ಸ್ನೇಹಿತರ ದಿನಾಚರಣೆ

ಪ್ರತಿ ವರ್ಷ ಆಗಸ್ಟ್‌ ತಿಂಗಳ ಮೊದಲನೇ ಭಾನುವಾರ ಸ್ನೇಹಿತರ ದಿನಾಚರಣೆ ಎಂದು ಆಚರಿಸಲಾಗುತ್ತದೆ. ಇದಕ್ಕೊಂದು ಇತಿಹಾಸವಿರುತ್ತದೆ, ಇರಲೇ ಬೇಕಲ್ಲವೇ. ಆದರೆ, ನಾನೀಗ ಆ ಇತಿಹಾಸವನ್ನು ಬರೆಯುತ್ತಿಲ್ಲ, ನನ್ನ ಜೀವನದ ಇತಿಹಾಸದ ಪುಟಗಳಿಂದ-ನಿಮ್ಮ ಜೀವನದಲ್ಲೂ ನಡೆದಿರಬಹುದಾದ, ಕಲ್ಪನಾ ಲೋಕದಿಂದ ಕೆಲವು, ನೈಜ ಸಂಗತಿಗಳಿಂದ ಕೆಲವು ವಿಷಯಗಳನ್ನು ಹೆಕ್ಕಿ ತಂದು, ಕಸೂತಿ ಮಾಡಿ ತಮ್ಮ ಮುಂದೆ ಒಂದು ಲೇಖನದ ರೂಪದಲ್ಲಿ ಪ್ರದರ್ಶಿಸಬಯಸುವ ಒಂದು ಕಿರು ಪ್ರಯತ್ನದ ಫಲವೇ ಈ ಲೇಖನ!

ಒಂದು ಹಳೆಯ ಹಾಡಿನೊಂದಿಗೆ ಈ ಲೇಖನದ ಮುನ್ನುಡಿ ಪ್ರಾರಂಭಿಸೋಣವೇ?

“ಸ್ನೇಹಿತರೇ ನಿಮಗೆ ಸ್ವಾಗತ, ನನ್ನೆದೆಯ ಪ್ರೀತಿ ಸ್ವಾಗತ……..”

ಸ್ನೇಹ ಎಂಬುದು ಒಂದು ಭಾವ, ಆ ಭಾವದ ಪರಿಣಾಮದಿಂದಾಗಿ ಜೀವನದಲ್ಲಿ ಕ್ರಿಯಾರೂಪದಲ್ಲಿ ಬಂದವರನ್ನು ಸ್ನೇಹಿತ/ಸ್ನೇಹಿತೆ ಅಥವಾ ಗೆಳೆಯ/ಗೆಳತಿ ಎಂದು ಕರೆಯುತ್ತೇವೆ. ಭಾವ ಶಾಶ್ವತ- ಅಂದರೆ ಸ್ನೇಹ ಭಾವವೆಂಬುದು ನಮ್ಮ ಮನಸ್ಸಿನಲ್ಲಿ ಹರಿಯುವ ನೀರಿನ ಧಾರೆಯಂತೆ. ಆದರೆ ಅದರ ಕ್ರಿಯಾರೂಪವಾಗಿ ಬಂದ ಸ್ನೇಹಿತರು ಶಾಶ್ವತನಾ? ಗೊತ್ತಿಲ್ಲ….

ಜೀವನದಲ್ಲಿ ವಿವಿಧ ಬಗೆಯ ಗೆಳೆಯ/ಗೆಳತಿಯರು ಸಿಗುತ್ತಾರೆ. ಕೆಲವರು ಹಾಯ್‌ ಹೆಲೋ ಮಾತ್ರಕ್ಕೆ ಸೀಮಿತವಾಗ್ತಾರೆ. ಇನ್ನೂ ಕೆಲವರು ಹುಟ್ಟು ಹಬ್ಬದ ವಿಶೇಷ ಸಂದೇಶ ಕಳುಹಿಸಲು ಮತ್ತು ನಮ್ಮಿಂದ ಅದೇ ಪ್ರಕ್ರಿಯೆ ಮುಂದುವರೆದು ಆ ಸ್ನೇಹ ಉಳಿದಿರುತ್ತದೆ. ಇನ್ನೂ ಕೆಲವು, ಅವರು ಯಾರೆಂದು ನಮಗೆ ಗೊತ್ತು, ನಾವು ಯಾರೆಂದು ಅವರಿಗೆ ಗೊತ್ತು. ಎದುರಿಗೆ ಬಂದಾಗ ಒಂದು ನಗು-ಅಷ್ಟೇ ಆ ಸ್ನೇಹ. ಇನ್ನೂ ಕೆಲವರು ಸ್ನೇಹಿತರಾಗಿ ಜೀವನದಲ್ಲಿ ಇರುವ ಬದಲು, ಸ್ವೇಚ್ಛಾಚಾರದ ದಾರಿ ಹಿಡಿದು, ಸ್ನೇಹಕ್ಕೆ ಅಪಾರ್ಥ ಕಲ್ಪಿಸಿ ನಮ್ಮಿಂದ ಶಾಶ್ವತವಾಗಿ ದೂರ ಉಳಿಯುತ್ತಾರೆ. ಬೆರಳಣಿಕೆಯಷ್ಟು ಮಾತ್ರ ಗಾಢವಾದ ಸ್ನೇಹಿತರಾಗಿ ಯಾವಾಗಲೂ ಜೊತೆ ಇರುತ್ತಾರೆ.

ಕೆಲವರು ಪ್ರೀತಿ (ಅನುರಾಗ) ಎಂಬ ಹೆಸರಿನಲ್ಲೇ ಬರುತ್ತಾರೆ, ಆದರೆ ಅದು ಸ್ನೇಹಮಯ ಪ್ರೀತಿಯಲ್ಲಿ ಅನಾವರಣಗೊಂಡು ಅದೇ ಚಿರಸ್ಥಾಯಿಯಾಗಿ ಸುಖ-ದುಃಖ ನೋವು ನಲಿವುಗಳಲ್ಲಿ ವಿಶ್ವಾಸದಿಂದ ಜೊತೆ ಇರುತ್ತಾರೆ. ಕೆಲವರು ಮೊದಲು ಗೆಳೆಯ/ಗೆಳತಿಯರಾಗಿರುತ್ತಾರೆ, ನಂತರ ಪ್ರಿಯಕರ/ಪ್ರಿಯತಮೆಯಾಗಿ ಅದು ಉಳಿಯದೇ ಮುರಿದು ಬಿದ್ದು, ಆಜನ್ಮ ದ್ವೇಷಿಕರಾಗಿ, ಇವರು ಸ್ನೇಹಿತರಾಗಿ ಒಂದು ಕಾಲದಲ್ಲಿ ಇದ್ದರಾ? ಎನ್ನುವಷ್ಟರ ಮಟ್ಟಿಗೆ ದೂರವಾಗುತ್ತಾರೆ. ನಮಗಿಂತ ತುಂಬಾ ಚಿಕ್ಕವರೂ ನಮಗೆ ಸ್ನೇಹಿತರಾಗಿರುತ್ತಾರೆ, ತುಂಬಾ ದೊಡ್ಡವರೂ ಸ್ನೇಹಿತರಾಗಿರುತ್ತಾರೆ.

ಈ ಮೇಲೆ ಹೇಳಿದ ಎಲ್ಲದರಲ್ಲೂ ಸ್ನೇಹ ಸರ್ವೇಸಾಮಾನ್ಯ ಅಂದರೆ Constant, ಬದಲಾಗುತ್ತಿರುವುದು ಮಾತ್ರ ಅದು ವ್ಯಕ್ತಗೊಂಡು ಉಳಿಯುವ ಮನುಷ್ಯ, ಅದು Variable. ಏಕೆ ಇದು ಹೀಗೆ? ಎಂದು ನನ್ನನ್ನು ನಾನು ಹಲವು ಬಾರಿ ಪ್ರಶ್ನಿಸಿಕೊಂಡದ್ದುಂಟು. ಕೆಲವರು ಜೀವನದಲ್ಲಿ ಇರುತ್ತಾರೆ ಇನ್ನೂ ಕೆಲವರು ನೆನಪಾಗಿ ಕಾಡುತ್ತಾರೆ. ಇಲ್ಲ ಸಲ್ಲದ ಪ್ರಶ್ನೆಗಳು ಮಾತ್ರ ಕೊನೆ-ಮೊದಲಿಲ್ಲದೇ ಜೊತೆ ಇರುತ್ತವೆ.

ಈಗೀಗ ಸ್ನೇಹ ಕೇವಲ ಪಬ್-ಪಾರ್ಟಿ-ಮೋಜಿಗೆ ಮಾತ್ರ ಸೀಮಿತವಾಗುತ್ತದೆ, ನಿಜವಾಗಿ ಅವರಿಗಾಗಿ ಯಾರೂ ಇರುವುದಿಲ್ಲ. ಆತ್ಮಹತ್ಯೆಯಂತಹ ನಿರ್ಧಾರಗಳು ತೆಗೆದುಕೊಳ್ಳುವಷ್ಟರ ಮಟ್ಟಿಗೆ ಜನ ಏಕಾಂಗಿಗಳಾಗುತ್ತಿದ್ದಾರೆ. ಇದೇಕೆ ಹೀಗೆ? ಬಹುಶಃ ಸ್ನೇಹದಲ್ಲಿ ನಶ್ವರವಾಗುತ್ತಿರುವ ನಂಬಿಕೆಯಿಂದಾಗಿ. ಯಾರೂ ಯಾರನ್ನೂ ನಂಬುತ್ತಿಲ್ಲ. ಕೇವಲ ಒಂದು ಭಾವ ಚಿತ್ರ, ಅದಕ್ಕೆ ನೂರಾರು ಲೈಕ್‌ಗಳು, ಆದರೆ ಕಷ್ಟದ ಸಮಯದಲ್ಲಿ ನೋವು ಹಂಚಿಕೊಳ್ಳಲು ಕೈಯಲ್ಲಿರುವ ಮೊಬೈಲ್‌ Contacts list ತೆಗೆದರೆ ಒಬ್ಬರೂ ಕೂಡ ಇರುವುದಿಲ್ಲ. ಇಂತಹ ತೋರಿಕೆಯ ಜೀವನ ಇಂದಿನದು. ಸ್ನೇಹಿತರ ದಿನದ ಶುಭಾಶಯಗಳು- ಅವರೂ ಕಳುಹಿಸುತ್ತಾರೆ, ನಾವೂ ಕಳುಹಿಸುತ್ತೇವೆ. ಆದರೆ, ಅವರು ಸ್ನೇಹಿತರಾ? ಗೊತ್ತಿಲ್ಲ.

ಕೆಲವೊಮ್ಮೆ ಅಮ್ಮ-ಮಗಳು, ಅಪ್ಪ-ಮಗ, ಅಮ್ಮ-ಮಗ, ಅಪ್ಪ-ಮಗಳು, ಅಕ್ಕ-ತಂಗಿ, ಅಣ್ಣ-ತಮ್ಮ, ಗಂಡ-ಹೆಂಡತಿ ಎಷ್ಟೋ ಒಳ್ಳೆಯ ಸ್ನೇಹಿತರಾಗಿರುತ್ತಾರೆ. ನಿಜವಾದ ಅರ್ಥದಲ್ಲಿ ಸ್ನೇಹವಿರುತ್ತದೆ! ಆದರೆ, ಅಲ್ಲಿ ಸಂಬಂಧದ ಹೆಸರು ಮಾತ್ರ ಬೇರೆ.

ಮೇಲಿನ ಎಲ್ಲವನ್ನೂ ನಾವು ನೋಡಿದಾಗ ಅನಿಸುವುದು ಸಂಬಂಧಕ್ಕೆ ಯಾವ ಹೆಸರು ಬೇಕಾದರೂ ಇಡಬಹುದು, ಆದರೆ ಅಲ್ಲಿ ಮುಖ್ಯ ಇರಬೇಕಾದುದು ಶಾಶ್ವತವಾದ-ನಿಸ್ವಾರ್ಥವಾದ-ನಿಜವಾದ “ಸ್ನೇಹ”. ಅಂತಹ ಸ್ನೇಹ ಎಲ್ಲರಿಗೂ ಸಿಗಲಿ ಎಂದು ಹಾರೈಸುತ್ತಾ “ಸ್ನೇಹಿತರ ದಿನದ ಶುಭಾಶಯಗಳು”.

ಸಂಬಂಧಗಳ ಸಂಕೋಲೆಯೊಳಗೆ ಬೆಸೆಯದೇ, ಜೀವನದಲ್ಲಿ ಬೇಸರವನ್ನು ಮೂಡಿಸದೇ, ಯಾವತ್ತಿಗೂ ಮಾಸದೇ, ಚಿಗುರುವ, ನವನವೋನ್ಮೇಷಶಾಲಿನಿಯಾದ ಸ್ನೇಹ ನಮ್ಮ-ನಿಮ್ಮೆಲ್ಲರದಾಗಲಿ ಎಂಬ ಆಶಯದೊಂದಿಗೆ…………………….

ಸ್ನೇಹಿತರೊಬ್ಬರ ಸ್ಫೂರ್ತಿದಾಯಕ ನುಡಿಗಳು ಮತ್ತು ಸಲಹೆಯ ಮೇರೆಗೆ ಮಂಕುತಿಮ್ಮನ ಕಗ್ಗದಿಂದ:

“ಒರ್ವನೇ ನಿಲುವೆ ನೀನುತ್ಕಟಕ್ಷಣಗಳಲಿ |
ಧರ್ಮಸಂಕಟಗಳಲಿ, ಜೀವನಸಮರದಲಿ ||
ನಿರ್ವಾಣದೀಕ್ಷೆಯಲಿ, ನಿರ್ಯಾಣಘಟ್ಟದಲಿ |
ನಿರ್ಮಿತ್ರನಿರಲು ಕಲಿ – ಮಂಕುತಿಮ್ಮ ||”

ಮಾನಸಾ.ಆರ್.ಕುಲಕರ್ಣಿ