ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ!!!

I'd be lying if i say i am like my father'- The New Indian Express
ಅಪ್ಪು

ಭೂಮಿಯ ಋಣ ಮುಗಿಯುತ್ತಲೂ ಎಲ್ಲರೂ ಹೊರಡಬೇಕು. ಯಾರು ಎಷ್ಟೇ ಧನವಂತರಾಗಿದ್ದರೂ, ಸಿರಿವಂತರಾಗಿದ್ದರೂ, ಪ್ರಸಿದ್ಧರಾಗಿದ್ದರೂ, ಸರಳ-ಸಜ್ಜನಿಕೆಯ ವ್ಯಕ್ತಿಯಾಗಿದ್ದರೂ ಆ ವಿಧಿ ಬಿಡುವುದಿಲ್ಲ. ಯಾರ ಪುಣ್ಯದ ಮೂಟೆ ಯಾವಾಗ ಖರ್ಚಾಗುತ್ತೋ ಅಥವಾ ಖರ್ಚಾಗದೇ ಇದ್ದು, ಅದು ನನ್ನ ಖಾತೆಗೇ ಜಮೆ ಆಗಲಿ ಅಂತ ಆ ದೇವರು ತುಂಬಿದ ಕೊಡವನ್ನೇ ಕೊಂಡೊಯ್ಯುತ್ತಾನೋ? ಒಂದೂ ಗೊತ್ತಿಲ್ಲ.

ಪುನೀತ್‌ ರಾಜ್‌ಕುಮಾರ್-, ಅಲ್ಲ, ಅಪ್ಪು ಅಂದರೇನೆ ಚಂದ. ಚಿಕ್ಕಂದಿನಿಂದಲೂ ನನಗಿಷ್ಟದ ಬಾಲನಟ, ನಟ, ಕ್ರಶ್‌ ಎಲ್ಲವೂ ಆಗಿದ್ದರು. ʼಭಾಗ್ಯವಂತʼ ಚಿತ್ರದ ಚಿಕ್ಕ ಮಗು ಪಡುವ ಕಷ್ಟ ನೋಡಿದರೆ ನಮ್ಮ ಮನೆಯ ಮಗುವೇ ಕಷ್ಟಪಡುತ್ತಿದೆಯೇನೋ ಎಂದು ಹೃದಯ ಉಕ್ಕಿ ಬರುತ್ತಿತ್ತು. ʼಬೆಟ್ಟದ ಹೂವುʼ ಚಿತ್ರದ ಹುಡುಗ ರಾಮಾಯಣದ ಪುಸ್ತಕ ಕೊಂಡುಕೊಳ್ಳಲು ಪಡುವ ಕಷ್ಟ ನೋಡಿದರೆ ನಾನೇ ಥಟ್‌ ಅಂತ ಪುಸ್ತಕ ತೆಗೆದುಕೊಟ್ಟುಬಿಡಬಾರದಿತ್ತೇ ಎಂದು ಒಂದೇ ಸಮ ಮನಸ್ಸು ಪರಿತಪಿಸುತ್ತಿತ್ತು. ಇಷ್ಟೊಂದು ಚಂದವಾಗಿ ಬೆಳೆದ ಹುಡುಗ, ʼಅಪ್ಪುʼ ಎಂಬ ಚಿತ್ರದ ಮೂಲಕ ನಟನಾಗಿ ನಮ್ಮೆದುರಿಗೆ ಬಂದಾಗ ಅಬ್ಬ ಇಂತಹ ಒಬ್ಬ ʼಬಾಯ್‌ಫ್ರೆಂಡ್‌ ಇದ್ದಿದ್ದರೆʼ ಅಂತ ಅನ್ನಿಸದೇ ಇರಲಿಲ್ಲ.

ಅಪ್ಪುವಿನ ಪ್ರತಿಯೊಂದು ಸಿನಿಮಾವನ್ನು ಕಾತರದಿಂದ ಎದುರು ನೋಡಿ ಸಿನಿಮಾ ಮಂದಿರಕ್ಕೇ ಹೋಗಿ ನೋಡಿಬರುತ್ತಿದ್ದೆ. ಮನೆ ಮಂದಿಯೆಲ್ಲ ಕುಳಿತು ನೋಡಬಹುದಾದ ಚಲನಚಿತ್ರಗಳು. ಎಲ್ಲೂ ಅಶ್ಲೀಲ, ಅಸಹ್ಯ ಎನಿಸುತ್ತಿರಲಿಲ್ಲ. ಅಪ್ಪನ ರೀತಿಯೇ ಮಗನ ಸಿನಿಮಾಗಳೂ ಕೂಡ. ಯಾವಾಗಲೂ ಬೀದಿ ಬೀದಿಗಳಲ್ಲಿ ಅಪ್ಪುವಿನ ಸಿನಿಮಾದ ಕಟೌಟ್‌ಗಳು ರಾರಾಜಿಸುತ್ತಿದ್ದುದ್ದನ್ನು ಮಾತ್ರ ನೋಡಿದ ನನಗೆ ಈ ದಿನ ಸಂಜೆ ಕಛೇರಿಯಿಂದ ಬರುತ್ತಾ ಎಲ್ಲೆಡೆ ಅಪ್ಪುವಿನ ದೊಡ್ಡ ಭಾವಚಿತ್ರ ಮತ್ತು ಅದಕ್ಕೆ ʼಭಾವಪೂರ್ಣ ಶ್ರದ್ಧಾಂಜಲಿʼ ಎಂಬ ಅಡಿಬರಹ ನೋಡಿ ಮನಸ್ಸಿಗೆ ತುಂಬಾ ಕಸಿವಿಸಿಯಾಯಿತು. ದೇವರು ಎಷ್ಟು ಕ್ರೂರಿ ಎಂದು ಒಂದು ಸಲ ಕೋಪ ಬಂದು ಬಿಟ್ಟಿತ್ತು. ನನ್ನ ದ್ವಿಚಕ್ರವಾಹನವನ್ನು ನಡೆಸುತ್ತಲೇ ಕಣ್ಣುಗಳು ತೇವವಾಗಿದ್ದವು, ಮನಸ್ಸು ಬಾಡಿಹೋಗಿತ್ತು.

ಬಾನ ದಾರಿಯಲ್ಲಿ ಸೂರ್ಯ ನಿಜಕ್ಕೂ ಜಾರಿ ಹೋಗಿದ್ದ. ಅರಗಿಸಿಕೊಳ್ಳಲಾಗುತ್ತಿಲ್ಲ. ವರನಟ ರಾಜ್‌ಕುಮಾರ್‌ರವರಂತೆ ಸರಳ, ಸಜ್ಜನಿಕೆಯ ಶ್ರೇಷ್ಠ ವ್ಯಕ್ತಿ ನಮ್ಮ ನಡುವೆ ಇಲ್ಲವಾದರು. ಆ ದೇವರಿಗೆ ತುಂಬಾ ಹೊಟ್ಟೆಕಿಚ್ಚು ಅನಿಸುತ್ತೆ. ಏನಾದರೂ ಹೊಸತನ್ನು ಮಾಡಲೇಬೇಕು ಎಂದು ಸದಾ ಕನಸು ಕಾಣುವ ಕಣ್ಣುಗಳನ್ನು ಚಿರನಿದ್ರೆಗೆ ಜಾರಿಸಿಬಿಡುತ್ತಾನೆ. ಶಂಕರ್‌ನಾಗ್‌ರವರ ಹಾಗೆ ಅನನ್ಯ ಕನಸುಗಳನ್ನು ಹೊತ್ತು ಕನ್ನಡ ಚಿತ್ರರಂಗದಲ್ಲಿ ಅವರದೇ ಪ್ರೊಡಕ್ಷನ್‌ ಹೌಸ್‌ ಮೂಲಕ ಹೊಸ ಹೊಸ ಪ್ರತಿಭೆಗಳನ್ನು ಪರಿಚಯಿಸುವ ಮೂಲಕ ಜನಜನಿತವಾಗಿದ್ದ ಪುನೀತ್‌ರನ್ನು ಬೇಗ ಕರೆಸಿಕೊಳ್ಳುವ ಆಸೆಯಾಗಿರಬೇಕು. ಆದರೆ, ಹೀಗೆ ಹಠಾತ್ತನೆ ಕರೆದುಕೊಂಡುಬಿಟ್ಟರೆ ಮನೆಯವರು, ಅಭಿಮಾನಿಗಳು ಅರಗಿಸಿಕೊಳ್ಳುವುದು ಹೇಗೆ? ಹಾಸಿಗೆ ಹಿಡಿದು ವ್ಯಕ್ತಿ ಮಲಗಿದ್ದರೆ ಒಂದು ರೀತಿಯ ಮಾನಸಿಕ ತಯಾರಿ ಮಾಡಿಕೊಳ್ಳಬಹುದಿತ್ತೇನೋ (ಅದು ಕಷ್ಟವೇ, ಆದರೂ…), ಇನ್ನೂ ವಯೋಮಾನ ಸಹಜ ಕಾಯಿಲೆಗಳಾಗಿದ್ದರೆ ಹೇಗೋ ಸರಿ ಎಂದುಕೊಳ್ಳಬಹುದಿತ್ತೇನೋ? ಆದರೆ, 46 ವರ್ಷ, ಕೇವಲ 46ವರ್ಷದ ತನ್ನ ವೃತ್ತಿ ಜೀವನದ ವಿಜಯದ ಉತ್ತುಂಗದ ಶಿಖರದಲ್ಲಿರುವ ವ್ಯಕ್ತಿ, ಇನ್ನೂ ಬಹಳಷ್ಟು ಜೀವನವನ್ನು ಕಾಣಬೇಕಿರುವ ವ್ಯಕ್ತಿ ಹೀಗೆ ಒಮ್ಮಿಂದೊಮ್ಮೆ ಹೊರಟುಬಿಟ್ಟರೆ ಮನಸ್ಸು ಸಹಿಸುತ್ತಿಲ್ಲ.

ಬಾಲ ನಟನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ನಾಲ್ಕು ದಶಕಗಳ ಅವರ ಪಯಣ ಆ ದೇವರಿಗೆ ಸುದೀರ್ಘ ಎನಿಸಿಬಿಟ್ಟಿತೇ? ಒಂದು ದಿನವೂ ಮಾಡಿದ ಉಪಕಾರವನ್ನು ಬೇರೆಯವರಿಗೆ, ಪ್ರಚಾರಕ್ಕಾಗಿ ಹೇಳಿಕೊಳ್ಳಲಿಲ್ಲ. ಬಲಗೈಯಲ್ಲಿ ಮಾಡಿದ ಸಹಾಯ ಎಡಗೈಗೂ ಸಹ ತಿಳಿಯುತ್ತಿರಲಿಲ್ಲ. ಈಗ ಅವರ ನಿಧನಾನಂತರ ಹೊರ ಬರುತ್ತಿರುವ ಸುದ್ದಿಗಳು ಸಮಾಜಕ್ಕೆ ಅವರು ಪ್ರತಿಯಾಗಿ ಏನೆಲ್ಲಾ ಮಾಡಿದರು ಎಂಬುದು ಗೊತ್ತಾಗುತ್ತಲಿದೆ. 26 ಅನಾಥಾಶ್ರಮ, 45 ಉಚಿತ ಶಾಲೆ, 16 ವೃದ್ಧಾಶ್ರಮಗಳು, 19 ಗೋಶಾಲೆಗಳು, 1800 ಮಕ್ಕಳ ಸಂಪೂರ್ಣ ಶಿಕ್ಷಣ, ಶಕ್ತಿ ಧಾಮ ಎಂಬ ಹೆಸರಿನಲ್ಲಿ ಮೈಸೂರಿನಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ವ್ಯವಸ್ಥೆ, ಈಗ ಕಣ್ಣುಗಳ ದಾನ… ಅಬ್ಬಾ ಎಷ್ಟೆಲ್ಲಾ.. ಒಬ್ಬ ವ್ಯಕ್ತಿಯ ಆಶ್ರಯದಲ್ಲಿದ್ದ ಇಷ್ಟೊಂದು ಸಂಸ್ಥೆಗಳು….

ಕನ್ನಡ ಚಿತ್ರರಂಗಕ್ಕೆ ಬಹುದೊಡ್ಡ ನಷ್ಟ. ‘ನಷ್ಟ’ ಎನ್ನುವುದು ತುಂಬಾ ಚಿಕ್ಕ ಪದವಾಯಿತು ಎನಿಸುತ್ತೆ. ತುಂಬಾ ಮಿಸ್‌ ಮಾಡ್ತೆವೆ ಅಪ್ಪು ನಿಮ್ಮನ್ನ. ಮತ್ತೊಮ್ಮೆ ಕರುನಾಡಲ್ಲಿ ಹುಟ್ಟಿಬನ್ನಿ ಅಂತ ಮಾತ್ರ ಹೇಳಬಲ್ಲೆ…..ಇವರ ಉದಾತ್ತ ಚಿಂತನೆ, ವ್ಯಕ್ತಿತ್ವವನ್ನು ಕಂಡ ಸಾವು ಕೂಡ ‘ನಾನು ಕೂಡ ಅಪ್ಪುವನ್ನು ಅಪ್ಪಿ ನೋಡಿಬಿಡಲೇ’ ಎಂದುಕೊಂಡಿತೇನೋ?

ನಿಮ್ಮ ನಗುಮುಖ ನಮ್ಮೊಂದಿಗೆ ಸದಾ ಇರುತ್ತದೆ, ನಮ್ಮ ಮನಸ್ಸಿನಲ್ಲಿ ನೀವು ಸದಾ ಇರುತ್ತೀರಿ. . . .

ಹುಟ್ಟುವಾಗ ದೊಡ್ಡವರು, ಚಿಕ್ಕವರು ಎಂಬ ಭೇದ… ಸಾವಿಗೆಲ್ಲಿದೆ ಭೇದ…? ಯಾರಾದರೂ ಸಾಯಬಹುದು, ಯಾವಾಗಲಾದರೂ… ಎಲ್ಲಿಯಾದರೂ ಸಾಯಬಹುದು… ಒಬ್ಬರು ಮುಂದೆ, ಮತ್ತೊಬ್ಬರು ಹಿಂದೆ ಅಷ್ಟೆ.

ಬೇಂದ್ರೆ ಅವರು ಹೇಳಿದಂತೆ “ಸಾವಿಗೆ ನಾ ಅಂಜುವುದಿಲ್ಲ, ಯಾಕಂದ್ರ ನಾ ಇರೋವರಿಗೂ ಅದು ನನ್ನ ಹತ್ರ ಬರೋದಿಲ್ಲ, ಅದು ಬಂದಾಗ ನಾ ಇರೋದಿಲ್ಲ”… ಹೌದು, ಈಗ ಅಪ್ಪು ಇಲ್ಲ. ಆದರೆ, ಅವರ ನೆನಪು ಅಜರಾಮರ.

ಅಂತಿಮ ವಿದಾಯ ಪವರ್‌ ಸ್ಟಾರ್.‌ . . . .

ಹೋಗಿ ಬನ್ನಿ. . . . .

ಸಾಮಾಜಿಕ ಜಾಲತಾಣ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ

ಚಿತ್ರ ಕೃಪೆ: ಗೂಗಲ್

ಫೇಸ್‌ಬುಕ್‌, ಟ್ವಿಟ್ಟರ್‌, ಇನ್‌ಸ್ಟಾಗ್ರಾಮ್‌, ಯೂಟ್ಯೂಬ್‌, ವಿವಿಧ ಪಾಡ್‌ಕಾಸ್ಟ್‌ ಮಾಧ್ಯಮಗಳು ಮತ್ತು ಇತರೆ ಹತ್ತು ಹಲವಾರು ಸಾಮಾಜಿಕ ಜಾಲತಾಣಗಳು ಮತ್ತವುಗಳ ಬಳಕೆ ನಮ್ಮ ದಿನನಿತ್ಯ ಜೀವನದ ಭಾಗವಾಗಿ ಹೋಗಿದೆ. ಕೆಲವರಿಗೆ ಇವುಗಳೇ ಜೀವನವಾಗಿದೆ. ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಲೆಂದೇ ತೆಗೆದುಕೊಳ್ಳುವ ಸೆಲ್ಫಿಗಳು, ಜಾಲತಾಣಗಳಲ್ಲಿ ದಿನನಿತ್ಯದ ಚಟುವಟಿಕೆಗಳನ್ನು ತಿಳಿಸುವುದು, ಹೋದಲ್ಲಿ ಬಂದಲ್ಲಿ ಎಲ್ಲ ತರಹದ ಫೋಟೋ-ವಿಡಿಯೋಗಳನ್ನು ತೆಗೆದು ಅಪ್‌ಲೋಡ್‌ ಮಾಡುವುದು, ಅವುಗಳ ಲೈಕ್ಸ್‌, ಕಮೆಂಟ್ಸ್ ಇವುಗಳನ್ನು ನೋಡುತ್ತಾ ದಿನಪೂರ್ತಿ ಕಳೆಯುವುದು. ಅವರ ಅಂದಾಜಿನಂತೆ ಲೈಕ್ಸ್‌, ಕಾಮೆಂಟ್ಸ್‌ ಬರದೇ ಹೋದರೆ ಪೇಚಾಡುವುದು; ಖಿನ್ನತೆಗೆ ಜಾರುವಷ್ಟರ ಮಟ್ಟಿಗೆ ಈ ಜಾಲತಾಣದ ಗೀಳು ಕೆಲವರಿಗೆ (ಕೆಲವರಿಗೇ ಏನು, ಈಗೀಗ ಹಲವರಿಗೆ) ಇರುತ್ತದೆ.

ಕೆಲವರು ಅವರ ದಿನನಿತ್ಯದ ಮೂಡ್‌ಗಳನ್ನು ಕೂಡ ಹಾಕುತ್ತಾರೆ. “Today I am feeling low”; “I am feeling anxious” ಈ ತರಹದ ಹಲವಾರು ಮನಸ್ಸಿನ ಸ್ಥಿತಿಗತಿಗಳನ್ನು ಅಪಲೋಡ್‌ ಮಾಡುವುದರಿಂದ ಆಗುವ ಲಾಭವೇನು? ಒಂದಷ್ಟು ಲೈಕ್ಸ್‌ ಮತ್ತು ಕಮೆಂಟ್ಸ್‌- ಅದರಿಂದ ಸಮಸ್ಯೆಗಳಿದ್ದರೆ ಪರಿಹಾರವಾಗುವುದಿಲ್ಲ, ಹೀಗೆ ಜಾಲತಾಣಗಳ ವಿಚಿತ್ರ ಗುಂಗಿಗೇ ಒಳಗಾಗುವವರು ಹಲವಾರು. ಆನ್‌ಲೈನ್‌ ಸ್ನೇಹಿತರನ್ನು ಮಾಡಿಕೊಂಡು ಮೋಸ ಹೋಗುವವರಿದ್ದಾರೆ, ಆನ್‌ಲೈನ್‌ ಜಾಬ್‌ಗಳ ಮಾಹಿತಿಯನ್ನು ಸರಿಯಾಗಿ ಪರೀಕ್ಷಿಸದೇ ಒಪ್ಪಿಕೊಂಡು ಹಣ ಕಳೆದುಕೊಳ್ಳುವವರಿದ್ದಾರೆ, ಅದನ್ನು ಒಪ್ಪಿಕೊಂಡು ಬೇರೆ ದೇಶಗಳಿಗೆ ರವಾನೆಯಾಗಿ ಸಿಲುಕಬಾರದ ಸಂಕಷ್ಟಕ್ಕೆ ಸಿಲುಕುವವರಿದ್ದಾರೆ.

ಸ್ಮಾರ್ಟ್‌ ಫೋನ್‌ಗಳು ಈಗ ಸರಿಸುಮಾರು ಎಲ್ಲ ವರ್ಗದ ಜನರ ಬಳಿ ಇದ್ದರೂ ಸಹ, ಗಾಳಿ ಸುದ್ದಿಯೇ ಬಹುಬೇಗ ಜನರಿಗೆ ತಲುಪುತ್ತದೆಯೇ ಹೊರತು ನಿಜಾಂಶ, ಸತ್ಯ ಸಂಗತಿಗಳು ತಲುಪುವ ವೇಗ ವಿರಳ. ಇಷ್ಟೇ ಅಲ್ಲದೇ ಈ ಸುಳ್ಳು ಸುದ್ದಿಗಳನ್ನು ನಂಬುವಷ್ಟು ಕ್ಷಿಪ್ರವಾಗಿ ಸತ್ಯ ಸಂಗತಿಗಳನ್ನು ಜನ ನಂಬುವುದಿಲ್ಲ, ಅದೇಕೋ ತಿಳಿಯದು.

ಈಗ ನಾವು ಅಭಿವ್ಯಕ್ತಿ ಸ್ವಾತಂತ್ರ್ಯದ ವಿಷಯಕ್ಕೆ ಬರೋಣ. ನಮ್ಮ ದೇಶದ ಸಂವಿಧಾನ ನಮಗೆ ಒದಗಿಸಿರುವ ಮೂಲಭೂತ ಹಕ್ಕುಗಳಲ್ಲಿ ಇದೊಂದು. ಇದು ನಿಮಗೆ ಏನು ಬೇಕಾದರೂ ಮಾತನಾಡುವ ಸ್ವೇಚ್ಛೆಯನ್ನು ನೀಡುವುದಿಲ್ಲ (ನಾನು ಇಲ್ಲಿ ಸ್ವಾತಂತ್ರ್ಯ ಎಂಬ ಪದದ ಬದಲು ʼಸ್ವೇಚ್ಛೆʼ ಪದವನ್ನು ಬಳಸಿದುದನ್ನು ಗಮನಿಸಬೇಕು). ಸ್ವಾತಂತ್ರ್ಯವು ಯಾವತ್ತೂ ಕೂಡ ಕೆಲವೊಂದು ನಿಯಮ ಮತ್ತು ಕಟ್ಟಳೆಗಳೊಂದಿಗೆಯೇ ಪ್ರಜೆಗಳಿಗೆ ಲಭ್ಯವಿದೆಯೇ ಹೊರತು, ನಿಯಮ-ಕಟ್ಟಳೆಗಳನ್ನು ತೆಗೆದರೆ ಅದು ಸ್ವೇಚ್ಛಾಚಾರವಾಗುತ್ತದೆಯೇ ವಿನಹ ಸ್ವಾತಂತ್ರ್ಯವಲ್ಲ. Freedom of speech and expression is not absolute.

ನಿಮ್ಮ ಸಾಮಾಜಿಕ ಜಾಲತಾಣಗಳಲ್ಲಿ ನೀವು ನಿಮ್ಮ ಗೋಡೆ/ಭಿತ್ತಿಯ ಮೇಲೆ ಬರೆಯುವ ಪ್ರತಿಯೊಂದು ಬರಹವೂ ಕೂಡ ಇನ್ನೊಬ್ಬರನ್ನು ನಿಂದಿಸುವಂತೆ ಅಥವಾ ಕೆಣಕುವಂತಿರಬಾರದು, ರಾಷ್ಟ್ರದ ಹಿತಾಸಕ್ತಿಗೆ ಧಕ್ಕೆತರುವಂತಿರಬಾರದು, ದೇಶದ ಸುರಕ್ಷತೆಯನ್ನು ಅಪಾಯಕ್ಕೆ ಸಿಲುಕಿಸುವಂತಿರಬಾರದು, ಸಮಾಜದ ಸಾಮರಸ್ಯವನ್ನು ಹದಗೆಡಿಸುವಂತಿರಬಾರದು, ಬೇರೆಯವರ ಮಾನಹಾನಿಯಾಗುವಂತಿರಬಾರದು, ಒಬ್ಬ ನಿರ್ದಿಷ್ಟ ವ್ಯಕ್ತಿಗೆ ಅಗೌರವ ಸೂಚಿಸುವಂತಿರಬಾರದು, ಧರ್ಮ-ಜಾತಿಗಳನ್ನು ಹೀಯಾಳಿಸುವಂತಿರಬಾರದು ಹೀಗೆ ಹತ್ತು ಹಲವು, ಪಟ್ಟಿ ಮಾಡಿದಷ್ಟೂ ಬೆಳೆಯುತ್ತಲೇ ಹೋಗುತ್ತದೆ. ಈ ಎಲ್ಲ ʼಎಲ್ಲೆʼಯೊಳಗೆ ನಿಮ್ಮ ಬರಹವಿರಬೇಕು ಎನ್ನುವುದು ಒಂದು ಆಶಯ. ಆದರೆ, ಹಲವಾರು ನಿಯಮಗಳ ಉಲ್ಲಂಘನೆಗಳಾಗುತ್ತಿದೆ, ನಾವದನ್ನು ಪ್ರತಿನಿತ್ಯ ನೋಡುತ್ತಿದ್ದೇವೆ.

ಈಗ ಹೊಸತಾಗಿ ಟ್ವಿಟರ್‌ನ ಒಂದು ತಗಾದೆ ಎದ್ದಿದೆ. ಇದರ ಕುರಿತು ಮಾತನಾಡುವ ಮುನ್ನ ಭಾರತ ಸರ್ಕಾರದ ಹೊಸ ನಿಯಮಾವಳಿಗಳ ಸ್ಥೂಲ ಪರಿಚಯ ಮಾಡಿಕೊಳ್ಳೋಣ. “The information Technology (IT) Rules, 2021”. ಇದನ್ನು ಕನ್ನಡದಲ್ಲಿ “ಮಾಹಿತಿ ತಂತ್ರಜ್ಞಾನದ ನಿಯಮಗಳು, 2021” ಎಂದು ಕರೆಯಬಹುದು. ಈ ಹೊಸ ನಿಯಮಾವಳಿಗಳು, ಜನಸಾಮಾನ್ಯರಿಗೆ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ರೂಪುಗೊಂಡತಹವುಗಳು. ಸಾಮಾಜಿಕ ಜಾಲತಾಣಗಳು ಮತ್ತು ಒ.ಟಿ.ಟಿ (ನೆಟ್‌ಫ್ಲಿಕ್ಸ್‌, ಅಮೆಝಾನ್‌ ಪ್ರೈಮ್‌, ಝೀ5 ಇತರೆ ಆನ್‌ಲೈನ್‌ ವಿಡಿಯೋ ವೀಕ್ಷಣೆಗೆಂದೇ ಲಭ್ಯವಿರುವ ವೇದಿಕೆಗಳು) ವೇದಿಕೆಗಳಲ್ಲಿ ಜನರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕೆಲವೊಂದು ನಿಯಮಗಳನ್ನು ಸೇರ್ಪಡೆಗೊಳಿಸಲಾಗಿದೆ. ಬದಲಾಗುತ್ತಿರುವ ಅಂತರ್ಜಾಲದ ಉಪಯೋಗಗಳನ್ವಯ ನಿಯಮಾವಳಿಗಳನ್ನು ಬದಲಾಯಿಸುವುದು ಯಾವುದೇ ಜವಾಬ್ದಾರಿಯುತ ಸರ್ಕಾರದ ಕರ್ತವ್ಯವಾಗಿದೆ. ಈ ನಿಯಮಗಳನ್ವಯ ಪ್ರತಿಯೊಂದು ಸಾಮಾಜಿಕ ಜಾಲತಾಣಗಳಲ್ಲಿಯೂ ಸಹ ಮೂರು ಹಂತದ Grievance redressal mechanism ಇರಬೇಕು ಅದಕ್ಕಾಗಿ ಒಬ್ಬ officer (ಕುಂದು ಕೊರತೆಗಳ ನಿರ್ವಹಣಾಧಿಕಾರಿ) ಅನ್ನು ನೇಮಿಸತಕ್ಕದ್ದು ಮತ್ತು ಅವರು ಭಾರತದಲ್ಲಿ ವಾಸವಿರಬೇಕು. ಮಹಿಳೆ ಮತ್ತು ಮಕ್ಕಳ ಲೈಂಗಿಕ ಶೋಷಣೆಯ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳು, ಸುಳ್ಳು ಸುದ್ದಿಗಳು ಪ್ರಸಾರವಾಗದಂತೆ ತಡೆಯಲು ಮತ್ತು ಅವುಗಳನ್ನು ಪತ್ತೆಹಚ್ಚಲು ಕೆಲವು ಮಾನದಂಡಗಳನ್ನು ಈ ಹೊಸ ನಿಯಮಾವಳಿಗಳು ವಿಧಿಸಿವೆ.

ಪ್ರತಿಯೊಂದು ಜಾಲತಾಣವೂ ಸಹ ಅದು ವಾಟ್ಸಾಪ್‌ ಇರಬಹುದು, ಫೇಸ್‌ಬುಕ್‌, ಇನ್ಸ್‌ಟಾಗ್ರಾಂ, ಯೂಟ್ಯೂಬ್‌, ಟ್ವಿಟ್ಟರ್‌, ಟೆಲಿಗ್ರಾಂ ಇತರೆ ಎಲ್ಲವೂ ಕೂಡ ಈ ನಿಯಮಗಳನ್ನು ಕಡ್ಡಾಯವಾಗಿ 3 ತಿಂಗಳುಗಳ ಒಳಗೆ ಪಾಲಿಸಬೇಕು ಮತ್ತು ಪಾಲನಾವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು. ʼಮೆಟಾ ಡೇಟಾʼ ವನ್ನು ಸರ್ಕಾರವು ಬಯಸಿದಾಗ ಈ ಕಂಪನಿಗಳು ಒದಗಿಸಲೇಬೇಕು. ಮೆಟಾಡೇಟಾ ಎಂದರೆ, ಯಾವ ಮೊಬೈಲ್‌ ನಂಬರ್‌ನಿಂದ ಪ್ರಸ್ತುತ ಸಂದೇಶ ರವಾನೆಯಾಗಿದೆ, ಕಳುಹಿಸಿದ ಸಮಯ ಯಾವುದು, ಯಾವ ಮೊಬೈಲ್‌ ಸೆಟ್‌ಅನ್ನು ಬಳಸಲಾಗಿದೆ, ಯಾವ ಸ್ಥಳದಿಂದ ಸಂದೇಶ ಕಳುಹಿಸಿದೆ ಇತರೆ ಹತ್ತು ಹಲವು ಮಾಹಿತಿಯನ್ನು ಸರ್ಕಾರಕ್ಕೆ ಅವಶ್ಯವಿರುವಾಗ ನೀಡಬೇಕಾಗುತ್ತದೆ.

ಈ ನಿಯಮಕ್ಕೆ ಟ್ವಿಟ್ಟರ್‌ನ ತಗಾದೆಯಿದೆ. ಅದೇನೆಂದರೆ, ಅದು ಈ ಮೇಲಿನ ಮೆಟಾಡೇಟಾವನ್ನು ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬಾರದಿದ್ದ ಪಕ್ಷದಲ್ಲಿ ಸರ್ಕಾರಕ್ಕೆ ಮಾಹಿತಿಯನ್ನು ಒದಗಿಸುತ್ತದೆ ಇಲ್ಲವಾದರೆ ಇಲ್ಲ ಎಂದು. ಯಾವುದು ಸ್ವಾತಂತ್ರ್ಯ ಮತ್ತು ಯಾವುದು ಸ್ವೇಚ್ಛೆ ಎಂದು ನಿರ್ಧರಿಸುವುದು ಒಂದು ದೇಶದ ಶಾಸಕಾಂಗ ಮತ್ತು ನ್ಯಾಯಾಂಗದ ಕೆಲಸವೇ ಹೊರತು ಟ್ವಿಟ್ಟರ್‌ನದಲ್ಲ. ಒಂದು ಬಗೆಯ ಸಾಮಾಜಿಕ ಜಾಲತಾಣ ರಾಷ್ಟ್ರೀಯತೆ (social media nationalism) ಯನ್ನು ಸೃಷ್ಟಿಸಲು ಟ್ವಿಟ್ಟರ್‌ ಹೊರಟಿರುವುದು ಅಪರಾಧ ಮತ್ತು ಕಾನೂನು ಬಾಹಿರ. ಭಾರತದ ಐಕ್ಯತೆ ಮತ್ತು ಸಮಗ್ರತೆಯ ದೃಷ್ಟಿಯಿಂದ ರಾಷ್ಟ್ರೀಯ ನೀತಿಗಳನ್ನು ಪಾಲಿಸಲೇ ಬೇಕು ಇಲ್ಲವಾದರೆ ಭಾರತದ ಭೌಗೋಳಿಕ ಗಡಿಯನ್ನು ಬಿಟ್ಟುಹೊರಡಬೇಕಾಗುತ್ತದೆ. “ಸಾಮಾಜಿಕ ಜಾಲತಾಣದ ಸಾರ್ವಭೌಮತೆ” ಎಂಬುದು ವಿತಂಡವಾದ ಮತ್ತದು ಸಾಧ್ಯವಾಗದು.

ಈ ಮೇಲಿನ ಎಲ್ಲ ಅಂಶಗಳನ್ನು ಪ್ರತಿಯೊಬ್ಬರು ತಿಳಿದುಕೊಂಡು ಪ್ರಜ್ಞಾವಂತ ಸಾಮಾಜಿಕ ಜಾಲತಾಣ ಬಳಕೆದಾರರಾಗೋಣ, ದ್ವೇಷವನ್ನು ಬಿತ್ತುವಂತಹ, ಸಮಾಜದ ಮತ್ತು ದೇಶದ ಸಾಮರಸ್ಯವನ್ನು ಕದಡುವಂತಹ ಹುನ್ನಾರಗಳಿಗೆ ನೀರೆರೆಯದಿರೋಣ. ಸುದೃಢ ರಾಷ್ಟ್ರ ನಿರ್ಮಾಣಕ್ಕೆ ಬೆಂಬಲವಾಗಿ ನಿಲ್ಲೋಣ ಎನ್ನುವ ಆಶಯದೊಂದಿಗೆ…….

ಲೇಖನವನ್ನು ಓದಿ – ಹರಸಿ ಹಾರೈಸಿ, ಇಷ್ಟವಾದರೆ ಪಸರಿಸಿ…….

-ಮನುʼಪ್ರಿಯʼ

ಹೇಳಿ ಹೋಗು ಕಾರಣ

Heli-hogu-karana
ಹೇಳಿ ಹೋಗು ಕಾರಣ

ರವಿ ಬೆಳಗೆರೆ… ಕನ್ನಡಿಗರೆಲ್ಲರಲ್ಲೂ ಮನೆಮಾತಾದ ಜನಪ್ರಿಯ ಹೆಸರು. ನಾನು ಅವರ ‘ಹಾಯ್‌ ಬೆಂಗಳೂರು’ ನಲ್ಲಿನ ಕೆಲವೊಂದು ಲೇಖನಗಳನ್ನು ಓದಿದ್ದೆ ಮತ್ತು ಈ ಟಿವಿ ಕನ್ನಡ ವಾಹಿನಿಯ ‘ಎಂದೂ ಮರೆಯದ ಹಾಡು’ ಕಾರ್ಯಕ್ರಮದಲ್ಲಿ ಅವರ ನಿರೂಪಣೆ ಕೇಳಿದ್ದಷ್ಟನ್ನು ಬಿಟ್ಟರೆ ಮತ್ತಿನ್ನೇನೂ ಓದಿರಲಿಲ್ಲ. ಆದರೆ, ಅವರ ಕುರಿತು ಗಾಳಿ ಸುದ್ದಿಯೋ ಅಥವಾ ಇನ್ನೇನೋ ತುಂಬಾ ಕೇಳಿ ಒಂದು ರೀತಿಯ ಪೂರ್ವಗ್ರಹ ಪೀಡಿತ ಮನಸ್ಥಿತಿ ನನ್ನಲ್ಲಿ ಇತ್ತು. ಅವರ ಬಗ್ಗೆ ಅಷ್ಟು ಒಳ್ಳೆಯ ಅಭಿಪ್ರಾಯ ನನಗಿರಲಿಲ್ಲ. ಅದು ಈ ಮೇಲಿನ ಶೀರ್ಷಿಕೆಯ ಪುಸ್ತಕ ಓದುವವರೆಗೆ ಮಾತ್ರ. “ಹೇಳಿ ಹೋಗು ಕಾರಣ” – ಕಾದಂಬರಿ ತುಂಬಾನೇ ಇಷ್ಟವಾಯಿತು. ನನ್ನ ಕೆಲಸದ ವಿಪರೀತ ಒತ್ತಡದ ನಡುವೆಯೂ ಎರಡೇ ಎರಡು ದಿನಗಳಲ್ಲಿ339 ಪುಟದ ಪುಸ್ತಕವನ್ನು ಓದಿ ಮುಗಿಸಿದೆ, ಅಷ್ಟೊಂದು ಅಗಾಧವಾಗಿ ಹಿಡಿದಿಡುವ ಪುಸ್ತಕ. ಇದರ ಕುರಿತ ನನ್ನ ಅನಿಸಿಕೆ, ಅಭಿಪ್ರಾಯಗಳನ್ನು ಮುಂದೆ ಹಂಚಿಕೊಳ್ಳಲ್ಲಿದ್ದೇನೆ.

ಕಾದಂಬರಿ 5 ಮುಖ್ಯ ಪಾತ್ರಧಾರಿಗಳ ಸುತ್ತಲೂ ಸುತ್ತುತ್ತದೆ. ಹಿಮವಂತ್‌ (ಹಿಮೂ), ಪ್ರಾರ್ಥನಾ, ಊರ್ಮಿಳಾ, ದೇವಶಿಶು (ದೇವ್) ಬಂಧೋಪಾಧ್ಯಾಯ ಹಾಗೂ ರಸೂಲ್‌ ಜಮಾದಾರ್.‌ ನಾಯಕ ಹಿಮವಂತ್‌ ತುಂಬಾ ಸರಳ, ನಿಷ್ಠಾವಂತ, ಪ್ರಜ್ಞಾವಂತ, ಹೇಳಿದ್ದನ್ನು ಮಾಡುವ-ಮಾಡಿದ್ದನ್ನು ಹೇಳುವ, ಮನೋನಿಗ್ರಹವುಳ್ಳ, ಪರಿಶ್ರಮ ಪಡುವ ವ್ಯಕ್ತಿ. ಪ್ರಾರ್ಥನಾ ಎಂಬ ಹುಡುಗಿಯನ್ನು ಪ್ರೀತಿಸುತ್ತಾನೆ, ಆಕೆಯ ಓದಿಗಾಗಿ ಆತ ತನ್ನ ಜೀವನವನ್ನೇ ಮುಡಿಪಿಡುತ್ತಾನೆ. ಆದರೆ, ಪ್ರಾರ್ಥನಾ ಓದಲು ಹೋದಾಗ ದಾವಣಗೆರೆಯ ಕಾಲೇಜಿನ, ಆಕರ್ಷಕ ಮತ್ತು ಚಂಚಲ ಮನಸ್ಸಿನ, ದೇವಶಿಶು ಎಂಬ ವ್ಯಕ್ತಿಯನ್ನು ಪ್ರೀತಿಸುತ್ತಾಳೆ. ದೇವಶಿಶು ಎಂಬಾತ ಊರ್ಮಿಳಾ ಎಂಬಾಕೆಯನ್ನು ಪ್ರೀತಿಸುತ್ತಿರುತ್ತಾನೆ, ಮತ್ತು ಊರ್ಮಿಳಾ ಪ್ರಾರ್ಥನಾಳ ಹಾಸ್ಟೆಲ್‌ಮೇಟ್‌- ರೂಮ್ ಮೇಟ್. ಆದರೆ, ಊರ್ಮಿಳಾ ಹಿಮವಂತ್‌ನನ್ನು ಪ್ರೀತಿಸಳು ಶುರುವಿಡುತ್ತಾಳೆ. ಇದೆಲ್ಲದರ ನಡುವೆ ಮಾಟ-ಮಂತ್ರ, ಎಲ್ಲರ ಹಿಂದಿನ ಜೀವನದ ಕಥೆ, ಇದೆಲ್ಲದಕ್ಕೆ ಸಾಕ್ಷಿಯಾಗಿ ನಿಲ್ಲುವ ರಸೂಲ್‌ ಜಮಾದಾರ್‌ ಹೀಗೆ ಕಥೆ ಸಾಗುತ್ತದೆ.

ವಿನಾಕಾರಣ ಪ್ರಾರ್ಥನಾ ಹಿಮೂವನ್ನು ತೊರೆಯುತ್ತಾಳೆ, ದೇವ್‌ನ ಮೇಲೆ ಆಕೆ ತೋರುವ ನಿಷ್ಠಾವಂತ ಪ್ರೀತಿಯ ಕಾಲುಭಾಗವನ್ನೂ ಹಿಮವಂತನ ಮೇಲೆ ತೋರಿಸುವುದಿಲ್ಲ. ಹೀಗೆ ಕಾರಣ ಹೇಳದೇ ತೊರೆದು ಹೋದದ್ದಕ್ಕೆ ಇರಬೇಕು ಕಾದಂಬರಿಯ ಶೀರ್ಷಿಕೆ ʼಹೇಳಿ ಹೋಗು ಕಾರಣʼ.

ಹೀಗೆ ಪ್ರೀತಿಸಿ ಕಾರಣ ಹೇಳದೇ ಹೊರಡುವವರಿದ್ದಾರಲ್ಲವೇ? ನನಗೆ ಈ ಕಾದಂಬರಿಯ ಕೊನೆಯಲ್ಲಾದರೂ, ಈ ತರಹ ಬಿಟ್ಟು ಹೋಗುವ ವ್ಯಕ್ತಿಗಳ ಮನಸ್ಥಿತಿ ಎಂತಹುದ್ದಿರುತ್ತದೆ ಎಂದು ಬೆಳಗೆರೆ ವಿವರಿಸಿರುತ್ತಾರೆ ಎಂದುಕೊಂಡಿದ್ದೆ, ಊಹು ಆದರದು ಹಾಗಾಗಲಿಲ್ಲ. ಎಲ್ಲ ರೀತಿಯ ಆಣೆ, ಪ್ರಮಾಣಗಳನ್ನು ಮಾಡಿ ಯಾವ ಕಾರಣಕ್ಕಾಗಿ ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಬಿಟ್ಟು ಹೋಗುತ್ತಾನೆ? ಬಾಲ್ಯದ ನಮ್ಮ ಜೀವನ ಗಟ್ಟಿಯಾದ ನೆಲೆಯಲ್ಲಿ ನಿಂತು ರೂಪುಗೊಂಡಿದ್ದರೆ ಮಾತ್ರ ಜೀವನದ ಪ್ರಮುಖ ಘಟ್ಟದಲ್ಲಿ ಹಿನ್ನಡೆ ಅನುಭವಿಸಿದರೂ ಸಹ, ವಿಕಾರವಾದ ಯಾವ ಭಾವಗಳು ಇಲ್ಲದೇ ಮುನ್ನಡೆಯಲು ಸಾಧ್ಯ ಎಂಬುದು ನಮಗೆ ಊರ್ಮಿಳಾಳ ವ್ಯಕ್ತಿತ್ವದಲ್ಲಿ ಕಾಣಿಸುತ್ತದೆಯೇ ವಿನಹ ಹಿಮವಂತನಲ್ಲಲ್ಲ.

ಬೆಳಗೆರೆಯವರು ಮೊದಲಿನಿಂದ ಕೊನೆಯವರೆಗೆ ಹೆಣ್ಣು ಚಂಚಲ, ಹೆಣ್ಣು ಮಾತ್ರ ಮೋಸದ ಜಾಲ ಹೆಣೆಯಲು ಸಾಧ್ಯ ಎನ್ನುವಂತೆ ಬಿಂಬಿಸಿರುವುದು ಅದ್ಯಾಕೋ ಅಷ್ಟು ಸಹ್ಯವಾಗಲಿಲ್ಲ. ಅವರದೇ ಆದ ಊರ್ಮಿಳಾಳ ಪಾತ್ರ, ಗಂಡಿನ ಮೋಸದ ಜಾಲದಿಂದ ಹೊರಬಿದ್ದು ಜೀವನವನ್ನು ಕಟ್ಟಿಕೊಳ್ಳುತ್ತಿರುವುದು ಕಣ್ಣ ಮುಂದೆ ಇರುವಾಗಲೂ ಸಹ ಹೆಣ್ಣೇ ಮೋಸದ ಬೀಜಕ್ಕೆ ಮೂಲ ಎನ್ನುವುದು ಕಾದಂಬರಿಯ ಧ್ವನಿಯಾಗಿರುವುದು ಒಂದು ರೀತಿಯ ಅಸಮಾನತೆ ಎಂದೆನಿಸುತ್ತದೆ. ಮೊದಲಿನಿಂದಲೂ ಧೀಮಂತ ವ್ಯಕ್ತಿತ್ವಕ್ಕೆ ಪ್ರತಿರೂಪವೆನ್ನುವಂತೆಯೇ ನಿರೂಪಣೆಗೊಂಡ ಹಿಮವಂತ್‌ ಮಾಟ-ಮಂತ್ರದ ಮೊರೆ ಹೋಗುವುದು ಆ ಪಾತ್ರಕ್ಕೆ ತಕ್ಕುದಾಗಲಿಲ್ಲ ಎನಿಸಿತು ಮತ್ತು ಪಾತ್ರದ ತೂಕಕ್ಕೆ ನ್ಯಾಯ ಮಾಡಿದಂತಾಗಲಿಲ್ಲ. ನಿಜ! ಮೋಸ ಹೋದ ಎಲ್ಲರೂ ಧಾರಾಳರಾಗಿ, ಹೋಗಲಿ ಬಿಡು, ಮೋಸ ಮಾಡಿದವರು ಎಲ್ಲಿದ್ದರೂ, ಹೇಗಿದ್ದರೂ ಸಂತೋಷವಾಗಿದ್ದರೆ ಸಾಕು ಎಂಬ ಧೋರಣೆ ತಾಳಬೇಕೆಂದೇನಿಲ್ಲ, ಆದರೆ ಕಾದಂಬರಿಯಲ್ಲಾದರೂ ಉದಾತ್ತ ಚಿಂತನೆ ಬಿತ್ತಬಹುದಾಗಿತ್ತು ಎಂಬುದು ನನ್ನ ಅನಿಸಕೆ.

ಕೊನೆಯಲ್ಲಿ ತುಂಬಾ ಪ್ರಶ್ನೆಗಳು ನನ್ನನ್ನು ಕಾಡಿದವು. ಪ್ರೀತಿ ಎಂಬುದು ಯಾವ ನೆಲೆಯಲ್ಲಿ ವ್ಯಕ್ತಗೊಳ್ಳುತ್ತದೆ? ಮದುವೆಯ ಬಂಧನವೆಂಬುದು ಇಲ್ಲದೇ ಹೋದರೆ, ಆವಶ್ಯಕತೆ ಮತ್ತು ಅನಿವಾರ್ಯತೆ ಎರಡೂ ಇಲ್ಲದಾದಾಗ ಪ್ರೀತಿ ಉಳಿಯಲು ಸಾಧ್ಯವೇ ಇಲ್ಲವೇ? ಹಾಗಾದರೆ ಅದು ಅನುಕೂಲ ಸಿಂಧುವೇ ಹೊರತು ಪ್ರೀತಿಯಲ್ಲ, ಅಲ್ಲವೇ? ನನಗೆ ನಿನ್ನ ಆವಶ್ಯಕತೆ ಇದೆ ನೀನು ಬೇಕು, ನಿನ್ನ ಅನಿವಾರ್ಯತೆ ಇದೆ ನೀನು ಬೇಕು.. ಅದಿಲ್ಲವಾದರೆ ಆ ವ್ಯಕ್ತಿ ಬೇಡ. ಇದ್ಯಾವ ತರ್ಕ ತಿಳಿಯಲಿಲ್ಲ. ಹಾಗೆಯೇ, ಕುಂಟು ನೆಪವನ್ನಾದರೂ ಒಡ್ಡಿ ಒಬ್ಬ ವ್ಯಕ್ತಿಯನ್ನು ತೊರೆಯಬೇಕೆ ವಿನಹ ವೃಥಾ ಬಿಡಬಾರದು, ಸ್ಪಷ್ಟವಾಗಿ ಹೇಳುವುದಾದರೆ one should not abandon ಅಲ್ಲವೇ? ಏನೂ ಹೇಳದೇ, ಜೀವನದ ಕೊನೆಯವರೆಗೂ ಜೊತೆ ಇರುವೆ ಎಂದವರು ತತ್‌ಕ್ಷಣ ನಾಪತ್ತೆಯಾದರೇ ಇನ್ನೊಂದು ಜೀವ ಅದನ್ನು ಹೇಗೆ ಭರಿಸಬಹುದು ಎಂಬ ಲವಲೇಶ ಯೋಚನೆ ಏಕೆ ಬರುವುದಿಲ್ಲ? ಯಾವುದೇ ಒಂದು ಕಾರಣ ಅದು ಸುಳ್ಳಾದರೂ ಸರಿ, ಹೇಳಿದರೆ ಅದರ ಆಧಾರದ ಮೇಲೆ, ಕಟ್ಟಿಕೊಂಡ ಆಶಾ ಗೋಪುರವನ್ನಾದರೂ ಕೆಡವಬಹುದಲ್ಲವೇ? ಇಲ್ಲವಾದರೇ, ಆ ಗೋಪುರಕ್ಕೆ ಇನ್ಯಾವತ್ತೋ ಆ ವ್ಯಕ್ತಿ ಬರುತ್ತಾರೆ ಎಂದು ಎಷ್ಟು ದಿನ, ತಿಂಗಳು, ವರ್ಷ ಕಾಯುವುದು?

ಆದ್ದರಿಂದ, ನನಗನ್ನಿಸುವುದು ಇಷ್ಟೇ. . . . ಪ್ರೀತಿ ಮುಗಿದುಹೋಗಬಹುದು, ಅದ್ಯಾವ ಕಾರಣಕ್ಕಾದರೂ ಸರಿ! ಕಾರಣವ ಹೇಳಿ ತೊರೆಯಬೇಕು… ಅದು ಸುಳ್ಳಾದರೂ ಸರಿ… ಹೇಳಿ ಹೋಗು ಕಾರಣ! ! !

ಬಾನಲ್ಲಿ ತಾರೆಯು ಮಿನುಗುತಿದೆ….

ಇದೇನಿದು ದಿನವೂ ಮಿನುಗುತ್ತದೆ ಬಾನಲ್ಲಿ ತಾರೆ, ಇಂದೇನು ವಿಶೇಷ ಎಂದುಕೊಳ್ಳುತಿರಬಹುದು. ಹೌದು.. ಇಂದು ನಾನು ಹೇಳಹೊರಟಿರುವ ವಿಷಯ ವಿಶೇಷವಾದದ್ದು. ಡಿಸೆಂಬರ್‌ ಮಾಸ ಬಂತೆಂದರೆ ಬಹುತೇಕ ಎಲ್ಲರ ತಲೆಯಲ್ಲಿ (ಬಹುತೇಕ ಏಕೆಂದರೆ ಕೆಲವರು ತಲೆಯಲ್ಲಿ ಇದ್ದರೂ ಹೇಳುವುದಿಲ್ಲ, ಅದು ನಮ್ಮ- ಅಂದರೆ ಹಿಂದೂಗಳ ಹಬ್ಬ ಅಲ್ಲವೆಂದು) ಓಡುವುದು ಕ್ರಿಸ್‌ಮಸ್‌ ಹಬ್ಬ. ಹಬ್ಬ ಏಕೆ ಆಚರಿಸುತ್ತೇವೆ? ಖುಷಿಯಾಗಿರಲು, ಸಂತೋಷದಿಂದಿರಲು ಅಲ್ಲವೇ? ಅದು ಯಾವ ಹಬ್ಬವಾದರೆ ಏನು..

ಯೇಸುವಿನ ಜನನವಾದ ದಿನವನ್ನು ನಾವು ಕ್ರಿಸ್‌ಮಸ್‌ ಎಂದು ಆಚರಿಸುತ್ತೇವೆ, ನಮ್ಮ ಈಗಿನ ಕ್ಯಾಲೆಂಡರ್‌ ಕೂಡ ಇದನ್ನೇ ಮಾಪನವಾಗಿಟ್ಟುಕೊಂಡು ಕ್ರಿಸ್ತಪೂರ್ವ, ಕ್ರಿಸ್ತಶಕ ಎಂತಲೇ ವಿಂಗಡಿಸಿ ಹೇಳುತ್ತೇವೆ. ಭಾರತಕ್ಕೆ ಐರೋಪ್ಯರ ಆಗಮನದಿಂದ ಕ್ರೈಸ್ತ ಮತದ ಆಗಮನವೂ ಆಗಿ, ಅವರ ಶಾಲೆ, ಆಸ್ಪತ್ರೆಗಳು ಪ್ರಚಲಿತವಾದವು. ಸೇವೆಯ ಮನೋಭಾವದೊಂದಿಗೆ ಮತಾಂತರವೂ ಪ್ರಾರಂಭವಾಯಿತೆನ್ನುವುದು ಬೇರೆಯದೇ ವಿಚಾರ. ಆದರೆ, ನಾನಿಲ್ಲಿ ಹೇಳಹೊರಟಿರುವುದು ಕ್ರಿಸ್‌ಮಸ್‌ ಹಬ್ಬದ ಕುರಿತು ಮಾತ್ರ.

ನನಗೂ ಕ್ರಿಸ್‌ಮಸ್‌ಗೂ ತುಂಬಾ ಅವಿನಾಭಾವ ಸಂಬಂಧ. ಕಾರಣ, ನಾನು ಓದಿದ್ದು ಒಂದು ಕ್ರಿಶ್ಚಿಯನ್‌ ಶಾಲೆಯಲ್ಲಿ. “ಇನ್‌ಫೆಂಟ್‌ ಜೀಸಸ್‌ ಶಾಲೆ” (ಬಾಲ ಯೇಸು ಶಾಲೆ)ಯಲ್ಲಿ. ನಮಗೆ ಕ್ರಿಸ್‌ಮಸ್‌ ಹಬ್ಬಕ್ಕಿಂತ ಸಿಗುತ್ತಿದ್ದ 10 ದಿನಗಳ ರಜೆ ಹೆಚ್ಚು ಖುಷಿ ಕೊಡುತ್ತಿತ್ತು. ಇದು ಎಲ್ಲ ಮಕ್ಕಳಿಗೂ ಸಹಜ. ಇದರೊಂದಿಗೆ ನನಗೆ ಇನ್ನೊಂದು ಕಾರಣವಿತ್ತು, ಅದೇನೆಂದರೆ, ಕ್ರಿಸ್‌ಮಸ್‌ ಹಬ್ಬದ ಪ್ರಯುಕ್ತ ನಮ್ಮ ಶಾಲೆಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮ ಮತ್ತು ಅದಕ್ಕೆ ಕ್ಯಾರೆಲ್ಸ್‌ (carols) ಗಳಿಗಾಗಿ ನಡೆಯುತ್ತಿದ್ದ ತಯಾರಿ. ಕ್ಯಾರೆಲ್ಸ್‌ ಅಥವಾ ಕ್ರಿಸ್‌ಮಸ್‌ ಕ್ಯಾರೆಲ್ಸ್ ಇದು ಕ್ರಿಸ್‌ಮಸ್‌ ಸಂದರ್ಭದಲ್ಲಿಯೇ ಹಾಡುವ ವಿಶೇಷ ಹಾಡುಗಳು. ಕ್ರಿಸ್ತನ ಜನನದಿಂದ ಹಿಡಿದು ಆತ ಶಿಲುಬೆಗೇರಿದ ಹಂತದವರೆಗೆ ಸುಮಾರು 2 ಗಂಟೆಗಳ ಒಂದು ನಾಟಕ ಇರುತ್ತಿತ್ತು, ಅದಕ್ಕೆ ಸಂದರ್ಭೋಚಿತವಾಗಿ ನಾವು ಹಾಡುಗಳನ್ನು ಹಾಡುತ್ತಿದ್ದೆವು, ಅದೇ ತರಹದ ಒಂದು ಹಾಡಿನ ಸಾಲೇ ಇಂದಿನ ಈ ಲೇಖನದ ಶೀರ್ಷಿಕೆ… “ಬಾನಲ್ಲಿ ತಾರೆಯು ಮಿನುಗುತಿದೆ, ಯೇಸು ಬಾಲನ ಜನನವ ಸಾರುತಿದೆ, ಆನಂದ ಗೀತೆಯ ಹಾಡೋಣ ಅನುಪಮ ದೇವನ ಸ್ತುತಿಸೋಣ, ಕ್ರಿಸ್‌ಮಸ್‌ ಶುಭಾಶಯ…”- ಕುರಿಗಾಹಿಗಳಿಗೆ ಆಕಾಶದಲ್ಲಿ ತಾರೆ ತುಂಬಾ ಪ್ರಕಾಶಮಾನವಾಗಿ ಹೊಳೆಯುತ್ತಾ ಚಲಿಸಲು ಪ್ರಾರಂಭಿಸುತ್ತದೆ, ಅದನ್ನು ಈ ಕುರಿಗಾಹಿಗಳು ಹಿಂಬಾಲಿಸಿ ಯೇಸುವಿನ ಜನನ ಸ್ಥಾನವಾದ ಬೆತ್ಲಹೇಮ್‌ ತಲುಪುತ್ತಾರೆ (ಇದಿಷ್ಟೂ ಪ್ರಸಂಗ ಆಗುವವರೆಗೂ background ನಲ್ಲಿ ನಮ್ಮ ಹಾಡು). ಈ ನಾಟಕಕ್ಕಾಗಿ ಗೋದಲಿ, ಕುರಿಮಂದೆ, ಮುಂದೆ ಶಿಲುಬೆ ಹೀಗೆ ಎಲ್ಲದರ ತಯಾರಿಯೂ ತುಂಬಾ ಅಚ್ಚುಕಟ್ಟಾಗಿ ಇರುತ್ತಿತ್ತು.

ಬೆತ್ಲಹೇಮ್‌ ತಲುಪಿದ ನಂತರ ಅಲ್ಲಿ ಯೇಸುವಿನ ದರ್ಶನವಾದ ನಂತರ ಮತ್ತೊಂದು ಹಾಡು “ಬೆತ್ಲಹೇಮ್‌ ಗೋದಲಿಯೊಳು ಮಲಗಿರುವ ಯೇಸುರಾಜನು, ಮೇರಿಯೆಂಬ ಕನ್ಯೆಯಲ್ಲಿಯೇ ಮನುಜನಾಗಿ ಜನಿಸಿ ಬಂದನು”. ನಂತರ ತುಂಬಾ ಜನಪ್ರಿಯ ಇಂಗ್ಲೀಷ್‌ ಹಾಡು “Joy to the world the lord has come, let earth receive her king”, ಸಂಭಾಷಣೆ ನಂತರ ಮತ್ತೆ ನಮ್ಮ ಹಾಡು “ಸಂತೋಷ ಉಕ್ಕುತ್ತೆ, ಸಂತೋಷ ಉಕ್ಕುತ್ತೆ” ಅಂತ. ನಂತರ “ದೇವ ನಿನ್ನ ಚರಣಾರವಿಂದದಲ್ಲಿ ಕಾಣಿಕೆಯಾಗಿ ನಮ್ಮ ಸ್ವೀಕರಿಸು, ಆತ್ಮಾರ್ಪಣೆ ಈ ಹೃದಯಾರ್ಪಣೆ ಸ್ವೀಕರಿಸಿ ನೀ ಅನುಗ್ರಹಿಸು” -ಇನ್ನೊಂದು ಹಾಡು, ವೇದಿಕೆಯ ಮೇಲೆ ನಾಟಕ ಮುಂದುವರೆಯುತ್ತದೆ, ಯೇಸು ಬೆಳೆದು ದೊಡ್ಡವನಾಗುತ್ತಾನೆ, ಪವಾಡಗಳ ಆರಂಭ.

ಜನರನ್ನು ನಾನು ರಕ್ಷಿಸುತ್ತೇನೆ ಎಂಬ ಭರವಸೆಯ ಗೀತೆ “ನಾ ನಿನ್ನ ಸೃಷ್ಟಿಸಿದ ದೈವ, ನಾ ನಿನ್ನ ರಕ್ಷಿಸಿದ ದೈವ, ನಾ ನಿನ್ನ ಹಾದಿಯಲಿ ಕರಹಿಡಿದು ನಡೆಸುವ ಎಂದೆಂದು ಜೀವಿಸುವ ದೈವ”. ಯೇಸುವನ್ನು ಸ್ತುತಿಸುವ ಮತ್ತೊಂದು ಹಾಡು “ಪೂಜ್ಯ ನಿನ್ನ ನಾಮಕೆ ಪರಮ ಮಹಿಮೆ ಸಲ್ಲಲಿ, ನಿನ್ನ ಚಿತ್ತ ನಡೆಯಲಿ, ಸ್ವರ್ಗದಂತೆ ಭುವಿಯಲಿ, ಹಲ್ಲೆಲೂಯಾ”, “ಪರಲೋಕದಲ್ಲಿ ಇರುವ ನಮ್ಮ ತಂದೆಯೇ, ನಿಮ್ಮ ನಾಮವೂ ಪಾವನ”. ಆಮೆಲೆ ಮತ್ತೊಂದು ಇಂಗ್ಲೀಷ್‌ ಗೀತೆ “long time ago in Bethlehem so the holy bible says, Mary’s boy child Jesus Christ was born on Christmas day”. ಈ ತರಹ ಹತ್ತರಿಂದ ಹನ್ನೊಂದು ಹಾಡುಗಳ ಒಂದು ಪವರ್‌ಪ್ಯಾಕ್‌ ನಾಟಕ, ಕೊನೆಗೆ “we wish you a merry Christmas and a happy new year” ಹಾಡು ಹಾಡಿ ಜೈ ಅಂದುಬಿಡುತ್ತಿದ್ದೆವು. ಪ್ರತಿ ವರ್ಷವೂ ಹೊಸ ಹೊಸ ಹಾಡುಗಳು-ಅದೇ ವಿಶೇಷ.

ಇದೊಂದು ತರಹದ ಸಡಗರದ ವಾತಾವರಣ. ಡಿಸೆಂಬರ್‌ 22 ಅಥವಾ 23ಕ್ಕೆ ಕ್ರಿಸ್‌ಮಸ್‌ ಸೆಲೆಬ್ರೆಷನ್ಸ್‌ ಇರೋದು, ಡಿಸೆಂಬರ್‌ 1 ನೇ ತಾರೀಖಿನಿಂದಲೇ ನಮ್ಮ ತರಗತಿಯ ಕೊನೆಯ ಎರಡು ಅವಧಿಗಳು (ಪಿರಿಯಡ್)‌ ಈ ಕ್ಯಾರೆಲ್ಸ್‌ ಪ್ರಾಕ್ಟೀಸ್‌ಗೆ ಸೀಮಿತ. ನಮ್ಮದೊಂದು 10 ರಿಂದ 15 ಹುಡುಗ ಹುಡುಗಿಯರ ತಂಡ(5 ನೇ ತರಗತಿಯಿಂದ 10ನೇ ತರಗತಿವರೆಗೆ), ಒಬ್ಬೊಬ್ಬರನ್ನು ಕರೆದುತರಲು ಹೇಳಿ ಕಳುಹಿಸುತ್ತಿದ್ದರು. ನಮಗೆ ಈ ಹಾಡಿನ ತರಬೇತಿಗೆ ಮುಂಚೆಯೇ ಫಾದರ್‌ರವರ (ಪ್ರಿನ್ಸಿಪಾಲ್) ಪರ್ಮಿಶನ್‌ ಇರುತ್ತಿತ್ತು, ಆದರೂ ಪಾಠ ಮಾಡುವ ಟೀಚರ್‌ಗಳಿಗೆ ನಮ್ಮನ್ನು ಕಳಿಸಲು ಮನಸ್ಸಿರುತ್ತಿರಲಿಲ್ಲ, ʼಅಲ್ಲೇ ಇದ್ದು ಬಿಡಿ ಬೆಳಗ್ಗೆ ಇಂದ, ಕ್ಲಾಸ್‌ಗೆ ಯಾಕ ಬರೋದು?ʼ ಅಂತ ಗದರಿ ಕಳುಹಿಸುತ್ತಿದ್ದರು. ಕ್ರಿಸ್‌ಮಸ್‌ ಒಂದೇ ಅಲ್ಲ, ರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ, ಗಣತಂತ್ರ ದಿನಾಚಾರಣೆ ಎಲ್ಲದಕ್ಕೂ ಹಾಡುಗಳನ್ನು ಹಾಡುತ್ತಿದ್ದೆವು, ಅದರ ಪ್ರಾಕ್ಟೀಸ್‌ಗೆ ಕ್ಲಾಸ್‌ಗಳು ಚಕ್ಕರ್.‌ ಬೇರೆ ಎಲ್ಲ ಸಹಪಾಠಿಗಳಿಗೆ ನಾವು ಲಕ್ಕಿಯೆಸ್ಟ್‌ ಆಗಿ ಕಾಣುತ್ತಿದ್ದೆವು, ಏಕೆಂದರೆ ಪಾಠ ಕೇಳುವ ಗೋಳು ಇರುತ್ತಿರಲಿಲ್ಲವಲ್ಲ. ಕ್ರಿಸ್‌ಮಸ್‌ಗೆ ಅತೀ ಹೆಚ್ಚು ಹಾಡುಗಳನ್ನು ಹಾಡುತ್ತಿದ್ದೆವು.

ಈ ರೀತಿ ಪ್ರಾಕ್ಟೀಸ್‌ ಮಾಡಿದ ಹಾಡುಗಳನ್ನು ಮನೆಯಲ್ಲಿಯೂ ಗುನುಗುತ್ತಿದ್ದೆವು, ನಮ್ಮ ಅಜ್ಜ- ಅಜ್ಜಿಯರಿಂದ ಬೈಗುಳ ತಿಂದದ್ದು ಇದೆ. ಆದರೆ, ಅಂದು ಗುನುಗಿದ ಪರಿಣಾಮವೇ ಇಂದು ನನಗೆ ಮೇಲೆ ಹೇಳಿದ ಹಾಡುಗಳೆಲ್ಲವೂ, ಹೇಳದ ಹಲವು ಹಾಡುಗಳು ಇನ್ನೂ ನೆನಪಿನಲ್ಲಿರುವುದು. ಧರ್ಮ, ಜಾತಿ ಅದನ್ನೆಲ್ಲ ಬಿಟ್ಟು ಕೇವಲ ಕ್ರಿಸ್‌ಮಸ್‌ನ ಸಡಗರವನ್ನು ಮಾತ್ರ ಹಂಚಿಕೊಳ್ಳಲು ಇಚ್ಛಿಸಿ ಈ ಎಲ್ಲವನ್ನೂ ಹೇಳಿದ್ದು. ಡಿಸೆಂಬರ್‌ ನಮಗೆ ಅಂದರೆ ಭಾರತದಲ್ಲಿ ಚಳಿಗಾಲ (winter solstice ನ ಸಮಯ), ಅದೇ ದಕ್ಷಿಣಾರ್ಧ ಗೋಳದಲ್ಲಿ ಬೇಸಿಗೆ (summer solstice).

ಇದಲ್ಲದೇ, Santa Claus ನನ್ನು ಮರೆಯಲು ಸಾಧ್ಯವೇ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ Santa Claus ಒಂದು ಪ್ರಸಿದ್ಧ ಪೌರಾಣಿಕ ಪಾತ್ರ. ಆತ ಜಗತ್ತಿನ ಎಲ್ಲ ಮಕ್ಕಳ ಒಂದು ಪಟ್ಟಿಯನ್ನು ಮಾಡಿಕೊಂಡಿರುತ್ತಾನಂತೆ, ಕ್ರಿಸ್‌ಮಸ್‌ನ ಹಿಂದಿನ ದಿನ (ಕ್ರಿಸ್‌ಮಸ್‌ ಈವ್) ಒಳ್ಳೆಯ ವಿಧೇಯ ಮಕ್ಕಳಿಗೆ ಬಹುಮಾನಗಳನ್ನು ಹಾಗೂ ತುಂಟ – ಹಠ ಮಾಡುವ ಮಕ್ಕಳಿಗೆ ಕಲ್ಲಿದ್ದಲನ್ನು ಕೊಡುತ್ತಾನೆಂಬ ಪ್ರತೀತಿ. ಮಕ್ಕಳಲ್ಲಿ ಶಿಸ್ತನ್ನು ಮೈಗೂಡಿಸಲು ಇದೊಂದು ಮಾರ್ಗ. ನಮ್ಮ ಶಾಲೆಯಲ್ಲಿಯೂ ನಮ್ಮ ಪಿ.ಟಿ ಮಾಸ್ತರ್‌ ಈ ವೇಷವನ್ನು ಹಾಕಿ, ಕೊನೆಗೆ ವೇದಿಕೆ ಮೇಲೆ ಬಂದು ಚಾಕ್‌ಲೇಟ್‌ಗಳನ್ನು ನಮ್ಮೆಡೆಗೆ ಎಂದರೆ ಸಭೀಕರೆಡೆಗೆ ಬೀಸುತ್ತಿದ್ದರು. ಮಕ್ಕಳು ಮುಗಿಬಿದ್ದು ಸಂಗ್ರಹಿಸುತ್ತಿದ್ದರು. ಕೊನೆಗೆ ಕಾರ್ಯಕ್ರಮ ಮುಗಿದ ಸಂತೋಷ ಇನ್ನು ನಮ್ಮ ಸ್ನೇಹಿತರೆಲ್ಲರಿಗೂ ಮುಂದಿನ ವರ್ಷ ಸಿಗೋಣ ಅಂತ ಹೇಳಿ ಹೊರಡುತ್ತಿದ್ದೆವು. ಅಲ್ಲಿಗೆ ಕ್ರಿಸ್‌ಮಸ್‌ ಕಾರ್ಯಕ್ರಮ ಸಂಪೂರ್ಣವಾಗುತ್ತಿತ್ತು.

ಎಲ್ಲ ಹಬ್ಬಗಳು ಸೌಹಾರ್ದತೆಯ ಪ್ರತೀಕವಾಗಲಿ, ಜಗತ್ತಿನಲ್ಲಿ ಶಾಂತಿ ನೆಲಸಲಿ ಎಂಬ ಸದಾಶಯದೊಂದಿಗೆ ಕ್ರಿಸ್‌ಮಸ್‌ ಶುಭಾಶಯಗಳು……..

* * * * * * * *

ಲೇಖನವನ್ನು ಓದಿ – ಹರಸಿ ಹಾರೈಸಿ, ಇಷ್ಟವಾದರೆ ಪಸರಿಸಿ…….

ಹಿಂಬರಹ

ಏನಿದು ʼಹಿಂಬರಹʼ ಎಂಬ ವಿಚಿತ್ರ ಶೀರ್ಷಿಕೆ ಎಂದುಕೊಳ್ಳುತ್ತಿರಬಹುದು. ಈ ಮಾರ್ಚ್‌ ನಲ್ಲಿ ವಿಧಿಸಲಾದ ಲಾಕ್‌ಡೌನ್‌ಗೂ ಮುಂಚೆ ಮೆಟ್ರೋದಲ್ಲಿಯೇ ಆಫೀಸಿಗೆ ಹೋಗುತ್ತಿದೆ. ಮೊದಲ 21 ದಿನಗಳ ಲಾಕ್‌ಡೌನ್‌ ಏಪ್ರಿಲ್‌ 14ಕ್ಕೆ ಮುಗಿದ ನಂತರ ಮತ್ತೆ ಏಪ್ರಿಲ್‌ 20 ರ ವರೆಗೆ ಲಾಕ್‌ಡೌನ್‌ ಅನ್ನು ವಿಸ್ತರಿಸಲಾಯಿತು. ಅದಾದನಂತರ ಯಥಾಪ್ರಕಾರ ನಮ್ಮ ಎಲ್ಲಾ ಸರ್ಕಾರಿ ಕಛೇರಿಗಳು ಕಾರ್ಯಾರಂಭ ಮಾಡಿದವು. ಇನ್ನೂ ಮೆಟ್ರೋ ಪ್ರಾರಂಭವಾಗಿರಲಿಲ್ಲ ಮತ್ತು ಸಿಟಿ ಬಸ್‌ ಪ್ರಯಾಣ ಸುರಕ್ಷಿತವಲ್ಲವೆಂದು ನಾನು ದ್ವಿಚಕ್ರವಾಹನದಲ್ಲಿ ಕಛೇರಿಗೆ ಹೋಗಲು ಪ್ರಾರಂಭಿಸಿದೆ. ಅಂದಿನಿಂದ ನನ್ನ ಮುಂದೆ ಹೋಗುತ್ತಿರುವ ವಾಹನಗಳ ಹಿಂಬರಹವನ್ನು ಓದುವ ಅಭ್ಯಾಸ ಪ್ರಾರಂಭವಾಯಿತು. ಎಷ್ಟೋ ಬಾರಿ ಚೇಸ್‌ ಮಾಡಿಕೊಂಡು ಅದರ ಹಿಂದೆಯೇ ಹೋಗಿ ಓದಿದ್ದಿದೆ. ಸುಮಾರು ಈ 6 ತಿಂಗಳುಗಳಲ್ಲಿ ಆಟೋ, ಟ್ಯಾಕ್ಸಿ, ಮೋಟರ್‌ಬೈಕ್‌ , ಲಾರಿ ಎಲ್ಲದರ ಹಿಂಬರಹ ಓದಿದ್ದೇನೆ. ವಿಚಿತ್ರ ಎನಿಸಿದ, ಅರ್ಥಪೂರ್ಣ ಎನಿಸಿದ, ಸೋಜಿಗವೆನಿಸಿದ ಕೆಲವನ್ನು ಮಾತ್ರ ಇಲ್ಲಿ ಹಂಚಿಕೊಳ್ಳಲಿಚ್ಛಿಸುತ್ತೇನೆ. ತುತ್ತಾ ಮುತ್ತಾ ಚಿತ್ರದಲ್ಲಿ ರಮೇಶ್‌ ಅರವಿಂದ್‌ ಅಭಿನಯಿಸುತ್ತಾ ಅವರ ಹಾಡಿನಲ್ಲಿ ಹೇಳುತ್ತಾರೆ ʼಆಟೋ ಲಾರಿ ಹಿಂದೆ ಬರೆದವನು ತತ್ತ್ವಜ್ಞಾನಿ ಅಂತ ತಿಳಿಬೇಡʼ ಅಂತ. ತತ್ತ್ವಜ್ಞಾನಿ ಅಂತಲ್ಲ, ಆದರೆ ಕೆಲವರು ಅದೆಷ್ಟು ವಿಚಿತ್ರವಾಗಿ ಬರೆಸಿರುತ್ತಾರೆ ಎಂದಾದರೂ ತಿಳಿದುಕೊಳ್ಳಬಹುದಲ್ಲವೇ?

ಮೊದಲ ಸಲ ಒಂದು ದ್ವಿಚಕ್ರವಾಹನವನ್ನು ಚೇಸ್‌ ಮಾಡಿದ್ದು ಈ ಶೀರ್ಷಿಕೆಯಿಂದಾಗಿ “Sorry girls my baby is very strict” ಎಂದು ಬರೆದದಕ್ಕಾಗಿ. ಇದನ್ನೇನೋ ನಾನು ಓದಿ ಬಿಟ್ಟಿದ್ದೆ, ಮತ್ತೆ ಚೇಸ್‌ ಮಾಡಿದ್ದು ಏತಕ್ಕೆ ಅಂತೀರಾ? my baby is very strict ಅಂತ ಬರೆಸಿದ ಈತನ ಹಿಂದೆ Sorry ಕೇಳುವಷ್ಟು ಹುಡುಗಿಯರು ಬಿದ್ದಿದ್ದಾರಾ? ಹಾಗಿದ್ದರೆ ಇವನು ಸ್ಫುರದ್ರೂಪಿಯಾಗಿರಬೇಕು, ನೋಡಿಯೇಬಿಡುವ ಅಂತ ಚೇಸ್‌ ಮಾಡಿದ್ದು, ಆದರೆ ನನಗೆ ನಿರಾಶೆಯಾಯಿತು :(. ಅವನು ಬರೆಸಿಕೊಂಡದ್ದು ಕೊಂಚ overacting ಅನಿಸಿತು.

ನನಗೆ ಈ ಮೊದಲು ನನ್ನ ಕಾಲೇಜಿನ ಪ್ರೊಫೆಸರ್‌ ಒಬ್ಬರ ಕಾರ್‌ ಹಿಂದೆ “ಕೃಷ್ಣನೆಂಬ ಸೊದೆಯ ಕಡಲು” ಎಂದು ಬರೆಸಿದ್ದು ತುಂಬಾ ಇಷ್ಟವಾಗಿತ್ತು . ಇದರ ಮೇಲೆ ತಕ್ಕ ಮಟ್ಟಿಗೆ ಸಂಶೋಧನೆ ಕೂಡ ಮಾಡಿದ್ದೆ. ಶ್ರೀ ಮಧ್ವಾಚಾರ್ಯರ “ಕೃಷ್ಣಾಮೃತ ಮಹಾರ್ಣವ” ಎಂಬ ಸಂಸ್ಕೃತ ಗ್ರಂಥದ ಕನ್ನಡ ಅವತರಣಿಕೆಯನ್ನು ಬನ್ನಂಜೆ ಗೋವಿಂದಾಚಾರ್ಯರು “ಕೃಷ್ಣನೆಂಬ ಸೊದೆಯ ಕಡಲು” ಎಂಬ ಶೀರ್ಷಿಕೆ ಇಂದ ಬರೆದಿರುವುದಾಗಿ ಪತ್ತೆ ಮಾಡಿ ಆ ಪುಸ್ತಕವನ್ನು ಕೊಂಡುಕೊಂಡಿದ್ದೇ ಕೂಡ (ಓದಿದೇನಾ? ಕೇಳಬೇಡಿ).

ಇನ್ನೂ ಅವರವರ ಮತಾಭಿಮಾನ ಮೆರೆಯುವ ಹಿಂಬರಹಗಳು ಸಾಮಾನ್ಯ “ಜೈ ಶ್ರೀಕೃಷ್ಣ”, “786”, “Jesus is the only savior”, “ಹರೇ ಶ್ರೀನಿವಾಸ”, “ಜೈ ಜೈ ಮಹಾಶ್ರಮಣ” ಹೀಗೆ ಅನೇಕರು ಬರೆದುಕೊಂಡಿರುತ್ತಾರೆ. ಕನ್ನಡಾಭಿಮಾನದ ಪ್ರತೀಕವಾಗಿ ಕೆಲವು ಬರಹಗಳು, ಈ ಆಟೋಗಳ ಹಿಂದೆ ರಾಜ್‌ಕುಮಾರ್‌ ಭಾವಚಿತ್ರ ಒಬ್ಬರದು, ವಿಷ್ಣುವರ್ಧನ್‌ ಅವರದು, ಅಂಬರೀಷ್‌ ಅವರದು ಮತ್ತೆ ಈ ಉಪೇಂದ್ರ, ದರ್ಶನ್‌, ಯಶ್ ಹೀಗೆ ಹಲವರದು ಕಂಡಿದ್ದೇನೆ. ನಮ್ಮ ಆಟೋರಾಜ ಶಂಕರ್‌ನಾಗ್‌ ಅವರದು ಸಾಮಾನ್ಯವಾಗಿ ಎಲ್ಲಾ ಆಟೋದವರು ಹಾಕಿಕೊಂಡಿರುತ್ತಾರೆ. ಈ ಅನಂತ್‌ನಾಗ್‌ ಅವರ ಭಾವಚಿತ್ರ ಏಕೆ ಯಾರು ಹಾಕಿಕೊಂಡಿರುವುದಿಲ್ಲ ಎನ್ನುವುದು ನನ್ನನ್ನು ಕಾಡುವ ಪ್ರಶ್ನೆ?‌ ಇನ್ನೊಂದು ಬಹು ವಿಚಿತ್ರ ಎನಿಸುವ caption ನೊಂದಿಗೆ ಒಂದು ಭಾವಚಿತ್ರವನ್ನು ಆಟೋದ ಹಿಂದೆ ನೋಡಿದೆ. ಅದು ಹೀಗಿತ್ತು: ವಜ್ರಮುನಿ, ತೂಗುದೀಪ ಶ್ರೀನಿವಾಸ್‌ ಮತ್ತು ಸುಧೀರ್‌ ಅವರ ಭಾವಚಿತ್ರಗಳು ಆಟೋದ ಕೆಳಗೆ ಒಂದು ಭಾಗದಲ್ಲಿ, ಆಟೋದ ಮೇಲಿನ ಭಾಗದಲ್ಲಿ ರವಿಶಂಕರ್‌ ಅವರ ಚಿತ್ರ ಮತ್ತು ಈ ಬರಹ-“ಆವಾಗ ನೀವ್‌ ವಿಲನ್‌ ಇವಾಗ ನಾವ್‌ ವಿಲನ್ ನಿಮಗಾದ್ರೆ ನಾಟಿ ಕೋಳಿ ನಮಗಾದ್ರೆ ಬಾಯ್ಲರ್‌ ಕೋಳಿನಾ” ಅಂತ. ಇದರ ಅರ್ಥ ನನಗಾಗಲಿಲ್ಲ, ಆಟೋದವನನ್ನು ನಾನು ಕೇಳಲಿಲ್ಲ.

ಇನ್ನೂ ಸುಮಾರು ಈ ತರಹದವು ಇವೆ: “ತಂದೆ ಸಾರಥಿ, ತಾಯಿ ಶಕ್ತಿ, ಹೆಂಡತಿ ಸ್ಫೂರ್ತಿ, ಮಕ್ಕಳು ಕೀರ್ತಿ”, “ಸರ್ವೇ ಜನಾಃ ಸುಖಿನೋಭವಂತು”, “ದೇವರ ಆಟ ಬಲ್ಲವರಾರು”, “ಗುಡಿ ಪೂಜೆ ಇಲ್ಲದ ದೇವರು ತಾಯಿ”, “ತಂದೆ ತಾಯಿಯ ಆಶೀರ್ವಾದ”, “ಅಕ್ಕಂದಿರ ಆಶೀರ್ವಾದ”, “ಅಜ್ಜಿಯ ಸವಿನೆನಪು”, “ಪೋಷಕರ ಆಶೀರ್ವಾದ”, “wife’s gift”, “ಸೂರ್ಯಪುತ್ರ”, “ತಾಯಿ ಕೊಟ್ಟ ಪುನರ್ಜನ್ಮ”, “ರಾಷ್ಟ್ರಕವಿ ಕುವೆಂಪು-ತೀರ್ಥಹಳ್ಳಿ”, “ಹಾಯ್‌ ಮಿತ್ರ”. “ಅಧಿರತಿ” ಹೀಗೆ ಹಲವಾರು. ಖುಷಿಯಾಗಿದ್ದು ಈ “wife’s gift” ಅನ್ನೋ ಬರಹ ನೋಡಿದಾಗ! ಪರವಾಗಿಲ್ಲ, ನಮ್ಮ ಹೆಣ್ಣುಮಕ್ಕಳು ಭಾರಿ gift ಕೊಡ್ತಾರೆ ಮತ್ತು ಅದನ್ನು ಈ ಗಂಡಸರು acknowledge ಮಾಡೋ ಮಟ್ಟಿಗೆ broad minded ಆಗಿದಾರೆ, ಸಂತೋಷ ಆಯ್ತು.

ಇನ್ನೂ ಕೆಲವರು ಈ ಇಂಗ್ಲೀಷ್‌ನಲ್ಲಿಯೇ ಬರೆಸಿರುತ್ತಾರೆ: “siri”, “Fight for the Nation, not for religion”, “dont touch my car”, “prince”, “I am a bad boy”, “Train like a beast and appear like a princess”, “silent killer” ಹೀಗೆ. “Train like a beast and appear like a princess” ಈ ರೀತಿ ಬರೆಸಿದ ಕಾರನ್ನು ಸಹ ನಾನು ಚೇಸ್‌ ಮಾಡಿದೆ, princess ಅನ್ನು ನೋಡೇ ಬಿಡೋಣ ಅಂತ, ಆದರೆ ಅದೇ ಮೇಲಿನ ತರಹ ನಿರಾಶೆಯಾಯಿತು…. ಹಾ ಹಾ ಹಾ…. ಈ “silent killer” ಅಂತ ಬರೆದಿದ್ದು ಒಂದು ಟ್ಯಾಕ್ಸಿ ಮೇಲೆ, ಹುಷಾರು, ಇನ್ನು ಮುಂದೆ ಟ್ಯಾಕ್ಸಿ ಏರುವ ಮುನ್ನ ಹಿಂದೆ ಏನು ಬರೆಸಿದ್ದಾರೆ ಅಂತ ಒಂದು ಬಾರಿ ನೋಡಿಬಿಡಿ ಆಯ್ತಾ!

ಕೆಲವು ಆಟೋ ಮತ್ತು ಟ್ಯಾಕ್ಸಿಗಳ ಹಿಂದೆ ಕೆಲವರಿಗೋಸ್ಕರ ಬರೆದ ಸಂದೇಶಗಳಿರುತ್ತವೆ- ಉದಾಹರಣೆಗೆ- “ಇಷ್ಟ ಪಟ್ಟು ಜೊತೆ ಇರು I will take care ಗಾಂಚಳಿ ಇಂದ ದೂರ ಹೋದರೆ I dont care”, “ನೋಡಿದ್ರೆ ನಕ್ತಿವಿ ನಕ್ಕಿದ್ರೆ ಬಿಡ್ತಿವಾ ಚಿನ್ನ” ಇಲ್ಲೂ ಹುಷಾರು, ನಕ್ಕರೆ ಬಿಡಲ್ವಂತೆ, “ಲೇ ಆಟೋ ಓಡಿಸಿದ್ರು ಹಾರ್ಟಲ್ಲಿ ಇಟ್ಕೊಂಡು ನೋಡ್ಕೋತಿನೇ….”, “ಈ ಹೃದಯ ನೋಯಿಸಬೇಡ ಕಣೇ, ನನ್ನ ಪ್ರೀತಿಯ ರಾಕ್ಷಸಿ” ರಾಕ್ಷಸಿಯನ್ನೂ ಪ್ರೀತಿಸಬಹುದಾ, ಹಾಗಾದರೆ ಇವನು ಮಹಾಭಾರತದ ಭೀಮನೇ ಇರಬೇಕು, ಆಕೆ ಹಿಡಿಂಬೆಯಾದರೆ ಪರವಾಗಿಲ್ಲ, ರಾಮಾಯಣದ ಶೂರ್ಪನಖಿಯಾದರೆ ಕಷ್ಟ. ಇನ್ನೊಂದು ವಿಚಿತ್ರವಾಗಿತ್ತು “ಯಾವುದು ಹೌದು ಅದು ಅಲ್ಲ, ಯಾವುದು ಅಲ್ಲಾ ಅದು ಹೌದು”-ನನಗೆ ತಿಳಿಯಲಿಲ್ಲ, ನಿಮಗೆ ತಿಳಿದರೆ ನನಗೆ ತಿಳಿಸಿ. ಇನ್ನೊಬ್ಬರು ಅವರ ಕಾರ್‌ ಹಿಂದೆ ಹೀಗೆ ಬರೆಸಿದ್ದರು “Relax.. its just traffic… we’ll get there” ನಿಜ, ಈ ಬೆಂಗಳೂರಿನ ಟ್ರಾಫಿಕ್‌ಗೆ ಇದು ಬೇಕು.

ಒಟ್ಟಿನಲ್ಲಿ ಚಿತ್ರ ವಿಚಿತ್ರವಾದ ಹಲವಾರು ಬರಹಗಳನ್ನು ನೋಡಿದರೂ ಸಹ, ಕೆಲವು ನೆನಪಲ್ಲಿ ಉಳಿದು ಈ ಲೇಖನದಲ್ಲಿ ಮೂಡಿದವು. ಒಟ್ಟಿನಲ್ಲಿ ನನ್ನ ಆಫೀಸ್‌ ಪ್ರಯಾಣವು ಈ ತರಹದ ತರಹೇವಾರಿ ಬರಹಗಳನ್ನು ನೋಡುತ್ತಾ, ಮೈಯೆಲ್ಲಾ ಕಣ್ಣಾಗಿಸಿಕೊಂಡು ಗಾಡಿ ನಡೆಸುತ್ತಾ ಸಾಗುತ್ತಿರುತ್ತದೆ. ನೀವೂ ವಿಚಿತ್ರವೆನಿಸುವ ಬರಹಗಳನ್ನು ನೋಡಿದ್ದರೆ ಅಥವಾ ನೀವೆ ನಿಮ್ಮ ವಾಹನದ ಹಿಂದೆ ಈ ತರಹ ಬರೆಸಿದ್ದರೆ ತಿಳಿಸಿ……..

-ಮಾನಸಾ.ಆರ್‌.ಕುಲಕರ್ಣಿ

ಸ್ನೇಹಿತರ ದಿನಾಚರಣೆ

ಪ್ರತಿ ವರ್ಷ ಆಗಸ್ಟ್‌ ತಿಂಗಳ ಮೊದಲನೇ ಭಾನುವಾರ ಸ್ನೇಹಿತರ ದಿನಾಚರಣೆ ಎಂದು ಆಚರಿಸಲಾಗುತ್ತದೆ. ಇದಕ್ಕೊಂದು ಇತಿಹಾಸವಿರುತ್ತದೆ, ಇರಲೇ ಬೇಕಲ್ಲವೇ. ಆದರೆ, ನಾನೀಗ ಆ ಇತಿಹಾಸವನ್ನು ಬರೆಯುತ್ತಿಲ್ಲ, ನನ್ನ ಜೀವನದ ಇತಿಹಾಸದ ಪುಟಗಳಿಂದ-ನಿಮ್ಮ ಜೀವನದಲ್ಲೂ ನಡೆದಿರಬಹುದಾದ, ಕಲ್ಪನಾ ಲೋಕದಿಂದ ಕೆಲವು, ನೈಜ ಸಂಗತಿಗಳಿಂದ ಕೆಲವು ವಿಷಯಗಳನ್ನು ಹೆಕ್ಕಿ ತಂದು, ಕಸೂತಿ ಮಾಡಿ ತಮ್ಮ ಮುಂದೆ ಒಂದು ಲೇಖನದ ರೂಪದಲ್ಲಿ ಪ್ರದರ್ಶಿಸಬಯಸುವ ಒಂದು ಕಿರು ಪ್ರಯತ್ನದ ಫಲವೇ ಈ ಲೇಖನ!

ಒಂದು ಹಳೆಯ ಹಾಡಿನೊಂದಿಗೆ ಈ ಲೇಖನದ ಮುನ್ನುಡಿ ಪ್ರಾರಂಭಿಸೋಣವೇ?

“ಸ್ನೇಹಿತರೇ ನಿಮಗೆ ಸ್ವಾಗತ, ನನ್ನೆದೆಯ ಪ್ರೀತಿ ಸ್ವಾಗತ……..”

ಸ್ನೇಹ ಎಂಬುದು ಒಂದು ಭಾವ, ಆ ಭಾವದ ಪರಿಣಾಮದಿಂದಾಗಿ ಜೀವನದಲ್ಲಿ ಕ್ರಿಯಾರೂಪದಲ್ಲಿ ಬಂದವರನ್ನು ಸ್ನೇಹಿತ/ಸ್ನೇಹಿತೆ ಅಥವಾ ಗೆಳೆಯ/ಗೆಳತಿ ಎಂದು ಕರೆಯುತ್ತೇವೆ. ಭಾವ ಶಾಶ್ವತ- ಅಂದರೆ ಸ್ನೇಹ ಭಾವವೆಂಬುದು ನಮ್ಮ ಮನಸ್ಸಿನಲ್ಲಿ ಹರಿಯುವ ನೀರಿನ ಧಾರೆಯಂತೆ. ಆದರೆ ಅದರ ಕ್ರಿಯಾರೂಪವಾಗಿ ಬಂದ ಸ್ನೇಹಿತರು ಶಾಶ್ವತನಾ? ಗೊತ್ತಿಲ್ಲ….

ಜೀವನದಲ್ಲಿ ವಿವಿಧ ಬಗೆಯ ಗೆಳೆಯ/ಗೆಳತಿಯರು ಸಿಗುತ್ತಾರೆ. ಕೆಲವರು ಹಾಯ್‌ ಹೆಲೋ ಮಾತ್ರಕ್ಕೆ ಸೀಮಿತವಾಗ್ತಾರೆ. ಇನ್ನೂ ಕೆಲವರು ಹುಟ್ಟು ಹಬ್ಬದ ವಿಶೇಷ ಸಂದೇಶ ಕಳುಹಿಸಲು ಮತ್ತು ನಮ್ಮಿಂದ ಅದೇ ಪ್ರಕ್ರಿಯೆ ಮುಂದುವರೆದು ಆ ಸ್ನೇಹ ಉಳಿದಿರುತ್ತದೆ. ಇನ್ನೂ ಕೆಲವು, ಅವರು ಯಾರೆಂದು ನಮಗೆ ಗೊತ್ತು, ನಾವು ಯಾರೆಂದು ಅವರಿಗೆ ಗೊತ್ತು. ಎದುರಿಗೆ ಬಂದಾಗ ಒಂದು ನಗು-ಅಷ್ಟೇ ಆ ಸ್ನೇಹ. ಇನ್ನೂ ಕೆಲವರು ಸ್ನೇಹಿತರಾಗಿ ಜೀವನದಲ್ಲಿ ಇರುವ ಬದಲು, ಸ್ವೇಚ್ಛಾಚಾರದ ದಾರಿ ಹಿಡಿದು, ಸ್ನೇಹಕ್ಕೆ ಅಪಾರ್ಥ ಕಲ್ಪಿಸಿ ನಮ್ಮಿಂದ ಶಾಶ್ವತವಾಗಿ ದೂರ ಉಳಿಯುತ್ತಾರೆ. ಬೆರಳಣಿಕೆಯಷ್ಟು ಮಾತ್ರ ಗಾಢವಾದ ಸ್ನೇಹಿತರಾಗಿ ಯಾವಾಗಲೂ ಜೊತೆ ಇರುತ್ತಾರೆ.

ಕೆಲವರು ಪ್ರೀತಿ (ಅನುರಾಗ) ಎಂಬ ಹೆಸರಿನಲ್ಲೇ ಬರುತ್ತಾರೆ, ಆದರೆ ಅದು ಸ್ನೇಹಮಯ ಪ್ರೀತಿಯಲ್ಲಿ ಅನಾವರಣಗೊಂಡು ಅದೇ ಚಿರಸ್ಥಾಯಿಯಾಗಿ ಸುಖ-ದುಃಖ ನೋವು ನಲಿವುಗಳಲ್ಲಿ ವಿಶ್ವಾಸದಿಂದ ಜೊತೆ ಇರುತ್ತಾರೆ. ಕೆಲವರು ಮೊದಲು ಗೆಳೆಯ/ಗೆಳತಿಯರಾಗಿರುತ್ತಾರೆ, ನಂತರ ಪ್ರಿಯಕರ/ಪ್ರಿಯತಮೆಯಾಗಿ ಅದು ಉಳಿಯದೇ ಮುರಿದು ಬಿದ್ದು, ಆಜನ್ಮ ದ್ವೇಷಿಕರಾಗಿ, ಇವರು ಸ್ನೇಹಿತರಾಗಿ ಒಂದು ಕಾಲದಲ್ಲಿ ಇದ್ದರಾ? ಎನ್ನುವಷ್ಟರ ಮಟ್ಟಿಗೆ ದೂರವಾಗುತ್ತಾರೆ. ನಮಗಿಂತ ತುಂಬಾ ಚಿಕ್ಕವರೂ ನಮಗೆ ಸ್ನೇಹಿತರಾಗಿರುತ್ತಾರೆ, ತುಂಬಾ ದೊಡ್ಡವರೂ ಸ್ನೇಹಿತರಾಗಿರುತ್ತಾರೆ.

ಈ ಮೇಲೆ ಹೇಳಿದ ಎಲ್ಲದರಲ್ಲೂ ಸ್ನೇಹ ಸರ್ವೇಸಾಮಾನ್ಯ ಅಂದರೆ Constant, ಬದಲಾಗುತ್ತಿರುವುದು ಮಾತ್ರ ಅದು ವ್ಯಕ್ತಗೊಂಡು ಉಳಿಯುವ ಮನುಷ್ಯ, ಅದು Variable. ಏಕೆ ಇದು ಹೀಗೆ? ಎಂದು ನನ್ನನ್ನು ನಾನು ಹಲವು ಬಾರಿ ಪ್ರಶ್ನಿಸಿಕೊಂಡದ್ದುಂಟು. ಕೆಲವರು ಜೀವನದಲ್ಲಿ ಇರುತ್ತಾರೆ ಇನ್ನೂ ಕೆಲವರು ನೆನಪಾಗಿ ಕಾಡುತ್ತಾರೆ. ಇಲ್ಲ ಸಲ್ಲದ ಪ್ರಶ್ನೆಗಳು ಮಾತ್ರ ಕೊನೆ-ಮೊದಲಿಲ್ಲದೇ ಜೊತೆ ಇರುತ್ತವೆ.

ಈಗೀಗ ಸ್ನೇಹ ಕೇವಲ ಪಬ್-ಪಾರ್ಟಿ-ಮೋಜಿಗೆ ಮಾತ್ರ ಸೀಮಿತವಾಗುತ್ತದೆ, ನಿಜವಾಗಿ ಅವರಿಗಾಗಿ ಯಾರೂ ಇರುವುದಿಲ್ಲ. ಆತ್ಮಹತ್ಯೆಯಂತಹ ನಿರ್ಧಾರಗಳು ತೆಗೆದುಕೊಳ್ಳುವಷ್ಟರ ಮಟ್ಟಿಗೆ ಜನ ಏಕಾಂಗಿಗಳಾಗುತ್ತಿದ್ದಾರೆ. ಇದೇಕೆ ಹೀಗೆ? ಬಹುಶಃ ಸ್ನೇಹದಲ್ಲಿ ನಶ್ವರವಾಗುತ್ತಿರುವ ನಂಬಿಕೆಯಿಂದಾಗಿ. ಯಾರೂ ಯಾರನ್ನೂ ನಂಬುತ್ತಿಲ್ಲ. ಕೇವಲ ಒಂದು ಭಾವ ಚಿತ್ರ, ಅದಕ್ಕೆ ನೂರಾರು ಲೈಕ್‌ಗಳು, ಆದರೆ ಕಷ್ಟದ ಸಮಯದಲ್ಲಿ ನೋವು ಹಂಚಿಕೊಳ್ಳಲು ಕೈಯಲ್ಲಿರುವ ಮೊಬೈಲ್‌ Contacts list ತೆಗೆದರೆ ಒಬ್ಬರೂ ಕೂಡ ಇರುವುದಿಲ್ಲ. ಇಂತಹ ತೋರಿಕೆಯ ಜೀವನ ಇಂದಿನದು. ಸ್ನೇಹಿತರ ದಿನದ ಶುಭಾಶಯಗಳು- ಅವರೂ ಕಳುಹಿಸುತ್ತಾರೆ, ನಾವೂ ಕಳುಹಿಸುತ್ತೇವೆ. ಆದರೆ, ಅವರು ಸ್ನೇಹಿತರಾ? ಗೊತ್ತಿಲ್ಲ.

ಕೆಲವೊಮ್ಮೆ ಅಮ್ಮ-ಮಗಳು, ಅಪ್ಪ-ಮಗ, ಅಮ್ಮ-ಮಗ, ಅಪ್ಪ-ಮಗಳು, ಅಕ್ಕ-ತಂಗಿ, ಅಣ್ಣ-ತಮ್ಮ, ಗಂಡ-ಹೆಂಡತಿ ಎಷ್ಟೋ ಒಳ್ಳೆಯ ಸ್ನೇಹಿತರಾಗಿರುತ್ತಾರೆ. ನಿಜವಾದ ಅರ್ಥದಲ್ಲಿ ಸ್ನೇಹವಿರುತ್ತದೆ! ಆದರೆ, ಅಲ್ಲಿ ಸಂಬಂಧದ ಹೆಸರು ಮಾತ್ರ ಬೇರೆ.

ಮೇಲಿನ ಎಲ್ಲವನ್ನೂ ನಾವು ನೋಡಿದಾಗ ಅನಿಸುವುದು ಸಂಬಂಧಕ್ಕೆ ಯಾವ ಹೆಸರು ಬೇಕಾದರೂ ಇಡಬಹುದು, ಆದರೆ ಅಲ್ಲಿ ಮುಖ್ಯ ಇರಬೇಕಾದುದು ಶಾಶ್ವತವಾದ-ನಿಸ್ವಾರ್ಥವಾದ-ನಿಜವಾದ “ಸ್ನೇಹ”. ಅಂತಹ ಸ್ನೇಹ ಎಲ್ಲರಿಗೂ ಸಿಗಲಿ ಎಂದು ಹಾರೈಸುತ್ತಾ “ಸ್ನೇಹಿತರ ದಿನದ ಶುಭಾಶಯಗಳು”.

ಸಂಬಂಧಗಳ ಸಂಕೋಲೆಯೊಳಗೆ ಬೆಸೆಯದೇ, ಜೀವನದಲ್ಲಿ ಬೇಸರವನ್ನು ಮೂಡಿಸದೇ, ಯಾವತ್ತಿಗೂ ಮಾಸದೇ, ಚಿಗುರುವ, ನವನವೋನ್ಮೇಷಶಾಲಿನಿಯಾದ ಸ್ನೇಹ ನಮ್ಮ-ನಿಮ್ಮೆಲ್ಲರದಾಗಲಿ ಎಂಬ ಆಶಯದೊಂದಿಗೆ…………………….

ಸ್ನೇಹಿತರೊಬ್ಬರ ಸ್ಫೂರ್ತಿದಾಯಕ ನುಡಿಗಳು ಮತ್ತು ಸಲಹೆಯ ಮೇರೆಗೆ ಮಂಕುತಿಮ್ಮನ ಕಗ್ಗದಿಂದ:

“ಒರ್ವನೇ ನಿಲುವೆ ನೀನುತ್ಕಟಕ್ಷಣಗಳಲಿ |
ಧರ್ಮಸಂಕಟಗಳಲಿ, ಜೀವನಸಮರದಲಿ ||
ನಿರ್ವಾಣದೀಕ್ಷೆಯಲಿ, ನಿರ್ಯಾಣಘಟ್ಟದಲಿ |
ನಿರ್ಮಿತ್ರನಿರಲು ಕಲಿ – ಮಂಕುತಿಮ್ಮ ||”

ಮಾನಸಾ.ಆರ್.ಕುಲಕರ್ಣಿ

ಕೊರೋನಾ

ಸುಮಾರು 40 ದಿನಗಳಿಂದ ಮನೆಯಲ್ಲಿಯೇ ಇರುವೆ. ಕಳೆದ ಸುಮಾರು ಒಂದು ಅಥವಾ ಒಂದೂವರೆ ವರ್ಷದಿಂದ ಇಷ್ಟು ದಿನಗಳ ಕಾಲ ಮನೆಯಲ್ಲಿಯೇ ಇದ್ದದ್ದು ಇದೇ ಮೊದಲು. ಅದಕ್ಕೆ ಮುನ್ನ ಪರೀಕ್ಷಾ ತಯಾರಿ ಎಂದು 4 ರಿಂದ 5 ವರ್ಷಗಳ ಕಾಲ ಮನೆಯಲ್ಲಿಯೇ ಇದ್ದೆ. ಹೋದ ವರ್ಷ ಜನವರಿ ಅಂತ್ಯದ ವೇಳೆಗೆ ನನ್ನ ವಿರಾಮದ ಗತಿಯಲ್ಲಿ ಸಾಗುತ್ತಿರುವ ಜೀವನವೆಂಬ ಕಾಲಿಗೆ ಕಾಣದ ಆ ದೇವರ ಕೃಪೆಯಿಂದ, ತಂದೆ ತಾಯಿಗಳ ಆಶೀರ್ವಾದದಿಂದ, ಬಂಧುಗಳ ಹಾರೈಕೆಯಿಂದ, ನನ್ನ ತಂಗಿಯ ಪ್ರಾರ್ಥನೆಯ ಫಲದಿಂದ ಕಾಲಿಗೆ ಚಕ್ರವೊಂದು ಬಂದು ತಗುಲಿತು. ಅದಕ್ಕೆ ಎರಡು ಗಾಲಿಗಳಿದ್ದವು. ಮದುವೆ ಮತ್ತು ಕೆಲಸ. ಹೌದು! ಎರಡೂ ಪೈಪೋಟಿ ಬಿದ್ದು ಒಮ್ಮೆಗೆ ನನ್ನ ಜೀವನಕ್ಕೆ ಕಾಲಿಟ್ಟಿದ್ದವು. ಅಂದಿನಿಂದ ಓಡು, ಓಡು, ಓಡು – ಓಡಲೇ ಎಂದ ಹಾಗೇ ಓಡುತ್ತಲೇ ಇದ್ದೆ. ಇನ್ನೂ ಇದೇ ನನ್ನ ಹೊಸ ಜೀವನ ವಿಧಾನ ಎಂದುಕೊಳ್ಳುವ ಹೊತ್ತಿಗೆ ಕಂಡು ಕೇಳರಿಯದ, ಶತಮಾನದ ವಿಸ್ಫೋಟ, ಮನು ಕುಲಕ್ಕೆ ಕಂಟಕವಾಗಿ ನನ್ನ (ಎಲ್ಲರ) ಓಡುತ್ತಿರುವ ಕಾಲಿಗೆ ತೊಡಕಾಗಿ ಬಂದದ್ದೇ ಕೊರೋನಾ ಎಂಬ ಮಹಾಮಾರಿ.

ಈ 40 ದಿನಗಳಿಂದ ಕೊರೋನಾ ಕುರಿತು ಸುಮಾರು ಲೇಖನಗಳನ್ನು ಓದಿದ್ದಾಯಿತು. ತರಹೇವಾರಿ ಟಿ.ವಿ ಕಾರ್ಯಕ್ರಮಗಳನ್ನು ನೋಡಿದ್ದಾಯಿತು. ಅದೆಲ್ಲವೂ ನನ್ನ ತಲೆಯಲ್ಲಿ ಸೇರಿ ಕಲಸುಮೇಲೋಗರವಾಗಿ ಈಗ ಈ ಲೇಖನದ ರೂಪದಲ್ಲಿ ಓದುತ್ತಿರುವ ನಿಮಗೆ ಸಹಾಯವಾಗಿ ಬರಲಿದೆಯೋ ಅಥವಾ ಪ್ರಶ್ನಾರ್ಥಕವಾಗಿ ಬರಲಿದೆಯೋ ನಾ ಕಾಣೆ!

ಒಂದೇ ರೀತಿ ಶರವೇಗದಲ್ಲಿ ಓಡುತ್ತಿರುವ ವಾಹನಕ್ಕೆ ಅವಾಕ್ಕಾಗಿ ಅಡ್ಡಿ ಎದುರಾದರೆ ವಾಹನ ಪಲ್ಟಿ ಹೊಡೆಯುವಂತೆ ಜನಜ್ಜೀವನ ಪಲ್ಟಿ ಹೊಡೆದು ಏನಾಯಿತು? ಏಕಾಯಿತು? ನಾವು ಬದುಕಿದ್ದೇವಾ? ನಮ್ಮೊಡನಿರುವವರು ಏನಾದರು? ಎಂದು ಕಣ್ಣು ಮಿಕಮಿಕ ನೋಡುವಂತೆ ಈಗ ಈ ಭೂಮಿಯ ವಾಹನದಲ್ಲಿ ಪ್ರಯಾಣಿಕರಾಗಿ ಸಂಚರಿಸುತ್ತಿರುವ ನಮ್ಮ ನಿಮ್ಮೆಲ್ಲರ ಪಾಡಾಗಿದೆ. ಇದು ಎಂದಾದರೂ ಮುಗಿದೀತೆ? ಎಂಬ ಭಯ ಕಾಡತೊಡಗಿದೆ.

ಕೊರೋನಾ ಎಂಬುದು ನಮಗೆ ನಿಮಗೆಲ್ಲರಿಗೂ ತಿಳಿದಂತೆ ಚೈನಾದ ವುಹಾನ್‌ ನಗರದಲ್ಲಿ ಜನ್ಮ ತಾಳಿತು. ಆದರೆ ಇದೇನು ಅನಾಥ ಶಿಶುವಾಗಿರಲು ಸಾಧ್ಯವಿಲ್ಲ. ಇದರ ಜನ್ಮಕ್ಕೆ ಕಾರಣ ಕರ್ತರು ಇರಲೇಬೇಕಲ್ಲವೇ? ಅದಲ್ಲದೇ, ಹೇಗೆ ಜನ್ಮ ತಾಳಿತು ಮತ್ತು ತನ್ನ ವಿರಾಟ್‌ ರೂಪವನ್ನು ಬಗೆ ಬಗೆಯಲ್ಲಿ ಹೇಗೆ ಬದಲಿಸಿಕೊಂಡಿತು ಎಂಬುದು ಕೂಡ ತಿಳಿಯಬೇಕಲ್ಲವೇ? ಇದರಲ್ಲಿ ಮೊದಲ ಮತ್ತು ಕೊನೆಯ ಪ್ರಶ್ನೆಗಳಿಗೆ ಉತ್ತರವಿದೆ. ಕಾರಣ ಕರ್ತರು-ನಿಮಗೆ ಗೊತ್ತಿದೆ. ವಿರಾಟ್‌ ರೂಪದ ಬದಲಾವಣೆ ದಿನೇ ದಿನೇ ಟಿವಿಯಲ್ಲಿ ಮಹಾ ಸಂಚಿಕೆಗಳಾಗಿ, ಪುರಾಣ ಪುಣ್ಯ ಕಥೆಗಳಿಗಿಂತ ಸ್ವಾರಸ್ಯಕರವಾಗಿ, ಭೂತ-ಪಿಶಾಚಿಗಳಿಗಿಂತಲೂ ಭಯಾನಕವಾಗಿ, ಜೇಮ್ಸ್‌ ಬಾಂಡ್‌ ಗಿಂತಲೂ ಗೂಢವಾಗಿ ಹೇಗೆ ಹೊಮ್ಮಿತು ಎಂಬುದು ಪ್ರಸಾರವಾಗುತ್ತಲೇ ಇದೆ. ನಾವು ನೀವೆಲ್ಲರೂ ಸಾಕ್ಷೀಕರಿಸುತ್ತಿದ್ದೇವೆ. ಆದರೆ, ಈ ಮಧ್ಯದ ಪ್ರಶ್ನೆ ಇದೆಯಲ್ಲವೇ ʼಹೇಗೆ ಜನ್ಮತಾಳಿತುʼ ಎಂಬುದು ಮಾತ್ರ ಚಲನಚಿತ್ರದಲ್ಲಿ ಕ್ಲೈಮ್ಯಾಕ್ಸ್‌ ಇಲ್ಲದೇ ಬರುವ ಮಧ್ಯಂತರ ವಿರಾಮವಾಗಿ, ಸ್ವರ್ಗ-ನರಕಗಳಿಗೂ ಹೋಗದೇ ತೇಲಾಡುತ್ತಿರುವ ಅಂತರ ಪಿಶಾಚಿಯಾಗಿ ತ್ರಿಶಂಕು ಸ್ವರ್ಗದಲ್ಲಿ ನೆಲೆಯೂರಿ ಬಿಟ್ಟಿದೆ.

ಇದನ್ನು ಅವರೇ ತಯಾರಿಸಿ ಬಿಟ್ಟರಂತೆ, ಅಕಸ್ಮಾತ್ತಾಗಿ ಲ್ಯಾಬಿನಿಂದ ಹೊರಹೊಮ್ಮಿತಂತೆ, ಬೇಕಂತಲೇ ಮಾಡಿದ್ದಂತೆ ಹಾಗಂತೆ ಹೀಗಂತೆ ಎಂಬ ಅಂತೆ ಕಂತೆಗಳ ಬೊಂತೆ ಬಿಟ್ಟರೆ ನಿಖರವಾದ ಉತ್ತರ ಯಾರ ಬಳಿಯೂ ಇಲ್ಲ. ಆದರೆ, ಉತ್ತರವಿಲ್ಲದ ಈ ಪ್ರಶ್ನೆ ಹುಟ್ಟಿದಾಗಿನಿಂದ ಆದ ಅನಾಹುತಗಳು ಮಾತ್ರ ವಿಪರೀತ. ಕೆಲಸ ಕಳೆದುಕೊಂಡವರು ಅದೆಷ್ಟೋ, ಅಂತಂತ್ರರಾಗಿರುವವರೆಷ್ಟೋ, ಎಷ್ಟು ಉದ್ದಿಮೆಗಳು ಮುಚ್ಚಿಹೋದವೋ, ಅದೆಷ್ಟು ಜನ ಮಾನಸಿಕ ಸಂತುಲನೆ ತಪ್ಪಿ ನರಕಯಾತನೆ ಅನುಭವಿಸುತ್ತಿರುವರೋ, ಇನ್ನೆಷ್ಟೋ ಜನ ಈ ರೋಗಕ್ಕೆ ಬಲಿಯಾಗಿ ಇಹಲೋಕವನ್ನೇ ತ್ಯಜಿಸಿದರು. ಬೇರೆ ದೇಶಗಳಲ್ಲಿ ಸಿಕ್ಕಿ ಹಾಕಿಕೊಂಡವರಿಗೆ ಈಗ ಮಾತೃ ಭೂಮಿಯ ನೆನಪು ಕಾಡುತ್ತಿದೆ, ಅವರು ನಮ್ಮ ದೇಶಕ್ಕೆ ತಲುಪಿದರೆ ಸಾಕು ಎನ್ನುತ್ತಿದ್ದಾರೆ. ನಮ್ಮ ದೇಶದಲ್ಲಿ ಕೂಲಿ ಕಾರ್ಮಿಕರು ನಮ್ಮ ಊರಿಗೆ ನಾವು ಸೇರಿದರೆ ಸಾಕು, ನೀರನ್ನಾದರೂ ಕುಡಿದು ಬದುಕುತ್ತೇವೆ ಎನ್ನುತ್ತಲಿದ್ದಾರೆ. ಆಟೋ ಡ್ರೈವರ್‌ಗಳು, ಕ್ಯಾಬ್‌ ಡ್ರೈವರ್‌ಗಳು, ಕೂಲಿ ಕಾರ್ಮಿಕರು, ಎಲೆಕ್ಟ್ರಿಷಿಯನ್‌ಗಳು, ಪ್ಲಂಬರ್‌ಗಳು, ಹೊಲಿಗೆ ಅಂಗಡಿಯವರು ಹೀಗೆ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ. ಇವರೆಲ್ಲಾ ಎಷ್ಟು ದಿನ ಮನೆಯಲ್ಲಿರಲು ಸಾಧ್ಯ? ಹೊಟ್ಟೆಗೆ ಏನು ತಿನ್ನಲು ಸಾಧ್ಯ? ಸರ್ಕಾರ ಮಾಡುತ್ತಿರುವ ಸಹಾಯ, ಮಾನವತಾವಾದಿಗಳು ಮಾಡುತ್ತಿರುವ ಸಹಾಯ ಇವರಿಗೆ ನಿಜವಾಗಿಯೂ ತಲುಪುತ್ತಿದೆಯಾ? ಈ ಮಧ್ಯೆ ಮೂಕ ಪ್ರಾಣಿಗಳ ಗತಿ? ಬೀದಿ ನಾಯಿಗಳ ಗತಿ? ಅದಂತೂ ಹೇಳ ತೀರದು.

ಮನುಷ್ಯ ಜಾತಿಗೆ ಸಂಚಕಾರವಾಗುವ ಇಂತಹ ಒಂದು ವೈರಸ್‌ ಅನ್ನು ತಯಾರು ಮಾಡಬೇಕೆಂದು ಅನಿಸಿದ್ದಾದರೂ ಹೇಗೆ? (ಒಂದು ವೇಳೆ ತಯಾರಿಸಿದ್ದು ನಿಜವೇ ಆದಲ್ಲಿ). ಮಾನವನ ಯೋಚನೆ ಎಷ್ಟು ಕೀಳು ಮಟ್ಟಕ್ಕೆ ಇಳಿದಿರಬಹುದು? ಈ ಮಧ್ಯೆ ನಮ್ಮ ಬಿಸಿನೆಸ್‌ ಮೆನ್‌ಗಳಿಗೆ ಅವರ ಉದ್ಯಮದ್ದೇ ಚಿಂತೆ. ಅವರಿಗೆ ಎಕಾನಮಿ ಹಾಳಾಗುತ್ತಿರುವ ಪರಿವೆಯೇ ಹೊರತು ಅದಕ್ಕಿಂತ ದೊಡ್ಡ ಮೌಲ್ಯ ಯಾವುದೂ ಇಲ್ಲವೇ? ಎಕಾನಮಿ ಒಂದಿದ್ದರೇ ಎಲ್ಲಾ ಒಟ್ಟಿಗೆ ಬಂದು ಬಿಡುವುದೇ? ಹಾಗಾದರೇ ಕೊರೋನಾ ಬರುವ ಮುಂಚೆ ನಮ್ಮ ರಾಷ್ಟ್ರ ಸುಭಿಕ್ಷ ರಾಷ್ಟ್ರವಾಗಿತ್ತೇ? ಇಲ್ಲವಲ್ಲಾ… ಮತ್ತೇ?

ಹೌದು, ಈ ಎಲ್ಲಾ ಪ್ರಶ್ನೆಗಳಿಗೆ ಸಮಾಧಾನ ಏನು? ಅದು ಮಾತ್ರ ಗೊತ್ತಿಲ್ಲ. ಇಷ್ಟು ಜನ ಕೊರೋನಾದಿಂದ ಸಾಯಬಹುದು, ಇಷ್ಟು ಜನ ಡಿಪ್ರೆಷನ್‌ ಬಂದು ಆತ್ಮಹತ್ಯೆ ಮಾಡಿಕೊಳ್ಳಬಹುದು, ಇಷ್ಟು ಜನ ಹಸಿವಿನಿಂದ ಸಾಯಬಹುದು ಎಂಬ ಅಂಕಿ ಅಂಶಗಳಿವೆಯೇ ಹೊರತು, ಮನುಕುಲದ ಈ ಕಂಟಕದ ವಿರುದ್ಧ ಒಂದಾಗಿ ಜಯಿಸಲು ಒಂದೇ ಒಂದು ಅಂಶವೂ ಇಲ್ಲ. ಎಲ್ಲಾ trial and error method. ಅವರ್ಯಾರೋ ಮಾಡಿದರು, ನಾವು ಮಾಡುತ್ತಿದ್ದೇವೆ. ಮತ್ಯಾರೋ ಹೇಳಿದರು, ನಾವು ಕೇಳುತ್ತಿದ್ದೇವೆ.

ಈ ಮಧ್ಯೆ ಈ ಟಿವಿ ಚಾನಲ್‌ನವರ ಮಿತಿ ಮೀರಿದ ಅವಾಂತರ. ಈ ಮಾಧ್ಯಮ ಬಂದ್‌ ಆದರೆ ಅರ್ಧ ಕೊರೋನಾ ಬಂದ್‌ ಆಗಬಹುದೇನೋ? ಕೊರೋನಾ ಎಂಬ ನರಪಾತಕಿ? ಕೊರೋನಾ ಎಂಬ ಕೀಚಕಿ? ಪುರಾಣಗಳಲ್ಲಿ ಇರುವುದೇ ಪಾತ್ರ ಕೀಚಕ. ಇವರು ಹೇಳುವುದು ಕೀಚಕಿ ಅಂತೇ? ಕೊರೋನಾ ಇವರ ಸ್ಟುಡಿಯೋಗೆ ಬಂದು ಹೇಳಿತ್ತಾ ನಾನು ಹೆಣ್ಣು ಅಂತ? ಅದನ್ನು ಒಂದು Neutral Gender ಆಗಿ ಇಡಲು ಏನು ರೋಗ ಇವರಿಗೆ? ರಾಕ್ಷಸ, ನರ ಭಕ್ಷಕ… What Nonsense?

ಕಣ್ಣಿಗೆ ಕಾಣದ ಒಂದು ಕ್ರಿಮಿ ಜಗತ್ತನ್ನೇ ಅಲುಗಾಡಿಸಿ, ಸಂಕಟ ಬಂದಾಗ ಕಾಪಾಡು ಎಂದು ಮೊರೆಹೋಗುವ ದೇವಸ್ಥಾನ, ಮಸೀದಿ, ಇಗರ್ಜಿಗಳ ಬಾಗಿಲು ಮುಚ್ಚಿಸಿ, ಏ ಮಾನವ ನಿನ್ನ ಅಂತಃಸತ್ವವನ್ನು ಹೊಕ್ಕಿ ನೋಡು, ಆತ್ಮಸಾಕ್ಷಿಯ ಅವಲೋಕನ ಮಾಡಿಕೋ? ನಿಜವಾಗಿಯೂ ಕಂಟಕ ನಾನೋ ಅಥವಾ ನನ್ನಂಥಹ ಹುಳುವಿನ ಹುಟ್ಟಿಗೆ ಕಾರಣನಾದ ನೀನೋ ಎಂದು ಹೇಳುತ್ತಿರಬಾಕಾದರೆ ನಾವು ಇನ್ನೂ ಅಬ್ಬರದ ಮಾತಿನ ಆ ಟಿ.ವಿ ಆಂಕರ್‌ಗಳನ್ನು ನೋಡಿ ನಗಬೇಕೋ, ಅಳಬೇಕೋ ತೋಚದು.

1942-43 ರಲ್ಲಿ ನಮ್ಮ ದೇಶದಲ್ಲಿ ಬೆಂಗಾಲ್‌ ಕ್ಷಾಮದಲ್ಲಿ ಸತ್ತವರ ಸಂಖ್ಯೆ 30 ಲಕ್ಷಕ್ಕೂ ಹೆಚ್ಚು. ಬ್ರೀಟೀಷರಿಂದ ಸ್ವಾತಂತ್ರ್ಯ ಪಡೆಯಲು ಅಮರರಾದವರು ಅವರೆಷ್ಟೋ? ಸಂಕಟ ಬಂದಾಗ ನಾವು ಯಾವತ್ತೂ ಸೋತಿಲ್ಲ, ಸೋಲುವುದಿಲ್ಲ. ಈ ಕಷ್ಟದ ಘಳಿಗೆಯನ್ನೂ ನಾವು ಜಯಿಸುತ್ತೇವೆ. ಅದನ್ನು ಸಾಧ್ಯವಾಗಿಸಿ ಶಹಬಾಸ್‌ಗಿರಿಗೆ ಪಾತ್ರರಾಗುವವರು ವೈದ್ಯರು, ನರ್ಸ್‌ಗಳು, ಆಶಾ ಕಾರ್ಯಕರ್ತರು. ಪೋಲಿಸರು, ಮಿಲಿಟರಿ ಮತ್ತು ನಿರ್ಗತಿಕರು, ಕೂಲಿ ಕಾರ್ಮಿಕರು, ಬಡವರು, ಅಶಕ್ತರು… ಮನೆಯಲ್ಲಿ ಕುಳಿತು ಲೇಖನ ಬರೆಯುತ್ತಿರುವ ನಾನು ಅಲ್ಲ, ಓದುತ್ತಿರುವ ನೀವೂ ಅಲ್ಲ (ಹಾ! ನೀವು ಈ ಮೇಲೆ ತಿಳಿಸಿದವರಲ್ಲಿ ಒಬ್ಬರಾಗಿದ್ದರೆ ಹೌದು).

ಈ ಸಮಯದಲ್ಲಿ ನಾನಂದುಕೊಳ್ಳುವುದು ಒಂದು ಚಮತ್ಕಾರವಾಗಿಬಿಡಬಾರದೇ? ಬಡ ಬಗ್ಗರಿಗೆ ದಾರಿ ತೋರಬಾರದೇ ಎಂದು. ಆದರೆ, ಇನ್ನೂ ಏನೇನು ನೋಡುವುದು ಬಾಕಿ ಇದೆಯೋ ಯಾರಿಗೆ ಗೊತ್ತು. ಕೊರೋನಾ ನಾಶವಾಗಲಿ, ಮನುಕುಲ ಉಳಿಯಲಿ, ಸರ್ವರಿಗೂ ಮಂಗಳವಾಗಲಿ.

ಗೆದ್ದೆ ಗೆಲ್ಲುವೆವು, ನಾವು ಗೆದ್ದೇ ಗೆಲ್ಲುವೆವು, ಗೆದ್ದೇ ಗೆಲ್ಲುವೆವೂ ಒಂದು ದಿನ……

ಹೊಂಗೆ ಕಾಮಯಾಬ್‌ ಹಮ್‌ ಹೊಂಗೆ ಕಾಮಯಾಬ್ ಏಕ್‌ ದಿನ್…..‌

We Shall over come, we shall over come some day…‌

ಸರ್ವೇಜನಾಃ ಸುಖಿನೋಭವಂತು!!!!!!!

ಕನ್ನಡ ಸಾಹಿತ್ಯ ಪರಂಪರೆಯ ಧ್ವನಿಗಳು (ಭಾಗ-೩)

ರನ್ನ

ರತ್ನತ್ರಯರಲ್ಲಿ ‘ಕವಿ ಚಕ್ರವರ್ತಿ ‘ ರನ್ನನನ್ನು ಹೇಗೆ ತಾನೇ ಬಿಡಲು ಸಾಧ್ಯ? ಈತನಿಗೂ ಪಂಪನಿಗೂ ತುಂಬಾ ಸಾಮ್ಯತೆಗಳಿವೆ. ಇಬ್ಬರೂ ಜೈನ ಕವಿಗಳು, ಚಂಪೂ ಪ್ರಕಾರದಲ್ಲಿ ಬರೆದರು. ಪಂಪನ ಹಾಗೆ ಈತನೂ ಧಾರ್ಮಿಕ ಕಾವ್ಯ ಹಾಗೂ ಲೌಕಿಕ ಕಾವ್ಯಗಳನ್ನು ಬರೆದ. ‘ಅಜಿತ ತೀರ್ಥಂಕರ ಪುರಾಣ’ ಇದು ರನ್ನನ ಧಾರ್ಮಿಕ ಕಾವ್ಯವಾದರೆ, ‘ಸಾಹಸ ಭೀಮ ವಿಜಯಂ’, ರನ್ನನ ‘ಗದಾಯುದ್ಧ’ ಎಂದೇ ಹೆಸರಾದ ಈ ಕಾವ್ಯ ಈತನ ಲೌಕಿಕ ಕಾವ್ಯ. ತನ್ನ ಆಶ್ರಯದಾತನಾದ ‘ಸತ್ಯಾಶ್ರಯನನ್ನು’ ತನ್ನ ಕಾವ್ಯದ ನಾಯಕನನ್ನಾಗಿ ಮಾಡಿ, ಮಹಾಭಾರತದ ಭೀಮನೊಂದಿಗೆ ಹೋಲಿಕೆ ಮಾಡಿ ಬರೆದ ಮಹಾಕಾವ್ಯವಿದು.

ಅಜಿತ ತೀರ್ಥಂಕರ ಪುರಾಣದ ಕುರಿತು ತೀರಾ ಕಡಿಮೆ ತಿಳಿದಿರುವುದರಿಂದ ಅದರ ಕುರಿತು ಈಗ ಬರೆಯುತ್ತಿಲ. ಗದಾಯುದ್ಧವನ್ನೂ ಸಹ ಪೂರ್ತಿಯಾಗಿ ಓದಿಲ್ಲವಾದರೂ ತಕ್ಕ ಮಟ್ಟಿಗೆ ಓದಿ, ಕೇಳಿ ತಿಳಿದುಕೊಂಡದ್ದನ್ನು ಈಗ ಹಂಚಿಕೊಳ್ಳುತ್ತಿದ್ದೇನೆ. ಮಹಾಭಾರತದ ಗದಾಯುದ್ಧವೇ ಕಾವ್ಯದ ಮುಖ್ಯ ವಸ್ತುವಾದರೂ ಕೂಡ, ಇಡೀ ಮಹಾಭಾರತವನ್ನು ಸಿಂಹಾವಲೋಕನ ಕ್ರಮದಿಂದ ಸಮಗ್ರವಾಗಿ ಹೇಳಿದ್ದಾನೆ. ಸಿಂಹಾವಲೋಕನ ಕ್ರಮದಿಂದ ಹೇಳುವೆ ಎಂದು ಕವಿಯೇ ಹೇಳಿದ್ದಾನೆ. ಸಿಂಹವು ತಾನು ಬೇಟೆಯಾಡಿದ ನಂತರ ಕಾಡಿನ ಒಂದು ಎತ್ತರದ ಪ್ರದೇಶಕ್ಕೆ ಹೋಗಿ ನಿಂತು ಎಲ್ಲವನ್ನು ವೀಕ್ಷಿಸುತ್ತದೆಯಂತೆ- ಈ ಕ್ರಮವನ್ನು ಸಿಂಹಾವಲೋಕನ ಎಂದು ಕರೆಯುತ್ತಾರೆ. ಹಾಗೆಯೇ ಕವಿಯು ಕೂಡ ಮಹಾಭಾರತದ ಅಂತಿಮ ಮುಖ್ಯ ಘಟ್ಟವಾದ ಗದಾಯುದ್ಧವನ್ನು ಕೇಂದ್ರವಾಗಿಟ್ಟುಕೊಂಡು ಹಿಂದಿನ ಎಲ್ಲವನ್ನು ಸಿಂಹಾವಲೋಕನ ಕ್ರಮದಿಂದ ಹೇಳುತ್ತಾ ಹೋಗುತ್ತಾನೆ.

ಪಂಪನ ‘ವಿಕ್ರಮಾರ್ಜುನ ವಿಜಯ’ದಲ್ಲಿ ಪಂಪನು ಅರ್ಜುನನನ್ನು  ಕಥಾನಾಯಕನನ್ನಾಗಿ ಮಾಡಿಕೊಂಡರೂ ಸಹ ಹೇಗೆ ಕರ್ಣನ ಪಾತ್ರವು ಅವನನ್ನುಆಕರ್ಷಿಸಿದೆಯೋ ಅದೇ ರೀತಿ ರನ್ನನು ಭೀಮನನ್ನು ಕಥಾನಾಯಕನನ್ನಾಗಿ ಮಾಡಿಕೊಂಡರೂ ಸಹ ದುರ್ಯೋಧನನ ಪಾತ್ರ ಕವಿಯ ಮನಸ್ಸನ್ನು ಆವರಿಸಿದೆ. ದುರ್ಯೋಧನನ ಬಗ್ಗೆ ಓದುಗರಲ್ಲಿ ಕನಿಕರವುಂಟಾಗುವಂತೆ ಅವನ ಪಾತ್ರವನ್ನು ರನ್ನ ಸೃಷ್ಟಿಸಿದ್ದಾನೆ.

ದುರ್ಯೋಧನ ಸಂಜಯನೊಂದಿಗೆ ನಡೆದು ಬರುತ್ತಿರಬೇಕಾದರೆ ದ್ರೋಣರ ಶವವನ್ನು ಕಾಣುತ್ತಾನೆ, ಆ ಪ್ರಸಂಗದ ವರ್ಣನೆ ಇಂತಿದೆ : (ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ-ಸಂಪುಟ-೪)

ಇಭಶೈಲಂಗಳನೇರಿಯೇರಿ, ರುಧಿರಸ್ರೋತ್ರನ್ ಗಳನ್  ದಾಂಟಿ ದಾಂಟಿ 

ಇಭದೋರ್ನಿಲಲತಾಪ್ರತಾನ ವಿಪಿನ ವ್ರಾತಂಗಳೊಳ್ ಸಿಲ್ಕಿಸಿಲ್ಕಿ

ಭರಂಗೆಯ್ದುರುದೆಯ್ದಿ ಸಂಜಯಶಿರಃಸ್ಕಂಧಾವಲಂಬಂ ಕುರು

ಪ್ರಭು ಕಂಡಂ ಶರಜಾಲಜರ್ಜರಿತ ಗಾತ್ರ ತ್ರಾಣನಂ ದ್ರೋಣನಂ “

ತ್ತು ಬಿದ್ದಿದ್ದ ಆನೆಗಳೆಂಬ ಬೆಟ್ಟಗಳನ್ನೇರುತ್ತಾ, ರಕ್ತದ ಪ್ರವಾಹವನ್ನು ದಾಟುತ್ತಾ, ಆನೆಗಳ ಸೊಂಡಿಲುಗಳೆಂಬ ಕಪ್ಪು ಬಳ್ಳಿಗಳ ಸಮೂಹದಲ್ಲಿ ಕಾಲ್ತೊಡರಿಸಿಕೊಳ್ಳುತ್ತಾ ಸಂಜಯನ ಹೆಗಲಿನ ಮೇಲೆ ಕೈಯೂರಿ ಬರುತ್ತಿದ್ದ ದುರ್ಯೋಧನನು ಬಾಣಗಳ ಸಮೂಹದ ಹೊಡೆತದಿಂದ ಛಿದ್ರವಾಗಿದ್ದ ದ್ರೋಣನ ದೇಹವನ್ನು ಕಂಡನು.  ಈ ಒಂದು ಪದ್ಯದಲ್ಲಿ ಯುದ್ಧಭೂಮಿಯಲ್ಲಿ ಆದ ಸಮಗ್ರವೂ ಕಣ್ಣ ಮುಂದೆ ಬಂದು ನಿಲ್ಲುತ್ತದೆ.ನಿಧಾನಗತಿಯಲ್ಲಿ ಸಾಗುವ ಈ ಪದ್ಯವನ್ನು ಅದರ ಕಥೆಯ ಸ್ವಾರಸ್ಯದೊಂದಿಗೆ ಓದುವಾಗ ರನ್ನನ ಕವಿತೆಯ ಚತುರತೆಯ ಅರಿವಾಗುತ್ತದೆ.

ಅಲ್ಲಿಂದ ಮುಂದೆ ನಡೆದಾಗ ಅಭಿಮನ್ಯುವಿನ ಶವವನ್ನು ಕಾಣುತ್ತಾನೆ. ತನ್ನ ಶತ್ರುವಿನ ಮಗನಾದರೂ ಸಹ ತನ್ನ ಮಗನ ಸಮನಾದ ಅಭಿಮನ್ಯುವಿನ ದೇಹವನ್ನು ಕಂಡು ಅವನ ಶೌರ್ಯ ತನ್ನಂತವರಿಗೂ ಬರಲಿ ಎಂದು ಹಾರೈಸುತ್ತಾನೆ. ಇಲ್ಲಿ ನಮಗೆ ದುರ್ಯೋಧನ ಒಬ್ಬ ವೈರಿಯಾಗಿ ಕಾಣುವುದಿಲ್ಲ, ಒಂದು ಕ್ಷಣ ಎಂತಹ ವಿಶಾಲವಾದ ಮನೋಭಾವ ಎನಿಸದಿರದು.

ಮುಂದೆ ತನ್ನ ಮಗ ಲಕ್ಷ್ಮಣ ಕುಮಾರನ ಶವವನ್ನು ನೋಡಿ ವಿಹ್ವಲಗೊಳ್ಳುತ್ತಾನೆ, ಮಗನು ತಂದೆಗೆ ತರ್ಪಣ ಕೊಡುವುದು ಲೋಕಾರೂಢಿ ಇದೆಂಥ ವಿಧಿ ಎಂದು ಶೋಕಿಸುತ್ತಾನೆ.

ನಂತರ ತಮ್ಮಂದಿರ ಶವಗಳು, ಪ್ರೀತಿಯ ತಮ್ಮ ದುಶ್ಯಾಸನನ ಶವ, ಆತ್ಮೀಯ ಸ್ನೇಹಿತ ಕರ್ಣನ ಶವ ಇವೆಲ್ಲವನ್ನೂ ನೋಡುತ್ತಾ ಶೋಕದಿಂದ ಸಾಗುವ ದುರ್ಯೋಧನನು ಒಂಟಿಯಾಗಿ ಹೋಗಿದ್ದಾನೆ ಎಂಬ ಭಾವ ಓದುಗರಲ್ಲಿ ಮೂಡಿ ಅವನ ಮೇಲೆ ಕನಿಕರ ಉಂಟಾಗದೇ ಇರದು. ದುರ್ಯೋಧನನ ಈ ವಿಲಾಪವು ಕನ್ನಡ ಸಾಹಿತ್ಯದಲ್ಲೇ ಅತ್ಯಂತ ಸುಂದರವಾದ ಶೋಕಗೀತೆಯಾಗಿ ಪರಿಣಮಿಸಿದೆ ಎನ್ನುತ್ತಾರೆ ಡಾ.ಪಿ.ವಿ.ನಾರಾಯಣ. ಕುವೆಂಪುರವರು ರನ್ನನನ್ನು ‘ಶಕ್ತಿ ಕವಿ’ ಎಂದು ಕರೆದಿದ್ದಾರೆ.

ಗದಾಯುದ್ಧದ ಕೊನೆ ಕೊನೆಗೆ ಬರುತ್ತಿರುವ ಹಾಗೆ ನಮಗೆ ದುರ್ಯೋಧನನ ಮೇಲೆ ಗೌರವ ಉಂಟಾಗುವಂತೆ ಮಾಡಿರುವುದೇ ರನ್ನನ ಕಾವ್ಯದ, ಅವನ ಸಾಮರ್ಥ್ಯದ ವೈಶಿಷ್ಟ್ಯತೆ. ಕೊನೆಯಲ್ಲಿ ದುರ್ಯೋಧನನು ವೈಶಂಪಾಯನ ಸರೋವರದಲ್ಲಿ ಅಡಗಿ ಕುಳಿತಿದ್ದಾನೆ, ಅವನು ಅಲ್ಲಿದ್ದಾನೆ ಎಂಬ ಅನುಮಾನ ಬಂದು ಅಲ್ಲಿಗೆ ಬಂದ ಭೀಮನು ಒಂದು ಮೀಂಗುಲಿಗ  ಹಕ್ಕಿ ಮೀನು ಹಿಡಿಯುವುದನ್ನು ನೋಡುತ್ತಾನೆ. ಈ ದೃಶ್ಯವನ್ನು ಕವಿ ಭೀಮನಿಗೆ ದುರ್ಯೋಧನ ಅಲ್ಲೇ ಅಡಗಿ ಕುಳಿತಿದ್ದಾನೆ ಎಂದು ಹೇಳಿದಂತಾಗುತ್ತದೆ ಎಂದು ಬಹು ಸೊಗಸಾಗಿ ವರ್ಣಿಸಿದ್ದಾನೆ.

ಮೀಂಗುಲಿಗವಕ್ಕಿ ಕೊಳನೊಳ್ 

ಮೀಂಗೆರಗುವ ತೆರದಿನೆರಗಿ ನೋಡಿಲ್ಲಿರ್ದಮ್ 

ಪಿಂಗಾಕ್ಷನೆಂದುಂ ಪವನಸು 

ತಂಗೆ ಇರ್ಪಡೆದೋರ್ಪ ತೆರದಿನೇಂ ಸೊಗಯಿಸಿತೋ “

ಮೀನನ್ನು ಕೊಲ್ಲುವ ಮಿಂಚುಳ್ಳಿ ಹಕ್ಕಿಯು ಮೀನಿಗಾಗಿ ಕೊಳದ ಮಧ್ಯಕ್ಕೆ ಹಾರುವ ರೀತಿಯಿಂದ ದುರ್ಯೋಧನನು ಇಲ್ಲಿಯೇ ಅಡಗಿದ್ದಾನೆ ಎಂಬುದನ್ನು ಭೀಮನಿಗೆ ಸೂಚಿಸುವಂತೆ ಕಾಣಿಸಿತು. ಎಂತಹ ಅದ್ಭುತ ಕಲ್ಪನೆ!

ಎಷ್ಟೇ ಮೂದಲಿಸಿದರೂ ಹೊರಗೆ ಬಾರದ ದುರ್ಯೋಧನನ್ನು ಕಂಡು ಭೀಮನಿಗೆ ಕೋಪವುಕ್ಕಿ ಬಂದು ಕೂಗಾಡುತ್ತಾನೆ. ಇದರಿಂದ ದುರ್ಯೋಧನನಿಗಾದ ಪರಿಸ್ಥಿತಿ ತುಂಬಾ ಸೊಗಸಾಗಿ ಮೂಡಿ ಬಂದಿದೆ. ಬಹು ಪ್ರಸಿದ್ಧ ಸಾಲುಗಳು ಇಂತಿವೆ :

ಆ ರವಮಂ ನಿರ್ಜಿತ ಕಂ

ಠೀರವರವಮಂ ನಿರಸ್ತಘನರವಮಂ ಕೋ 

ಪಾರುಣ ನೇತ್ರಂ ಕೇಳ್ದಾ 

ನೀರೊಳಗಿರ್ದುಮ್ ಬೆಮರ್ತನ್ ಉರಗ ಪತಾಕನ್

ಸಿಂಹ ಗರ್ಜನೆಯಂತಹ, ಗುಡುಗಿನ ಮೊಳಗಿನಂತಹ ಭೀಮನ ಆ ಶಬ್ದವನ್ನು ಕೇಳಿ ಕೋಪದಿಂದ ಕೆಂಪಾದ ಕಣ್ಣುಗಳನ್ನುಳ್ಳ ದುರ್ಯೋಧನನು ನೀರಲ್ಲಿದ್ದೇ ಬೆವರಿದನು. “ನೀರೊಳಗಿರ್ದುಮ್ ಬೆಮರ್ತನ್” ಎಂಬ ಈ ಒಂದು ಸಾಲೇ ಸಾಕು ಕೌರವನ ಕೋಪವನ್ನು ಸೂಚಿಸಲು, ಕವಿಯ ಸಾಮರ್ಥ್ಯವನ್ನು ಸೂಚಿಸಲು. ಒಟ್ಟಿನಲ್ಲಿ ಗದಾಯುದ್ಧ ಅಪ್ಪಟ ಸಾಹಸ ಕಾವ್ಯ, ಹೆಸರೇ ಹೇಳುವಂತೆ ‘ಸಾಹಸ ಭೀಮ ವಿಜಯಂ‘. ಒಮ್ಮೆ ಓದಿ, ಅದರ ಸವಿ ಉಂಡವನು ಎಂದು ಮರೆಯಲಾರ.

ಕನ್ನಡಿಗರುಸಿರಾಗಿ ಕನ್ನಡಂ ಬಾಳ್ಗೆ. ಸಿರಿಗನ್ನಡಂ ಗೆಲ್ಗೆ!

ವಿಶೇಷ ಸೂಚನೆ: ವಿವಿಧ ಆಕರ ಗ್ರಂಥಗಳಿಂದ ಆಯ್ದು ಬರೆದ ಲೇಖನವಿದು. ಯಾರ ಅನುಕರಣೆಯನ್ನು ಮಾಡದೇ ಬರೆಯುವ ಪ್ರಯತ್ನ ಮಾಡಿದ್ದೇನೆ. ಎಲ್ಲಿಯಾದರೂ ಹಾಗೆನ್ನಿಸಿದರೆ ಅದು ಅನುಸರಣೆಯೇ ಹೊರತು ಅನುಕರಣೆಯಲ್ಲ.

ಜಲದುರ್ಗ!

ಕೆಲವರು ಈ ಶೀರ್ಷಿಕೆಯ ಸ್ಥಳದ ಹೆಸರನ್ನು ಕೇಳಿರಬಹುದು, ಕೇಳಿಲ್ಲದೆಯೂ ಇರಬಹುದು. ನಮ್ಮ ಜಿಲ್ಲೆಯ (ರಾಯಚೂರು) ಜನರಾದರೆ ಖಂಡಿತವಾಗಿ ಒಮ್ಮೆಯಾದರೂ ಕೇಳಿಯೇ ಕೇಳಿರುತ್ತಾರೆ. ರಾಯಚೂರು ಜಿಲ್ಲೆಯ ಲಿಂಗಸೂಗೂರಿನಿಂದ ಕೇವಲ ೨೦ ಕಿ.ಮೀ ದೂರದಲ್ಲಿದೆ ಈ ಸುಂದರವಾದ ಪ್ರದೇಶ. ಈ ಸ್ಥಳದ ಹೆಸರನ್ನು ನೀವು ಗೂಗಲ್ ಮಾಡಿದ್ದೆ ಆದಲ್ಲಿ ನಿಮಗೆ ತುಂಬಾ ಕಡಿಮೆ ಮಾಹಿತಿ ಲಭ್ಯವಿದೆ. ನನಗೆ ಗೊತ್ತಿರುವುದು ಕೂಡ ಅಷ್ಟೇ. ಆದರೆ ಈ ಸ್ಥಳ ಎಷ್ಟು ರಮಣೀಯವಾಗಿದೆ ಮತ್ತು ಸರ್ಕಾರದ ನಿರ್ಲಕ್ಷಕ್ಕೆ ಎಷ್ಟರ ಮಟ್ಟಿಗೆ ಈ ಕೋಟೆ ತುತ್ತಾಗಿದೆ ಎಂದು ಹೇಳುವುದೊಂದೇ ನನ್ನ ಉದ್ದೇಶ.

ಆದಿಲ್ ಶಾಹಿ ಈ ಕೋಟೆಯನ್ನು ಕಟ್ಟಿದ ಎಂಬ ಐತಿಹ್ಯವಿದೆ. ಕೆಲವು ಇನ್ನು ಗುರುತಿಸಲಾಗದೆ ಇರುವ ಗೋರಿಗಳಿವೆ. ಹೆಸರೇ ಹೇಳುವಂತೆ ‘ಜಲದುರ್ಗ ‘. ಸುತ್ತಲೂ ನೀರಿನಿಂದಾವೃತವಾದ ಕೋಟೆ. ಜಲಾವೃತ ಕೋಟೆ. ಕೃಷ್ಣ ನದಿ ಕವಲೊಡೆದು ಈ ಕೋಟೆಯ ಸುತ್ತ ಹರಿದು ಮತ್ತೆ ಮುಂದೆಲ್ಲೋ ಸೇರುತ್ತದೆ. ಬಹು ಸುಂದರವಾಗಿ ಕಾಣುತ್ತದೆ. ಅದ್ಯಾವ ಮಹಾನ್ ವ್ಯಕ್ತಿಯ ತಲೆಗೆ ಇಲ್ಲೊಂದು ಕೋಟೆ ಕಟ್ಟಬೇಕು, ಇದು ಬಹು ಸುರಕ್ಷಿತವಾಗಿರುತ್ತದೆ ಎನಿಸಿತ್ತೋ ಆ ವ್ಯಕ್ತಿಯ ತಲೆಗೆ ಒಂದು ದೊಡ್ಡ ನಮನ. ಕೋಟೆ ಇಂದು ಶಿಥಿಲಾವಸ್ಥೆಯಲ್ಲಿ ನಿಂತಿದೆ. ಅಲ್ಲಿಂದ ಮನುಷ್ಯ ಹಾರಿ ಬಿದ್ದರೂ ಕೂಡ ಯಾರಿಗೂ ಕೇಳಿಸುವುದಿಲ್ಲ. ಸೂರ್ಯೋದಯ ಸೂರ್ಯಾಸ್ತಮಾನ ನೋಡಲು ಇದರಷ್ಟು perfect ಜಾಗ ಇನ್ನೊಂದಿಲ್ಲ ಎನಿಸುತ್ತದೆ.

ಆದರೆ ಸೋಜಿಗದ ಸಂಗತಿ ಏನೆಂದರೆ ಇಷ್ಟೊಂದು ರಮಣೀಯವಾದ ಸ್ಥಳವನ್ನು ನಮ್ಮ ಪ್ರವಾಸೋದ್ಯಮ ಇಲಾಖೆಯವರು ಯಾವುದೇ ರೀತಿಯ ಪ್ರಗತಿಪರ ಬೆಳವಣಿಗೆಗಳನ್ನು ಮಾಡದೆ ಹಾಗೆಯೇ ಶಿಥಿಲಾವಸ್ಥೆಯಲ್ಲಿ ಕೋಟೆಯನ್ನು ಏಕೆ ಬಿಟ್ಟಿದ್ದಾರೆ ತಿಳಿಯುತ್ತಿಲ್ಲ. ನಮ್ಮ ಜನರಾದರೂ ಎಚ್ಚೆತ್ತುಕೊಂಡು ಇಷ್ಟೊಂದು ಸುಂದರ ಪ್ರದೇಶದ ಅಭಿವೃದ್ಧಿಗೆ ಶ್ರಮ ವಹಿಸಬಹುದಾಗಿತ್ತು, ಕೆಲವರು ಪ್ರಯತ್ನ ಮಾಡಿರಬಹುದು ಆದರೆ ಫಲಕಾರಿಯಾಗದ ಪ್ರಯತ್ನ, ಶ್ರಮ ವ್ಯರ್ಥವೂ ಆಗಿರಬಹುದು. ಪ್ರವಾಸೋದ್ಯಮವನ್ನು ಸರಿಯಾಗಿ ಅವರು ಬೆಳೆಸಿದ್ದೇ ಆದಲ್ಲಿ ಅಲ್ಲಿಯ ಸುತ್ತಮುತ್ತಲ ಜನರ ಬದುಕು ಇಷ್ಟೊತ್ತಿಗಾಗಲೇ ಹಸನಾಗಿರುತ್ತಿತ್ತು.

ಈ ಜಾಗದ ಬಗ್ಗೆ ನಾನು ನಮ್ಮ ಜಿಲ್ಲೆಯ ಊರಾದ್ದರಿಂದ ಇಷ್ಟರ ಮಟ್ಟಿಗೆ ಹೇಳುತ್ತಿರುವೆ ಎಂದು ಭಾವಿಸಬಾರದು. ನೀವು ಒಂದೊಮ್ಮೆ ಅಲ್ಲಿ ಹೋಗಿ ಭೇಟಿ ನೀಡಿದ್ದೆ ಆದಲ್ಲಿ ನನ್ನ ವರ್ಣನೆ ಎಷ್ಟು ಸತ್ಯ ಎಂದು ನಿಮಗೆ ತಿಳಿಯುತ್ತದೆ. ಕ್ಯಾಮರಾ ಕಣ್ಣಿನಲ್ಲಿ ಆ ದುರ್ಗದ ಸೌಂದರ್ಯವನ್ನು ಸೆರೆಹಿಡಿಯುವುದು ಕಷ್ಟ. ಅದಕ್ಕೆ ನಿಮ್ಮ ಕಣ್ಣುಗಳೇ ಅಲ್ಲಿಗೆ ಹೋಗಬೇಕು. ಇನ್ನೊಂದು ಆಶ್ಚರ್ಯಕರ ಸಂಗತಿ ಏನೆಂದರೆ ನಮ್ಮ ಸಿನೆಮಾ ನಿರ್ದೇಶಕರಿಗೂ ಕೂಡ ಇದುವರೆಗೂ ಈ ಸೌಂದರ್ಯದ ಬಗ್ಗೆ ತಿಳಿದಿಲ್ಲ, ಅಥವಾ ತಿಳಿದು ಕೂಡ ಅದನ್ನು ಯಾವ ಚಲನಚಿತ್ರದಲ್ಲೂ ಸೆರೆ ಹಿಡಿಯಲು ಪ್ರಯತ್ನಿಸಿಲ್ಲವೋ ತಿಳಿಯದು.

ಒಟ್ಟಿನಲ್ಲಿ ಒಂದೇ ಮಾತಿನಲ್ಲಿ ಹೇಳುವುದಾದರೆ ಸರ್ಕಾರದ, ಜನ ಸಾಮಾನ್ಯರ, ತಿಳಿದವರ ಎಲ್ಲರ ನಿರ್ಲಕ್ಷಕ್ಕೆ ಒಳಗಾದ ಪ್ರದೇಶ ಈ ‘ಜಲದುರ್ಗ’. ಚಿತ್ರದುರ್ಗದ ಕೋಟೆಯನ್ನು ಮೇಲಕ್ಕೆತ್ತಲು ಒಬ್ಬ ತ.ರಾ.ಸು ಒಬ್ಬ ಪುಟ್ಟಣ್ಣ ಕಣಗಾಲ್ ಬರಬೇಕಾಯಿತು. ಇನ್ನು ಈ ಜಲದುರ್ಗದ ಕೋಟೆಯನ್ನು ಅದರ ಸೌಂದರ್ಯವನ್ನು ಎತ್ತಿ ಹಿಡಿಯಲು ಅದ್ಯಾವ ಮಹಾಪುರುಷರ ಆಗಮನವಾಗಬೇಕೋ ತಿಳಿಯದು.

ನನ್ನ ಇಂದಿನ ಈ ಲೇಖನ ಜಲದುರ್ಗದ ಬಗ್ಗೆ ತಿಳಿಸಿಕೊಡುವುದಕ್ಕಿಂತ ಅದರ ಶಿಥಿಲಾವಸ್ಥೆಯಿಂದ ಮನ ಮರುಗಿ ಮೂಡಿದಂತಹುದು. ಸಾಧ್ಯವಾದರೆ ಒಮ್ಮೆ, ಕೇವಲ ಒಮ್ಮೆ ನೀವು ಈ ಸ್ಥಳಕ್ಕೆ ಭೇಟಿ ನೀಡಿ. ಈ ಲೇಖನವನ್ನು ಸಾಧ್ಯವಾದಷ್ಟು ಹಂಚಿಕೊಳ್ಳಿ. ನಮ್ಮ ನಡುವೆಯೇ ಇರುವ ಬಹು ಅದ್ಭುತ ಪ್ರದೇಶಗಳ ಪರಿಚಯ ನಮಗಾಗಲಿ.

ನಾನು ನನ್ನ mobile ನಲ್ಲಿ ಕೆಲವು photoಗಳನ್ನೂ ತೆಗೆದುಕೊಂಡಿದ್ದೇನೆ. ಅವುಗಳನ್ನು ಇಲ್ಲಿ ಹಂಚಿಕೊಳ್ಳಬಹುದು, ಆದರೆ ನಾನು ಹಾಗೆ ಮಾಡುತ್ತಿಲ್ಲ. ಏಕೆಂದರೆ ಮೇಲೆ ಹೇಳಿದ ಹಾಗೆ ಕ್ಯಾಮೆರಾ ಕಣ್ಣು ಅದರಲ್ಲೂ ಮೊಬೈಲ್ ಕ್ಯಾಮರಾ ಕಣ್ಣು ಈ ಅದ್ಭುತ ಸೌಂದರ್ಯವನ್ನು ಸೆರೆ ಹಿಡಿಯುವಲ್ಲಿ ವಿಫಲವಾಗಿದೆ. ಅದನ್ನು ನೋಡಿ ನೀವು ‘ಓಹ್ ಇಷ್ಟೇನಾ ‘ ಎನ್ನಬಹುದು. ಇದರ ಬದಲು ಎರಡು ದಿನಗಳ ಕಾಲಾವಕಾಶ ಮಾಡಿಕೊಂಡು ನಿಮ್ಮವರೊಂದಿಗೆ ಒಮ್ಮೆ ಭೇಟಿ ನೀಡಿ. ಅಲ್ಲಿಯ ಸೌಂದರ್ಯಕ್ಕೆ ನಿಮ್ಮ ಮನ ಸೋಲುವುದರ ಜೊತೆಗೆ, ಅಕ್ಷರಶಃ ನಿರ್ಲಕ್ಷಕ್ಕೆ ಒಳಗಾದ ಈ ಸ್ಥಳದ ಕುರಿತು ನಿಮಗೆ ಮರುಕ ಹುಟ್ಟದೇ ಇರುವುದಿಲ್ಲ.

ಇನ್ನೂ ಕಾಲ ಮಿಂಚಿಹೋಗುವ ಮುನ್ನ ಸರ್ಕಾರ, ನಮ್ಮ ಜನ ಎಚ್ಚೆತ್ತುಕೊಳ್ಳುತ್ತಾರೆ ಎನ್ನುವ ಆಶಯದೊಂದಿಗೆ ‘ಜಲದುರ್ಗ’ದ ಸವಿ ನೆನಪುಗಳೊಂದಿಗೆ ಪೂರ್ಣವಿರಾಮವನ್ನಿಡುತ್ತಿದ್ದೇನೆ.

ಕನ್ನಡ ಸಾಹಿತ್ಯ ಪರಂಪರೆಯ ಧ್ವನಿಗಳು (ಭಾಗ ೨)

ಈ ಶೀರ್ಷಿಕೆಯ ೨ನೇಯ ಭಾಗ ಬರೆಯುವುದು ಸ್ವಲ್ಪ ತಡವಾಯಿತು. ಮೊನ್ನೆ ಎಂದರೆ ರಾಜ್ಯೋತ್ಸವದ ದಿನದಂದೇ ಇದರ ೨ನೇಯ ಭಾಗ ಬರಬೇಕಾಗಿತ್ತು. ಸಾಹಿತ್ಯ ಪರಂಪರೆಯ ಜೀವಧ್ವನಿಗಳಲ್ಲಿ ಮೊದಲು ಹೇಳಲೇ ಬೇಕಾಗಿರುವುದು, ಕನ್ನಡದ ಆದಿಕವಿ ಪಂಪನ ಕುರಿತು. ಪಂಪನೇ ನಮಗೆ ಆದಿಕವಿ. ಅದಕ್ಕ ಮುಂಚೆ ಕವಿಗಳಿರಲಿಲ್ಲವೇ? ಬಹುಶಃ ಇದ್ದರು. ಆದರೆ ಅವರ ಯಾವ ಕೃತಿಗಳು ನಮಗೆ ಇದುವರೆಗೂ ಲಭ್ಯವಾಗಿಲ್ಲ. ಲಭ್ಯವಿರುವ ಪಂಪ ಪೂರ್ವದ ‘ಕವಿರಾಜ ಮಾರ್ಗ’ ಒಂದು ಲಕ್ಷಣ ಗ್ರಂಥ. ಲಕ್ಷಣ ಗ್ರಂಥ ಎಂದರೆ ಒಂದು ಕಾವ್ಯ ಹೇಗಿರಬೇಕು ಎಂದು ತಿಳಿಸಿಕೊಡುವ ಒಂದು ಗ್ರಂಥ. ಕಾವ್ಯ ಸೃಷ್ಟಿಯಾಗದೇ ಕಾವ್ಯ ಲಕ್ಷಣಗಳನ್ನು ಹೇಳುವುದಿಲ್ಲ ತಾನೇ? ಹಾಗಾಗಿ ‘ಕವಿರಾಜ ಮಾರ್ಗ’ದಿಂದ ನಮಗೆ ತಿಳಿಯುವ ಅಂಶವೆಂದರೆ ಪಂಪನ ಪೂರ್ವದಲ್ಲಿ ಕವಿಗಳಿದ್ದರು. ಆದರೆ ಅವರ ಇರುವಿಕೆಯ ನಿಖರ ಮಾಹಿತಿಯಾಗಲಿ, ಅವರ ಕಾವ್ಯಗಳಾಗಲಿ ನಮಗೆ ಲಭ್ಯವಿಲ್ಲ. ಲಭ್ಯವಿರುವ ಮೊಟ್ಟ ಮೊದಲ ಕೃತಿಗಳೇ ಪಂಪನ ಕೃತಿಗಳು. ಅಷ್ಟೇ ಅಲ್ಲದೆ ಬಹು ಪ್ರೌಢಿಮೆಯಿಂದ ಕೂಡಿದ ಕೃತಿಗಳು. ಆದ್ದರಿಂದ ನಮಗೆ ಪಂಪನೇ ಆದಿ ಕವಿ, ಅನಾದಿ ಕವಿ. ಇನ್ನು ಮುಂಬರುವ ದಿನಗಳಲ್ಲಿ ಇದನ್ನು ಹುಸಿಯಾಗಿಸಿ ಬೇರೊಬ್ಬ ಕವಿ ದೊರಕಿದುದೇ ಆದರೆ ಅದು ಕನ್ನಡಿಗರ ಭಾಗ್ಯವಲ್ಲದೇ ಮತ್ತಿನ್ನೇನು ಅಲ್ಲ. ಏಕೆಂದರೆ ನಮ್ಮ ಸಾಹಿತ್ಯದ ಇರುವಿಕೆಯ ದಿನಗಳು ಇತಿಹಾಸದ ಕಾಲಘಟ್ಟದಲ್ಲಿ ಮತ್ತಷ್ಟು ಹಿಂದೆ ಹೋಗುತ್ತದೆ.

ಇನ್ನು ಪಂಪನ ಕುರಿತು ಹೇಳುವುದಾದರೆ ಆತ ಒಬ್ಬ ವೈದಿಕ ಹಿನ್ನಲೆಯುಳ್ಳ ಜೈನ ಕವಿ. ನಮ್ಮ ಕವಿಗಳಿಗೆ ಇತಿಹಾಸ ಪ್ರಜ್ಞೆ ಇಲ್ಲ ಎಂಬುದು ಕಹಿಯಾದ ಒಂದು ಸತ್ಯ. ಆದರೆ ಪಂಪ ಇದಕ್ಕೆ ತದ್ವಿರುದ್ಧವಾಗಿ ನಿಲ್ಲುತ್ತಾನೆ. ಅಂದಿನ ಕವಿಗಳು ತಮ್ಮ ಕಾಲದ ಬಗ್ಗೆ ಹೇಳಿಕೊಳ್ಳುತ್ತಿರಲಿಲ್ಲ, ಕಾರಣ ಅವರ ಎಲ್ಲ ಕೃತಿಗಳಿಗೆ ದೇವರ ಪ್ರೇರಣೆಯೇ ಸಾಕ್ಷಿ ಎಂಬ ಒಂದು ಅರ್ಪಣಾ ಮನೋಭಾವ. “ನಾನು ವೀಣೆ, ಅವನು ತಂತಿ” “ಲಿಪಿಕಾರ ಮಾತ್ರ ನಾನು, ಕವಿ ಅವನು” “ಗುಹೆ ನಾನು ಗುಹೇಶ್ವರ ಅವನು” ಈ ರೀತಿಯ ಒಂದು ಮನೋಧರ್ಮ ಅಂದಿನ ಕವಿಗಳಲ್ಲಿ ಸಾಮಾನ್ಯವಾಗಿತ್ತು. ಆದರೆ ಪಂಪ ಯಾವ ಹಿಂಜರಿಕೆಯಿಲ್ಲದೇ ತನ್ನ ಹುಟ್ಟಿನ ದಿನದ ಕುರಿತು ಮತ್ತು ತನ್ನ ಬಾಳಿನ ಕುರಿತು ಮುಚ್ಚು ಮರೆಯಿಲ್ಲದೇ ಬರೆದುಕೊಳ್ಳುತ್ತಾನೆ. ಆದ್ದರಿಂದ ಪಂಪ ಇದ್ದ ಕಾಲ ನಮಗೆ ನಿಖರವಾಗಿ ಗೊತ್ತು, ಅದು ೧೦ನೆಯ ಶತಮಾನ ಎಂದು. (ದಿನಾಂಕ ಕೂಡ ಲಭ್ಯವಿದೆ).ಕುವೆಂಪು ರವರು ಹೇಳುವ ಹಾಗೆ ‘ಪಂಪನನೋದುವ ನಿನ್ನಾ ನಾಲಗೆ ಕನ್ನಡವೇ ಸತ್ಯ, ಕನ್ನಡವೇ ನಿತ್ಯ’. ಮಹಾಕವಿಯ ಕುರಿತು ಎಷ್ಟು ಹೇಳಿದರೂ ಕಡಿಮೆ, ತಿಳಿದಷ್ಟು ಹೇಳಲು ಪ್ರಯತ್ನಿಸುತ್ತೇನೆ, ನಮಗೆ ಲಭ್ಯವಿರುವ ಪಂಪನ ಎರಡು ಕೃತಿಗಳೆಂದರೆ ‘ಆದಿಪುರಾಣ’ ಮತ್ತು ‘ವಿಕ್ರಮಾರ್ಜುನ ವಿಜಯ’.

ಆದಿಪುರಾಣವು ಜೈನ ಧಾರ್ಮಿಕ ಗ್ರಂಥ. ಜೈನರ ಮೊದಲನೇ ತೀರ್ಥಂಕರನಾದ ಪುರುದೇವನ ಚರಿತ್ರೆ. ಪಂಪನ ಎರಡೂ ಕೃತಿಗಳು ಚಂಪೂ ಪ್ರಕಾರದಲ್ಲಿವೆ. ಗದ್ಯ ಮತ್ತು ಪದ್ಯ ಮಿಶ್ರಿತವಾದ ಸಾಹಿತ್ಯದ ಒಂದು ಪ್ರಕಾರಕ್ಕೆ ‘ಚಂಪೂ’ ಎಂದು ಕರೆಯುತ್ತಾರೆ. ತೀರ್ಥಂಕರನಾಗುವ ಜೀವವು ಹೇಗೆ ಹಿಂದಿನ ಜನ್ಮಗಳಲ್ಲಿ ಕಷ್ಟಗಳನ್ನು ಅನುಭವಿಸಿ ಪಾಪಗಳನ್ನು ಕಡಿಮೆ ಮಾಡಿಕೊಳ್ಳುತ್ತದೆ ಎಂದು ನಿರೂಪಿಸುವುದನ್ನು ‘ಭವಾವಳಿ’ ಎಂದು ಕರೆಯುತ್ತಾರೆ. ಪ್ರತಿಯೊಂದು ಜನ್ಮದಲ್ಲೂ ತನ್ನ ಕರ್ಮವನ್ನು ಕಡಿಮೆಮಾಡಿಕೊಳ್ಳುತ್ತಾ ಮೋಕ್ಷಕ್ಕೆ ಹತ್ತಿರವಾಗುವ ಜೀವ ಉದಯವಾಗುವುದು ತೀರ್ಥಂಕರ ಜನ್ಮದಲ್ಲಿ. ಹೀಗೆ ತೀರ್ಥಂಕರ ಜನ್ಮದಲ್ಲಿ ಪುರುದೇವನ ಎಂದರೆ ಆದಿನಾಥನ ಪರಿನಿಷ್ಕ್ರಮಣ ಕಾಲದಲ್ಲಿ ಬರುವುದೇ ‘ನೀಲಾಂಜನೆಯ ನೃತ್ಯ’ ಪ್ರಸಂಗ. ಹೀಗೆ ಕಾವ್ಯವು ಒಂದೊಂದು ಅಪರೂಪದ ಮಜಲುಗಳನ್ನು ಪಡೆಯುತ್ತಾ ಕೊನೆಯ ಹಂತ ತಲುಪುವುದು ಬಹು ಸೊಗಸಾಗಿ ಮೂಡಿ ಬಂದಿದೆ. ಮನುಷ್ಯನ ವ್ಯಕ್ತಿತ್ವದ ಎರಡು ಪ್ರಮುಖ ಅಂಶಗಳು ಅವನ ವಿಕಾಸಕ್ಕೆ ಮಿತಿಯೊಡ್ಡುತ್ತದೆ. ಭೋಗಾಕಾಂಕ್ಷೆ ಮತ್ತು ಅಹಂಕಾರ ಎರಡು ಶಕ್ತಿಗಳೇ, ಆದರೆ ಇವುಗಳು ಸ್ವಕೇಂದ್ರಿತವಾಗದೇ, ಸಮಾಜಮುಖಿಯಾದಾಗ ವ್ಯಕ್ತಿತ್ವ ವಿಕಸನವಾಗುತ್ತದೆ, ಲೋಕೊಪಯೋಗಿಯಾಗುತ್ತದೆ. ಆದ್ದರಿಂದ ಈ ಕಾವ್ಯ ಇಂದಿಗೂ ಪ್ರಸ್ತುತವಾಗುತ್ತದೆ.

ಜೈನ ಕವಿಗಳ ರೂಢಿಯಂತೆ ಅವರು ಎರಡು ಕಾವ್ಯಗಳನ್ನು ಬರೆಯುತ್ತಿದ್ದರು. ಒಂದು ಧಾರ್ಮಿಕ ಕಾವ್ಯ, ಮತ್ತೊಂದು ಲೌಕಿಕ ಕಾವ್ಯ. ಮೇಲೆ ತಿಳಿಸಿದ ‘ಆದಿಪುರಾಣ’ ಪಂಪನ ಧಾರ್ಮಿಕ ಕಾವ್ಯ. ಇನ್ನು ಆತನ ಲೌಕಿಕ ಕಾವ್ಯವೆಂದರೆ ‘ವಿಕ್ರಮಾರ್ಜುನ ವಿಜಯ’. ವ್ಯಾಸರ ಮಹಾಭಾರತವನ್ನು ಆಧಾರವಾಗಿರಿಸಿಕೊಂಡು ತನ್ನ ಆಶ್ರಯದಾತನಾದ ‘ಅರಿಕೇಸರಿ’ಯನ್ನು ಮಹಾಭಾರತದ ವೀರ ಅರ್ಜುನನೊಂದಿಗೆ ಸಮೀಕರಿಸಿ ಬರೆದ ಮಹಾನ್ ಕಾವ್ಯ. ಇದು ಕೂಡ ಚಂಪೂ ಕಾವ್ಯ.

ಮಹಾಭಾರತವನ್ನು ಎಷ್ಟು ಸಾರಿ ಓದಿದರೂ ತೃಪ್ತಿಯಾಗದು. ‘ವಿಕ್ರಮಾರ್ಜುನ ವಿಜಯ’ವು ಇದಕ್ಕೆ ಹೊರತಲ್ಲ. ಅರ್ಜುನನೊಂದಿಗೆ ತನ್ನ ರಾಜನನ್ನು ಹೋಲಿಸಿ ಪಂಪ ಬರೆದರೂ ಕೂಡ ಆತನ ಮನಸ್ಸನ್ನು ಸಂಪೂರ್ಣವಾಗಿ ಆಕ್ರಮಿಸಿದ ವ್ಯಕ್ತಿತ್ವ ‘ಕರ್ಣ’. ಅರ್ಜುನನನ್ನು ನಾಯಕನನ್ನಾಗಿ ಮತ್ತು ಕರ್ಣನನ್ನು ಪ್ರತಿನಾಯಕನನ್ನಾಗಿ ಮಾಡಿದ್ದಾನೆ. ತನ್ನ ಸಮಕಾಲೀನ ಸಾಮಾಜಿಕ ಮೌಲ್ಯಗಳನ್ನು ಕಾವ್ಯದ ಪಾತ್ರಗಳೊಡನೆ ಸಮೀಕರಿಸಿ ವೈಭವೀಕರಿಸಿದ್ದಾನೆ. ವ್ಯಾಸರ ಗ್ರಂಥವನ್ನೇ ಈತ ಮೂಲ ಆಕರವಾಗಿಟ್ಟುಕೊಂಡರೂ ಕೂಡ , ವ್ಯಾಸರಷ್ಟೇ ಪ್ರತಿಭಾವಂತ ನಾನೆಂಬ ಗರ್ವ ನನಗಿಲ್ಲ ಎಂದು ತನ್ನ ಪಾಂಡಿತ್ಯದ ಅಹಂ ಅನ್ನು ಮೆರೆಯದೇ ಸಹೃದಯತೆಯನ್ನು ಮೆರೆದಿದ್ದಾನೆ. “ವ್ಯಾಸ ಮುನೀಂದ್ರ ವೃಂದ ವಚನಾಮೃತವಾರ್ಧಿಯನ್ ಈಸುವೆನ್ ಕವಿವ್ಯಾಸನೆನ್ ಎಂಬ ಗರ್ವಮೆನಗಿಲ್ಲ” ಎಂದು ವಿನಯವಾಗಿ ಹೇಳಿಕೊಂಡಿದ್ದಾನೆ.

ಮಹಾಭಾರತದ ಕೇಂದ್ರ ಭಾಗವೇ, ದ್ರೌಪದಿಗೆ ದುರ್ಯೋಧನ-ದುಷ್ಯಾಸನಾದಿಗಳಿಂದಾಗುವ ಅವಮಾನ, ಮುಡಿಯನ್ನು ಬಿಚ್ಚಿದ್ದು ಮತ್ತು ಅದರ ಪ್ರತೀಕಾರದ ಫಲವೇ ಕುರುಕ್ಷೇತ್ರ ಯುದ್ಧ. ಈ ಘಟನೆಯನ್ನು ಭೀಮಸೇನನ ಬಾಯಲ್ಲಿ ಕವಿ ಹೀಗೆ ನುಡಿಸುತ್ತಾನೆ.

“ಇದರೊಳ್ ಶ್ವೇತಾತಪತ್ರ ಸ್ಥಗಿತ ದಶಾದಿಶಮಂಡಲಂ ರಾಜಚಕ್ರಂ

ಪುದಿದಳ್ಕಾಡಿತ್ತು, ಅಡಂಗಿತ್ತಿದರೊಳ್ ಕುರುರಾಜನ್ವಯಂ; ಮತ್ ಪ್ರತಾಪ

ಕ್ಕಿದರಿಂದಂ ನೋಡಗುರ್ವುರ್ವಿದುದು; ಇದುವೇ ಮಹಾಭಾರತಕ್ಕಾದಿಯಾಯ್ತು

ಅಬ್ಜದಳಾಕ್ಷಿ ಪೇಳ್, ಸಾಮಾನ್ಯಮೇ ಬಗೆಯೇ ಭವತ್ ಕೇಶಪಾಶಪ್ರಪಂಚಂ”

(ನಿನ್ನ ತಲೆಯ ಕೂದಲೇನು ಸಾಮಾನ್ಯವೇ? ಇದರಲ್ಲಿ ಸಮಸ್ತ ಭೂಮಂಡಲವನ್ನೆಲ್ಲಾ ವ್ಯಾಪಿಸಿರುವ ಸಾಮ್ರಾಜ್ಯವು ಸೇರಿ ನಾಶವಾಯಿತು. ಇದರಲ್ಲಿ ಕುರು ವಂಶವೇ ಅಡಗಿದೆ. ಇದರಿಂದ ನನ್ನ ಕಾರ್ಯಕ್ಕೆ ಬಿರುಸುಂಟಾಯಿತು. ಇದು ಮಹಾಭಾರತ ಯುದ್ಧಕ್ಕೆ ಕಾರಣವಾಯಿತು.) ಹೀಗೆ ದ್ರೌಪದಿಯ ಕೇಶವೇ ಮಹಾಭಾರತ ಯುದ್ಧಕ್ಕೆ ಕಾರಣ ಎಂಬ ಪಂಪನ ವರ್ಣನೆ ಎಷ್ಟು ಚಂದ, ಆತನ ಕಲ್ಪನೆಗೆ ಮತ್ತು ಪ್ರತಿಭೆಗೆ ಮನಸೋಲದೇ ಇರುವುದಿಲ್ಲ.

ಪಂಪನು ಎಲ್ಲ ಪ್ರಸಂಗಗಳನ್ನು ಸಂಕ್ಷಿಪ್ತವಾಗಿಯಾದರು ಶ್ರೇಷ್ಠ ರೀತಿಯಲ್ಲಿ ಹೇಳುತ್ತಾನೆ, ಒಂದು ಲಕ್ಷ ಶ್ಲೋಕಗಳಿರುವ ವ್ಯಾಸಭಾರತವನ್ನು ಸಂಗ್ರಹವಾಗಿ ಹೇಳುವುದು ಸುಲಭದ ವಿಷಯವಲ್ಲ. ತೀ.ನಂ.ಶ್ರೀ ಅವರು ಪಂಪಭಾರತದ ಕುರಿತು ಹೀಗೆ ಹೇಳುತ್ತಾರೆ “ವಿಕ್ರಮಾರ್ಜುನ ವಿಜಯವು ಕನ್ನಡದ ಕನ್ನಡಿಯಲ್ಲಿ ಚಿಕ್ಕದಾಗಿ ಬಿದ್ದ ವ್ಯಾಸಭಾರತದ ನೆರಳಲ್ಲ; ಅಲ್ಲಿಯ ಚಿನ್ನವನ್ನು ಶೋಧಿಸಿ ತಂದು ಹೊಸದಾಗಿ ಎರಕ ಹೊಯ್ದು ಒಪ್ಪವಿಟ್ಟು ನಿಲ್ಲಿಸಿದ ನೂತನ ಪುತ್ಥಳಿ ಇದು”. ಪಂಪ ತನ್ನನ್ನು ತಾನು ‘ಹಿತಮಿತಮೃದುವಚನನ್’ ಎಂದು ಕರೆದುಕೊಂಡಿದ್ದಾನೆ. ಮತ್ತು ಅದನ್ನು ಪಂಪಭಾರತದ ಉದ್ದಕ್ಕೂ ಕಾಣಬಹುದಾಗಿದೆ.

ಇದಲ್ಲದೇ ತನ್ನ ಪಂಪ ಭಾರತದಲ್ಲಿ ಕವಿ ತನ್ನ ಹುಟ್ಟೂರಾದ ‘ಬನವಾಸಿ’ಯನ್ನು ಬಹು ಸೊಗಸಾಗಿ ಹೊಗಳಿದ್ದಾನೆ.

ಚಾಗದ ಭೋಗದ ಅಕ್ಕರದ ಗೇಯದ ಗೊಟ್ಟಿಯಅಲಂಪಿನಿಂಪುಗ

ಳ್ಗಾರಮಾದ ಮಾನಸರೆ ಮಾನಸರ್ ! ಅಂತವರಾಗಿ ಪುಟ್ಟಲೇ

ನಾಗಿಯಮೇನೋ ತಿರ್ದಪುದೇ? ತೀರದೊಡಂ ಮರಿದುಂಬಿಯಾಗಿ ಮೇಣ್

ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ಬನವಾಸಿ ದೇಶದೊಳ್”

(ತ್ಯಾಗ, ಭೋಗ, ವಿದ್ಯೆ, ಸಂಗೀತ, ಕೂಟಗಳು ಇವುಗಳಿಂದ ಕೂಡಿರುವ ಜೀವನವನ್ನು ಸಾಗಿಸುವವರೇ ನಿಜವಾದ ಮನುಷ್ಯರು. ಅಂತಹವನಾಗಿ ಹುಟ್ಟಬೇಕು. ಹಾಗಾಗದಿದ್ದರೆ ಬನವಾಸಿಯಲ್ಲಿ ಮರಿದುಂಬಿಯಾಗಿಯೋ ಕೋಗಿಲೆಯಾಗಿಯೋ ಹುಟ್ಟಬೇಕು.)

ಮೇಲೆ ಹೇಳಿದ ಹಾಗೆ ಅರ್ಜುನನನ್ನು ನಾಯಕನನ್ನಾಗಿ ಮಾಡಿಕೊಂಡಿದ್ದರಿಂದ ಕರ್ಣನನ್ನು ಪ್ರತಿನಾಯಕನನ್ನಾಗಿ ಮಾಡಿಕೊಂಡಿದ್ದಾನೆ, ಅದರೊಂದಿಗೆ ಕರ್ಣನ ಹುಟ್ಟು ಬೆಳವಣಿಗೆಗಳಲ್ಲಿ ದುರಂತವೊದಗಿದುದು ಪಂಪನ ಮನಸ್ಸನ್ನು ಕರಗಿಸಿದೆ. ಆ ಪಾತ್ರವು ಕವಿಯ ಮನಸ್ಸನ್ನು ಸಂಪೂರ್ಣವಾಗಿ ಆಕ್ರಮಿಸಿದೆ ಮತ್ತು ಆಕರ್ಷಿಸಿದೆ. ಹಾಗಾಗಿ ಕರ್ಣನ ಪಾತ್ರವನ್ನು ಉದಾತ್ತತೆ ಮತ್ತು ತನ್ಮಯತೆಯಿಂದ ಚಿತ್ರಿಸಿದ್ದಾನೆ. ಆದ್ದರಿಂದಲೇ ಕವಿ “ಕರ್ಣರಸಾಯನಮಲ್ತೆ ಭಾರತಂ” ಎಂದಿದ್ದಾನೆ.

ಪಂಪನು ವಿಶಾಲವಾದ ಮನಸುಳ್ಳ ರಸಿಕ ಕವಿ. ಜಾತಿ ಭೇದಗಳನ್ನು ಮೀರಿ ಬೆಳೆಯಬಲ್ಲ ಬಹುಮುಖ ಪ್ರತಿಭೆ ಮಾತ್ರವಲ್ಲದೆ ಸಂದರ್ಭ ದೊರೆತಾಗ ಜಾತಿಭೇದವನ್ನು ಖಂಡಿಸುವ ಹೃದಯ ವೈಶಾಲ್ಯ ಉಳ್ಳವನು. ಆದ್ದರಿಂದ ಯಾವುದು ಕುಲ? ಎಂದು ಕರ್ಣನ ಬಾಯಲ್ಲಿ ಕವಿ ಹೀಗೆ ನುಡಿಸಿದ್ದಾನೆ.

“….. ಕುಲಂ ಕುಲಮಲ್ತು! ಚಲಂ ಕುಲಂ, ಗುಣಂ ಕುಲಂ, ಅಭಿಮಾನಂ ಕುಲಂ, ಅಣ್ಮು ಕುಲಂ….”

(ಈ ಕುಲವು ನಿಜವಾದ ಕುಲವಲ್ಲ. ಛಲ, ಗುಣ, ಸ್ವಾಭಿಮಾನ, ಪರಾಕ್ರಮಗಳೇ ನಿಜವಾದ ಕುಲ)

ಹೀಗೆ ಪಂಪಭಾರತದ ಕುರಿತು ಪುಟ ಗಟ್ಟಲೆ ಬರೆಯಬಹುದು. ಹೇಳುವುದು ಮುಗಿಯುವುದಿಲ್ಲವೇನೋ ಎನಿಸುತ್ತದೆ. ಕೊನೆಯದಾಗಿ ಒಂದೇ ಒಂದು ವಿಷಯವನ್ನು ಹೇಳಿ ನನ್ನೀ ಲೇಖನಕ್ಕೆ ಪೂರ್ಣವಿರಾಮವನ್ನಿಡುತ್ತೇನೆ. ಅಂದಿನ ಕಾಲಕ್ಕೆ ನಮ್ಮ ಜನ ಎಷ್ಟು ಹೃದಯ ವೈಶಾಲ್ಯ ಉಳ್ಳವರಾಗಿದ್ದರೆಂದರೆ ಪಂಪನು ವ್ಯಾಸರ ಮಹಾಭಾರತವನ್ನು ತನಗೆ ಬೇಕಾದ ರೀತಿಯಲ್ಲಿ ನಾಯಕ ಪ್ರತಿನಾಯಕರನ್ನು ಬಳಸಿಕೊಂಡು ಕೃತಿಗೆ ಮೆರಗು ಕೊಟ್ಟರೂ ಕೂಡ ಜನರು ಅಸಹಿಷ್ಣುತೆಯನ್ನು(Intolerence) ಮೆರೆಯಲಿಲ್ಲ. ಕಲೆಯ ಮೆರಗೇ ಅಂತಹುದು. ವಸ್ತುವನ್ನು ಚಂದಗಾಣಿಸಲು ಕವಿ ತನ್ನ ಕಲ್ಪನೆ ಎಂಬ ಕುಂಚದಿಂದ ವಿಧ ವಿಧ ಬಣ್ಣಗಳನ್ನು ತುಂಬಿ ರಂಗುಗೊಳಿಸುತ್ತಾನೆ. ಆ ರಂಗಿನಲ್ಲಿ ಮಿಂದು ನಾವು ಕಲೆಯ ಸ್ವಾದವನ್ನು ಸವಿಯಬೇಕೇ ಹೊರತು ತಿರಸ್ಕಾರ ಪ್ರತೀಕಾರಗಳಿಗೆ ನಾಂದಿ ಹಾಡಬಾರದು. ಆದರೆ ಇಂದಿನ ದಿನಮಾನಗಳಲ್ಲಿ ಒಂದು ಚಲನಚಿತ್ರವನ್ನು ಮಾಡಬೇಕಾದರೂ ಕೂಡ ಜನ ಅವಮಾನವೆಸಗಿದಂತೆ ಕಂಡು ಅದನ್ನು ಖಂಡಿಸಲು ನಿಲ್ಲುತ್ತಾರೆ ಮತ್ತು ಅಸಹಿಷ್ಣುತೆಯನ್ನು ಪ್ರದರ್ಶಿಸುತ್ತಾರೆ (ಪದ್ಮಾವತ್ ಚಿತ್ರ ಇದಕ್ಕೆ ಸಾಕ್ಷಿ). ಕಲೆಯನ್ನು ಕಲೆಗಾರನ ಕಣ್ಣಿನಿಂದ ನೋಡುವ ಸುಂದರ ಕಣ್ಣುಗಳನ್ನು ನಮ್ಮದಾಗಿಸಿಕೊಳ್ಳೋಣ ಎಂದು ಹೇಳುತ್ತಾ…………

ಕನ್ನಡಿಗರುಸಿರಾಗಿ ಕನ್ನಡಂ ಬಾಳ್ಗೆ. ಸಿರಿಗನ್ನಡಂ ಗೆಲ್ಗೆ!

ವಿಶೇಷ ಸೂಚನೆ: ವಿವಿಧ ಆಕರ ಗ್ರಂಥಗಳಿಂದ ಆಯ್ದು ಬರೆದ ಲೇಖನವಿದು. ಯಾರ ಅನುಕರಣೆಯನ್ನು ಮಾಡದೇ ಬರೆಯುವ ಪ್ರಯತ್ನ ಮಾಡಿದ್ದೇನೆ. ಎಲ್ಲಿಯಾದರೂ ಹಾಗೆನ್ನಿಸಿದರೆ ಅದು ಅನುಸರಣೆಯೇ ಹೊರತು ಅನುಕರಣೆಯಲ್ಲ.