ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ!!!

I'd be lying if i say i am like my father'- The New Indian Express
ಅಪ್ಪು

ಭೂಮಿಯ ಋಣ ಮುಗಿಯುತ್ತಲೂ ಎಲ್ಲರೂ ಹೊರಡಬೇಕು. ಯಾರು ಎಷ್ಟೇ ಧನವಂತರಾಗಿದ್ದರೂ, ಸಿರಿವಂತರಾಗಿದ್ದರೂ, ಪ್ರಸಿದ್ಧರಾಗಿದ್ದರೂ, ಸರಳ-ಸಜ್ಜನಿಕೆಯ ವ್ಯಕ್ತಿಯಾಗಿದ್ದರೂ ಆ ವಿಧಿ ಬಿಡುವುದಿಲ್ಲ. ಯಾರ ಪುಣ್ಯದ ಮೂಟೆ ಯಾವಾಗ ಖರ್ಚಾಗುತ್ತೋ ಅಥವಾ ಖರ್ಚಾಗದೇ ಇದ್ದು, ಅದು ನನ್ನ ಖಾತೆಗೇ ಜಮೆ ಆಗಲಿ ಅಂತ ಆ ದೇವರು ತುಂಬಿದ ಕೊಡವನ್ನೇ ಕೊಂಡೊಯ್ಯುತ್ತಾನೋ? ಒಂದೂ ಗೊತ್ತಿಲ್ಲ.

ಪುನೀತ್‌ ರಾಜ್‌ಕುಮಾರ್-, ಅಲ್ಲ, ಅಪ್ಪು ಅಂದರೇನೆ ಚಂದ. ಚಿಕ್ಕಂದಿನಿಂದಲೂ ನನಗಿಷ್ಟದ ಬಾಲನಟ, ನಟ, ಕ್ರಶ್‌ ಎಲ್ಲವೂ ಆಗಿದ್ದರು. ʼಭಾಗ್ಯವಂತʼ ಚಿತ್ರದ ಚಿಕ್ಕ ಮಗು ಪಡುವ ಕಷ್ಟ ನೋಡಿದರೆ ನಮ್ಮ ಮನೆಯ ಮಗುವೇ ಕಷ್ಟಪಡುತ್ತಿದೆಯೇನೋ ಎಂದು ಹೃದಯ ಉಕ್ಕಿ ಬರುತ್ತಿತ್ತು. ʼಬೆಟ್ಟದ ಹೂವುʼ ಚಿತ್ರದ ಹುಡುಗ ರಾಮಾಯಣದ ಪುಸ್ತಕ ಕೊಂಡುಕೊಳ್ಳಲು ಪಡುವ ಕಷ್ಟ ನೋಡಿದರೆ ನಾನೇ ಥಟ್‌ ಅಂತ ಪುಸ್ತಕ ತೆಗೆದುಕೊಟ್ಟುಬಿಡಬಾರದಿತ್ತೇ ಎಂದು ಒಂದೇ ಸಮ ಮನಸ್ಸು ಪರಿತಪಿಸುತ್ತಿತ್ತು. ಇಷ್ಟೊಂದು ಚಂದವಾಗಿ ಬೆಳೆದ ಹುಡುಗ, ʼಅಪ್ಪುʼ ಎಂಬ ಚಿತ್ರದ ಮೂಲಕ ನಟನಾಗಿ ನಮ್ಮೆದುರಿಗೆ ಬಂದಾಗ ಅಬ್ಬ ಇಂತಹ ಒಬ್ಬ ʼಬಾಯ್‌ಫ್ರೆಂಡ್‌ ಇದ್ದಿದ್ದರೆʼ ಅಂತ ಅನ್ನಿಸದೇ ಇರಲಿಲ್ಲ.

ಅಪ್ಪುವಿನ ಪ್ರತಿಯೊಂದು ಸಿನಿಮಾವನ್ನು ಕಾತರದಿಂದ ಎದುರು ನೋಡಿ ಸಿನಿಮಾ ಮಂದಿರಕ್ಕೇ ಹೋಗಿ ನೋಡಿಬರುತ್ತಿದ್ದೆ. ಮನೆ ಮಂದಿಯೆಲ್ಲ ಕುಳಿತು ನೋಡಬಹುದಾದ ಚಲನಚಿತ್ರಗಳು. ಎಲ್ಲೂ ಅಶ್ಲೀಲ, ಅಸಹ್ಯ ಎನಿಸುತ್ತಿರಲಿಲ್ಲ. ಅಪ್ಪನ ರೀತಿಯೇ ಮಗನ ಸಿನಿಮಾಗಳೂ ಕೂಡ. ಯಾವಾಗಲೂ ಬೀದಿ ಬೀದಿಗಳಲ್ಲಿ ಅಪ್ಪುವಿನ ಸಿನಿಮಾದ ಕಟೌಟ್‌ಗಳು ರಾರಾಜಿಸುತ್ತಿದ್ದುದ್ದನ್ನು ಮಾತ್ರ ನೋಡಿದ ನನಗೆ ಈ ದಿನ ಸಂಜೆ ಕಛೇರಿಯಿಂದ ಬರುತ್ತಾ ಎಲ್ಲೆಡೆ ಅಪ್ಪುವಿನ ದೊಡ್ಡ ಭಾವಚಿತ್ರ ಮತ್ತು ಅದಕ್ಕೆ ʼಭಾವಪೂರ್ಣ ಶ್ರದ್ಧಾಂಜಲಿʼ ಎಂಬ ಅಡಿಬರಹ ನೋಡಿ ಮನಸ್ಸಿಗೆ ತುಂಬಾ ಕಸಿವಿಸಿಯಾಯಿತು. ದೇವರು ಎಷ್ಟು ಕ್ರೂರಿ ಎಂದು ಒಂದು ಸಲ ಕೋಪ ಬಂದು ಬಿಟ್ಟಿತ್ತು. ನನ್ನ ದ್ವಿಚಕ್ರವಾಹನವನ್ನು ನಡೆಸುತ್ತಲೇ ಕಣ್ಣುಗಳು ತೇವವಾಗಿದ್ದವು, ಮನಸ್ಸು ಬಾಡಿಹೋಗಿತ್ತು.

ಬಾನ ದಾರಿಯಲ್ಲಿ ಸೂರ್ಯ ನಿಜಕ್ಕೂ ಜಾರಿ ಹೋಗಿದ್ದ. ಅರಗಿಸಿಕೊಳ್ಳಲಾಗುತ್ತಿಲ್ಲ. ವರನಟ ರಾಜ್‌ಕುಮಾರ್‌ರವರಂತೆ ಸರಳ, ಸಜ್ಜನಿಕೆಯ ಶ್ರೇಷ್ಠ ವ್ಯಕ್ತಿ ನಮ್ಮ ನಡುವೆ ಇಲ್ಲವಾದರು. ಆ ದೇವರಿಗೆ ತುಂಬಾ ಹೊಟ್ಟೆಕಿಚ್ಚು ಅನಿಸುತ್ತೆ. ಏನಾದರೂ ಹೊಸತನ್ನು ಮಾಡಲೇಬೇಕು ಎಂದು ಸದಾ ಕನಸು ಕಾಣುವ ಕಣ್ಣುಗಳನ್ನು ಚಿರನಿದ್ರೆಗೆ ಜಾರಿಸಿಬಿಡುತ್ತಾನೆ. ಶಂಕರ್‌ನಾಗ್‌ರವರ ಹಾಗೆ ಅನನ್ಯ ಕನಸುಗಳನ್ನು ಹೊತ್ತು ಕನ್ನಡ ಚಿತ್ರರಂಗದಲ್ಲಿ ಅವರದೇ ಪ್ರೊಡಕ್ಷನ್‌ ಹೌಸ್‌ ಮೂಲಕ ಹೊಸ ಹೊಸ ಪ್ರತಿಭೆಗಳನ್ನು ಪರಿಚಯಿಸುವ ಮೂಲಕ ಜನಜನಿತವಾಗಿದ್ದ ಪುನೀತ್‌ರನ್ನು ಬೇಗ ಕರೆಸಿಕೊಳ್ಳುವ ಆಸೆಯಾಗಿರಬೇಕು. ಆದರೆ, ಹೀಗೆ ಹಠಾತ್ತನೆ ಕರೆದುಕೊಂಡುಬಿಟ್ಟರೆ ಮನೆಯವರು, ಅಭಿಮಾನಿಗಳು ಅರಗಿಸಿಕೊಳ್ಳುವುದು ಹೇಗೆ? ಹಾಸಿಗೆ ಹಿಡಿದು ವ್ಯಕ್ತಿ ಮಲಗಿದ್ದರೆ ಒಂದು ರೀತಿಯ ಮಾನಸಿಕ ತಯಾರಿ ಮಾಡಿಕೊಳ್ಳಬಹುದಿತ್ತೇನೋ (ಅದು ಕಷ್ಟವೇ, ಆದರೂ…), ಇನ್ನೂ ವಯೋಮಾನ ಸಹಜ ಕಾಯಿಲೆಗಳಾಗಿದ್ದರೆ ಹೇಗೋ ಸರಿ ಎಂದುಕೊಳ್ಳಬಹುದಿತ್ತೇನೋ? ಆದರೆ, 46 ವರ್ಷ, ಕೇವಲ 46ವರ್ಷದ ತನ್ನ ವೃತ್ತಿ ಜೀವನದ ವಿಜಯದ ಉತ್ತುಂಗದ ಶಿಖರದಲ್ಲಿರುವ ವ್ಯಕ್ತಿ, ಇನ್ನೂ ಬಹಳಷ್ಟು ಜೀವನವನ್ನು ಕಾಣಬೇಕಿರುವ ವ್ಯಕ್ತಿ ಹೀಗೆ ಒಮ್ಮಿಂದೊಮ್ಮೆ ಹೊರಟುಬಿಟ್ಟರೆ ಮನಸ್ಸು ಸಹಿಸುತ್ತಿಲ್ಲ.

ಬಾಲ ನಟನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ನಾಲ್ಕು ದಶಕಗಳ ಅವರ ಪಯಣ ಆ ದೇವರಿಗೆ ಸುದೀರ್ಘ ಎನಿಸಿಬಿಟ್ಟಿತೇ? ಒಂದು ದಿನವೂ ಮಾಡಿದ ಉಪಕಾರವನ್ನು ಬೇರೆಯವರಿಗೆ, ಪ್ರಚಾರಕ್ಕಾಗಿ ಹೇಳಿಕೊಳ್ಳಲಿಲ್ಲ. ಬಲಗೈಯಲ್ಲಿ ಮಾಡಿದ ಸಹಾಯ ಎಡಗೈಗೂ ಸಹ ತಿಳಿಯುತ್ತಿರಲಿಲ್ಲ. ಈಗ ಅವರ ನಿಧನಾನಂತರ ಹೊರ ಬರುತ್ತಿರುವ ಸುದ್ದಿಗಳು ಸಮಾಜಕ್ಕೆ ಅವರು ಪ್ರತಿಯಾಗಿ ಏನೆಲ್ಲಾ ಮಾಡಿದರು ಎಂಬುದು ಗೊತ್ತಾಗುತ್ತಲಿದೆ. 26 ಅನಾಥಾಶ್ರಮ, 45 ಉಚಿತ ಶಾಲೆ, 16 ವೃದ್ಧಾಶ್ರಮಗಳು, 19 ಗೋಶಾಲೆಗಳು, 1800 ಮಕ್ಕಳ ಸಂಪೂರ್ಣ ಶಿಕ್ಷಣ, ಶಕ್ತಿ ಧಾಮ ಎಂಬ ಹೆಸರಿನಲ್ಲಿ ಮೈಸೂರಿನಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ವ್ಯವಸ್ಥೆ, ಈಗ ಕಣ್ಣುಗಳ ದಾನ… ಅಬ್ಬಾ ಎಷ್ಟೆಲ್ಲಾ.. ಒಬ್ಬ ವ್ಯಕ್ತಿಯ ಆಶ್ರಯದಲ್ಲಿದ್ದ ಇಷ್ಟೊಂದು ಸಂಸ್ಥೆಗಳು….

ಕನ್ನಡ ಚಿತ್ರರಂಗಕ್ಕೆ ಬಹುದೊಡ್ಡ ನಷ್ಟ. ‘ನಷ್ಟ’ ಎನ್ನುವುದು ತುಂಬಾ ಚಿಕ್ಕ ಪದವಾಯಿತು ಎನಿಸುತ್ತೆ. ತುಂಬಾ ಮಿಸ್‌ ಮಾಡ್ತೆವೆ ಅಪ್ಪು ನಿಮ್ಮನ್ನ. ಮತ್ತೊಮ್ಮೆ ಕರುನಾಡಲ್ಲಿ ಹುಟ್ಟಿಬನ್ನಿ ಅಂತ ಮಾತ್ರ ಹೇಳಬಲ್ಲೆ…..ಇವರ ಉದಾತ್ತ ಚಿಂತನೆ, ವ್ಯಕ್ತಿತ್ವವನ್ನು ಕಂಡ ಸಾವು ಕೂಡ ‘ನಾನು ಕೂಡ ಅಪ್ಪುವನ್ನು ಅಪ್ಪಿ ನೋಡಿಬಿಡಲೇ’ ಎಂದುಕೊಂಡಿತೇನೋ?

ನಿಮ್ಮ ನಗುಮುಖ ನಮ್ಮೊಂದಿಗೆ ಸದಾ ಇರುತ್ತದೆ, ನಮ್ಮ ಮನಸ್ಸಿನಲ್ಲಿ ನೀವು ಸದಾ ಇರುತ್ತೀರಿ. . . .

ಹುಟ್ಟುವಾಗ ದೊಡ್ಡವರು, ಚಿಕ್ಕವರು ಎಂಬ ಭೇದ… ಸಾವಿಗೆಲ್ಲಿದೆ ಭೇದ…? ಯಾರಾದರೂ ಸಾಯಬಹುದು, ಯಾವಾಗಲಾದರೂ… ಎಲ್ಲಿಯಾದರೂ ಸಾಯಬಹುದು… ಒಬ್ಬರು ಮುಂದೆ, ಮತ್ತೊಬ್ಬರು ಹಿಂದೆ ಅಷ್ಟೆ.

ಬೇಂದ್ರೆ ಅವರು ಹೇಳಿದಂತೆ “ಸಾವಿಗೆ ನಾ ಅಂಜುವುದಿಲ್ಲ, ಯಾಕಂದ್ರ ನಾ ಇರೋವರಿಗೂ ಅದು ನನ್ನ ಹತ್ರ ಬರೋದಿಲ್ಲ, ಅದು ಬಂದಾಗ ನಾ ಇರೋದಿಲ್ಲ”… ಹೌದು, ಈಗ ಅಪ್ಪು ಇಲ್ಲ. ಆದರೆ, ಅವರ ನೆನಪು ಅಜರಾಮರ.

ಅಂತಿಮ ವಿದಾಯ ಪವರ್‌ ಸ್ಟಾರ್.‌ . . . .

ಹೋಗಿ ಬನ್ನಿ. . . . .