ಕನ್ನಡ ಸಾಹಿತ್ಯ ಪರಂಪರೆಯ ಧ್ವನಿಗಳು (ಭಾಗ-೩)

ರನ್ನ

ರತ್ನತ್ರಯರಲ್ಲಿ ‘ಕವಿ ಚಕ್ರವರ್ತಿ ‘ ರನ್ನನನ್ನು ಹೇಗೆ ತಾನೇ ಬಿಡಲು ಸಾಧ್ಯ? ಈತನಿಗೂ ಪಂಪನಿಗೂ ತುಂಬಾ ಸಾಮ್ಯತೆಗಳಿವೆ. ಇಬ್ಬರೂ ಜೈನ ಕವಿಗಳು, ಚಂಪೂ ಪ್ರಕಾರದಲ್ಲಿ ಬರೆದರು. ಪಂಪನ ಹಾಗೆ ಈತನೂ ಧಾರ್ಮಿಕ ಕಾವ್ಯ ಹಾಗೂ ಲೌಕಿಕ ಕಾವ್ಯಗಳನ್ನು ಬರೆದ. ‘ಅಜಿತ ತೀರ್ಥಂಕರ ಪುರಾಣ’ ಇದು ರನ್ನನ ಧಾರ್ಮಿಕ ಕಾವ್ಯವಾದರೆ, ‘ಸಾಹಸ ಭೀಮ ವಿಜಯಂ’, ರನ್ನನ ‘ಗದಾಯುದ್ಧ’ ಎಂದೇ ಹೆಸರಾದ ಈ ಕಾವ್ಯ ಈತನ ಲೌಕಿಕ ಕಾವ್ಯ. ತನ್ನ ಆಶ್ರಯದಾತನಾದ ‘ಸತ್ಯಾಶ್ರಯನನ್ನು’ ತನ್ನ ಕಾವ್ಯದ ನಾಯಕನನ್ನಾಗಿ ಮಾಡಿ, ಮಹಾಭಾರತದ ಭೀಮನೊಂದಿಗೆ ಹೋಲಿಕೆ ಮಾಡಿ ಬರೆದ ಮಹಾಕಾವ್ಯವಿದು.

ಅಜಿತ ತೀರ್ಥಂಕರ ಪುರಾಣದ ಕುರಿತು ತೀರಾ ಕಡಿಮೆ ತಿಳಿದಿರುವುದರಿಂದ ಅದರ ಕುರಿತು ಈಗ ಬರೆಯುತ್ತಿಲ. ಗದಾಯುದ್ಧವನ್ನೂ ಸಹ ಪೂರ್ತಿಯಾಗಿ ಓದಿಲ್ಲವಾದರೂ ತಕ್ಕ ಮಟ್ಟಿಗೆ ಓದಿ, ಕೇಳಿ ತಿಳಿದುಕೊಂಡದ್ದನ್ನು ಈಗ ಹಂಚಿಕೊಳ್ಳುತ್ತಿದ್ದೇನೆ. ಮಹಾಭಾರತದ ಗದಾಯುದ್ಧವೇ ಕಾವ್ಯದ ಮುಖ್ಯ ವಸ್ತುವಾದರೂ ಕೂಡ, ಇಡೀ ಮಹಾಭಾರತವನ್ನು ಸಿಂಹಾವಲೋಕನ ಕ್ರಮದಿಂದ ಸಮಗ್ರವಾಗಿ ಹೇಳಿದ್ದಾನೆ. ಸಿಂಹಾವಲೋಕನ ಕ್ರಮದಿಂದ ಹೇಳುವೆ ಎಂದು ಕವಿಯೇ ಹೇಳಿದ್ದಾನೆ. ಸಿಂಹವು ತಾನು ಬೇಟೆಯಾಡಿದ ನಂತರ ಕಾಡಿನ ಒಂದು ಎತ್ತರದ ಪ್ರದೇಶಕ್ಕೆ ಹೋಗಿ ನಿಂತು ಎಲ್ಲವನ್ನು ವೀಕ್ಷಿಸುತ್ತದೆಯಂತೆ- ಈ ಕ್ರಮವನ್ನು ಸಿಂಹಾವಲೋಕನ ಎಂದು ಕರೆಯುತ್ತಾರೆ. ಹಾಗೆಯೇ ಕವಿಯು ಕೂಡ ಮಹಾಭಾರತದ ಅಂತಿಮ ಮುಖ್ಯ ಘಟ್ಟವಾದ ಗದಾಯುದ್ಧವನ್ನು ಕೇಂದ್ರವಾಗಿಟ್ಟುಕೊಂಡು ಹಿಂದಿನ ಎಲ್ಲವನ್ನು ಸಿಂಹಾವಲೋಕನ ಕ್ರಮದಿಂದ ಹೇಳುತ್ತಾ ಹೋಗುತ್ತಾನೆ.

ಪಂಪನ ‘ವಿಕ್ರಮಾರ್ಜುನ ವಿಜಯ’ದಲ್ಲಿ ಪಂಪನು ಅರ್ಜುನನನ್ನು  ಕಥಾನಾಯಕನನ್ನಾಗಿ ಮಾಡಿಕೊಂಡರೂ ಸಹ ಹೇಗೆ ಕರ್ಣನ ಪಾತ್ರವು ಅವನನ್ನುಆಕರ್ಷಿಸಿದೆಯೋ ಅದೇ ರೀತಿ ರನ್ನನು ಭೀಮನನ್ನು ಕಥಾನಾಯಕನನ್ನಾಗಿ ಮಾಡಿಕೊಂಡರೂ ಸಹ ದುರ್ಯೋಧನನ ಪಾತ್ರ ಕವಿಯ ಮನಸ್ಸನ್ನು ಆವರಿಸಿದೆ. ದುರ್ಯೋಧನನ ಬಗ್ಗೆ ಓದುಗರಲ್ಲಿ ಕನಿಕರವುಂಟಾಗುವಂತೆ ಅವನ ಪಾತ್ರವನ್ನು ರನ್ನ ಸೃಷ್ಟಿಸಿದ್ದಾನೆ.

ದುರ್ಯೋಧನ ಸಂಜಯನೊಂದಿಗೆ ನಡೆದು ಬರುತ್ತಿರಬೇಕಾದರೆ ದ್ರೋಣರ ಶವವನ್ನು ಕಾಣುತ್ತಾನೆ, ಆ ಪ್ರಸಂಗದ ವರ್ಣನೆ ಇಂತಿದೆ : (ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ-ಸಂಪುಟ-೪)

ಇಭಶೈಲಂಗಳನೇರಿಯೇರಿ, ರುಧಿರಸ್ರೋತ್ರನ್ ಗಳನ್  ದಾಂಟಿ ದಾಂಟಿ 

ಇಭದೋರ್ನಿಲಲತಾಪ್ರತಾನ ವಿಪಿನ ವ್ರಾತಂಗಳೊಳ್ ಸಿಲ್ಕಿಸಿಲ್ಕಿ

ಭರಂಗೆಯ್ದುರುದೆಯ್ದಿ ಸಂಜಯಶಿರಃಸ್ಕಂಧಾವಲಂಬಂ ಕುರು

ಪ್ರಭು ಕಂಡಂ ಶರಜಾಲಜರ್ಜರಿತ ಗಾತ್ರ ತ್ರಾಣನಂ ದ್ರೋಣನಂ “

ತ್ತು ಬಿದ್ದಿದ್ದ ಆನೆಗಳೆಂಬ ಬೆಟ್ಟಗಳನ್ನೇರುತ್ತಾ, ರಕ್ತದ ಪ್ರವಾಹವನ್ನು ದಾಟುತ್ತಾ, ಆನೆಗಳ ಸೊಂಡಿಲುಗಳೆಂಬ ಕಪ್ಪು ಬಳ್ಳಿಗಳ ಸಮೂಹದಲ್ಲಿ ಕಾಲ್ತೊಡರಿಸಿಕೊಳ್ಳುತ್ತಾ ಸಂಜಯನ ಹೆಗಲಿನ ಮೇಲೆ ಕೈಯೂರಿ ಬರುತ್ತಿದ್ದ ದುರ್ಯೋಧನನು ಬಾಣಗಳ ಸಮೂಹದ ಹೊಡೆತದಿಂದ ಛಿದ್ರವಾಗಿದ್ದ ದ್ರೋಣನ ದೇಹವನ್ನು ಕಂಡನು.  ಈ ಒಂದು ಪದ್ಯದಲ್ಲಿ ಯುದ್ಧಭೂಮಿಯಲ್ಲಿ ಆದ ಸಮಗ್ರವೂ ಕಣ್ಣ ಮುಂದೆ ಬಂದು ನಿಲ್ಲುತ್ತದೆ.ನಿಧಾನಗತಿಯಲ್ಲಿ ಸಾಗುವ ಈ ಪದ್ಯವನ್ನು ಅದರ ಕಥೆಯ ಸ್ವಾರಸ್ಯದೊಂದಿಗೆ ಓದುವಾಗ ರನ್ನನ ಕವಿತೆಯ ಚತುರತೆಯ ಅರಿವಾಗುತ್ತದೆ.

ಅಲ್ಲಿಂದ ಮುಂದೆ ನಡೆದಾಗ ಅಭಿಮನ್ಯುವಿನ ಶವವನ್ನು ಕಾಣುತ್ತಾನೆ. ತನ್ನ ಶತ್ರುವಿನ ಮಗನಾದರೂ ಸಹ ತನ್ನ ಮಗನ ಸಮನಾದ ಅಭಿಮನ್ಯುವಿನ ದೇಹವನ್ನು ಕಂಡು ಅವನ ಶೌರ್ಯ ತನ್ನಂತವರಿಗೂ ಬರಲಿ ಎಂದು ಹಾರೈಸುತ್ತಾನೆ. ಇಲ್ಲಿ ನಮಗೆ ದುರ್ಯೋಧನ ಒಬ್ಬ ವೈರಿಯಾಗಿ ಕಾಣುವುದಿಲ್ಲ, ಒಂದು ಕ್ಷಣ ಎಂತಹ ವಿಶಾಲವಾದ ಮನೋಭಾವ ಎನಿಸದಿರದು.

ಮುಂದೆ ತನ್ನ ಮಗ ಲಕ್ಷ್ಮಣ ಕುಮಾರನ ಶವವನ್ನು ನೋಡಿ ವಿಹ್ವಲಗೊಳ್ಳುತ್ತಾನೆ, ಮಗನು ತಂದೆಗೆ ತರ್ಪಣ ಕೊಡುವುದು ಲೋಕಾರೂಢಿ ಇದೆಂಥ ವಿಧಿ ಎಂದು ಶೋಕಿಸುತ್ತಾನೆ.

ನಂತರ ತಮ್ಮಂದಿರ ಶವಗಳು, ಪ್ರೀತಿಯ ತಮ್ಮ ದುಶ್ಯಾಸನನ ಶವ, ಆತ್ಮೀಯ ಸ್ನೇಹಿತ ಕರ್ಣನ ಶವ ಇವೆಲ್ಲವನ್ನೂ ನೋಡುತ್ತಾ ಶೋಕದಿಂದ ಸಾಗುವ ದುರ್ಯೋಧನನು ಒಂಟಿಯಾಗಿ ಹೋಗಿದ್ದಾನೆ ಎಂಬ ಭಾವ ಓದುಗರಲ್ಲಿ ಮೂಡಿ ಅವನ ಮೇಲೆ ಕನಿಕರ ಉಂಟಾಗದೇ ಇರದು. ದುರ್ಯೋಧನನ ಈ ವಿಲಾಪವು ಕನ್ನಡ ಸಾಹಿತ್ಯದಲ್ಲೇ ಅತ್ಯಂತ ಸುಂದರವಾದ ಶೋಕಗೀತೆಯಾಗಿ ಪರಿಣಮಿಸಿದೆ ಎನ್ನುತ್ತಾರೆ ಡಾ.ಪಿ.ವಿ.ನಾರಾಯಣ. ಕುವೆಂಪುರವರು ರನ್ನನನ್ನು ‘ಶಕ್ತಿ ಕವಿ’ ಎಂದು ಕರೆದಿದ್ದಾರೆ.

ಗದಾಯುದ್ಧದ ಕೊನೆ ಕೊನೆಗೆ ಬರುತ್ತಿರುವ ಹಾಗೆ ನಮಗೆ ದುರ್ಯೋಧನನ ಮೇಲೆ ಗೌರವ ಉಂಟಾಗುವಂತೆ ಮಾಡಿರುವುದೇ ರನ್ನನ ಕಾವ್ಯದ, ಅವನ ಸಾಮರ್ಥ್ಯದ ವೈಶಿಷ್ಟ್ಯತೆ. ಕೊನೆಯಲ್ಲಿ ದುರ್ಯೋಧನನು ವೈಶಂಪಾಯನ ಸರೋವರದಲ್ಲಿ ಅಡಗಿ ಕುಳಿತಿದ್ದಾನೆ, ಅವನು ಅಲ್ಲಿದ್ದಾನೆ ಎಂಬ ಅನುಮಾನ ಬಂದು ಅಲ್ಲಿಗೆ ಬಂದ ಭೀಮನು ಒಂದು ಮೀಂಗುಲಿಗ  ಹಕ್ಕಿ ಮೀನು ಹಿಡಿಯುವುದನ್ನು ನೋಡುತ್ತಾನೆ. ಈ ದೃಶ್ಯವನ್ನು ಕವಿ ಭೀಮನಿಗೆ ದುರ್ಯೋಧನ ಅಲ್ಲೇ ಅಡಗಿ ಕುಳಿತಿದ್ದಾನೆ ಎಂದು ಹೇಳಿದಂತಾಗುತ್ತದೆ ಎಂದು ಬಹು ಸೊಗಸಾಗಿ ವರ್ಣಿಸಿದ್ದಾನೆ.

ಮೀಂಗುಲಿಗವಕ್ಕಿ ಕೊಳನೊಳ್ 

ಮೀಂಗೆರಗುವ ತೆರದಿನೆರಗಿ ನೋಡಿಲ್ಲಿರ್ದಮ್ 

ಪಿಂಗಾಕ್ಷನೆಂದುಂ ಪವನಸು 

ತಂಗೆ ಇರ್ಪಡೆದೋರ್ಪ ತೆರದಿನೇಂ ಸೊಗಯಿಸಿತೋ “

ಮೀನನ್ನು ಕೊಲ್ಲುವ ಮಿಂಚುಳ್ಳಿ ಹಕ್ಕಿಯು ಮೀನಿಗಾಗಿ ಕೊಳದ ಮಧ್ಯಕ್ಕೆ ಹಾರುವ ರೀತಿಯಿಂದ ದುರ್ಯೋಧನನು ಇಲ್ಲಿಯೇ ಅಡಗಿದ್ದಾನೆ ಎಂಬುದನ್ನು ಭೀಮನಿಗೆ ಸೂಚಿಸುವಂತೆ ಕಾಣಿಸಿತು. ಎಂತಹ ಅದ್ಭುತ ಕಲ್ಪನೆ!

ಎಷ್ಟೇ ಮೂದಲಿಸಿದರೂ ಹೊರಗೆ ಬಾರದ ದುರ್ಯೋಧನನ್ನು ಕಂಡು ಭೀಮನಿಗೆ ಕೋಪವುಕ್ಕಿ ಬಂದು ಕೂಗಾಡುತ್ತಾನೆ. ಇದರಿಂದ ದುರ್ಯೋಧನನಿಗಾದ ಪರಿಸ್ಥಿತಿ ತುಂಬಾ ಸೊಗಸಾಗಿ ಮೂಡಿ ಬಂದಿದೆ. ಬಹು ಪ್ರಸಿದ್ಧ ಸಾಲುಗಳು ಇಂತಿವೆ :

ಆ ರವಮಂ ನಿರ್ಜಿತ ಕಂ

ಠೀರವರವಮಂ ನಿರಸ್ತಘನರವಮಂ ಕೋ 

ಪಾರುಣ ನೇತ್ರಂ ಕೇಳ್ದಾ 

ನೀರೊಳಗಿರ್ದುಮ್ ಬೆಮರ್ತನ್ ಉರಗ ಪತಾಕನ್

ಸಿಂಹ ಗರ್ಜನೆಯಂತಹ, ಗುಡುಗಿನ ಮೊಳಗಿನಂತಹ ಭೀಮನ ಆ ಶಬ್ದವನ್ನು ಕೇಳಿ ಕೋಪದಿಂದ ಕೆಂಪಾದ ಕಣ್ಣುಗಳನ್ನುಳ್ಳ ದುರ್ಯೋಧನನು ನೀರಲ್ಲಿದ್ದೇ ಬೆವರಿದನು. “ನೀರೊಳಗಿರ್ದುಮ್ ಬೆಮರ್ತನ್” ಎಂಬ ಈ ಒಂದು ಸಾಲೇ ಸಾಕು ಕೌರವನ ಕೋಪವನ್ನು ಸೂಚಿಸಲು, ಕವಿಯ ಸಾಮರ್ಥ್ಯವನ್ನು ಸೂಚಿಸಲು. ಒಟ್ಟಿನಲ್ಲಿ ಗದಾಯುದ್ಧ ಅಪ್ಪಟ ಸಾಹಸ ಕಾವ್ಯ, ಹೆಸರೇ ಹೇಳುವಂತೆ ‘ಸಾಹಸ ಭೀಮ ವಿಜಯಂ‘. ಒಮ್ಮೆ ಓದಿ, ಅದರ ಸವಿ ಉಂಡವನು ಎಂದು ಮರೆಯಲಾರ.

ಕನ್ನಡಿಗರುಸಿರಾಗಿ ಕನ್ನಡಂ ಬಾಳ್ಗೆ. ಸಿರಿಗನ್ನಡಂ ಗೆಲ್ಗೆ!

ವಿಶೇಷ ಸೂಚನೆ: ವಿವಿಧ ಆಕರ ಗ್ರಂಥಗಳಿಂದ ಆಯ್ದು ಬರೆದ ಲೇಖನವಿದು. ಯಾರ ಅನುಕರಣೆಯನ್ನು ಮಾಡದೇ ಬರೆಯುವ ಪ್ರಯತ್ನ ಮಾಡಿದ್ದೇನೆ. ಎಲ್ಲಿಯಾದರೂ ಹಾಗೆನ್ನಿಸಿದರೆ ಅದು ಅನುಸರಣೆಯೇ ಹೊರತು ಅನುಕರಣೆಯಲ್ಲ.