ಸಾಮಾಜಿಕ ಜಾಲತಾಣ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ

ಚಿತ್ರ ಕೃಪೆ: ಗೂಗಲ್

ಫೇಸ್‌ಬುಕ್‌, ಟ್ವಿಟ್ಟರ್‌, ಇನ್‌ಸ್ಟಾಗ್ರಾಮ್‌, ಯೂಟ್ಯೂಬ್‌, ವಿವಿಧ ಪಾಡ್‌ಕಾಸ್ಟ್‌ ಮಾಧ್ಯಮಗಳು ಮತ್ತು ಇತರೆ ಹತ್ತು ಹಲವಾರು ಸಾಮಾಜಿಕ ಜಾಲತಾಣಗಳು ಮತ್ತವುಗಳ ಬಳಕೆ ನಮ್ಮ ದಿನನಿತ್ಯ ಜೀವನದ ಭಾಗವಾಗಿ ಹೋಗಿದೆ. ಕೆಲವರಿಗೆ ಇವುಗಳೇ ಜೀವನವಾಗಿದೆ. ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಲೆಂದೇ ತೆಗೆದುಕೊಳ್ಳುವ ಸೆಲ್ಫಿಗಳು, ಜಾಲತಾಣಗಳಲ್ಲಿ ದಿನನಿತ್ಯದ ಚಟುವಟಿಕೆಗಳನ್ನು ತಿಳಿಸುವುದು, ಹೋದಲ್ಲಿ ಬಂದಲ್ಲಿ ಎಲ್ಲ ತರಹದ ಫೋಟೋ-ವಿಡಿಯೋಗಳನ್ನು ತೆಗೆದು ಅಪ್‌ಲೋಡ್‌ ಮಾಡುವುದು, ಅವುಗಳ ಲೈಕ್ಸ್‌, ಕಮೆಂಟ್ಸ್ ಇವುಗಳನ್ನು ನೋಡುತ್ತಾ ದಿನಪೂರ್ತಿ ಕಳೆಯುವುದು. ಅವರ ಅಂದಾಜಿನಂತೆ ಲೈಕ್ಸ್‌, ಕಾಮೆಂಟ್ಸ್‌ ಬರದೇ ಹೋದರೆ ಪೇಚಾಡುವುದು; ಖಿನ್ನತೆಗೆ ಜಾರುವಷ್ಟರ ಮಟ್ಟಿಗೆ ಈ ಜಾಲತಾಣದ ಗೀಳು ಕೆಲವರಿಗೆ (ಕೆಲವರಿಗೇ ಏನು, ಈಗೀಗ ಹಲವರಿಗೆ) ಇರುತ್ತದೆ.

ಕೆಲವರು ಅವರ ದಿನನಿತ್ಯದ ಮೂಡ್‌ಗಳನ್ನು ಕೂಡ ಹಾಕುತ್ತಾರೆ. “Today I am feeling low”; “I am feeling anxious” ಈ ತರಹದ ಹಲವಾರು ಮನಸ್ಸಿನ ಸ್ಥಿತಿಗತಿಗಳನ್ನು ಅಪಲೋಡ್‌ ಮಾಡುವುದರಿಂದ ಆಗುವ ಲಾಭವೇನು? ಒಂದಷ್ಟು ಲೈಕ್ಸ್‌ ಮತ್ತು ಕಮೆಂಟ್ಸ್‌- ಅದರಿಂದ ಸಮಸ್ಯೆಗಳಿದ್ದರೆ ಪರಿಹಾರವಾಗುವುದಿಲ್ಲ, ಹೀಗೆ ಜಾಲತಾಣಗಳ ವಿಚಿತ್ರ ಗುಂಗಿಗೇ ಒಳಗಾಗುವವರು ಹಲವಾರು. ಆನ್‌ಲೈನ್‌ ಸ್ನೇಹಿತರನ್ನು ಮಾಡಿಕೊಂಡು ಮೋಸ ಹೋಗುವವರಿದ್ದಾರೆ, ಆನ್‌ಲೈನ್‌ ಜಾಬ್‌ಗಳ ಮಾಹಿತಿಯನ್ನು ಸರಿಯಾಗಿ ಪರೀಕ್ಷಿಸದೇ ಒಪ್ಪಿಕೊಂಡು ಹಣ ಕಳೆದುಕೊಳ್ಳುವವರಿದ್ದಾರೆ, ಅದನ್ನು ಒಪ್ಪಿಕೊಂಡು ಬೇರೆ ದೇಶಗಳಿಗೆ ರವಾನೆಯಾಗಿ ಸಿಲುಕಬಾರದ ಸಂಕಷ್ಟಕ್ಕೆ ಸಿಲುಕುವವರಿದ್ದಾರೆ.

ಸ್ಮಾರ್ಟ್‌ ಫೋನ್‌ಗಳು ಈಗ ಸರಿಸುಮಾರು ಎಲ್ಲ ವರ್ಗದ ಜನರ ಬಳಿ ಇದ್ದರೂ ಸಹ, ಗಾಳಿ ಸುದ್ದಿಯೇ ಬಹುಬೇಗ ಜನರಿಗೆ ತಲುಪುತ್ತದೆಯೇ ಹೊರತು ನಿಜಾಂಶ, ಸತ್ಯ ಸಂಗತಿಗಳು ತಲುಪುವ ವೇಗ ವಿರಳ. ಇಷ್ಟೇ ಅಲ್ಲದೇ ಈ ಸುಳ್ಳು ಸುದ್ದಿಗಳನ್ನು ನಂಬುವಷ್ಟು ಕ್ಷಿಪ್ರವಾಗಿ ಸತ್ಯ ಸಂಗತಿಗಳನ್ನು ಜನ ನಂಬುವುದಿಲ್ಲ, ಅದೇಕೋ ತಿಳಿಯದು.

ಈಗ ನಾವು ಅಭಿವ್ಯಕ್ತಿ ಸ್ವಾತಂತ್ರ್ಯದ ವಿಷಯಕ್ಕೆ ಬರೋಣ. ನಮ್ಮ ದೇಶದ ಸಂವಿಧಾನ ನಮಗೆ ಒದಗಿಸಿರುವ ಮೂಲಭೂತ ಹಕ್ಕುಗಳಲ್ಲಿ ಇದೊಂದು. ಇದು ನಿಮಗೆ ಏನು ಬೇಕಾದರೂ ಮಾತನಾಡುವ ಸ್ವೇಚ್ಛೆಯನ್ನು ನೀಡುವುದಿಲ್ಲ (ನಾನು ಇಲ್ಲಿ ಸ್ವಾತಂತ್ರ್ಯ ಎಂಬ ಪದದ ಬದಲು ʼಸ್ವೇಚ್ಛೆʼ ಪದವನ್ನು ಬಳಸಿದುದನ್ನು ಗಮನಿಸಬೇಕು). ಸ್ವಾತಂತ್ರ್ಯವು ಯಾವತ್ತೂ ಕೂಡ ಕೆಲವೊಂದು ನಿಯಮ ಮತ್ತು ಕಟ್ಟಳೆಗಳೊಂದಿಗೆಯೇ ಪ್ರಜೆಗಳಿಗೆ ಲಭ್ಯವಿದೆಯೇ ಹೊರತು, ನಿಯಮ-ಕಟ್ಟಳೆಗಳನ್ನು ತೆಗೆದರೆ ಅದು ಸ್ವೇಚ್ಛಾಚಾರವಾಗುತ್ತದೆಯೇ ವಿನಹ ಸ್ವಾತಂತ್ರ್ಯವಲ್ಲ. Freedom of speech and expression is not absolute.

ನಿಮ್ಮ ಸಾಮಾಜಿಕ ಜಾಲತಾಣಗಳಲ್ಲಿ ನೀವು ನಿಮ್ಮ ಗೋಡೆ/ಭಿತ್ತಿಯ ಮೇಲೆ ಬರೆಯುವ ಪ್ರತಿಯೊಂದು ಬರಹವೂ ಕೂಡ ಇನ್ನೊಬ್ಬರನ್ನು ನಿಂದಿಸುವಂತೆ ಅಥವಾ ಕೆಣಕುವಂತಿರಬಾರದು, ರಾಷ್ಟ್ರದ ಹಿತಾಸಕ್ತಿಗೆ ಧಕ್ಕೆತರುವಂತಿರಬಾರದು, ದೇಶದ ಸುರಕ್ಷತೆಯನ್ನು ಅಪಾಯಕ್ಕೆ ಸಿಲುಕಿಸುವಂತಿರಬಾರದು, ಸಮಾಜದ ಸಾಮರಸ್ಯವನ್ನು ಹದಗೆಡಿಸುವಂತಿರಬಾರದು, ಬೇರೆಯವರ ಮಾನಹಾನಿಯಾಗುವಂತಿರಬಾರದು, ಒಬ್ಬ ನಿರ್ದಿಷ್ಟ ವ್ಯಕ್ತಿಗೆ ಅಗೌರವ ಸೂಚಿಸುವಂತಿರಬಾರದು, ಧರ್ಮ-ಜಾತಿಗಳನ್ನು ಹೀಯಾಳಿಸುವಂತಿರಬಾರದು ಹೀಗೆ ಹತ್ತು ಹಲವು, ಪಟ್ಟಿ ಮಾಡಿದಷ್ಟೂ ಬೆಳೆಯುತ್ತಲೇ ಹೋಗುತ್ತದೆ. ಈ ಎಲ್ಲ ʼಎಲ್ಲೆʼಯೊಳಗೆ ನಿಮ್ಮ ಬರಹವಿರಬೇಕು ಎನ್ನುವುದು ಒಂದು ಆಶಯ. ಆದರೆ, ಹಲವಾರು ನಿಯಮಗಳ ಉಲ್ಲಂಘನೆಗಳಾಗುತ್ತಿದೆ, ನಾವದನ್ನು ಪ್ರತಿನಿತ್ಯ ನೋಡುತ್ತಿದ್ದೇವೆ.

ಈಗ ಹೊಸತಾಗಿ ಟ್ವಿಟರ್‌ನ ಒಂದು ತಗಾದೆ ಎದ್ದಿದೆ. ಇದರ ಕುರಿತು ಮಾತನಾಡುವ ಮುನ್ನ ಭಾರತ ಸರ್ಕಾರದ ಹೊಸ ನಿಯಮಾವಳಿಗಳ ಸ್ಥೂಲ ಪರಿಚಯ ಮಾಡಿಕೊಳ್ಳೋಣ. “The information Technology (IT) Rules, 2021”. ಇದನ್ನು ಕನ್ನಡದಲ್ಲಿ “ಮಾಹಿತಿ ತಂತ್ರಜ್ಞಾನದ ನಿಯಮಗಳು, 2021” ಎಂದು ಕರೆಯಬಹುದು. ಈ ಹೊಸ ನಿಯಮಾವಳಿಗಳು, ಜನಸಾಮಾನ್ಯರಿಗೆ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ರೂಪುಗೊಂಡತಹವುಗಳು. ಸಾಮಾಜಿಕ ಜಾಲತಾಣಗಳು ಮತ್ತು ಒ.ಟಿ.ಟಿ (ನೆಟ್‌ಫ್ಲಿಕ್ಸ್‌, ಅಮೆಝಾನ್‌ ಪ್ರೈಮ್‌, ಝೀ5 ಇತರೆ ಆನ್‌ಲೈನ್‌ ವಿಡಿಯೋ ವೀಕ್ಷಣೆಗೆಂದೇ ಲಭ್ಯವಿರುವ ವೇದಿಕೆಗಳು) ವೇದಿಕೆಗಳಲ್ಲಿ ಜನರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕೆಲವೊಂದು ನಿಯಮಗಳನ್ನು ಸೇರ್ಪಡೆಗೊಳಿಸಲಾಗಿದೆ. ಬದಲಾಗುತ್ತಿರುವ ಅಂತರ್ಜಾಲದ ಉಪಯೋಗಗಳನ್ವಯ ನಿಯಮಾವಳಿಗಳನ್ನು ಬದಲಾಯಿಸುವುದು ಯಾವುದೇ ಜವಾಬ್ದಾರಿಯುತ ಸರ್ಕಾರದ ಕರ್ತವ್ಯವಾಗಿದೆ. ಈ ನಿಯಮಗಳನ್ವಯ ಪ್ರತಿಯೊಂದು ಸಾಮಾಜಿಕ ಜಾಲತಾಣಗಳಲ್ಲಿಯೂ ಸಹ ಮೂರು ಹಂತದ Grievance redressal mechanism ಇರಬೇಕು ಅದಕ್ಕಾಗಿ ಒಬ್ಬ officer (ಕುಂದು ಕೊರತೆಗಳ ನಿರ್ವಹಣಾಧಿಕಾರಿ) ಅನ್ನು ನೇಮಿಸತಕ್ಕದ್ದು ಮತ್ತು ಅವರು ಭಾರತದಲ್ಲಿ ವಾಸವಿರಬೇಕು. ಮಹಿಳೆ ಮತ್ತು ಮಕ್ಕಳ ಲೈಂಗಿಕ ಶೋಷಣೆಯ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳು, ಸುಳ್ಳು ಸುದ್ದಿಗಳು ಪ್ರಸಾರವಾಗದಂತೆ ತಡೆಯಲು ಮತ್ತು ಅವುಗಳನ್ನು ಪತ್ತೆಹಚ್ಚಲು ಕೆಲವು ಮಾನದಂಡಗಳನ್ನು ಈ ಹೊಸ ನಿಯಮಾವಳಿಗಳು ವಿಧಿಸಿವೆ.

ಪ್ರತಿಯೊಂದು ಜಾಲತಾಣವೂ ಸಹ ಅದು ವಾಟ್ಸಾಪ್‌ ಇರಬಹುದು, ಫೇಸ್‌ಬುಕ್‌, ಇನ್ಸ್‌ಟಾಗ್ರಾಂ, ಯೂಟ್ಯೂಬ್‌, ಟ್ವಿಟ್ಟರ್‌, ಟೆಲಿಗ್ರಾಂ ಇತರೆ ಎಲ್ಲವೂ ಕೂಡ ಈ ನಿಯಮಗಳನ್ನು ಕಡ್ಡಾಯವಾಗಿ 3 ತಿಂಗಳುಗಳ ಒಳಗೆ ಪಾಲಿಸಬೇಕು ಮತ್ತು ಪಾಲನಾವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು. ʼಮೆಟಾ ಡೇಟಾʼ ವನ್ನು ಸರ್ಕಾರವು ಬಯಸಿದಾಗ ಈ ಕಂಪನಿಗಳು ಒದಗಿಸಲೇಬೇಕು. ಮೆಟಾಡೇಟಾ ಎಂದರೆ, ಯಾವ ಮೊಬೈಲ್‌ ನಂಬರ್‌ನಿಂದ ಪ್ರಸ್ತುತ ಸಂದೇಶ ರವಾನೆಯಾಗಿದೆ, ಕಳುಹಿಸಿದ ಸಮಯ ಯಾವುದು, ಯಾವ ಮೊಬೈಲ್‌ ಸೆಟ್‌ಅನ್ನು ಬಳಸಲಾಗಿದೆ, ಯಾವ ಸ್ಥಳದಿಂದ ಸಂದೇಶ ಕಳುಹಿಸಿದೆ ಇತರೆ ಹತ್ತು ಹಲವು ಮಾಹಿತಿಯನ್ನು ಸರ್ಕಾರಕ್ಕೆ ಅವಶ್ಯವಿರುವಾಗ ನೀಡಬೇಕಾಗುತ್ತದೆ.

ಈ ನಿಯಮಕ್ಕೆ ಟ್ವಿಟ್ಟರ್‌ನ ತಗಾದೆಯಿದೆ. ಅದೇನೆಂದರೆ, ಅದು ಈ ಮೇಲಿನ ಮೆಟಾಡೇಟಾವನ್ನು ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬಾರದಿದ್ದ ಪಕ್ಷದಲ್ಲಿ ಸರ್ಕಾರಕ್ಕೆ ಮಾಹಿತಿಯನ್ನು ಒದಗಿಸುತ್ತದೆ ಇಲ್ಲವಾದರೆ ಇಲ್ಲ ಎಂದು. ಯಾವುದು ಸ್ವಾತಂತ್ರ್ಯ ಮತ್ತು ಯಾವುದು ಸ್ವೇಚ್ಛೆ ಎಂದು ನಿರ್ಧರಿಸುವುದು ಒಂದು ದೇಶದ ಶಾಸಕಾಂಗ ಮತ್ತು ನ್ಯಾಯಾಂಗದ ಕೆಲಸವೇ ಹೊರತು ಟ್ವಿಟ್ಟರ್‌ನದಲ್ಲ. ಒಂದು ಬಗೆಯ ಸಾಮಾಜಿಕ ಜಾಲತಾಣ ರಾಷ್ಟ್ರೀಯತೆ (social media nationalism) ಯನ್ನು ಸೃಷ್ಟಿಸಲು ಟ್ವಿಟ್ಟರ್‌ ಹೊರಟಿರುವುದು ಅಪರಾಧ ಮತ್ತು ಕಾನೂನು ಬಾಹಿರ. ಭಾರತದ ಐಕ್ಯತೆ ಮತ್ತು ಸಮಗ್ರತೆಯ ದೃಷ್ಟಿಯಿಂದ ರಾಷ್ಟ್ರೀಯ ನೀತಿಗಳನ್ನು ಪಾಲಿಸಲೇ ಬೇಕು ಇಲ್ಲವಾದರೆ ಭಾರತದ ಭೌಗೋಳಿಕ ಗಡಿಯನ್ನು ಬಿಟ್ಟುಹೊರಡಬೇಕಾಗುತ್ತದೆ. “ಸಾಮಾಜಿಕ ಜಾಲತಾಣದ ಸಾರ್ವಭೌಮತೆ” ಎಂಬುದು ವಿತಂಡವಾದ ಮತ್ತದು ಸಾಧ್ಯವಾಗದು.

ಈ ಮೇಲಿನ ಎಲ್ಲ ಅಂಶಗಳನ್ನು ಪ್ರತಿಯೊಬ್ಬರು ತಿಳಿದುಕೊಂಡು ಪ್ರಜ್ಞಾವಂತ ಸಾಮಾಜಿಕ ಜಾಲತಾಣ ಬಳಕೆದಾರರಾಗೋಣ, ದ್ವೇಷವನ್ನು ಬಿತ್ತುವಂತಹ, ಸಮಾಜದ ಮತ್ತು ದೇಶದ ಸಾಮರಸ್ಯವನ್ನು ಕದಡುವಂತಹ ಹುನ್ನಾರಗಳಿಗೆ ನೀರೆರೆಯದಿರೋಣ. ಸುದೃಢ ರಾಷ್ಟ್ರ ನಿರ್ಮಾಣಕ್ಕೆ ಬೆಂಬಲವಾಗಿ ನಿಲ್ಲೋಣ ಎನ್ನುವ ಆಶಯದೊಂದಿಗೆ…….

ಲೇಖನವನ್ನು ಓದಿ – ಹರಸಿ ಹಾರೈಸಿ, ಇಷ್ಟವಾದರೆ ಪಸರಿಸಿ…….

-ಮನುʼಪ್ರಿಯʼ