ಕೊರೋನಾ

ಸುಮಾರು 40 ದಿನಗಳಿಂದ ಮನೆಯಲ್ಲಿಯೇ ಇರುವೆ. ಕಳೆದ ಸುಮಾರು ಒಂದು ಅಥವಾ ಒಂದೂವರೆ ವರ್ಷದಿಂದ ಇಷ್ಟು ದಿನಗಳ ಕಾಲ ಮನೆಯಲ್ಲಿಯೇ ಇದ್ದದ್ದು ಇದೇ ಮೊದಲು. ಅದಕ್ಕೆ ಮುನ್ನ ಪರೀಕ್ಷಾ ತಯಾರಿ ಎಂದು 4 ರಿಂದ 5 ವರ್ಷಗಳ ಕಾಲ ಮನೆಯಲ್ಲಿಯೇ ಇದ್ದೆ. ಹೋದ ವರ್ಷ ಜನವರಿ ಅಂತ್ಯದ ವೇಳೆಗೆ ನನ್ನ ವಿರಾಮದ ಗತಿಯಲ್ಲಿ ಸಾಗುತ್ತಿರುವ ಜೀವನವೆಂಬ ಕಾಲಿಗೆ ಕಾಣದ ಆ ದೇವರ ಕೃಪೆಯಿಂದ, ತಂದೆ ತಾಯಿಗಳ ಆಶೀರ್ವಾದದಿಂದ, ಬಂಧುಗಳ ಹಾರೈಕೆಯಿಂದ, ನನ್ನ ತಂಗಿಯ ಪ್ರಾರ್ಥನೆಯ ಫಲದಿಂದ ಕಾಲಿಗೆ ಚಕ್ರವೊಂದು ಬಂದು ತಗುಲಿತು. ಅದಕ್ಕೆ ಎರಡು ಗಾಲಿಗಳಿದ್ದವು. ಮದುವೆ ಮತ್ತು ಕೆಲಸ. ಹೌದು! ಎರಡೂ ಪೈಪೋಟಿ ಬಿದ್ದು ಒಮ್ಮೆಗೆ ನನ್ನ ಜೀವನಕ್ಕೆ ಕಾಲಿಟ್ಟಿದ್ದವು. ಅಂದಿನಿಂದ ಓಡು, ಓಡು, ಓಡು – ಓಡಲೇ ಎಂದ ಹಾಗೇ ಓಡುತ್ತಲೇ ಇದ್ದೆ. ಇನ್ನೂ ಇದೇ ನನ್ನ ಹೊಸ ಜೀವನ ವಿಧಾನ ಎಂದುಕೊಳ್ಳುವ ಹೊತ್ತಿಗೆ ಕಂಡು ಕೇಳರಿಯದ, ಶತಮಾನದ ವಿಸ್ಫೋಟ, ಮನು ಕುಲಕ್ಕೆ ಕಂಟಕವಾಗಿ ನನ್ನ (ಎಲ್ಲರ) ಓಡುತ್ತಿರುವ ಕಾಲಿಗೆ ತೊಡಕಾಗಿ ಬಂದದ್ದೇ ಕೊರೋನಾ ಎಂಬ ಮಹಾಮಾರಿ.

ಈ 40 ದಿನಗಳಿಂದ ಕೊರೋನಾ ಕುರಿತು ಸುಮಾರು ಲೇಖನಗಳನ್ನು ಓದಿದ್ದಾಯಿತು. ತರಹೇವಾರಿ ಟಿ.ವಿ ಕಾರ್ಯಕ್ರಮಗಳನ್ನು ನೋಡಿದ್ದಾಯಿತು. ಅದೆಲ್ಲವೂ ನನ್ನ ತಲೆಯಲ್ಲಿ ಸೇರಿ ಕಲಸುಮೇಲೋಗರವಾಗಿ ಈಗ ಈ ಲೇಖನದ ರೂಪದಲ್ಲಿ ಓದುತ್ತಿರುವ ನಿಮಗೆ ಸಹಾಯವಾಗಿ ಬರಲಿದೆಯೋ ಅಥವಾ ಪ್ರಶ್ನಾರ್ಥಕವಾಗಿ ಬರಲಿದೆಯೋ ನಾ ಕಾಣೆ!

ಒಂದೇ ರೀತಿ ಶರವೇಗದಲ್ಲಿ ಓಡುತ್ತಿರುವ ವಾಹನಕ್ಕೆ ಅವಾಕ್ಕಾಗಿ ಅಡ್ಡಿ ಎದುರಾದರೆ ವಾಹನ ಪಲ್ಟಿ ಹೊಡೆಯುವಂತೆ ಜನಜ್ಜೀವನ ಪಲ್ಟಿ ಹೊಡೆದು ಏನಾಯಿತು? ಏಕಾಯಿತು? ನಾವು ಬದುಕಿದ್ದೇವಾ? ನಮ್ಮೊಡನಿರುವವರು ಏನಾದರು? ಎಂದು ಕಣ್ಣು ಮಿಕಮಿಕ ನೋಡುವಂತೆ ಈಗ ಈ ಭೂಮಿಯ ವಾಹನದಲ್ಲಿ ಪ್ರಯಾಣಿಕರಾಗಿ ಸಂಚರಿಸುತ್ತಿರುವ ನಮ್ಮ ನಿಮ್ಮೆಲ್ಲರ ಪಾಡಾಗಿದೆ. ಇದು ಎಂದಾದರೂ ಮುಗಿದೀತೆ? ಎಂಬ ಭಯ ಕಾಡತೊಡಗಿದೆ.

ಕೊರೋನಾ ಎಂಬುದು ನಮಗೆ ನಿಮಗೆಲ್ಲರಿಗೂ ತಿಳಿದಂತೆ ಚೈನಾದ ವುಹಾನ್‌ ನಗರದಲ್ಲಿ ಜನ್ಮ ತಾಳಿತು. ಆದರೆ ಇದೇನು ಅನಾಥ ಶಿಶುವಾಗಿರಲು ಸಾಧ್ಯವಿಲ್ಲ. ಇದರ ಜನ್ಮಕ್ಕೆ ಕಾರಣ ಕರ್ತರು ಇರಲೇಬೇಕಲ್ಲವೇ? ಅದಲ್ಲದೇ, ಹೇಗೆ ಜನ್ಮ ತಾಳಿತು ಮತ್ತು ತನ್ನ ವಿರಾಟ್‌ ರೂಪವನ್ನು ಬಗೆ ಬಗೆಯಲ್ಲಿ ಹೇಗೆ ಬದಲಿಸಿಕೊಂಡಿತು ಎಂಬುದು ಕೂಡ ತಿಳಿಯಬೇಕಲ್ಲವೇ? ಇದರಲ್ಲಿ ಮೊದಲ ಮತ್ತು ಕೊನೆಯ ಪ್ರಶ್ನೆಗಳಿಗೆ ಉತ್ತರವಿದೆ. ಕಾರಣ ಕರ್ತರು-ನಿಮಗೆ ಗೊತ್ತಿದೆ. ವಿರಾಟ್‌ ರೂಪದ ಬದಲಾವಣೆ ದಿನೇ ದಿನೇ ಟಿವಿಯಲ್ಲಿ ಮಹಾ ಸಂಚಿಕೆಗಳಾಗಿ, ಪುರಾಣ ಪುಣ್ಯ ಕಥೆಗಳಿಗಿಂತ ಸ್ವಾರಸ್ಯಕರವಾಗಿ, ಭೂತ-ಪಿಶಾಚಿಗಳಿಗಿಂತಲೂ ಭಯಾನಕವಾಗಿ, ಜೇಮ್ಸ್‌ ಬಾಂಡ್‌ ಗಿಂತಲೂ ಗೂಢವಾಗಿ ಹೇಗೆ ಹೊಮ್ಮಿತು ಎಂಬುದು ಪ್ರಸಾರವಾಗುತ್ತಲೇ ಇದೆ. ನಾವು ನೀವೆಲ್ಲರೂ ಸಾಕ್ಷೀಕರಿಸುತ್ತಿದ್ದೇವೆ. ಆದರೆ, ಈ ಮಧ್ಯದ ಪ್ರಶ್ನೆ ಇದೆಯಲ್ಲವೇ ʼಹೇಗೆ ಜನ್ಮತಾಳಿತುʼ ಎಂಬುದು ಮಾತ್ರ ಚಲನಚಿತ್ರದಲ್ಲಿ ಕ್ಲೈಮ್ಯಾಕ್ಸ್‌ ಇಲ್ಲದೇ ಬರುವ ಮಧ್ಯಂತರ ವಿರಾಮವಾಗಿ, ಸ್ವರ್ಗ-ನರಕಗಳಿಗೂ ಹೋಗದೇ ತೇಲಾಡುತ್ತಿರುವ ಅಂತರ ಪಿಶಾಚಿಯಾಗಿ ತ್ರಿಶಂಕು ಸ್ವರ್ಗದಲ್ಲಿ ನೆಲೆಯೂರಿ ಬಿಟ್ಟಿದೆ.

ಇದನ್ನು ಅವರೇ ತಯಾರಿಸಿ ಬಿಟ್ಟರಂತೆ, ಅಕಸ್ಮಾತ್ತಾಗಿ ಲ್ಯಾಬಿನಿಂದ ಹೊರಹೊಮ್ಮಿತಂತೆ, ಬೇಕಂತಲೇ ಮಾಡಿದ್ದಂತೆ ಹಾಗಂತೆ ಹೀಗಂತೆ ಎಂಬ ಅಂತೆ ಕಂತೆಗಳ ಬೊಂತೆ ಬಿಟ್ಟರೆ ನಿಖರವಾದ ಉತ್ತರ ಯಾರ ಬಳಿಯೂ ಇಲ್ಲ. ಆದರೆ, ಉತ್ತರವಿಲ್ಲದ ಈ ಪ್ರಶ್ನೆ ಹುಟ್ಟಿದಾಗಿನಿಂದ ಆದ ಅನಾಹುತಗಳು ಮಾತ್ರ ವಿಪರೀತ. ಕೆಲಸ ಕಳೆದುಕೊಂಡವರು ಅದೆಷ್ಟೋ, ಅಂತಂತ್ರರಾಗಿರುವವರೆಷ್ಟೋ, ಎಷ್ಟು ಉದ್ದಿಮೆಗಳು ಮುಚ್ಚಿಹೋದವೋ, ಅದೆಷ್ಟು ಜನ ಮಾನಸಿಕ ಸಂತುಲನೆ ತಪ್ಪಿ ನರಕಯಾತನೆ ಅನುಭವಿಸುತ್ತಿರುವರೋ, ಇನ್ನೆಷ್ಟೋ ಜನ ಈ ರೋಗಕ್ಕೆ ಬಲಿಯಾಗಿ ಇಹಲೋಕವನ್ನೇ ತ್ಯಜಿಸಿದರು. ಬೇರೆ ದೇಶಗಳಲ್ಲಿ ಸಿಕ್ಕಿ ಹಾಕಿಕೊಂಡವರಿಗೆ ಈಗ ಮಾತೃ ಭೂಮಿಯ ನೆನಪು ಕಾಡುತ್ತಿದೆ, ಅವರು ನಮ್ಮ ದೇಶಕ್ಕೆ ತಲುಪಿದರೆ ಸಾಕು ಎನ್ನುತ್ತಿದ್ದಾರೆ. ನಮ್ಮ ದೇಶದಲ್ಲಿ ಕೂಲಿ ಕಾರ್ಮಿಕರು ನಮ್ಮ ಊರಿಗೆ ನಾವು ಸೇರಿದರೆ ಸಾಕು, ನೀರನ್ನಾದರೂ ಕುಡಿದು ಬದುಕುತ್ತೇವೆ ಎನ್ನುತ್ತಲಿದ್ದಾರೆ. ಆಟೋ ಡ್ರೈವರ್‌ಗಳು, ಕ್ಯಾಬ್‌ ಡ್ರೈವರ್‌ಗಳು, ಕೂಲಿ ಕಾರ್ಮಿಕರು, ಎಲೆಕ್ಟ್ರಿಷಿಯನ್‌ಗಳು, ಪ್ಲಂಬರ್‌ಗಳು, ಹೊಲಿಗೆ ಅಂಗಡಿಯವರು ಹೀಗೆ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ. ಇವರೆಲ್ಲಾ ಎಷ್ಟು ದಿನ ಮನೆಯಲ್ಲಿರಲು ಸಾಧ್ಯ? ಹೊಟ್ಟೆಗೆ ಏನು ತಿನ್ನಲು ಸಾಧ್ಯ? ಸರ್ಕಾರ ಮಾಡುತ್ತಿರುವ ಸಹಾಯ, ಮಾನವತಾವಾದಿಗಳು ಮಾಡುತ್ತಿರುವ ಸಹಾಯ ಇವರಿಗೆ ನಿಜವಾಗಿಯೂ ತಲುಪುತ್ತಿದೆಯಾ? ಈ ಮಧ್ಯೆ ಮೂಕ ಪ್ರಾಣಿಗಳ ಗತಿ? ಬೀದಿ ನಾಯಿಗಳ ಗತಿ? ಅದಂತೂ ಹೇಳ ತೀರದು.

ಮನುಷ್ಯ ಜಾತಿಗೆ ಸಂಚಕಾರವಾಗುವ ಇಂತಹ ಒಂದು ವೈರಸ್‌ ಅನ್ನು ತಯಾರು ಮಾಡಬೇಕೆಂದು ಅನಿಸಿದ್ದಾದರೂ ಹೇಗೆ? (ಒಂದು ವೇಳೆ ತಯಾರಿಸಿದ್ದು ನಿಜವೇ ಆದಲ್ಲಿ). ಮಾನವನ ಯೋಚನೆ ಎಷ್ಟು ಕೀಳು ಮಟ್ಟಕ್ಕೆ ಇಳಿದಿರಬಹುದು? ಈ ಮಧ್ಯೆ ನಮ್ಮ ಬಿಸಿನೆಸ್‌ ಮೆನ್‌ಗಳಿಗೆ ಅವರ ಉದ್ಯಮದ್ದೇ ಚಿಂತೆ. ಅವರಿಗೆ ಎಕಾನಮಿ ಹಾಳಾಗುತ್ತಿರುವ ಪರಿವೆಯೇ ಹೊರತು ಅದಕ್ಕಿಂತ ದೊಡ್ಡ ಮೌಲ್ಯ ಯಾವುದೂ ಇಲ್ಲವೇ? ಎಕಾನಮಿ ಒಂದಿದ್ದರೇ ಎಲ್ಲಾ ಒಟ್ಟಿಗೆ ಬಂದು ಬಿಡುವುದೇ? ಹಾಗಾದರೇ ಕೊರೋನಾ ಬರುವ ಮುಂಚೆ ನಮ್ಮ ರಾಷ್ಟ್ರ ಸುಭಿಕ್ಷ ರಾಷ್ಟ್ರವಾಗಿತ್ತೇ? ಇಲ್ಲವಲ್ಲಾ… ಮತ್ತೇ?

ಹೌದು, ಈ ಎಲ್ಲಾ ಪ್ರಶ್ನೆಗಳಿಗೆ ಸಮಾಧಾನ ಏನು? ಅದು ಮಾತ್ರ ಗೊತ್ತಿಲ್ಲ. ಇಷ್ಟು ಜನ ಕೊರೋನಾದಿಂದ ಸಾಯಬಹುದು, ಇಷ್ಟು ಜನ ಡಿಪ್ರೆಷನ್‌ ಬಂದು ಆತ್ಮಹತ್ಯೆ ಮಾಡಿಕೊಳ್ಳಬಹುದು, ಇಷ್ಟು ಜನ ಹಸಿವಿನಿಂದ ಸಾಯಬಹುದು ಎಂಬ ಅಂಕಿ ಅಂಶಗಳಿವೆಯೇ ಹೊರತು, ಮನುಕುಲದ ಈ ಕಂಟಕದ ವಿರುದ್ಧ ಒಂದಾಗಿ ಜಯಿಸಲು ಒಂದೇ ಒಂದು ಅಂಶವೂ ಇಲ್ಲ. ಎಲ್ಲಾ trial and error method. ಅವರ್ಯಾರೋ ಮಾಡಿದರು, ನಾವು ಮಾಡುತ್ತಿದ್ದೇವೆ. ಮತ್ಯಾರೋ ಹೇಳಿದರು, ನಾವು ಕೇಳುತ್ತಿದ್ದೇವೆ.

ಈ ಮಧ್ಯೆ ಈ ಟಿವಿ ಚಾನಲ್‌ನವರ ಮಿತಿ ಮೀರಿದ ಅವಾಂತರ. ಈ ಮಾಧ್ಯಮ ಬಂದ್‌ ಆದರೆ ಅರ್ಧ ಕೊರೋನಾ ಬಂದ್‌ ಆಗಬಹುದೇನೋ? ಕೊರೋನಾ ಎಂಬ ನರಪಾತಕಿ? ಕೊರೋನಾ ಎಂಬ ಕೀಚಕಿ? ಪುರಾಣಗಳಲ್ಲಿ ಇರುವುದೇ ಪಾತ್ರ ಕೀಚಕ. ಇವರು ಹೇಳುವುದು ಕೀಚಕಿ ಅಂತೇ? ಕೊರೋನಾ ಇವರ ಸ್ಟುಡಿಯೋಗೆ ಬಂದು ಹೇಳಿತ್ತಾ ನಾನು ಹೆಣ್ಣು ಅಂತ? ಅದನ್ನು ಒಂದು Neutral Gender ಆಗಿ ಇಡಲು ಏನು ರೋಗ ಇವರಿಗೆ? ರಾಕ್ಷಸ, ನರ ಭಕ್ಷಕ… What Nonsense?

ಕಣ್ಣಿಗೆ ಕಾಣದ ಒಂದು ಕ್ರಿಮಿ ಜಗತ್ತನ್ನೇ ಅಲುಗಾಡಿಸಿ, ಸಂಕಟ ಬಂದಾಗ ಕಾಪಾಡು ಎಂದು ಮೊರೆಹೋಗುವ ದೇವಸ್ಥಾನ, ಮಸೀದಿ, ಇಗರ್ಜಿಗಳ ಬಾಗಿಲು ಮುಚ್ಚಿಸಿ, ಏ ಮಾನವ ನಿನ್ನ ಅಂತಃಸತ್ವವನ್ನು ಹೊಕ್ಕಿ ನೋಡು, ಆತ್ಮಸಾಕ್ಷಿಯ ಅವಲೋಕನ ಮಾಡಿಕೋ? ನಿಜವಾಗಿಯೂ ಕಂಟಕ ನಾನೋ ಅಥವಾ ನನ್ನಂಥಹ ಹುಳುವಿನ ಹುಟ್ಟಿಗೆ ಕಾರಣನಾದ ನೀನೋ ಎಂದು ಹೇಳುತ್ತಿರಬಾಕಾದರೆ ನಾವು ಇನ್ನೂ ಅಬ್ಬರದ ಮಾತಿನ ಆ ಟಿ.ವಿ ಆಂಕರ್‌ಗಳನ್ನು ನೋಡಿ ನಗಬೇಕೋ, ಅಳಬೇಕೋ ತೋಚದು.

1942-43 ರಲ್ಲಿ ನಮ್ಮ ದೇಶದಲ್ಲಿ ಬೆಂಗಾಲ್‌ ಕ್ಷಾಮದಲ್ಲಿ ಸತ್ತವರ ಸಂಖ್ಯೆ 30 ಲಕ್ಷಕ್ಕೂ ಹೆಚ್ಚು. ಬ್ರೀಟೀಷರಿಂದ ಸ್ವಾತಂತ್ರ್ಯ ಪಡೆಯಲು ಅಮರರಾದವರು ಅವರೆಷ್ಟೋ? ಸಂಕಟ ಬಂದಾಗ ನಾವು ಯಾವತ್ತೂ ಸೋತಿಲ್ಲ, ಸೋಲುವುದಿಲ್ಲ. ಈ ಕಷ್ಟದ ಘಳಿಗೆಯನ್ನೂ ನಾವು ಜಯಿಸುತ್ತೇವೆ. ಅದನ್ನು ಸಾಧ್ಯವಾಗಿಸಿ ಶಹಬಾಸ್‌ಗಿರಿಗೆ ಪಾತ್ರರಾಗುವವರು ವೈದ್ಯರು, ನರ್ಸ್‌ಗಳು, ಆಶಾ ಕಾರ್ಯಕರ್ತರು. ಪೋಲಿಸರು, ಮಿಲಿಟರಿ ಮತ್ತು ನಿರ್ಗತಿಕರು, ಕೂಲಿ ಕಾರ್ಮಿಕರು, ಬಡವರು, ಅಶಕ್ತರು… ಮನೆಯಲ್ಲಿ ಕುಳಿತು ಲೇಖನ ಬರೆಯುತ್ತಿರುವ ನಾನು ಅಲ್ಲ, ಓದುತ್ತಿರುವ ನೀವೂ ಅಲ್ಲ (ಹಾ! ನೀವು ಈ ಮೇಲೆ ತಿಳಿಸಿದವರಲ್ಲಿ ಒಬ್ಬರಾಗಿದ್ದರೆ ಹೌದು).

ಈ ಸಮಯದಲ್ಲಿ ನಾನಂದುಕೊಳ್ಳುವುದು ಒಂದು ಚಮತ್ಕಾರವಾಗಿಬಿಡಬಾರದೇ? ಬಡ ಬಗ್ಗರಿಗೆ ದಾರಿ ತೋರಬಾರದೇ ಎಂದು. ಆದರೆ, ಇನ್ನೂ ಏನೇನು ನೋಡುವುದು ಬಾಕಿ ಇದೆಯೋ ಯಾರಿಗೆ ಗೊತ್ತು. ಕೊರೋನಾ ನಾಶವಾಗಲಿ, ಮನುಕುಲ ಉಳಿಯಲಿ, ಸರ್ವರಿಗೂ ಮಂಗಳವಾಗಲಿ.

ಗೆದ್ದೆ ಗೆಲ್ಲುವೆವು, ನಾವು ಗೆದ್ದೇ ಗೆಲ್ಲುವೆವು, ಗೆದ್ದೇ ಗೆಲ್ಲುವೆವೂ ಒಂದು ದಿನ……

ಹೊಂಗೆ ಕಾಮಯಾಬ್‌ ಹಮ್‌ ಹೊಂಗೆ ಕಾಮಯಾಬ್ ಏಕ್‌ ದಿನ್…..‌

We Shall over come, we shall over come some day…‌

ಸರ್ವೇಜನಾಃ ಸುಖಿನೋಭವಂತು!!!!!!!