ಹೇಳಿ ಹೋಗು ಕಾರಣ

Heli-hogu-karana
ಹೇಳಿ ಹೋಗು ಕಾರಣ

ರವಿ ಬೆಳಗೆರೆ… ಕನ್ನಡಿಗರೆಲ್ಲರಲ್ಲೂ ಮನೆಮಾತಾದ ಜನಪ್ರಿಯ ಹೆಸರು. ನಾನು ಅವರ ‘ಹಾಯ್‌ ಬೆಂಗಳೂರು’ ನಲ್ಲಿನ ಕೆಲವೊಂದು ಲೇಖನಗಳನ್ನು ಓದಿದ್ದೆ ಮತ್ತು ಈ ಟಿವಿ ಕನ್ನಡ ವಾಹಿನಿಯ ‘ಎಂದೂ ಮರೆಯದ ಹಾಡು’ ಕಾರ್ಯಕ್ರಮದಲ್ಲಿ ಅವರ ನಿರೂಪಣೆ ಕೇಳಿದ್ದಷ್ಟನ್ನು ಬಿಟ್ಟರೆ ಮತ್ತಿನ್ನೇನೂ ಓದಿರಲಿಲ್ಲ. ಆದರೆ, ಅವರ ಕುರಿತು ಗಾಳಿ ಸುದ್ದಿಯೋ ಅಥವಾ ಇನ್ನೇನೋ ತುಂಬಾ ಕೇಳಿ ಒಂದು ರೀತಿಯ ಪೂರ್ವಗ್ರಹ ಪೀಡಿತ ಮನಸ್ಥಿತಿ ನನ್ನಲ್ಲಿ ಇತ್ತು. ಅವರ ಬಗ್ಗೆ ಅಷ್ಟು ಒಳ್ಳೆಯ ಅಭಿಪ್ರಾಯ ನನಗಿರಲಿಲ್ಲ. ಅದು ಈ ಮೇಲಿನ ಶೀರ್ಷಿಕೆಯ ಪುಸ್ತಕ ಓದುವವರೆಗೆ ಮಾತ್ರ. “ಹೇಳಿ ಹೋಗು ಕಾರಣ” – ಕಾದಂಬರಿ ತುಂಬಾನೇ ಇಷ್ಟವಾಯಿತು. ನನ್ನ ಕೆಲಸದ ವಿಪರೀತ ಒತ್ತಡದ ನಡುವೆಯೂ ಎರಡೇ ಎರಡು ದಿನಗಳಲ್ಲಿ339 ಪುಟದ ಪುಸ್ತಕವನ್ನು ಓದಿ ಮುಗಿಸಿದೆ, ಅಷ್ಟೊಂದು ಅಗಾಧವಾಗಿ ಹಿಡಿದಿಡುವ ಪುಸ್ತಕ. ಇದರ ಕುರಿತ ನನ್ನ ಅನಿಸಿಕೆ, ಅಭಿಪ್ರಾಯಗಳನ್ನು ಮುಂದೆ ಹಂಚಿಕೊಳ್ಳಲ್ಲಿದ್ದೇನೆ.

ಕಾದಂಬರಿ 5 ಮುಖ್ಯ ಪಾತ್ರಧಾರಿಗಳ ಸುತ್ತಲೂ ಸುತ್ತುತ್ತದೆ. ಹಿಮವಂತ್‌ (ಹಿಮೂ), ಪ್ರಾರ್ಥನಾ, ಊರ್ಮಿಳಾ, ದೇವಶಿಶು (ದೇವ್) ಬಂಧೋಪಾಧ್ಯಾಯ ಹಾಗೂ ರಸೂಲ್‌ ಜಮಾದಾರ್.‌ ನಾಯಕ ಹಿಮವಂತ್‌ ತುಂಬಾ ಸರಳ, ನಿಷ್ಠಾವಂತ, ಪ್ರಜ್ಞಾವಂತ, ಹೇಳಿದ್ದನ್ನು ಮಾಡುವ-ಮಾಡಿದ್ದನ್ನು ಹೇಳುವ, ಮನೋನಿಗ್ರಹವುಳ್ಳ, ಪರಿಶ್ರಮ ಪಡುವ ವ್ಯಕ್ತಿ. ಪ್ರಾರ್ಥನಾ ಎಂಬ ಹುಡುಗಿಯನ್ನು ಪ್ರೀತಿಸುತ್ತಾನೆ, ಆಕೆಯ ಓದಿಗಾಗಿ ಆತ ತನ್ನ ಜೀವನವನ್ನೇ ಮುಡಿಪಿಡುತ್ತಾನೆ. ಆದರೆ, ಪ್ರಾರ್ಥನಾ ಓದಲು ಹೋದಾಗ ದಾವಣಗೆರೆಯ ಕಾಲೇಜಿನ, ಆಕರ್ಷಕ ಮತ್ತು ಚಂಚಲ ಮನಸ್ಸಿನ, ದೇವಶಿಶು ಎಂಬ ವ್ಯಕ್ತಿಯನ್ನು ಪ್ರೀತಿಸುತ್ತಾಳೆ. ದೇವಶಿಶು ಎಂಬಾತ ಊರ್ಮಿಳಾ ಎಂಬಾಕೆಯನ್ನು ಪ್ರೀತಿಸುತ್ತಿರುತ್ತಾನೆ, ಮತ್ತು ಊರ್ಮಿಳಾ ಪ್ರಾರ್ಥನಾಳ ಹಾಸ್ಟೆಲ್‌ಮೇಟ್‌- ರೂಮ್ ಮೇಟ್. ಆದರೆ, ಊರ್ಮಿಳಾ ಹಿಮವಂತ್‌ನನ್ನು ಪ್ರೀತಿಸಳು ಶುರುವಿಡುತ್ತಾಳೆ. ಇದೆಲ್ಲದರ ನಡುವೆ ಮಾಟ-ಮಂತ್ರ, ಎಲ್ಲರ ಹಿಂದಿನ ಜೀವನದ ಕಥೆ, ಇದೆಲ್ಲದಕ್ಕೆ ಸಾಕ್ಷಿಯಾಗಿ ನಿಲ್ಲುವ ರಸೂಲ್‌ ಜಮಾದಾರ್‌ ಹೀಗೆ ಕಥೆ ಸಾಗುತ್ತದೆ.

ವಿನಾಕಾರಣ ಪ್ರಾರ್ಥನಾ ಹಿಮೂವನ್ನು ತೊರೆಯುತ್ತಾಳೆ, ದೇವ್‌ನ ಮೇಲೆ ಆಕೆ ತೋರುವ ನಿಷ್ಠಾವಂತ ಪ್ರೀತಿಯ ಕಾಲುಭಾಗವನ್ನೂ ಹಿಮವಂತನ ಮೇಲೆ ತೋರಿಸುವುದಿಲ್ಲ. ಹೀಗೆ ಕಾರಣ ಹೇಳದೇ ತೊರೆದು ಹೋದದ್ದಕ್ಕೆ ಇರಬೇಕು ಕಾದಂಬರಿಯ ಶೀರ್ಷಿಕೆ ʼಹೇಳಿ ಹೋಗು ಕಾರಣʼ.

ಹೀಗೆ ಪ್ರೀತಿಸಿ ಕಾರಣ ಹೇಳದೇ ಹೊರಡುವವರಿದ್ದಾರಲ್ಲವೇ? ನನಗೆ ಈ ಕಾದಂಬರಿಯ ಕೊನೆಯಲ್ಲಾದರೂ, ಈ ತರಹ ಬಿಟ್ಟು ಹೋಗುವ ವ್ಯಕ್ತಿಗಳ ಮನಸ್ಥಿತಿ ಎಂತಹುದ್ದಿರುತ್ತದೆ ಎಂದು ಬೆಳಗೆರೆ ವಿವರಿಸಿರುತ್ತಾರೆ ಎಂದುಕೊಂಡಿದ್ದೆ, ಊಹು ಆದರದು ಹಾಗಾಗಲಿಲ್ಲ. ಎಲ್ಲ ರೀತಿಯ ಆಣೆ, ಪ್ರಮಾಣಗಳನ್ನು ಮಾಡಿ ಯಾವ ಕಾರಣಕ್ಕಾಗಿ ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಬಿಟ್ಟು ಹೋಗುತ್ತಾನೆ? ಬಾಲ್ಯದ ನಮ್ಮ ಜೀವನ ಗಟ್ಟಿಯಾದ ನೆಲೆಯಲ್ಲಿ ನಿಂತು ರೂಪುಗೊಂಡಿದ್ದರೆ ಮಾತ್ರ ಜೀವನದ ಪ್ರಮುಖ ಘಟ್ಟದಲ್ಲಿ ಹಿನ್ನಡೆ ಅನುಭವಿಸಿದರೂ ಸಹ, ವಿಕಾರವಾದ ಯಾವ ಭಾವಗಳು ಇಲ್ಲದೇ ಮುನ್ನಡೆಯಲು ಸಾಧ್ಯ ಎಂಬುದು ನಮಗೆ ಊರ್ಮಿಳಾಳ ವ್ಯಕ್ತಿತ್ವದಲ್ಲಿ ಕಾಣಿಸುತ್ತದೆಯೇ ವಿನಹ ಹಿಮವಂತನಲ್ಲಲ್ಲ.

ಬೆಳಗೆರೆಯವರು ಮೊದಲಿನಿಂದ ಕೊನೆಯವರೆಗೆ ಹೆಣ್ಣು ಚಂಚಲ, ಹೆಣ್ಣು ಮಾತ್ರ ಮೋಸದ ಜಾಲ ಹೆಣೆಯಲು ಸಾಧ್ಯ ಎನ್ನುವಂತೆ ಬಿಂಬಿಸಿರುವುದು ಅದ್ಯಾಕೋ ಅಷ್ಟು ಸಹ್ಯವಾಗಲಿಲ್ಲ. ಅವರದೇ ಆದ ಊರ್ಮಿಳಾಳ ಪಾತ್ರ, ಗಂಡಿನ ಮೋಸದ ಜಾಲದಿಂದ ಹೊರಬಿದ್ದು ಜೀವನವನ್ನು ಕಟ್ಟಿಕೊಳ್ಳುತ್ತಿರುವುದು ಕಣ್ಣ ಮುಂದೆ ಇರುವಾಗಲೂ ಸಹ ಹೆಣ್ಣೇ ಮೋಸದ ಬೀಜಕ್ಕೆ ಮೂಲ ಎನ್ನುವುದು ಕಾದಂಬರಿಯ ಧ್ವನಿಯಾಗಿರುವುದು ಒಂದು ರೀತಿಯ ಅಸಮಾನತೆ ಎಂದೆನಿಸುತ್ತದೆ. ಮೊದಲಿನಿಂದಲೂ ಧೀಮಂತ ವ್ಯಕ್ತಿತ್ವಕ್ಕೆ ಪ್ರತಿರೂಪವೆನ್ನುವಂತೆಯೇ ನಿರೂಪಣೆಗೊಂಡ ಹಿಮವಂತ್‌ ಮಾಟ-ಮಂತ್ರದ ಮೊರೆ ಹೋಗುವುದು ಆ ಪಾತ್ರಕ್ಕೆ ತಕ್ಕುದಾಗಲಿಲ್ಲ ಎನಿಸಿತು ಮತ್ತು ಪಾತ್ರದ ತೂಕಕ್ಕೆ ನ್ಯಾಯ ಮಾಡಿದಂತಾಗಲಿಲ್ಲ. ನಿಜ! ಮೋಸ ಹೋದ ಎಲ್ಲರೂ ಧಾರಾಳರಾಗಿ, ಹೋಗಲಿ ಬಿಡು, ಮೋಸ ಮಾಡಿದವರು ಎಲ್ಲಿದ್ದರೂ, ಹೇಗಿದ್ದರೂ ಸಂತೋಷವಾಗಿದ್ದರೆ ಸಾಕು ಎಂಬ ಧೋರಣೆ ತಾಳಬೇಕೆಂದೇನಿಲ್ಲ, ಆದರೆ ಕಾದಂಬರಿಯಲ್ಲಾದರೂ ಉದಾತ್ತ ಚಿಂತನೆ ಬಿತ್ತಬಹುದಾಗಿತ್ತು ಎಂಬುದು ನನ್ನ ಅನಿಸಕೆ.

ಕೊನೆಯಲ್ಲಿ ತುಂಬಾ ಪ್ರಶ್ನೆಗಳು ನನ್ನನ್ನು ಕಾಡಿದವು. ಪ್ರೀತಿ ಎಂಬುದು ಯಾವ ನೆಲೆಯಲ್ಲಿ ವ್ಯಕ್ತಗೊಳ್ಳುತ್ತದೆ? ಮದುವೆಯ ಬಂಧನವೆಂಬುದು ಇಲ್ಲದೇ ಹೋದರೆ, ಆವಶ್ಯಕತೆ ಮತ್ತು ಅನಿವಾರ್ಯತೆ ಎರಡೂ ಇಲ್ಲದಾದಾಗ ಪ್ರೀತಿ ಉಳಿಯಲು ಸಾಧ್ಯವೇ ಇಲ್ಲವೇ? ಹಾಗಾದರೆ ಅದು ಅನುಕೂಲ ಸಿಂಧುವೇ ಹೊರತು ಪ್ರೀತಿಯಲ್ಲ, ಅಲ್ಲವೇ? ನನಗೆ ನಿನ್ನ ಆವಶ್ಯಕತೆ ಇದೆ ನೀನು ಬೇಕು, ನಿನ್ನ ಅನಿವಾರ್ಯತೆ ಇದೆ ನೀನು ಬೇಕು.. ಅದಿಲ್ಲವಾದರೆ ಆ ವ್ಯಕ್ತಿ ಬೇಡ. ಇದ್ಯಾವ ತರ್ಕ ತಿಳಿಯಲಿಲ್ಲ. ಹಾಗೆಯೇ, ಕುಂಟು ನೆಪವನ್ನಾದರೂ ಒಡ್ಡಿ ಒಬ್ಬ ವ್ಯಕ್ತಿಯನ್ನು ತೊರೆಯಬೇಕೆ ವಿನಹ ವೃಥಾ ಬಿಡಬಾರದು, ಸ್ಪಷ್ಟವಾಗಿ ಹೇಳುವುದಾದರೆ one should not abandon ಅಲ್ಲವೇ? ಏನೂ ಹೇಳದೇ, ಜೀವನದ ಕೊನೆಯವರೆಗೂ ಜೊತೆ ಇರುವೆ ಎಂದವರು ತತ್‌ಕ್ಷಣ ನಾಪತ್ತೆಯಾದರೇ ಇನ್ನೊಂದು ಜೀವ ಅದನ್ನು ಹೇಗೆ ಭರಿಸಬಹುದು ಎಂಬ ಲವಲೇಶ ಯೋಚನೆ ಏಕೆ ಬರುವುದಿಲ್ಲ? ಯಾವುದೇ ಒಂದು ಕಾರಣ ಅದು ಸುಳ್ಳಾದರೂ ಸರಿ, ಹೇಳಿದರೆ ಅದರ ಆಧಾರದ ಮೇಲೆ, ಕಟ್ಟಿಕೊಂಡ ಆಶಾ ಗೋಪುರವನ್ನಾದರೂ ಕೆಡವಬಹುದಲ್ಲವೇ? ಇಲ್ಲವಾದರೇ, ಆ ಗೋಪುರಕ್ಕೆ ಇನ್ಯಾವತ್ತೋ ಆ ವ್ಯಕ್ತಿ ಬರುತ್ತಾರೆ ಎಂದು ಎಷ್ಟು ದಿನ, ತಿಂಗಳು, ವರ್ಷ ಕಾಯುವುದು?

ಆದ್ದರಿಂದ, ನನಗನ್ನಿಸುವುದು ಇಷ್ಟೇ. . . . ಪ್ರೀತಿ ಮುಗಿದುಹೋಗಬಹುದು, ಅದ್ಯಾವ ಕಾರಣಕ್ಕಾದರೂ ಸರಿ! ಕಾರಣವ ಹೇಳಿ ತೊರೆಯಬೇಕು… ಅದು ಸುಳ್ಳಾದರೂ ಸರಿ… ಹೇಳಿ ಹೋಗು ಕಾರಣ! ! !