಗ್ಗೆ ಹೇಳಿಕೊಳ್ಳುತ್ತಿರಲಿಲ್ಲ, ಕಾರಣ ಅವರ ಎಲ್ಲ ಕೃತಿಗಳಿಗೆ ದೇವರ ಪ್ರೇರಣೆಯೇ ಸಾಕ್ಷಿ ಎಂಬ ಒಂದು ಅರ್ಪಣಾ ಮನೋಭಾವ. “ನಾನು ವೀಣೆ, ಅವನು ತಂತಿ” “ಲಿಪಿಕಾರ ಮಾತ್ರ ನಾನು, ಕವಿ ಅವನು” “ಗುಹೆ ನಾನು ಗುಹೇಶ್ವರ ಅವನು” ಈ ರೀತಿಯ ಒಂದು ಮನೋಧರ್ಮ ಅಂದಿನ ಕವಿಗಳಲ್ಲಿ ಸಾಮಾನ್ಯವಾಗಿತ್ತು. ಆದರೆ ಪಂಪ ಯಾವ ಹಿಂಜರಿಕೆಯಿಲ್ಲದೇ ತನ್ನ ಹುಟ್ಟಿನ ದಿನದ ಕುರಿತು ಮತ್ತು ತನ್ನ ಬಾಳಿನ ಕುರಿತು ಮುಚ್ಚು ಮರೆಯಿಲ್ಲದೇ ಬರೆದುಕೊಳ್ಳುತ್ತಾನೆ. ಆದ್ದರಿಂದ ಪಂಪ ಇದ್ದ ಕಾಲ ನಮಗೆ ನಿಖರವಾಗಿ ಗೊತ್ತು, ಅದು ೧೦ನೆಯ ಶತಮಾನ ಎಂದು. (ದಿನಾಂಕ ಕೂಡ ಲಭ್ಯವಿದೆ).ಕುವೆಂಪು ರವರು ಹೇಳುವ ಹಾಗೆ ‘ಪಂಪನನೋದುವ ನಿನ್ನಾ ನಾಲಗೆ ಕನ್ನಡವೇ ಸತ್ಯ, ಕನ್ನಡವೇ ನಿತ್ಯ’. ಮಹಾಕವಿಯ ಕುರಿತು ಎಷ್ಟು ಹೇಳಿದರೂ ಕಡಿಮೆ, ತಿಳಿದಷ್ಟು ಹೇಳಲು ಪ್ರಯತ್ನಿಸುತ್ತೇನೆ, ನಮಗೆ ಲಭ್ಯವಿರುವ ಪಂಪನ ಎರಡು ಕೃತಿಗಳೆಂದರೆ ‘ಆದಿಪುರಾಣ’ ಮತ್ತು ‘ವಿಕ್ರಮಾರ್ಜುನ ವಿಜಯ’.

ಆದಿಪುರಾಣವು ಜೈನ ಧಾರ್ಮಿಕ ಗ್ರಂಥ. ಜೈನರ ಮೊದಲನೇ ತೀರ್ಥಂಕರನಾದ ಪುರುದೇವನ ಚರಿತ್ರೆ. ಪಂಪನ ಎರಡೂ ಕೃತಿಗಳು ಚಂಪೂ ಪ್ರಕಾರದಲ್ಲಿವೆ. ಗದ್ಯ ಮತ್ತು ಪದ್ಯ ಮಿಶ್ರಿತವಾದ ಸಾಹಿತ್ಯದ ಒಂದು ಪ್ರಕಾರಕ್ಕೆ ‘ಚಂಪೂ’ ಎಂದು ಕರೆಯುತ್ತಾರೆ. ತೀರ್ಥಂಕರನಾಗುವ ಜೀವವು ಹೇಗೆ ಹಿಂದಿನ ಜನ್ಮಗಳಲ್ಲಿ ಕಷ್ಟಗಳನ್ನು ಅನುಭವಿಸಿ ಪಾಪಗಳನ್ನು ಕಡಿಮೆ ಮಾಡಿಕೊಳ್ಳುತ್ತದೆ ಎಂದು ನಿರೂಪಿಸುವುದನ್ನು ‘ಭವಾವಳಿ’ ಎಂದು ಕರೆಯುತ್ತಾರೆ. ಪ್ರತಿಯೊಂದು ಜನ್ಮದಲ್ಲೂ ತನ್ನ ಕರ್ಮವನ್ನು ಕಡಿಮೆಮಾಡಿಕೊಳ್ಳುತ್ತಾ ಮೋಕ್ಷಕ್ಕೆ ಹತ್ತಿರವಾಗುವ ಜೀವ ಉದಯವಾಗುವುದು ತೀರ್ಥಂಕರ ಜನ್ಮದಲ್ಲಿ. ಹೀಗೆ ತೀರ್ಥಂಕರ ಜನ್ಮದಲ್ಲಿ ಪುರುದೇವನ ಎಂದರೆ ಆದಿನಾಥನ ಪರಿನಿಷ್ಕ್ರಮಣ ಕಾಲದಲ್ಲಿ ಬರುವುದೇ ‘ನೀಲಾಂಜನೆಯ ನೃತ್ಯ’ ಪ್ರಸಂಗ. ಹೀಗೆ ಕಾವ್ಯವು ಒಂದೊಂದು ಅಪರೂಪದ ಮಜಲುಗಳನ್ನು ಪಡೆಯುತ್ತಾ ಕೊನೆಯ ಹಂತ ತಲುಪುವುದು ಬಹು ಸೊಗಸಾಗಿ ಮೂಡಿ ಬಂದಿದೆ. ಮನುಷ್ಯನ ವ್ಯಕ್ತಿತ್ವದ ಎರಡು ಪ್ರಮುಖ ಅಂಶಗಳು ಅವನ ವಿಕಾಸಕ್ಕೆ ಮಿತಿಯೊಡ್ಡುತ್ತದೆ. ಭೋಗಾಕಾಂಕ್ಷೆ ಮತ್ತು ಅಹಂಕಾರ ಎರಡು ಶಕ್ತಿಗಳೇ, ಆದರೆ ಇವುಗಳು ಸ್ವಕೇಂದ್ರಿತವಾಗದೇ, ಸಮಾಜಮುಖಿಯಾದಾಗ ವ್ಯಕ್ತಿತ್ವ ವಿಕಸನವಾಗುತ್ತದೆ, ಲೋಕೊಪಯೋಗಿಯಾಗುತ್ತದೆ. ಆದ್ದರಿಂದ ಈ ಕಾವ್ಯ ಇಂದಿಗೂ ಪ್ರಸ್ತುತವಾಗುತ್ತದೆ.

ಜೈನ ಕವಿಗಳ ರೂಢಿಯಂತೆ ಅವರು ಎರಡು ಕಾವ್ಯಗಳನ್ನು ಬರೆಯುತ್ತಿದ್ದರು. ಒಂದು ಧಾರ್ಮಿಕ ಕಾವ್ಯ, ಮತ್ತೊಂದು ಲೌಕಿಕ ಕಾವ್ಯ. ಮೇಲೆ ತಿಳಿಸಿದ ‘ಆದಿಪುರಾಣ’ ಪಂಪನ ಧಾರ್ಮಿಕ ಕಾವ್ಯ. ಇನ್ನು ಆತನ ಲೌಕಿಕ ಕಾವ್ಯವೆಂದರೆ ‘ವಿಕ್ರಮಾರ್ಜುನ ವಿಜಯ’. ವ್ಯಾಸರ ಮಹಾಭಾರತವನ್ನು ಆಧಾರವಾಗಿರಿಸಿಕೊಂಡು ತನ್ನ ಆಶ್ರಯದಾತನಾದ ‘ಅರಿಕೇಸರಿ’ಯನ್ನು ಮಹಾಭಾರತದ ವೀರ ಅರ್ಜುನನೊಂದಿಗೆ ಸಮೀಕರಿಸಿ ಬರೆದ ಮಹಾನ್ ಕಾವ್ಯ. ಇದು ಕೂಡ ಚಂಪೂ ಕಾವ್ಯ.

ಮಹಾಭಾರತವನ್ನು ಎಷ್ಟು ಸಾರಿ ಓದಿದರೂ ತೃಪ್ತಿಯಾಗದು. ‘ವಿಕ್ರಮಾರ್ಜುನ ವಿಜಯ’ವು ಇದಕ್ಕೆ ಹೊರತಲ್ಲ. ಅರ್ಜುನನೊಂದಿಗೆ ತನ್ನ ರಾಜನನ್ನು ಹೋಲಿಸಿ ಪಂಪ ಬರೆದರೂ ಕೂಡ ಆತನ ಮನಸ್ಸನ್ನು ಸಂಪೂರ್ಣವಾಗಿ ಆಕ್ರಮಿಸಿದ ವ್ಯಕ್ತಿತ್ವ ‘ಕರ್ಣ’. ಅರ್ಜುನನನ್ನು ನಾಯಕನನ್ನಾಗಿ ಮತ್ತು ಕರ್ಣನನ್ನು ಪ್ರತಿನಾಯಕನನ್ನಾಗಿ ಮಾಡಿದ್ದಾನೆ. ತನ್ನ ಸಮಕಾಲೀನ ಸಾಮಾಜಿಕ ಮೌಲ್ಯಗಳನ್ನು ಕಾವ್ಯದ ಪಾತ್ರಗಳೊಡನೆ ಸಮೀಕರಿಸಿ ವೈಭವೀಕರಿಸಿದ್ದಾನೆ. ವ್ಯಾಸರ ಗ್ರಂಥವನ್ನೇ ಈತ ಮೂಲ ಆಕರವಾಗಿಟ್ಟುಕೊಂಡರೂ ಕೂಡ , ವ್ಯಾಸರಷ್ಟೇ ಪ್ರತಿಭಾವಂತ ನಾನೆಂಬ ಗರ್ವ ನನಗಿಲ್ಲ ಎಂದು ತನ್ನ ಪಾಂಡಿತ್ಯದ ಅಹಂ ಅನ್ನು ಮೆರೆಯದೇ ಸಹೃದಯತೆಯನ್ನು ಮೆರೆದಿದ್ದಾನೆ. “ವ್ಯಾಸ ಮುನೀಂದ್ರ ವೃಂದ ವಚನಾಮೃತವಾರ್ಧಿಯನ್ ಈಸುವೆನ್ ಕವಿವ್ಯಾಸನೆನ್ ಎಂಬ ಗರ್ವಮೆನಗಿಲ್ಲ” ಎಂದು ವಿನಯವಾಗಿ ಹೇಳಿಕೊಂಡಿದ್ದಾನೆ.

ಮಹಾಭಾರತದ ಕೇಂದ್ರ ಭಾಗವೇ, ದ್ರೌಪದಿಗೆ ದುರ್ಯೋಧನ-ದುಷ್ಯಾಸನಾದಿಗಳಿಂದಾಗುವ ಅವಮಾನ, ಮುಡಿಯನ್ನು ಬಿಚ್ಚಿದ್ದು ಮತ್ತು ಅದರ ಪ್ರತೀಕಾರದ ಫಲವೇ ಕುರುಕ್ಷೇತ್ರ ಯುದ್ಧ. ಈ ಘಟನೆಯನ್ನು ಭೀಮಸೇನನ ಬಾಯಲ್ಲಿ ಕವಿ ಹೀಗೆ ನುಡಿಸುತ್ತಾನೆ.

“ಇದರೊಳ್ ಶ್ವೇತಾತಪತ್ರ ಸ್ಥಗಿತ ದಶಾದಿಶಮಂಡಲಂ ರಾಜಚಕ್ರಂ

ಪುದಿದಳ್ಕಾಡಿತ್ತು, ಅಡಂಗಿತ್ತಿದರೊಳ್ ಕುರುರಾಜನ್ವಯಂ; ಮತ್ ಪ್ರತಾಪ

ಕ್ಕಿದರಿಂದಂ ನೋಡಗುರ್ವುರ್ವಿದುದು; ಇದುವೇ ಮಹಾಭಾರತಕ್ಕಾದಿಯಾಯ್ತು

ಅಬ್ಜದಳಾಕ್ಷಿ ಪೇಳ್, ಸಾಮಾನ್ಯಮೇ ಬಗೆಯೇ ಭವತ್ ಕೇಶಪಾಶಪ್ರಪಂಚಂ”

(ನಿನ್ನ ತಲೆಯ ಕೂದಲೇನು ಸಾಮಾನ್ಯವೇ? ಇದರಲ್ಲಿ ಸಮಸ್ತ ಭೂಮಂಡಲವನ್ನೆಲ್ಲಾ ವ್ಯಾಪಿಸಿರುವ ಸಾಮ್ರಾಜ್ಯವು ಸೇರಿ ನಾಶವಾಯಿತು. ಇದರಲ್ಲಿ ಕುರು ವಂಶವೇ ಅಡಗಿದೆ. ಇದರಿಂದ ನನ್ನ ಕಾರ್ಯಕ್ಕೆ ಬಿರುಸುಂಟಾಯಿತು. ಇದು ಮಹಾಭಾರತ ಯುದ್ಧಕ್ಕೆ ಕಾರಣವಾಯಿತು.) ಹೀಗೆ ದ್ರೌಪದಿಯ ಕೇಶವೇ ಮಹಾಭಾರತ ಯುದ್ಧಕ್ಕೆ ಕಾರಣ ಎಂಬ ಪಂಪನ ವರ್ಣನೆ ಎಷ್ಟು ಚಂದ, ಆತನ ಕಲ್ಪನೆಗೆ ಮತ್ತು ಪ್ರತಿಭೆಗೆ ಮನಸೋಲದೇ ಇರುವುದಿಲ್ಲ.

ಪಂಪನು ಎಲ್ಲ ಪ್ರಸಂಗಗಳನ್ನು ಸಂಕ್ಷಿಪ್ತವಾಗಿಯಾದರು ಶ್ರೇಷ್ಠ ರೀತಿಯಲ್ಲಿ ಹೇಳುತ್ತಾನೆ, ಒಂದು ಲಕ್ಷ ಶ್ಲೋಕಗಳಿರುವ ವ್ಯಾಸಭಾರತವನ್ನು ಸಂಗ್ರಹವಾಗಿ ಹೇಳುವುದು ಸುಲಭದ ವಿಷಯವಲ್ಲ. ತೀ.ನಂ.ಶ್ರೀ ಅವರು ಪಂಪಭಾರತದ ಕುರಿತು ಹೀಗೆ ಹೇಳುತ್ತಾರೆ “ವಿಕ್ರಮಾರ್ಜುನ ವಿಜಯವು ಕನ್ನಡದ ಕನ್ನಡಿಯಲ್ಲಿ ಚಿಕ್ಕದಾಗಿ ಬಿದ್ದ ವ್ಯಾಸಭಾರತದ ನೆರಳಲ್ಲ; ಅಲ್ಲಿಯ ಚಿನ್ನವನ್ನು ಶೋಧಿಸಿ ತಂದು ಹೊಸದಾಗಿ ಎರಕ ಹೊಯ್ದು ಒಪ್ಪವಿಟ್ಟು ನಿಲ್ಲಿಸಿದ ನೂತನ ಪುತ್ಥಳಿ ಇದು”. ಪಂಪ ತನ್ನನ್ನು ತಾನು ‘ಹಿತಮಿತಮೃದುವಚನನ್’ ಎಂದು ಕರೆದುಕೊಂಡಿದ್ದಾನೆ. ಮತ್ತು ಅದನ್ನು ಪಂಪಭಾರತದ ಉದ್ದಕ್ಕೂ ಕಾಣಬಹುದಾಗಿದೆ.

ಇದಲ್ಲದೇ ತನ್ನ ಪಂಪ ಭಾರತದಲ್ಲಿ ಕವಿ ತನ್ನ ಹುಟ್ಟೂರಾದ ‘ಬನವಾಸಿ’ಯನ್ನು ಬಹು ಸೊಗಸಾಗಿ ಹೊಗಳಿದ್ದಾನೆ.

ಚಾಗದ ಭೋಗದ ಅಕ್ಕರದ ಗೇಯದ ಗೊಟ್ಟಿಯಅಲಂಪಿನಿಂಪುಗ

ಳ್ಗಾರಮಾದ ಮಾನಸರೆ ಮಾನಸರ್ ! ಅಂತವರಾಗಿ ಪುಟ್ಟಲೇ

ನಾಗಿಯಮೇನೋ ತಿರ್ದಪುದೇ? ತೀರದೊಡಂ ಮರಿದುಂಬಿಯಾಗಿ ಮೇಣ್

ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ಬನವಾಸಿ ದೇಶದೊಳ್”

(ತ್ಯಾಗ, ಭೋಗ, ವಿದ್ಯೆ, ಸಂಗೀತ, ಕೂಟಗಳು ಇವುಗಳಿಂದ ಕೂಡಿರುವ ಜೀವನವನ್ನು ಸಾಗಿಸುವವರೇ ನಿಜವಾದ ಮನುಷ್ಯರು. ಅಂತಹವನಾಗಿ ಹುಟ್ಟಬೇಕು. ಹಾಗಾಗದಿದ್ದರೆ ಬನವಾಸಿಯಲ್ಲಿ ಮರಿದುಂಬಿಯಾಗಿಯೋ ಕೋಗಿಲೆಯಾಗಿಯೋ ಹುಟ್ಟಬೇಕು.)

ಮೇಲೆ ಹೇಳಿದ ಹಾಗೆ ಅರ್ಜುನನನ್ನು ನಾಯಕನನ್ನಾಗಿ ಮಾಡಿಕೊಂಡಿದ್ದರಿಂದ ಕರ್ಣನನ್ನು ಪ್ರತಿನಾಯಕನನ್ನಾಗಿ ಮಾಡಿಕೊಂಡಿದ್ದಾನೆ, ಅದರೊಂದಿಗೆ ಕರ್ಣನ ಹುಟ್ಟು ಬೆಳವಣಿಗೆಗಳಲ್ಲಿ ದುರಂತವೊದಗಿದುದು ಪಂಪನ ಮನಸ್ಸನ್ನು ಕರಗಿಸಿದೆ. ಆ ಪಾತ್ರವು ಕವಿಯ ಮನಸ್ಸನ್ನು ಸಂಪೂರ್ಣವಾಗಿ ಆಕ್ರಮಿಸಿದೆ ಮತ್ತು ಆಕರ್ಷಿಸಿದೆ. ಹಾಗಾಗಿ ಕರ್ಣನ ಪಾತ್ರವನ್ನು ಉದಾತ್ತತೆ ಮತ್ತು ತನ್ಮಯತೆಯಿಂದ ಚಿತ್ರಿಸಿದ್ದಾನೆ. ಆದ್ದರಿಂದಲೇ ಕವಿ “ಕರ್ಣರಸಾಯನಮಲ್ತೆ ಭಾರತಂ” ಎಂದಿದ್ದಾನೆ.

ಪಂಪನು ವಿಶಾಲವಾದ ಮನಸುಳ್ಳ ರಸಿಕ ಕವಿ. ಜಾತಿ ಭೇದಗಳನ್ನು ಮೀರಿ ಬೆಳೆಯಬಲ್ಲ ಬಹುಮುಖ ಪ್ರತಿಭೆ ಮಾತ್ರವಲ್ಲದೆ ಸಂದರ್ಭ ದೊರೆತಾಗ ಜಾತಿಭೇದವನ್ನು ಖಂಡಿಸುವ ಹೃದಯ ವೈಶಾಲ್ಯ ಉಳ್ಳವನು. ಆದ್ದರಿಂದ ಯಾವುದು ಕುಲ? ಎಂದು ಕರ್ಣನ ಬಾಯಲ್ಲಿ ಕವಿ ಹೀಗೆ ನುಡಿಸಿದ್ದಾನೆ.

“….. ಕುಲಂ ಕುಲಮಲ್ತು! ಚಲಂ ಕುಲಂ, ಗುಣಂ ಕುಲಂ, ಅಭಿಮಾನಂ ಕುಲಂ, ಅಣ್ಮು ಕುಲಂ….”

(ಈ ಕುಲವು ನಿಜವಾದ ಕುಲವಲ್ಲ. ಛಲ, ಗುಣ, ಸ್ವಾಭಿಮಾನ, ಪರಾಕ್ರಮಗಳೇ ನಿಜವಾದ ಕುಲ)

ಹೀಗೆ ಪಂಪಭಾರತದ ಕುರಿತು ಪುಟ ಗಟ್ಟಲೆ ಬರೆಯಬಹುದು. ಹೇಳುವುದು ಮುಗಿಯುವುದಿಲ್ಲವೇನೋ ಎನಿಸುತ್ತದೆ. ಕೊನೆಯದಾಗಿ ಒಂದೇ ಒಂದು ವಿಷಯವನ್ನು ಹೇಳಿ ನನ್ನೀ ಲೇಖನಕ್ಕೆ ಪೂರ್ಣವಿರಾಮವನ್ನಿಡುತ್ತೇನೆ. ಅಂದಿನ ಕಾಲಕ್ಕೆ ನಮ್ಮ ಜನ ಎಷ್ಟು ಹೃದಯ ವೈಶಾಲ್ಯ ಉಳ್ಳವರಾಗಿದ್ದರೆಂದರೆ ಪಂಪನು ವ್ಯಾಸರ ಮಹಾಭಾರತವನ್ನು ತನಗೆ ಬೇಕಾದ ರೀತಿಯಲ್ಲಿ ನಾಯಕ ಪ್ರತಿನಾಯಕರನ್ನು ಬಳಸಿಕೊಂಡು ಕೃತಿಗೆ ಮೆರಗು ಕೊಟ್ಟರೂ ಕೂಡ ಜನರು ಅಸಹಿಷ್ಣುತೆಯನ್ನು(Intolerence) ಮೆರೆಯಲಿಲ್ಲ. ಕಲೆಯ ಮೆರಗೇ ಅಂತಹುದು. ವಸ್ತುವನ್ನು ಚಂದಗಾಣಿಸಲು ಕವಿ ತನ್ನ ಕಲ್ಪನೆ ಎಂಬ ಕುಂಚದಿಂದ ವಿಧ ವಿಧ ಬಣ್ಣಗಳನ್ನು ತುಂಬಿ ರಂಗುಗೊಳಿಸುತ್ತಾನೆ. ಆ ರಂಗಿನಲ್ಲಿ ಮಿಂದು ನಾವು ಕಲೆಯ ಸ್ವಾದವನ್ನು ಸವಿಯಬೇಕೇ ಹೊರತು ತಿರಸ್ಕಾರ ಪ್ರತೀಕಾರಗಳಿಗೆ ನಾಂದಿ ಹಾಡಬಾರದು. ಆದರೆ ಇಂದಿನ ದಿನಮಾನಗಳಲ್ಲಿ ಒಂದು ಚಲನಚಿತ್ರವನ್ನು ಮಾಡಬೇಕಾದರೂ ಕೂಡ ಜನ ಅವಮಾನವೆಸಗಿದಂತೆ ಕಂಡು ಅದನ್ನು ಖಂಡಿಸಲು ನಿಲ್ಲುತ್ತಾರೆ ಮತ್ತು ಅಸಹಿಷ್ಣುತೆಯನ್ನು ಪ್ರದರ್ಶಿಸುತ್ತಾರೆ (ಪದ್ಮಾವತ್ ಚಿತ್ರ ಇದಕ್ಕೆ ಸಾಕ್ಷಿ). ಕಲೆಯನ್ನು ಕಲೆಗಾರನ ಕಣ್ಣಿನಿಂದ ನೋಡುವ ಸುಂದರ ಕಣ್ಣುಗಳನ್ನು ನಮ್ಮದಾಗಿಸಿಕೊಳ್ಳೋಣ ಎಂದು ಹೇಳುತ್ತಾ…………

ಕನ್ನಡಿಗರುಸಿರಾಗಿ ಕನ್ನಡಂ ಬಾಳ್ಗೆ. ಸಿರಿಗನ್ನಡಂ ಗೆಲ್ಗೆ!

ವಿಶೇಷ ಸೂಚನೆ: ವಿವಿಧ ಆಕರ ಗ್ರಂಥಗಳಿಂದ ಆಯ್ದು ಬರೆದ ಲೇಖನವಿದು. ಯಾರ ಅನುಕರಣೆಯನ್ನು ಮಾಡದೇ ಬರೆಯುವ ಪ್ರಯತ್ನ ಮಾಡಿದ್ದೇನೆ. ಎಲ್ಲಿಯಾದರೂ ಹಾಗೆನ್ನಿಸಿದರೆ ಅದು ಅನುಸರಣೆಯೇ ಹೊರತು ಅನುಕರಣೆಯಲ್ಲ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s