ನಾವೆಷ್ಟು ಸುರಕ್ಷಿತ….!…..?

ಈ ಮೇಲಿನ ಶೀರ್ಷಿಕೆಯ ಮೂಲಕ ನಾನು ಇಂದು ಹೇಳಹೊರಟಿರುವ ವಿಷಯ ತುಂಬಾ ಸೂಕ್ಷ್ಮವಾದುದು. ಎರಡು ಚಿಹ್ನೆ(..!…?) ಹಾಕಲು ಕಾರಣ ಕೂಡ ಅದೇ. ಸಮಾಜದ ಇಂದಿನ ಪರಿಸ್ಥಿತಿ ನೋಡಿದಾಗ ನಾವೆಷ್ಟು ಸುರಕ್ಷಿತ? ಎನ್ನುವ ಅನುಮಾನ ಮೂಡುತ್ತೆ, ಅದಕ್ಕೆ ಪ್ರಶ್ನಾರ್ಥಕ ಚಿಹ್ನೆ. ಮತ್ತು ನಮ್ಮ ಸ್ವಂತ ಜೀವನವನ್ನು ಮಾತ್ರ ನೋಡಿದಾಗ ನಾವೆಷ್ಟು ಸುರಕ್ಷಿತ! ಅಲ್ವಾ ಅಂತ ಸಂತೋಷ ಕೂಡ ಆಗತ್ತೆ. ಅದಕ್ಕೆ ಆಶ್ಚರ್ಯ ಸೂಚಕ ಚಿಹ್ನೆ ಹಾಕಿದ್ದು.

ಮೊನ್ನೆ ಹಿಂದಿಯ ‘ಕೌನ್ ಬನೇಗ ಕರೋಡ್ ಪತಿ’ ಯಲ್ಲಿ ಒಂದು ಒಳ್ಳೆಯ ಎಪಿಸೋಡ್ ನೋಡುವ ಭಾಗ್ಯ ನನ್ನದಾಯಿತು. ‘ಸುನೀತಾ ಕೃಷ್ಣನ್’ ಎನ್ನುವ ಪದ್ಮ ಪ್ರಶಸ್ತಿ ವಿಜೇತ ಮಹಾನ್ ಮಾನವ ಚೇತನ. ನೀವು ಕೇಳಿರಬಹುದು ಇವರ ಬಗ್ಗೆ. ಮೊದಲು ಇವರ ಬಗ್ಗೆ ಆಮೀರ್ ಖಾನ್ ರವರ ಸತ್ಯಮೇವ ಜಯತೇ ಯಲ್ಲಿ ನೋಡಿದ್ದೆ. ಆಗಿಂದ ತುಂಬಾನೇ ಕಾಡಿದಂತ ವ್ಯಕ್ತಿತ್ವ ಮತ್ತು ಸ್ಪೂರ್ತಿದಾಯಕ ವ್ಯಕ್ತಿತ್ವ ಅವರದು.

ಸಮಾಜ ಎಷ್ಟು ಹದಗೆಟ್ಟಿದೆ ಎಂದು ತುಂಬಾನೇ ನೋವಾಗುತ್ತೆ. ಮೊದಲು ಅವರು ಮಾಡುವ ಮಹಾನ್ ಕಾರ್ಯದ ಬಗ್ಗೆ ಸ್ವಲ್ಪ ಹೇಳಿಬಿಡುತ್ತೇನೆ. ಸುನೀತಾ ಕೃಷ್ಣನ್ ಅವರಿಗೆ ಈಗ ಸುಮಾರು 50 ವರ್ಷದ ಆಸುಪಾಸು. ಅವರು 15 ವರ್ಷದ ಹುಡುಗಿ ಆಗಿದ್ದಾಗ 8 ಜನ ಆಗುಂತಕರಿಂದ ಗ್ಯಾಂಗ್ ರೇಪ್ ಗೆ ಗುರಿಯಾದಂಥವರು. ನಂತರ ಸಮಾಜದ ನಿಂದನೆ ಎಲ್ಲವನ್ನು ಮೆಟ್ಟಿ ಆ ತರಹದ ಜನರಿಗಾಗಿಯೇ ನಾನು ದುಡಿಯಬೇಕು ಎಂಬ ಹಂಬಲದಿಂದ ವೇಶ್ಯಾವಾಟಿಕೆಯಂತಹ ನಮ್ಮ ಸಮಾಜದ ಕರಾಳವಾದ ಒಂದು ಮುಖಕ್ಕೆ ಬಲಿಯಾದ ಹೆಣ್ಣುಮಕ್ಕಳನ್ನು ಅದರಿಂದ ಹೊರತೆಗೆಯುವ (Rescue) ಕೆಲಸವನ್ನು ಮಾಡುತ್ತಾರೆ. ‘ಪ್ರಜ್ವಲ’ ಎನ್ನುವ ಒಂದು ಸಂಸ್ಥೆಯನ್ನು ಪ್ರಾರಂಭಿಸಿದ್ದಾರೆ. ಹೈದರಾಬಾದ್ ನಲ್ಲಿ ಇದು ಸ್ಥಿತವಾಗಿದೆ. ಮತ್ತು ದೇಶದಾದ್ಯಂತ ಅವರ ಕಾರ್ಯಕರ್ತರು ಇದ್ದಾರೆ. ಇಲ್ಲಿಯವರೆಗೆ 17000 ಕ್ಕೂ ಹೆಚ್ಚು ಮಹಿಳೆಯರನ್ನು ಅವರು ಈ ಒಂದು ವಿಷ ವರ್ತುಲದಿಂದ ಹೊರತೆಗೆದಿದ್ದಾರೆ.

ಭಯಂಕರವಾದ ಒಂದು ನಗ್ನ ಸತ್ಯ ಅವರಿಂದ ಕೇಳಿ ಒಂದು ಕ್ಷಣ ಸಮಾಜದ ಮೇಲೆ ಅಸಹ್ಯ ಎನಿಸಿದ್ದು ಏನೆಂದರೆ, ಅವರು Rescue ಮಾಡಿದ ಮಹಿಳೆಯರಲ್ಲಿ ಅತಿ ಚಿಕ್ಕ ವಯಸ್ಸಿನ ಹುಡುಗಿ ಎಂದರೆ ಮೂರುವರೆ ವರ್ಷ… ನಿಜ.. ಕೇವಲ ಮೂರುವರೆ ವರ್ಷ. ಮೂರುವರೆ ವರ್ಷದ ಒಂದು ಕಂದಮ್ಮನನ್ನು ಅವರು ವೇಶ್ಯಾವಾಟಿಕೆಯ ಮನೆಯಿಂದ Rescue ಮಾಡಿದ್ದಾರೆ. ಆ ಕಂದಮ್ಮನನ್ನು ಕೂಡ ನಿರ್ದಯಿ ಪುರುಷ ರೇಪ್ ಮಾಡಿದ್ದ ಎಂದರೆ ಎಷ್ಟು ನೀಚ ಇರಬೇಕು. ಮನಸ್ಸು ಕುದಿಯತ್ತೆ ಇದನ್ನು ಕೇಳಿಯೇ… ಇನ್ನು ಆ ಮಗುವಿನ ಪರಿಸ್ಥಿತಿ, ತಾಯಿಯ ಪರಿಸ್ಥಿತಿ, ನೈಜ ಸ್ಥಿತಿಯಲ್ಲಿ ನೋಡಿದವರ ಪರಿಸ್ಥಿತಿ…. ಆಹ್ ನೆನೆದರೆ ವಿಚಿತ್ರ ರೀತಿಯ ಕಸಿವಿಸಿ ಆಗತ್ತೆ. (ಇದು ಜಗತ್ತಿನಾದ್ಯಂತ ವ್ಯಾಪಿಸಿದ ಪಿಡುಗು. ನಮ್ಮ ದೇಶದಲ್ಲಿ ತೀವ್ರವಾಗಿದೆ. ಇದಕ್ಕೆ ಕಾರಣ ಬಡತನ, ಅನಾಗರಿಕತೆ, ದೇಶದ ಪ್ರತಿ-ಸಮಾಜದ ಪ್ರತಿ ನಿಷ್ಠೆ ಇಲ್ಲದಿರುವುದು).

ಇನ್ನೊಂದು ನಿಜವಾದ ಘಟನೆ ಹೇಳುತ್ತಾರೆ ಅವರು. ಇದೇ ರೀತಿಯ ಒಂದು Rescue Operation ನಲ್ಲಿ ಒಬ್ಬ ಮಹಿಳೆ ಕಬೋರ್ಡ್ ಒಳಗಿಂದ ಹೊರಬರಲು ತಯಾರಿರಲಿಲ್ಲವಂತೆ. ಎಷ್ಟು ಬಲವಂತ ಪಡಿಸಿದರೂ ಕೂಡ ಬರಲು ನಿರಾಕರಿಸದ ಮೇಲೆ, ತುಂಬಾ ಕಷ್ಟ ಪಟ್ಟು ಏಕೆ ಎಂದು ಕೇಳಿದರೆ ‘ನನ್ನ 6 ತಿಂಗಳ ಕೂಸು ಅವರ ಬಳಿಯಿದೆ, ಆ ಕಂದಮ್ಮನಿಗೆ ಅವರು ಏನಾದರು ಮಾಡುತ್ತಾರೆ’ ಎಂದಳಂತೆ. ನಂತರ ಅತೀ ತುರ್ತಾಗಿ ಹುಡುಕಿದಾಗ, ಮೇಲೆ ನೀರಿನ ಟ್ಯಾಂಕ್ ನಲ್ಲಿ ಮುಳುಗಿಸಿಬಿಟ್ಟಿದ್ದರಂತೆ. ಮಗು ಪ್ರಾಣದಿಂದ ಇತ್ತು, ಆದರೆ ಮೈಯೆಲ್ಲಾ ನೀಲಿಯಾಗಿತ್ತಂತೆ. ನಂತರ ಆಸ್ಪತ್ರೆ ಸೇರಿಸಿ ಮಗುವನ್ನು ಬದುಕಿಸಿದರಂತೆ. ಇದು ಯಾವ ರೀತಿಯ ಮನುಷ್ಯನ ಮನಸ್ಥಿತಿ ನನಗೆ ಅರ್ಥವಾಗಲಿಲ್ಲ. ಅವರು ಹೇಳುತ್ತಾರೆ ವೇಶ್ಯಾ ಮನಗೆ ದಾಳಿಯಾಗುತ್ತೆ ಎಂದು ತಿಳಿದ ತಕ್ಷಣ ಹುಡುಗಿಯರನ್ನು, ಮಹಿಳೆಯರನ್ನು, ಮಕ್ಕಳನ್ನು ಎಲ್ಲಿ ಬೇಕೆಂದರೆ ಅಲ್ಲಿ ಹುದುಗಿಸಿ ಇಡುತ್ತಾರಂತೆ. ಕಮೋಡ್ ನಲ್ಲಿ, ಕಬೋರ್ಡ್ ನಲ್ಲಿ, ನೀರಿನ ಟ್ಯಾಂಕ್ ನಲ್ಲಿ… ಅಬ್ಬಬ್ಬಾ… ಅದೇನು ವಸ್ತುವೇ ಹಾಗೆ ಮುಚ್ಚಿಡಲು? ಇವರ Rescue operation ಸ್ವಲ್ಪ ತಡವಾದರೂ ಯಾರಾದರು ಉಸಿರು ಕಟ್ಟಿ ಪ್ರಾಣ ಬಿಡುವ ಪರಿಸ್ಥಿತಿಯಲ್ಲಿರುತ್ತಾರೆ, ಇದಲ್ಲದೆ ಇವರ ಮೇಲೆ ಮಾರಣಾಂತಿಕ ಹಲ್ಲೆಗಳು ಜರುಗುತ್ತವೆ.

ಇದೆಲ್ಲ ಕೇಳಿದ ಮೇಲೆ ನನ್ನಲ್ಲಿ ಮೂಡುವ ಪ್ರಶ್ನೆ ಏನೆಂದರೆ ಯಾವ ರೀತಿಯ ಸಮಾಜ ನಿರ್ಮಾಣವಾಗುತ್ತಿದೆ? ಈ ರೀತಿಯ ಕೃತ್ಯವನ್ನು ಮಾಡುವವರು ನಮ್ಮಗಳ ಮಧ್ಯೆ ತೀರ ಸರ್ವೇ ಸಾಮಾನ್ಯ ಎನ್ನುವಂತೆ ಬದುಕುತ್ತಿರಬಹುದಲ್ಲವೇ? ಈ ರೀತಿಯ ಗೋ ಮುಖ ವ್ಯಾಘ್ರಗಳ ಮುಖವಾಡ ತಿಳಿಯುವುದೇ ಇಲ್ಲ.

ಈ ರೀತಿಯ ಮಕ್ಕಳ ಮಾರಾಟದಲ್ಲಿ ಮೊದಲು Involve ಆಗುವವರೇ ಅವರ ಪರಿಚಯದವರು. ಚಿಕ್ಕಪ್ಪ, ಅಂಕಲ್, ಪಕ್ಕದ ಮನೆಯ ಅಣ್ಣ, ಕೆಲವೊಮ್ಮೆ ತಂದೆಯೇ ಈ ರೀತಿಯ ನೀಚ ಕೃತ್ಯಕ್ಕೆ ಇಳಿಯುತ್ತಾನೆ. ಇದಕ್ಕೆಲ್ಲ ಕಾರಣ ಬಡತನ ಮತ್ತು ಹಸಿವು. ಎರಡು ರೀತಿಯ ಹಸಿವು ಇವೆ. ಹೊಟ್ಟೆ ಹಸಿವು ಒಂದಾದರೆ, ದೇಹದ ಹಸಿವು ಇನ್ನೊಂದು. ಮೊದಲನೆಯ ಹಸಿವನ್ನು ನೀಗಿಸಬಹುದಾದರೂ ಎರಡನೆಯದು ಸಮಾಜವನ್ನೇ ತಿನ್ನುತ್ತಿದೆ. ಈ ಜಾಲಕ್ಕೆ ಶ್ರೀಮಂತರ ಮನೆಯ ಮಕ್ಕಳೇನು ಹೊರತಲ್ಲ. ಇಂದಿನ ಈ ಸಾಮಾಜಿಕ ಜಾಲತಾಣದ, Facebook, Twitter, What’s app ಗಳಲ್ಲಿ Chat ಮಾಡಿ ಬಲೆಗೆ ಹಾಕುವವರು ತುಂಬಾ ಜನರಿದ್ದಾರೆ.

ನಮ್ಮ ಊರಲ್ಲೇ ಈಗ 6 ತಿಂಗಳ ಕೆಳಗೆ ಒಬ್ಬ ಇಂಜಿನಿಯರಿಂಗ್ ವಿದ್ಯಾರ್ಥಿನಿಯ ಮೇಲೆ ಭಯಂಕರ ರೇಪ್ ಮತ್ತು ಬರ್ಬರ ಹತ್ಯೆ ನಡೆಯಿತು. ಇನ್ನೂ ಪೋಲಿಸರು ಪತ್ತೆ ಹಚ್ಚುವುದರಲ್ಲೇ ಇದ್ದಾರೆ. ಇನ್ನೊಬ್ಬ ನರ್ಸಿಂಗ್ ವಿದ್ಯಾರ್ಥಿನಿಯ ಶವ ನದಿಯಲ್ಲಿ ಸಿಕ್ಕಿತಂತೆ. ಈ ಅಮಾನುಷ ಕೃತ್ಯಕ್ಕೆ ಕಾರಣ ಮನೆಯಲ್ಲಿ ನಮ್ಮ ಗಂಡು ಮಕ್ಕಳಿಗೆ ಹೆಣ್ಣಿನ ಮರ್ಯಾದೆ ಬಗ್ಗೆ ತಿಳಿಸದೇ ಇರುವುದು. ಅವಳನ್ನು ಗೌರವಿಸುವುದರ ಬಗ್ಗೆ ತಿಳಿಸಿಕೊಡದೇ ಇರುವುದು. ಇನ್ನು ಹೆಣ್ಣು ಮಕ್ಕಳ ಧ್ವನಿಯನ್ನು ಹುದುಗಿಸುವ ಕೆಲಸವೂ ಕೂಡ ನಡೆಯುತ್ತೆ. ‘Highway’ ಎನ್ನುವ ಒಂದು ಹಿಂದಿ ಚಿತ್ರದಲ್ಲಿ ಇದನ್ನು ಬಹು ಸೂಕ್ಷ್ಮವಾಗಿ ತೋರಿಸಿದ್ದಾರೆ.

Human trafficking, Child molestation, Sexual assault at work place, domestic violence, marital rape ಈ ಎಲ್ಲ ವಿಧ ವಿಧದ ಹೆಸರಿರುವುದು ಹೆಣ್ಣನ್ನು ಒಂದು ವಸ್ತುವನ್ನಾಗಿ (Commodity) ನೋಡಿ ಅವಳನ್ನು ಬಳಸುವುದಕ್ಕೆ ಇರುವ different nomenclature.

ನೀವು ಮನೆಯಲ್ಲಿ ಅಥವಾ ಇನ್ನೆಲ್ಲೋ ಒಂದು ಸುರಕ್ಷಿತ ಪ್ರದೇಶದಲ್ಲಿ ನಿಮ್ಮವರೊಂದಿಗೆ ಇದ್ದು ಈ ಲೇಖನವನ್ನು ಓದುತ್ತಿದ್ದೀರ ಎಂದರೆ ನೀವು ಜಗತ್ತಿನ Top 5% ಅಲ್ಲಿ ಒಬ್ಬರು. ಹೇಗೆ ಅಂತೀರಾ?… ಜಗತ್ತಿನ 50 ಶೇಕಡಾ ಸಂಪನ್ಮೂಲ ಕೇವಲ 8 ಜನರ ಹತ್ತಿರ ಇದೆ. ಇನ್ನು ನಮ್ಮ ದೇಶದಲ್ಲಿ ಶೇಕಡಾ 60% ಸಂಪನ್ಮೂಲ Top 10 Rich persons ಹತ್ತಿರ ಇದೆ. ಎಷ್ಟೊಂದು ಸಂಪನ್ಮೂಲದ ಅಸಮಾನ ಹಂಚಿಕೆ ಅಲ್ಲವೇ? 7೦೦ ಕೋಟಿ ಜನಸಂಖ್ಯೆಯ ಈ ಜಗತ್ತಿನ ಶೇಕಡಾ 50 Resources 8 ರಿಂದ 10 ಜನರ ಹತ್ತಿರ ಇದೆ. ನಿಮಗೆ ನಿಮ್ಮದೇ ಆದ ಒಂದು ಸ್ವಂತ ಮನೆ ಇದೆ (ಜಗತ್ತಿನ ಯಾವ ಮೂಲೆಯಲ್ಲಾದರೂ ಸರಿ), ಉಡುಗೆಗೆ ಬಟ್ಟೆ ಇದೆ, ನಾಳೆಯ ಊಟದ ಚಿಂತೆ ನಿಮಗೆ ಇಲ್ಲ ಎಂದರೆ you are one among top 5% of world population. Be happy and proud for that, at the same time be responsible. ಇದಕ್ಕೆ ಚಿಂತೆ ಮಾಡಿ ಅಂತ ಹೇಳುತ್ತಿಲ್ಲ. ಗಾಂಧೀ ಆಗುವ ಅವಶ್ಯಕತೆಯೂ ಇಲ್ಲ. ಚಿಂತನೆ ಇದ್ದರೆ ಸಾಕು. ನಿಮ್ಮ back of mind ನಲ್ಲಿ ಇದು ಚಿಕ್ಕದಾಗಿ tape recorder ತರಾ ಓಡುತ್ತಿರಲಿ. ಸಮಯ ದೊರೆತರೆ ಬಳಸಿ. ನಿಮ್ಮ ಗಂಡದರನ್ನು, ಗಂಡು ಮಕ್ಕಳನ್ನು, ಅಣ್ಣ-ತಮ್ಮಂದಿರ ಹತ್ತಿರ ಸ್ವಲ್ಪ ಬಿಚ್ಚು ಮನಸ್ಸಿನಿಂದ ಮಾತಾಡಿ ಅವರಿಗೆ ಅರಿವು ಮೂಡಿಸಿ. ಹಾಗಂತ ಅವರು ಈ ಹೀನ ಕೆಲಸ ಮಾಡುತ್ತಿದ್ದಾರೆ ಎಂದರ್ಥವಲ್ಲ. ಒಂದೊಳ್ಳೆ ಸಮಾಜ ನಿರ್ಮಾಣಕ್ಕೆ ಕೆಲಸ ಮನೆಯಿಂದಲೇ ಪ್ರಾರಂಭವಾಗಬೇಕು. ಅವರು ನಾಲ್ಕು ಜನಕ್ಕೆ ಇದರ ಕುರಿತು ಹೇಳುವಂತಾಗಲಿ. Sensitizing people ಅಷ್ಟೇ. ಗಾಂಧೀ ಅವರು ಹೇಳಿದ ಹಾಗೆ Be the change, to see the change ಕಡೆ ಒಂದು ಚಿಕ್ಕ ಪ್ರಯತ್ನ.

ನಮ್ಮ ಮುಂಬರುವ ಪೀಳಿಗೆಗೆ ಒಂದು ಸುಸಂಸ್ಕೃತ ಸಮಾಜ ನಿರ್ಮಾಣ ಮಾಡಿಕೊಡುವ ಒಂದು ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಅದಕ್ಕೆ ಏನು ಮಾಡಬೇಕು ಎಂಬ ಚಿಂತನೆ ಇರಲಿ (ಚಿಂತೆ ಅಲ್ಲ). ಜೊತೆಗೆ ಸದಾ ಜಾಗರೂಕರಾಗಿ ಜೀವನ ನಡೆಸಿ.

“ಕೃತ್ರಿಮವೋ ಜಗವೆಲ್ಲ, ಸತ್ಯತೆಯದೆಲ್ಲಿಹುದೋ

ಕರ್ತೃವೆನಿಸಿದ ತಾಂ ಗುಪ್ತನಾಗಿಹನು

ಛತ್ರವೀ ಜಗವಿದರೊಳಾರ ಗುಣವೆಂತಹುದೋ

ಯಾತ್ರಿಕನೇ ಜಾಗರಿರೋ ಮಂಕುತಿಮ್ಮ!”

(ಜಗತ್ತು ತುಂಬಾ ಮೋಸದ ಬೀಡಾಗಿದೆ. ಸತ್ಯ ಎನ್ನುವುದು ಎಲ್ಲಿದೆಯೋ? ಸೃಷ್ಟಿಕರ್ತನಾದ ಆ ಭಗವಂತ ಗುಪ್ತನಾಗಿದ್ದಾನೆ. ಜೀವನ ಎನ್ನುವ ಛತ್ರದಲ್ಲಿ ಯಾತ್ರಿಕನಾಗಿ ಬಂದ ನೀನು ಜಾಗೃತನಾಗಿರು!)

ಇನ್ನೂ ತುಂಬಾ ಹೇಳುವ ಎನಿಸುತ್ತಿದೆ. ಆದರೆ ಹೇಳಲಾಗುತ್ತಿಲ್ಲ. ನಾನು ಹೇಳುತ್ತಿರುವುದು ಸ್ವಲ್ಪವಾದರೂ ಸರಿ ಅನಿಸಿದರೆ ನೀವು ಬೇರೆಯವರ ಹತ್ತಿರ ಇದನ್ನು ಹಂಚಿಕೊಳ್ಳಿ. Do share the article if you Like.

Thank You.

ಆ ಸ್ವಾತಂತ್ರ್ಯ ಸ್ವರ್ಗಕ್ಕೆ…………..

ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ದಿನದಲ್ಲಿದ್ದೇವೆ! 72 ವರ್ಷಗಳು ಪೂರ್ಣಗೊಂಡವು ಸ್ವಾತಂತ್ರ್ಯ ದೊರೆತು. 72 ನೇ ವರ್ಷದ ಸ್ವಾತಂತ್ರೋತ್ಸವ, 73ನೇ ಧ್ವಜಾರೋಹಣಾಚರಣೆ. ಎರಡೂ ಸರಿ………

ಆದರೆ ನನ್ನ ಪ್ರಶ್ನೆ ಬ್ರಿಟೀಷರಿಂದ ಸ್ವಾಂತಂತ್ರ್ಯ ದೊರಕಿತು ಅಷ್ಟೇ. ಆದರೆ ನಮ್ಮ ದೇಶಕ್ಕೆ ಅದಷ್ಟೇ ಸಾಕೆ? ಬ್ರಿಟೀಷರ ದಾಸ್ಯದಿಂದ ನಮಗೆ ಸ್ವಾಂತಂತ್ರ್ಯ ಸಿಕ್ಕಿತೇ? ಇಲ್ಲ…. ಈಗಲೂ ಇಂಗ್ಲೀಷ್ ನ ಮೋಹ ನಮ್ಮ ಜನರನ್ನು ಆವರಿಸಿರುವುದು ನೋಡಿದರೆ ತಿಳಿಯುತ್ತದೆ. ಭ್ರಷ್ಟಾಚಾರದಿಂದ ಸ್ವಾತಂತ್ರ್ಯ ದೊರಕಿತೇ? ಊಹು ಅದು ಕನಸಿನ ಮಾತು. ಇನ್ನು ಬಡತನದಿಂದ? ಅಜ್ಞಾನದಿಂದ? ಹೆಣ್ಣು ಭ್ರೂಣ ಹತ್ಯೆಯಿಂದ? ಸ್ತ್ರೀಯ ಅತ್ಯಾಚಾರದಿಂದ? ದುಷ್ಟರಿಂದ? ನೀಚ ರಾಜಕೀಯದಿಂದ? ಅಸಮಾನತೆಯಿಂದ? ಜಾತೀಯತೆಯಿಂದ? ಮತಾಂಧತೆಯಿಂದ? ಭಾಷಾ ದುರಭಿಮಾನದಿಂದ? ಇನ್ನು ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಮತ್ತೆ ನಮಗೆ ಸ್ವಾತಂತ್ರ್ಯ ಯಾವುದರಿಂದ ಸಿಕ್ಕಿದೆ? ಇನ್ನ್ಯಾವುದು ಸಿಗಬೇಕು ಅಂತ ಆಚರಿಸಬೇಕು?

ಎಲ್ಲ ಋಣಾತ್ಮಕವಾದದ್ದನ್ನೇ ಹೇಳಿದೆ ಎಂದು ಬೇಸರಿಸಿಕೊಳ್ಳಬೇಡಿ. ಒಳ್ಳೆಯದು ತುಂಬಾ ಇದೆ. ಆದರೆ 125 ಕೋಟಿ ಜನಸಂಖ್ಯೆ ಇದ್ದು, ಅಗಾಧವಾದ ಅತ್ತ್ಯುತ್ತಮ ಸಂಸ್ಕೃತಿಯ ತಳಹದಿಯಿದ್ದು ಈ 72 ವರ್ಷಗಳಲ್ಲಿ ಸಾಧಿಸಿದ್ದು ತುಂಬಾ ಕಡಿಮೆ. ಕಾರಣ ಇನ್ನುವರೆವಿಗೂ ನಮ್ಮಲ್ಲಿ ರಾಷ್ಟ್ರ ಪ್ರಜ್ಞೆ ಜಾಗೃತವಾಗದೇ ಇರುವುದು (ಅತಿರೇಕದ ರಾಷ್ಟ್ರಪ್ರೇಮದ, Jingoism ಕುರಿತಲ್ಲ ನಾನು ಹೇಳುತ್ತಿರುವುದು).

ಯಾವ ಸತ್ಪ್ರಜೆಗೆ ನಾನು ಲಂಚ ಕೊಡಬಾರದು ಮತ್ತು ತೆಗೆದುಕೊಳ್ಳಬಾರದು ಎಂಬ ಅರಿವಿದೆ? ಯಾವ ಅಮರ ದೇಶ ಪ್ರೇಮಿಗೆ ನಾನು ಸಂಚಾರಿ ನಿಯಮಗಳನ್ನು ಉಲ್ಲಂಘಿಸಬಾರದು ಎಂಬ ಅರಿವಿದೆ? ಯಾವ ಮಹಾನ್ ನಾಗರೀಕನಿಗೆ ದೇಶದಲ್ಲಿ ಎಲ್ಲೆಂದರಲ್ಲಿ ಕಸ ಹಾಕಬಾರದು ಎಂಬ ಜ್ಞಾನವಿದೆ? ಯಾವ ಯುವ ದೇಶಪ್ರೇಮಿಗೆ ನೀರನ್ನು ಮಿತವಾಗಿ ಬಳಸಬೇಕೆಂಬ ಕನಿಷ್ಠ ಅರಿವಿದೆ? ದಿನವಿಡೀ ಪರಿಸರ ಪ್ರಜ್ಞೆಯಿಂದ ಯಾರು ಜಾಗೃತರಾಗಿರುತ್ತಾರೆ? ಇದೆಲ್ಲ ದೇಶಕ್ಕೆ ಮುಖ್ಯವಲ್ಲವೇ?

ಸ್ವಾತಂತ್ರ್ಯೋತ್ಸವ ಕೇವಲ ಧ್ವಜಾರೋಹಣದ ಅಬ್ಬರದ ಆಡಂಬರದ ಆಚರಣೆಯಾಗಿ ಮಾತ್ರ ಕೊನೆಯಾಗಬಾರದು. ಹಿಂದಿನ ಜನರ ತ್ಯಾಗವನ್ನು ಶ್ಲಾಘಿಸುವುದರೊಂದಿಗೆ, ದೇಶದ ಬಗ್ಗೆ ನಮ್ಮ ಕರ್ತವ್ಯವನ್ನು ನಾವು ಮರೆಯಬಾರದು. ಆಗ ಮಾತ್ರ ಈ ಆಚರಣೆಗೆ ಒಂದು ನಿಜವಾದ ಅರ್ಥ ಬರುತ್ತದೆ. ಆಗ ಮಾತ್ರ ನಾವು ನಿಜವಾದ ಅರ್ಥದಲ್ಲಿ ಸ್ವಾತಂತ್ರೋತ್ಸವದ ಹಬ್ಬಕ್ಕೆ ಪಾಲುದಾರರಾಗುತ್ತೇವೆ. ಬೇರೆಯವರನ್ನು ನಿಂದಿಸುವುದು, ಅವರು ಮಾಡಲಿ ಎನ್ನುವುದನ್ನು ಬಿಡಿ. ನಮ್ಮಿಂದಲೇ ಬದಲಾವಣೆಯ ಹೊಸ ಪರ್ವ ಶುರುವಾಗಲಿ. Be the Change to see the Change-Gandhi!

ಕೊನೆಯದಾಗಿ ರವಿಂದ್ರನಾಥ್ ಟಾಗೋರ್ ರವರ ಗೀತಾಂಜಲಿಯ ಈ ಕವನದೊಂದಿಗೆ ನನ್ನ ಸ್ವಾತಂತ್ರ್ಯದ ಆಶಯವನ್ನು ಹೇಳುತ್ತಾ ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು!!

Where the mind is without fear and the head is held high;
Where knowledge is free;
Where the world has not been broken up into fragments by narrow domestic walls;
Where words come out from the depth of truth;
Where tireless striving stretches its arms towards perfection;
Where the clear stream of reason has not lost its way into the dreary desert sand of dead habit;
Where the mind is led forward by thee into ever-widening thought and action
Into that heaven of freedom, my Father, let my country awake.
ಆ ಸ್ವಾಂತಂತ್ರ್ಯ ಸ್ವರ್ಗಕ್ಕೆ ನಮ್ಮ ನಾಡು ಏಳಲಿ, ಏಳಲಿ, ಏಳಲಿ…………….

“ಸಾವಿನೊಂದಿಗೆ ಹೋರಾಟ ಮತ್ತು ಹಾಸ್ಯ”

ಇತ್ತೀಚಿಗೆ ಒಂದು ಅದ್ಭುತ ಕೃತಿಯನ್ನು ಓದಿದೆ. ಎರಡು ವಿಷಯಗಳಿಂದಾಗಿ ಇದು ಅದ್ಭುತ. ಒಂದು ಸಾವನ್ನು ಎದುರು ನೋಡುತ್ತಿರುವಾಗಲೂ ಕೂಡ ಹೇಗೆ ನಗು ನಗುತ್ತಾ ಇರಬಹುದು ಎಂಬುದಾದರೆ, ಎರಡನೆಯದು ಈ ಕೃತಿಯ ಲೇಖಕರಾದ ಮಾಯ.ಬಿ.ನಾಯರ್ ಅವರು ನಮ್ಮ ಕಾವೇರಿ ನಿಗಮದವರು, ನನಗೆ ಪರಿಚಯದವರು ಎಂಬುದು. ಕೃತಿಯ ಹೆಸರೇ ಬಹು ಸೊಗಸಾಗಿದೆ, “ಸಾವಿನ ಮನೆಯ ಕದವ ತಟ್ಟಿ-ಕ್ಯಾನ್ಸರ್ ಗೆ ಹಾಸ್ಯೌಷಧಿ”.

ಮಲಯಾಳಿ ಕೃತಿಯನ್ನು ಕನ್ನಡಕ್ಕೆ ಬಹು ಸೊಗಸಾಗಿ ಅನುವಾದವನ್ನು ಮಾಡಿದ್ದಾರೆ. ಮಲಯಾಳಂನ ಪ್ರಸಿದ್ಧ ಹಾಸ್ಯ ನಟರಾದ ‘ಇನ್ನಸೆಂಟ್’ ಎಂಬುವರು ಕ್ಯಾನ್ಸರ್ ವಿರುದ್ಧ ಹೋರಾಡಿ ಜಯಿಸಿದ್ದು, ಮಾತ್ರವಲ್ಲ ಅವರ ಪತ್ನಿಯವರು ಕೂಡ ಇದರಿಂದ ಹೊರ ಬಂದ ಒಂದು ರೋಚಕ ನೈಜ ಕಥನ. ನಿಜವಾಗಿ ನೋಡಿದರೆ ಇದನ್ನು ಕಥನ ಎಂದು ಕರೆಯಬಾರದು ಆದರೆ ಇದನ್ನು ಓದಿದ ಮೇಲೆ ಒಬ್ಬ ಮನುಷ್ಯ ಧನಾತ್ಮಕ ಚಿಂತನೆಯಿಂದ ಹಾಗೂ ಮುಖ್ಯವಾಗಿ ಹಾಸ್ಯದಿಂದ ಹೇಗೆ ಬಹು ಕ್ರೂರ ರೋಗದಿಂದ ಕೂಡ ಆಚೆ ಬರಬಹುದು ಎಂದು ತಿಳಿಯುತ್ತದೆ, ಹಾಗೂ ಓಹ್ ಇದು ನಿಜವಾ, ಅದ್ಭುತ! ಎನಿಸುತ್ತದೆ.

ಅವರಿಗೆ ಕ್ಯಾನ್ಸರ್ ಎಂದು ತಿಳಿದ ತಕ್ಷಣ ಅವರು ಅದರಿಂದ ಗುಣಮುಖರಾಗಲೇ ಬೇಕು ಎಂದು ತೀರ್ಮಾನ ಮಾಡಿ, ಒಂದು ನಿರ್ಧಾರಕ್ಕೆ ಬರುತ್ತಾರೆ. ಅದೇನೆಂದರೆ ‘ಬದುಕು ಕಾದಿರುವಾಗ ನಮಗೆ ಸಾಯಲು ಹೇಗೆ ಸಾಧ್ಯ?’ ಎಂದು. ನಿಜವಲ್ಲವೇ? ಬದುಕು ಕೈ ಬೀಸಿ ಇನ್ನು ಬಹಳಷ್ಟು ಬದುಕು ಕಾದಿದೆ ಎಂದು ಸ್ವಾಗತಿಸುತ್ತಿರುವಾಗ, ಬದುಕುವ ಉತ್ಕಟ ಉತ್ಸಾಹ ಮನೆ ಮಾಡಿರುವಾಗ ಸಾವು ಹೇಗೆ ತಾನೇ ಬರಲು ಸಾಧ್ಯ?

ಕೆಲವರು ಕ್ಯಾನ್ಸರ್ ಬಂದಾಗ ಬೇರೆಯವರಿಗೆ ಹೇಗೆ ಹೇಳುವುದು ಎಂದು ಮುಚ್ಚಿಡುತ್ತಾರೆ. ನಿಜ, ಅದೇನು ಮಹಾ ಸಾಧನೆಯಲ್ಲ ಹೇಳಿಕೊಳ್ಳಲು, ಆದರೆ ಹಾಗಂತ ಮುಚ್ಚಿಡುವಂತಹುದು ಅಲ್ಲವಲ್ಲ. ಅದಕ್ಕೆ ಇನ್ನಸೆಂಟ್ ತುಂಬಾ ಚೆನ್ನಾಗಿ ಹೇಳುತ್ತಾರೆ, ‘ಮುಚ್ಚಿಡಲು ನಾನಿದನ್ನು ಯಾವುದೋ ಚರ್ಚ್ ಅಥವಾ ದೇವಸ್ಥಾನದಿಂದ ಕದ್ದು ತಂದಿರುವುದಲ್ಲವಲ್ಲ, ಎಲ್ಲರಿಗೂ ಬರುವ ಹಾಗೆಯೇ ನನಗೂ ಬಂದದ್ದು’ ಎಂದು. ಆ ದುಃಖದ ಸನ್ನಿವೇಶದಲ್ಲೂ ಕೂಡ ಅವರ ಹಾಸ್ಯ ಪ್ರಜ್ಞೆ ಮೆಚ್ಚುವಂತಹುದು.

ಕ್ಯಾನ್ಸರ್ ಒಂದೇ ಅಲ್ಲ, ಅವರಿಗೆ ಹೃದಯ ರೋಗವೂ ಕೂಡ ಬಂದು ಸೇರುತ್ತದೆ. ಆದರೆ ಮೊದಲು ಕ್ಯಾನ್ಸರ್ ಗೆ ಚಿಕಿತ್ಸೆ ನಂತರ ಹೃದ್ರೋಗದ ಕಾಳಜಿ ಎನ್ನುತ್ತಾರೆ ವೈದ್ಯರು. ಅದನ್ನು ಇನ್ನಸೆಂಟ್ ಹೀಗೆ ಹೇಳುತ್ತಾರೆ, ‘ದೊಡ್ಡವರು ಬಂದಾಗ ಚಿಕ್ಕವರು ದಾರಿ ಬಿಟ್ಟು ಕೊಡುತ್ತಾರೆ, ಕ್ಯಾನ್ಸರಿನ ದೊಡ್ದಾಟದ ಮುಂದೆ ಹಾರ್ಟಿನ ಮಕ್ಕಳಾಟಕ್ಕೆ ಸ್ಥಾನವಿಲ್ಲ’. ಅವರು ಒಬ್ಬ ನಟನಾಗಿ ಅನುಭವಿಸುತ್ತಿರುವ ತೊಳಲಾಟವನ್ನು ಕೂಡ ತುಂಬಾ ಚೆನ್ನಾಗಿ ಹೇಳುತ್ತಾರೆ. ಆಸ್ಪತ್ರೆಯ ಕಾರಿಡಾರ್ ನಲ್ಲಿ ಇವರು ಔಷಧಿ ಹಿಡಿದುಕೊಂಡು ಟೆನ್ಶನ್ ನಲ್ಲಿ ನಡೆಯುತ್ತಿರಬೇಕಾದರೆ, ಹಾಸ್ಯ ನಟರಾದ ಇವರನ್ನು ನೋಡಿ ಜನ ನಗುತ್ತಾರೆ. ಸತ್ತು ಮಲಗಿದರೂ ಜನ ನೋಡಿ ನಗ್ತಾರೆ ಎಂಬುದು ಈ ಭೂಮಿಯಲ್ಲಿ ಒಬ್ಬ ಹಾಸ್ಯ ನಟನ ದುರ್ವಿಧಿಯಾಗಿರಬಹುದು ಎಂದು ಕೊರಗುತ್ತಾರೆ. ನಮ್ಮ ಜನ ಎಷ್ಟು insensitive ಎನಿಸಿತು ನನಗೆ.

ಇನ್ನಸೆಂಟ್ ರವರ ಬಹು ಮಹತ್ವದ ಸಂದೇಶ ಈ ಪುಸ್ತಕದ ಮೂಲಕ ಎಂದರೆ, ವೈಜ್ಞಾನಿಕವಾಗಿ ಸಿದ್ಧವಾದ ಚಿಕಿತ್ಸೆಯನ್ನೇ ನಂಬಿದರು ಮತ್ತು ಡಾಕ್ಟರ್ ಒಬ್ಬ ದೇವರ ಸ್ವರೂಪ ಎಂದು ತಿಳಿದು ಚಿಕಿತ್ಸೆ ಪಡೆದರೇ ಹೊರತು ಯಾವುದೇ ರೀತಿಯ ಬೂಟಾಟಿಕೆ, ಮಾಯಾ-ಮಂತ್ರಗಳಿಗೆ ಅವರು ಬೆಲೆ ಕೊಡಲಿಲ್ಲ ಮತ್ತು ಬಲಿ ಆಗಲಿಲ್ಲ. ಒಂದು advertisement ಗಾಗಿ ಅವರು ಒಪ್ಪಿದಾಗ ಅವರು ಮೊಟ್ಟ ಮೊದಲ ಬಾರಿಗೆ ತಮ್ಮನ್ನು ತಾವು ಕೂಲಂಕಷವಾಗಿ ಒಮ್ಮೆ ನೋಡಿಕೊಳ್ಳುತ್ತಾರೆ. ಸಣಕಲಾದ ದೇಹ, ಉದುರಿದ, ಅರ್ಧ ಬರಿದಾದ ತಲೆ, ಬಿಳುಚಿದ ಮುಖ, ಇವೆಲ್ಲವನ್ನು ಗಮನಿಸಿ ತಲೆಗೆ ಒಂದು ವಿಗ್ ಹಾಕಿಕೊಂಡು, ಯಾವಾಗಲೂ ಹಾಕುವ ಜುಬ್ಬಾ ಬಿಟ್ಟು T-shirt ಹಾಕಿಕೊಂಡು, powder ಬಳೆದುಕೊಂಡು ಕೂಡುತ್ತಾರೆ. ಆಗ ಅವರು ಹೋಲಿಸಿ ಹೇಳುವ ಮಾತು ಎಂತಹವರ ಮನಸ್ಸನ್ನು ಕೂಡ ಕಲಕುತ್ತದೆ. ‘ ನಿಜಕ್ಕೂ ಮುಂಬೈ ರೆಡ್ ಸ್ಟ್ರೀಟ್ ನಲ್ಲಿ ವಿರೂಪವಾಗಿರುವ ಸೆಕ್ಸ್ ವರ್ಕರ್, ಸಂಜೆ ವೇಳೆ ತನ್ನ ಗಿರಾಕಿಗಳನ್ನು ಆಕರ್ಷಿಸಲು ನಿಲ್ಲುವ ಅದೇ ಅವಸ್ಥೆ ಎಂದು’. ಅಬ್ಬಾ ಎಂತಹ ತೊಳಲಾಟವಿರಬಹುದು ಮನದಲ್ಲಿ.

ಇವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೂ ಕ್ಯಾನ್ಸರ್ ಬರುತ್ತದೆ, ಇವರ ಪತ್ನಿಗೂ ಕೂಡ ಕ್ಯಾನ್ಸರ್ ಎಂದು ತಿಳಿದುಬರುತ್ತದೆ. ಕ್ಯಾನ್ಸರ್ ಹರಡುವ ರೋಗವಲ್ಲ ಎಂದು ವಿವೇಕ ಹೇಳುತ್ತಿದ್ದರೂ ಕೂಡ ತಮ್ಮ ಜೊತೆ ಇರುವವರಿಗೆ ಬಂದ ರೋಗವನ್ನು ಕಂಡು ಇನ್ನಸೆಂಟ್ ಅವರು ತಮ್ಮ ಮೊಮ್ಮಕಳನ್ನು ಹತ್ತಿರ ಸೇರಿಸಲು ಕೂಡ ಹೆದರುತ್ತಾರೆ. ಅವರ ಈ ಅವಸ್ಥೆಯಲ್ಲಿ ಒಂದೇ ಒಂದು ಆಶಾಕಿರಣವಾಗಿ ನಿಂತ ಮೊಮ್ಮಕಳಿಗೂ ಏನಾದರು ಆದರೆ ಎಂಬ ಭಯ ಅವರಿಗೆ ಕಾಡಲು ಶುರುವಾಗುತ್ತದೆ.

ಇವರ ಮನೆಯವರಿಗೆ ಬರುವವರೆಲ್ಲರೂ ಹಣ್ಣುಗಳನ್ನು ತೆಗೆದುಕೊಂಡು ಬರುತ್ತಿರುವುದು ಯಾವ ಮಟ್ಟಿಗೆ ಹೆಚ್ಚಾಗುತ್ತದೆಂದರೆ ಇವರ ಬೀದಿಯಲ್ಲಿರುವ ಹಣ್ಣಿನ ವ್ಯಾಪಾರಿಯ ವ್ಯಾಪಾರ ದಿನೇ-ದಿನೇ ಏಳಿಗೆ ಕಾಣುತ್ತಾ ಹೋಗುತ್ತದೆ. ಎಲ್ಲವನ್ನೂ ಹಾಸ್ಯದ ಲೇಪನದೊಂದಿಗೆ ಬಹು ಚಂದವಾಗಿ ಸ್ವೀಕರಿಸುತ್ತಾರೆ ಮತ್ತು ಅದನ್ನು ಬರೆಯುತ್ತಾರೆ ಕೂಡ. ಇವರು ತಮ್ಮ ಪತ್ನಿಯೊಂದಿಗೆ ಇಬ್ಬರು ‘ಕಿಮೋ’ ಚಿಕಿತ್ಸೆಗೆ ಹೋಗುವಾಗ ‘ನಮ್ಮದೊಂದು ಸಂತುಷ್ಟ ಕ್ಯಾನ್ಸರ್ ಕುಟುಂಬ ಎನ್ನುತ್ತಾರೆ’. ಎಂತಹ ವಿಡಂಬನೆ!

ವೈದ್ಯರ ಮೇಲಿಟ್ಟ ಅವರ ವಿಶ್ವಾಸ, ಹಾಸ್ಯ, ಕುಟುಂಬದ, ಸ್ನೇಹಿತರ ಹಾರೈಕೆ ಎಲ್ಲವೂ ಒಟ್ಟುಗೂಡಿ ಕೊನೆಗೆ ಲಿಂಫೋಮಾದಿಂದ ಸಂಪೂರ್ಣ ಗುಣಮುಖರಾಗಿ ಮತ್ತೆ action-cut ಗೆ ಮರಳುತ್ತಾರೆ. ಮೊನ್ನೆಯ 2014 ರ ಲೋಕಸಭೆಗೆ ಕೂಡ ಅವರು ಆರಿಸಿ ಬಂದಿದ್ದರು.

ಜೀವನದಲ್ಲಿ ಕ್ಯಾನ್ಸರ್ ನಿಂದ ನರಳುತ್ತಿರುವ ಪ್ರತಿಯೊಬ್ಬ ವ್ಯಕ್ತಿ ಹಾಗೂ ಜೀವನದಲ್ಲಿ ಇನ್ನೇನೂ ಇಲ್ಲ ಎಂದು ಮನೋವ್ಯಾಧಿಗೆ ಒಳಗಾದ ಎಲ್ಲರೂ ಈ ಪುಸ್ತಕವನ್ನು ಒಮ್ಮೆಯಾದರು ಓದಲೇಬೇಕು, ಕನ್ನಡಕ್ಕೆ ಅನುವಾದ ಮಾಡಿದ ಮಾಯರವರಿಗೆ ಹೃತ್ಪೂರ್ವಕ ಧನ್ಯವಾದಗಳು. ಅಷ್ಟಿಲ್ಲದೇ ಡಿ.ವಿ.ಜಿ. ಅವರು ಹೇಳುತ್ತಾರೆಯೇ ‘ನಗುವೊಂದು ರಸಪಾಕ’ ಎಂದು. ನಗುವಾತ್ಮ ಪರಿಮಳವ ಪಸರಿಸುವ ಕುಸುಮ. ನಗು ಆರೋಗ್ಯ ಎನ್ನುವ ಪರಿಮಳವನ್ನೂ ಪಸರಿಸುತ್ತದೆ. ಆದ್ದರಿಂದ ನಗು-ನಗುತಾ ಬಾಳ್ ತೆರಳ್ –ಮಂಕುತಿಮ್ಮ!!

ಅಪಸ್ವರ-ಅಪಜಯ

‘ಅಪಸ್ವರ’ ಇದು ತ್ರಿವೇಣಿ ಅವರ ಕಾದಂಬರಿ. ಈ ಕಾದಂಬರಿ ಬಗ್ಗೆ ಮೊದಲು ನಾನು ‘ಬೆಂಕಿಯಲ್ಲಿ ಅರಳಿದ ಹೂವು’ ಚಿತ್ರದಲ್ಲಿ ಕೇಳಿದ್ದೆ. ಮೊನ್ನೆ ಆಕಸ್ಮಿಕವಾಗಿ ಈ ಕಾದಂಬರಿ ಓದುವ ಭಾಗ್ಯ ದೊರೆಯಿತು. ಆಗಲೇ ತಿಳಿದದ್ದು ಇದರ ಮುಂದುವರಿದ ‘ಅಪಜಯ’ ಎನ್ನುವ ಕಾದಂಬರಿಯೂ ಇದೆ ಎಂದು.
ಶೀರ್ಷಿಕೆಯನ್ನು ಓದಿದ ತಕ್ಷಣ ನನಗನಿಸಿದ್ದು ಇದೊಂದು ವಿಶಾದವಾದ ಅಂತ್ಯವನ್ನು ಹೊಂದಿರುತ್ತದೆ ಎಂದು . ಹಾಗೆಯೇ ಇದೆ! ಆದರೆ ದುರಂತದಲ್ಲಿ ಕೊನೆಗೊಳ್ಳುವುದೇನೋ ಎಂದೆಣಿಸಿದ್ದೆ, ಆದರೆ ಹಾಗೇನೂ ಆಗುವುದಿಲ್ಲ.
ಅದೇಕೋ ಈ ಕಾದಂಬರಿಯ ನಾಯಕಿಯ ಜೀವನ ದುಃಖದಲ್ಲಿ ಕೊನೆಗೊಳ್ಳುವುದಾದರೂ ನಾಯಕಿ ‘ಮೀರ’ಳ ಪಾತ್ರ ಮನಸ್ಸಿಗೆ ತುಂಬಾ ಹಿಡಿಸಿತು. ಚಿಕ್ಕಂದಿನಲ್ಲೇ ತಂದೆ ತಾಯಿಯನ್ನು ಕಳೆದುಕೊಂಡು ಚಿಕ್ಕಪ್ಪನ ಆಶ್ರಯದಲ್ಲಿ, ಚಿಕ್ಕಮ್ಮನ ತಿರಸ್ಕಾರದ ನುಡಿ ಕೇಳುತ್ತಾ ಬೆಳೆಯುವ ಮೀರ ಭಾವುಕ ಜೀವಿಯಾಗುತ್ತಾಳೆ ಎಂದುಕೊಂಡಿದ್ದೆ. ಆದರೆ ಆಕೆಯ ಆಲೋಚನಾ ಲಹರಿ, ತೆಗೆದುಕೊಳ್ಳುವ ನಿರ್ಧಾರ, ದಿಟ್ಟ ಹೆಜ್ಜೆ, ಬದುಕನ್ನು ಸ್ವೀಕರಿಸುವ ಬಗೆ, ಮನಸ್ಸಿನ ನೂರೊಂದು ಗೊಂದಲಗಳು, ವೃತ್ತಿಪರತೆ ಇವೆಲ್ಲವನ್ನು ನೋಡಿದಾಗ ಆಕೆ ಇಂದಿನ ಇಪ್ಪತ್ತೊಂದನೇ ಶತಮಾನದ ವಾಸ್ತವ ಮಹಿಳೆಯಾಗಿ ಕಂಗೊಳಿಸುತ್ತಾಳೆ.
ಇನ್ನೊಂದು ಬಹು ಆಶ್ಚರ್ಯಕರವಾದ ಸಂಗತಿ ಎಂದರೆ ಶಾಮು ತನ್ನ ಹೆಂಡತಿ ಮೀರಳಿಗಿಂತ ಕಡಿಮೆ ಓದಿದ್ದರೂ ಸಹ, ಆಕೆಯನ್ನು ಚುಚ್ಚು ಮಾತಿನಿಂದ ನೋಯಿಸುವುದಾಗಲಿ ಅಥವಾ ಮುಂದೆ ಓದಲು ಹಿಂದೇಟು ಹಾಕುವುದಾಗಲಿ ಮಾಡುವುದಿಲ್ಲ. Of course, ಮೊದಮೊದಲು ಅವನು ಅವಳನ್ನು ಓದಲು ಬಿಡುವುದಿಲ್ಲ. ಏಳೆಂಟು ವರ್ಷಗಳ ದಾಂಪತ್ಯದಲ್ಲಿ ಮಗಳ ಅಗಲಿಕೆಯ ನೋವಿನಿಂದ ಅವನು ಮುಂದೆ ಅವಳಿಗೆ ಓದಲು ಸಹಕರಿಸಿದರೂ ಕೂಡ, ಆಗಲಾದರೂ ಒಪ್ಪಿಗೆ ನೀಡಿದನಲ್ಲ! ನಿನ್ನ ಹಣೆಬರಹ ಹೀಗೆಯೇ ಬದುಕು ಎಂದು ನಿರ್ಬಂಧ ಹೇರಲಿಲ್ಲವಲ್ಲ ಎಂದು ಸಂತೋಷವಾಗುತ್ತದೆ. ಮೀರಳಿಗೆ ಅವನು ಮದುವೆಯಾದ ತಕ್ಷಣ ಓದಿಸದೇ ಇರಲು ಕಾರಣ ಅವನ ಹುಚ್ಚು ಪ್ರೀತಿ ಅಷ್ಟೇ ವಿನಃ ಅವನಿಗೆ ಇದ್ದ ಸಹಜವಾದ ಪುರುಷ ಪ್ರಾಧಾನ್ಯ ಅಹಂ ಅಲ್ಲ, ಓದಿನಿಂದ ಯಾವ ಕಾರ್ಯ ತಾನೇ ಸಾಧಿಸಬೇಕಾಗಿದೆ ಎಂಬ ಔದಾಸೀನ್ಯವೇ ಕಾರಣ.
ಇನ್ನು ಮೀರ ತಾನು ವೈದ್ಯಳಾಗಲೇಬೇಕೆಂಬ ದೃಢ ನಿರ್ಧಾರದಿಂದ, ತನ್ನಿಂದ ಇನ್ನು ಗೃಹಿಣಿ ಆಗಿರಲು ಸಾಧ್ಯವಿಲ್ಲವೆಂದು ತಿಳಿದು, ತಾನೇ ಮುಂದೆ ನಿಂತು ಗಂಡನಿಗೆ ಮದುವೆ ಮಾಡುವುದು. ಕಾಲೇಜಿನಲ್ಲಿ ಉತ್ತಮ ವಿದ್ಯಾರ್ಥಿಯಾಗುವುದು. ಒಂದು ಬಹುಮುಖ ಪ್ರತಿಭೆಯ ತುಂಟ ಹುಡುಗಿಯಿಂದ, ಜೀವನದಲ್ಲಿ ಹತಾಶೆಯಿಂದ ಬೆಂದು, ಆ ದುಃಖದ ಪಾಕದಲ್ಲಿ ಮಿಂದು ಸಿಹಿಯಾದ ಗಟ್ಟಿ ಮಹಿಳೆಯಾಗಿ ಹಾಗೂ ಡಾಕ್ಟರ್ ಆಗಿ ಹೊರಹೊಮ್ಮುವ ಆ ಪರಿವರ್ತನೆಯ ಜೀವನ ಬಹು ಸೊಗಸಾಗಿದೆ. ಬದುಕಿನಲ್ಲಿ ಬೆಂದು ಪಕ್ವವಾಗಿ ಮತ್ತೆ ಜೀವನದ ಕಡೆ ಆಶಾಭಾವನೆಯಿಂದ ಮರುಳುವುದಿದೆಯಲ್ಲ ಅದೇ ಜೀವನದ ಬಹು ದೊಡ್ಡ ಸಾಧನೆ ಮತ್ತು ಇಂದಿನ ನಮ್ಮ ಶಿಕ್ಷಣದಲ್ಲಿ ನಮ್ಮ ಮಕ್ಕಳಿಗೆ ಚಿಕ್ಕಂದಿನಿಂದಲೇ ನಾವು ಹೇಳಿಕೊಡಬೇಕಾಗಿರುವ ಪಾಠ.
‘ಅಪಸ್ವರ’ ಕಾದಂಬರಿ ಕೊನೆಗೆ ಆಕೆ ಮಗಳನ್ನು ಕಳೆದುಕೊಳ್ಳುವ ದುರ್ಘಟನೆಯಿಂದ ಮುಗಿದರೆ, ‘ಅಪಜಯ’ ಆಕೆ ವೈದ್ಯಳಾಗಿ ಸಂಸಾರವನ್ನೇ ತೊರೆದುಬಿಡುವ ಜಿತೇ೦ದ್ರಿಯತ್ವಕ್ಕೆ ಸನ್ನಿಹಿತವಾಗುವ ಘಟನೆಯಿಂದ ಮುಕ್ತಾಯಗೊಳ್ಳುತ್ತದೆ. ಬದುಕಿನಲ್ಲಿ ಇಂತಹುದೇ ನನಗೆ ಬಹು ಮುಖ್ಯ ಎಂಬ ದೃಢ ಸಂಕಲ್ಪದಿಂದ ಬದುಕುವ ಒಂದು ದಿಟ್ಟ ಮನೋಧೈರ್ಯವುಳ್ಳ ವ್ಯಕ್ತಿತ್ವವನ್ನು ಮೀರಳಲ್ಲಿ ಕಾಣಬಹುದು. ಗಾಳಿ ಬಂದ ಕಡೆ ತೂರಿಕೋ, ಅದು ಕೂಡ ಹೇಗೆ ಬೇಕಾದರೂ ತೂರಿಕೋ ಎಂಬುದನ್ನು ಸರಸಳ ವ್ಯಕ್ತಿತ್ವದಲ್ಲಿ ಕಾಣಬಹುದು.
ಈ ಎಲ್ಲದರ ಮಧ್ಯೆ ಬುದ್ಧಿ ಮತ್ತು ವಿವೇಕಕ್ಕಿಂತ, ಭಾವೋದ್ವೇಗಕ್ಕೆ ಮತ್ತು ಪಂಚೇಂದ್ರಿಯಗಳ ಸಂವೇದನೆಗೆ ತಕ್ಕಂತೆ, ಬದುಕುವ ವ್ಯಕ್ತಿಚಿತ್ರವನ್ನು ಶಾಮುವಿನಲ್ಲಿ ಕಾಣಬಹುದು. ಒಟ್ಟಾರೆಯಾಗಿ ನಮ್ಮನ್ನು ತಲ್ಲೀನಗೊಳಿಸಿ, ನಮ್ಮನ್ನು ಸರಸರನೆ ಓದಿಸಿಕೊಂಡು ಹೋಗುವ ಪುಸ್ತಕಗಳಿವು.
ತ್ರಿವೇಣಿಯವರ ‘ಬೆಳ್ಳಿಮೋಡ’ ನಾನು ಮೊದಲು ಓದಿದ ಕಾದಂಬರಿ. ಆ ಚಿತ್ರವನ್ನು ಕೂಡ ನೋಡಿದ್ದೇ. ಕಲ್ಪನಾ ಅವರ ಮನೋಜ್ಞ ಅಭಿನಯ , ಆಹ್ ಮತ್ತದೊಂದು ಬೇರೆಯೇ ಲೋಕ ಬಿಡಿ. ನನಗೆ ಆಶ್ಚರ್ಯವಾದುದು, ಈ ಕಾದಂಬರಿ ಏಕೆ ಸಿನಿಮಾ ಆಗಲಿಲ್ಲ ಎಂಬುದು. ಆದರೆ, ನಾನು ನನ್ನ ಕಲ್ಪನೆಯಲ್ಲಿಯೇ ಪಾತ್ರ ಸೃಷ್ಟಿ ಮಾಡಿಕೊಂಡೇ ಕಾದಂಬರಿ ಓದಿದೆ, ಅದು ಬೇರೆ ವಿಷಯ. ನವಿರಾದ ಅಂತಃಕರಣವನ್ನು ಕೊನೆಯಲ್ಲಿ ನಮ್ಮ ಮನದಲ್ಲಿ ಮೂಡಿಸಿ, ಕನಿಕರ, ಕರುಣೆ ಮತ್ತು ಹೆಮ್ಮೆ ಈ ಮೂರರ ಮಧ್ಯದ ಒಂದು ಭಾವಕ್ಕೆ ತಂದು ನಮ್ಮನ್ನು ಹಚ್ಚಿಸಿ ಕಾದಂಬರಿ ಕೊನೆಗೊಳ್ಳುತ್ತದೆ. ನೀವೂ ಒಮ್ಮೆ ಓಡಿ ನೋಡಿ!

-ಮಾನಸ ಆರ್ ಕುಲಕರ್ಣಿ

ಸಾವನದುರ್ಗ

ಬೆಂಗಳೂರಿನಿಂದ 60 ಕಿ.ಮೀ ದೂರದಲ್ಲಿ, ರಾಮನಗರ ಜಿಲ್ಲೆಯಲ್ಲಿ ಸ್ಥಿತವಾಗಿರುವ ಎರಡು ಬೆಟ್ಟಗಳನ್ನೇ ಸಾವನದುರ್ಗ ಬೆಟ್ಟಗಳೆಂದು ಕರೆಯುತ್ತಾರೆ. ಈ ಎರಡು ಬೆಟ್ಟಗಳನ್ನು ಕರಿಗುಡ್ದ, ಬಿಳಿಗುಡ್ಡ ಎಂತಲೂ ಕರೆಯುತ್ತಾರೆ. ಬೃಹದ್ ಗಾತ್ರದ ಏಕಶಿಲಾ ಬೆಟ್ಟಗಳು ಇವಾಗಿವೆ, ಮತ್ತು ಏಷ್ಯಾ ಖಂಡದಲ್ಲೇ ಅತೀ ದೊಡ್ಡದಾದ ಏಕಶಿಲಾ ಬೆಟ್ಟಗಳಲ್ಲಿ ಇದೂ ಒಂದು ಎಂದು ಪರಿಗಣಿಸಲಾಗುತ್ತದೆ.

ಬೆಂಗಳೂರಿನ ಕಾಂಕ್ರೀಟ್ ಕಾಡನ್ನು ನೋಡಿ ಬೇಸತ್ತ ಜನ ಒಮ್ಮೆ ಇದನ್ನು ಭೇಟಿ ನೀಡಿ ಮನಸನ್ನು ಉಲ್ಲಸಿತಗೊಳಿಸಿಕೊಳ್ಳಬಹುದು. ಬ್ರಿಟೀಷರು ಇದನ್ನು ‘ಸಾವಿನ ದುರ್ಗ’ ಎಂದು ಕರೆಯುತ್ತಿದ್ದರಂತೆ. ಅಷ್ಟು ಕಡಿದಾದ ಬೆಟ್ಟವನ್ನು ಏರಲು ಕಷ್ಟ ಎಂದು ಸೂಚಿಸಲು ಈ ರೀತಿ ಕರೆದಿರಬಹುದು. ಆದರೆ, ಈಗ ಚಾರಣಿಗರಿಗೆ ತುಂಬಾ ಅನುಕೂಲಗಳನ್ನು ಮಾಡಿದ್ದಾರೆ, ಸ್ವಲ್ಪ ಮುಂಜಾಗರೂಕತೆಯಿಂದ ಬೆಟ್ಟವನ್ನು ಯಾವ ಭಯವಿಲ್ಲದೆ ಏರಬಹುದು.

ನನಗೆ ಈ ಸಾವನದುರ್ಗವನ್ನು ಭೇಟಿ ನೀಡಿದ ಅನುಭವ ಬಹು ವಿಶೇಷವಾದದ್ದು, ಕಾರಣ ಒಬ್ಬ ವಿಶೇಷ ವ್ಯಕ್ತಿಯೊಂದಿಗೆ ನನ್ನ ಪಯಣ ಸಾಗಿತ್ತು. ಸುಮಾರು 10.30 ಕ್ಕೆ ಬೆಂಗಳೂರಿನಿಂದ ಕಾರಿನಲ್ಲಿ ನಾನು ಮತ್ತು ನನ್ನ ಪ್ರೀತಿಯ ಹುಡುಗ ಪ್ರಯಾಣ ಪ್ರಾರಂಭಿಸಿದೆವು. ರಾಷ್ಟ್ರೀಯ ಹೆದ್ದಾರಿ ಮಾರ್ಗದಲ್ಲಿ ಕಾರಿನಲ್ಲಿ ಚಲಿಸುವುದು ಒಂದು ರೀತಿಯ ಅನುಭವವಾದರೆ, ತದನಂತರ ಪ್ರಾರಂಭವಾದ ಕಾಡು ನಡುವಣ ದಾರಿ ಇನ್ನೂ ಸೊಗಸಾಗಿತ್ತು. ಅನಿರೀಕ್ಷಿತವಾಗಿ ಈ ಯೋಜನೆಯನ್ನು ಹೂಡಿಕೊಂಡಿದ್ದೆವು. ಮೊದಲಿಗೆ ದೊಡ್ಡ ಆಲದ ಮರವನ್ನು ತಲುಪಿದೆವು. ಇದು ಬೆಂಗಳೂರಿನಿಂದ ಸರಿ ಸುಮಾರು 25 ಕಿ. ಮೀ ದೂರದಲ್ಲಿದೆ. 400 ವರ್ಷ ಪುರಾತನವಾದ ಈ ಮರ ಅಂದಾಜು 3 ಎಕರೆ ಪ್ರದೇಶದಲ್ಲಿ ಹರಡಿದೆ. ಇಳಿಬಿದ್ದ ಬೇರುಗಳನ್ನು ನೋಡುತ್ತಾ ಸಾಗುವುದು ಅಪರೂಪದ ಸುಂದರ ಅನುಭವವಾಗಿತ್ತು. ಅಲ್ಲಿಂದ ಮುಂದೆ ನಮ್ಮ ಪಯಣ ಮುಂದುವರೆದದ್ದೇ ಸಾವನದುರ್ಗಕ್ಕೆ.

ರಸ್ತೆಯ ಇಕ್ಕೆಲದಲ್ಲಿ ಸುತ್ತಲೂ ಆಕಾಶದೆತ್ತರಕ್ಕೆ ನಿಂತ ನೀಲಗಿರಿ ಮರಗಳು ಬಿಸಿಲನ್ನು ಆಗಾಗ ಮರೆಯಾಗಿಸಿದ್ದವು. ಚಿಲಿಪಿಲಿ ಗುಟ್ಟುವ ಹಕ್ಕಿಯ ನಿನಾದ ಸ್ವಾಗತ ಕೋರುತ್ತಿರುವಂತಿತ್ತು. ಡಿಸೆಂಬರ್ ತಿಂಗಳಾದ್ದರಿಂದ ಕಾರಿನ ಮೇಲೆ ಉದುರುತ್ತಿರುವ ಎಲೆಗಳು ನಮಗಾಗಿಯೇ ಪ್ರಕೃತಿ ದೇವಿಯು ಸುರಿಸುತ್ತಾ ಮಂಗಳ ಕೋರುತ್ತಿರುವ ಹಾಗಿತ್ತು. ಈ ದೃಶ್ಯದಿಂದ ಹಳೆ ಹಿಂದಿ ಹಾಡೊಂದು ಮನದಲ್ಲಿ ಮೂಡಿ ಮರೆಯಾಗಿತ್ತು, ‘ಬಹಾರೋನ್ ಫೂಲ್ ಬರಸಾಒ ಮೇರಾ ಮೆಹಬೂಬ್ ಆಯಾ ಹೈ, ಮೇರಾ ಮೆಹಬೂಬ್ ಆಯಾ ಹೈ’, ಇದು ಮನಸ್ಸಿನ ಹಿಂಪರದೆಯಲ್ಲಿ ಮೂಡಿದ ಹಾಡಾಗಿದ್ದರೆ, ಕಾರಿನಲ್ಲಿ ಹೊಸ ಮಧುರವಾದ ಹಿಂದಿ ಹಾಡು ಮೂಡಿ ಬರುತ್ತಿತ್ತು. ‘ತುಮ್ ಸೆ ಹಿ ದಿನ್ ಹೋತಾ ಹೈ, ಫಿರ್ ವೊಹಿ ಶಾಮ್ ಆತಿ ಹೈ, ತುಮ್ ಸೆ ಹಿ, ತುಮ್ ಸೆ ಹಿ’. ಹೀಗೆಯೇ ಮಧ್ಯ ಮಧ್ಯ ಕೇವಲ ‘ವಾಹ್ ಸೊಗಸಾಗಿದೆ’ ಎಂಬ ಉದ್ಗಾರದ ಮಾತುಗಳನ್ನು ಮಾತ್ರ ಆಡುತ್ತ, ಸಂತೋಷದ ಮೌನದ ಮಧ್ಯೆ ದಾರಿ ಸಾಗಿತ್ತು.

ಒಂದು ಕಡಿದಾದ ತಿರುವನ್ನು ಸಾಗಿದ ಬಳಿಕ ನಾವಿಬ್ಬರು ಕಾರನ್ನು ನಿಲ್ಲಿಸಿ ಕೆಳಗಡೆ ಇಳಿಯಲೇ ಬೇಕಾದ ರಮಣೀಯ ದೃಶ್ಯವೊಂದು ಥಟ್ ಎಂದು ಕಣ್ಣ ಮುಂದೆ ಬಂದಿತು. ಅದೇ ಮಂಚನಬೆಲೆ ಆಣೆಕಟ್ಟಿನ ಹಿನ್ನೀರಿನ ವಿಹಂಗಮವಾದ ನೋಟ. ಕಣ್ಣು ಹರಿದಷ್ಟೂ ನೀರು ಕಾಣುತ್ತಿದೆ. ನಿಂತು ಸವಿದರೆ ತಿಳಿಯಬಹುದೇ ವಿನಃ ಶಬ್ದದಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಇದನ್ನು ಕಣ್ ದಣಿಯೇ ಸವಿದು ಅಲ್ಲಿಂದ ಮತ್ತೆ ಮುಂದಕ್ಕೆ ಅದೇ ರಸ್ತೆ ಬದಿಯ ಮರಗಳ ಮಧ್ಯೆ ಸಾಗಿ ತಲುಪಿದೆವು ಸಾವನದುರ್ಗ. ಬೆಟ್ಟ ಏರಲು ಯಾವುದೇ ರೀತಿಯ ತಯಾರಿ ಮಾಡಿರದ ಕಾರಣ ಅಲ್ಲಿ ದೂರದಿಂದ ಬೆಟ್ಟದ ದೃಶ್ಯವನ್ನು ಮಾತ್ರ ಸವಿದೆವು. ಕೆಳಗಡೆ ಸ್ವಲ್ಪವೇ ದೂರದಲ್ಲಿ ಲಕ್ಷ್ಮೀ ನರಸಿಂಹ ದೇವಸ್ಥಾನವು ಇದೆ. ತುಂಬಾ ಜನ ಸಂದರ್ಶಿಸಲು ತಂಡೋಪ ತಂಡವಾಗಿ ಬಂದಿದ್ದರು. ಸ್ವಲ್ಪ ಅಲ್ಲಿಯೇ ವಿಹರಿಸಿ, ಮುಂದೆ  ರಾಷ್ಟ್ರೀಯ ಹೆದ್ದಾರಿಯ ಹಾದಿ ಹಿಡಿದೆವು. ಹೊಟ್ಟೆ ಚುರುಗುಟ್ಟುತ್ತಿತ್ತು, ಹೆದ್ದಾರಿಯ ಹೋಟೆಲ್ ಒಂದರಲ್ಲಿ ಭರ್ಜರಿ ದಕ್ಷಿಣ ಭಾರತದ ಊಟ ಸವಿದೆವು.

ಮನಸೆಲ್ಲ ಹೋಗಿ ಬಂದ ಹಾದಿ ನೆನೆಯುತ್ತಿತ್ತು, ಅಯ್ಯೋ ದಾರಿ ಮುಗಿದೇ ಹೋಯಿತೇ ಎಂದು ಚಡಪಡಿಸುತ್ತಿತ್ತು, ಒಲ್ಲದ ಭಾರವಾದ ಮನಸ್ಸಿನಿಂದ ಮತ್ತೆ ಬೆಂಗಳೂರು ಮಹಾನಗರವನ್ನು ನಾವು ಹೊಕ್ಕಾಗ ಸಂಜೆ 4 ಗಂಟೆಯಾಗಿತ್ತು.

ನೀವೂ ಒಮ್ಮೆ ಭೇಟಿ ನೀಡಿ, ನಿಮ್ಮ ಪ್ರೀತಿ ಪಾತ್ರರೊಂದಿಗೆ ಹೋದರಂತೂ ಸೋಜಿಗದ ಸೊಗಸಾಗಿರುತ್ತದೆ. ಕಾರಿನಲ್ಲಾದರೆ ಮತ್ತೂ  ವಿಶೇಷವಾಗಿರುತ್ತದೆ. ದ್ವಿಚಕ್ರ ವಾಹನದಲ್ಲಿಯಂತೂ ನಯನ ಮನೋಹರ. ಜೊತೆಯಾಗಿ ನಮಗಾಗಿಯೇ ಕಾದ ಸ್ವರ್ಗದ ದ್ವೀಪವೊಂದಕ್ಕೆ ಪಯಣಿಸುತ್ತಿದ್ದೇವೆ ಎಂಬ ಅನುಭವ ನೀಡಿದ ಆ ದಾರಿಗೆ ನನ್ನ ನಮನ. ಸುಂದರವಾದ ದಿನವನ್ನು ಕೊಡುಗೆಯಾಗಿ ಕೊಟ್ಟ ನನ್ನ ಹುಡುಗನಿಗೆ ಪ್ರೀತಿಯ ಧನ್ಯವಾದ.

ಸಂಧ್ಯಾರಾಗ

ಮೊದಲ ಸಲ ‘ಕಾದಂಬರಿ ಸಾರ್ವಭೌಮ’ ಎಂದೇ ಹೆಸರಾದ, ಕನ್ನಡ ಸಾಹಿತ್ಯದ ಪ್ರಗತಿಶೀಲ ಚಳುವಳಿಯ ರೂವಾರಿಯಾದ ಅ.ನ.ಕೃಷ್ಣರಾಯರ “ಸಂಧ್ಯಾರಾಗ” ಕಾದಂಬರಿಯನ್ನು ಓದಿದೆ. ಕಾದಂಬರಿಯಲ್ಲಿ ಕೆಲವು ಇಷ್ಟವಾದವು, ಇನ್ನು ಕೆಲವು ಕಷ್ಟವಾದವು. ಬಹುಶಃ ಎಪ್ಪತ್ತು-ಎಂಬತ್ತು ವರ್ಷದಷ್ಟು ಹಿಂದಿನ ಕಾದಂಬರಿಯನ್ನು ಈಗಿನ ಯುವ ಪೀಳಿಗೆಯಾದ ನಾನು, ಓದಿ ಅರ್ಥ ಮಾಡಿಕೊಂಡ ಪರಿಯಲ್ಲಿರುವ  ವ್ಯತ್ಯಾಸಗಳೇ ಕೆಲವು ವಿಷಯ ಇಷ್ಟ ಆಗದೇ ಇರುವುದಕ್ಕೆ ಕಾರಣವೂ ಇರಬಹುದು. ಪ್ರಪ್ರಥಮವಾಗಿ ಇಷ್ಟವಾದ ಸಂಗತಿಗಳ ಪಟ್ಟಿ ಮಾಡುವ.

ಮೊದಲಿಗೆ, ಕಾದಂಬರಿ ಓದಿಸಿಕೊಂಡು ಹೋಗುವ ರೀತಿ. ಎಲ್ಲಿಯೂ ನೀರಸ ಅನಿಸುವುದಿಲ್ಲ. ಓದುತ್ತಿರುವಷ್ಟರಲ್ಲೇ ಕಾದಂಬರಿ ಮುಗಿದದ್ದೂ ಸಹ ತಿಳಿಯುವುದಿಲ್ಲ. ಹಾಗೇ ಒಂದು ಸನ್ನಿವೇಶದಿಂದ ಇನ್ನೊಂದು ಸನ್ನಿವೇಶಕ್ಕೆ ಅದು ಬದಲಾವಣೆ ಹೊಂದುವ ರೀತಿ ತುಂಬಾ ಇಷ್ಟವಾಯಿತು. ಕಾದಂಬರಿಯ ವಿಷಯ ಅತ್ಯದ್ಭುತ, ಒಂದೊಂದು ಪಾತ್ರ ನಮ್ಮಲ್ಲಿರುವ ಒಂದೊಂದು ಗುಣಗಳ ಪ್ರತಿನಿಧಿಯಾಗಿವೆಯೇನೋ ಎನ್ನಿಸುತ್ತದೆ. ಕರುಣೆಗೆ ಮೀನಾಕ್ಷಮ್ಮನವರ ಪಾತ್ರ, ಎಲ್ಲರನ್ನೂ ಆದರದಿಂದ ಕಾಣಲು ಇರುವ ರಾಯರ ಪಾತ್ರ, ದುರಹಂಕಾರದ ಪ್ರತೀಕವಾಗಿ ರಾಮುವಿನ ಪಾತ್ರ, ಸಂಗೀತದ ಅದಮ್ಯ ಕಲಾಭಿಮಾನಿಯ ಪಾತ್ರದಲ್ಲಿ ಲಕ್ಷ್ಮಣ, ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವ ಪಾತ್ರದಲ್ಲಿ ಸಾವಿತ್ರಮ್ಮ, ಆದರ್ಶ ಪತ್ನಿ, ಸೊಸೆಯಾಗಿ ಜಯ, ವಿಧೇಯರಾಗಿ ಶಾಮಣ್ಣನವರು, ಮುಗ್ಧಳಾಗಿ ಶಾಂತ ಹೀಗೆ ಪ್ರತಿಯೊಂದು ಪಾತ್ರ ತನ್ನದೇ ಆದ ವೈಶಿಷ್ಟ್ಯತೆಯಿಂದ ಮನಸಲ್ಲಿ ನಿಲ್ಲುತ್ತವೆ. ಎಲ್ಲೂ ಯಾವ ಪಾತ್ರವನ್ನು ನಿರ್ಲಕ್ಷಿಸಿದರು ಎಂದೆನ್ನಿಸುವುದಿಲ್ಲ. ಮುಕ್ತಾಯದ ಹೊತ್ತಿಗೆ ಎಲ್ಲವೂ ಸಮರ್ಪಕವಾಗಿ ಮುಗಿಯುತ್ತವೆ. ಯಾವ ಪಾತ್ರವನ್ನೂ ಕಡೆಗಣಿಸಿಲ್ಲ.

ಮನುಷ್ಯನ ವ್ಯಕ್ತಿತ್ವ ರೂಪುಗೊಳ್ಳುವದರಲ್ಲಿ ನಾವು ತುಂಬಾ ಮೆಚ್ಚಿದ ವ್ಯಕ್ತಿಯನ್ನು ಅನುಸರಿಸುವುದು ಸಹಜ. ಇದನ್ನು ಶ್ರೀನಿವಾಸ ರಾಯರ ವ್ಯಕ್ತಿತ್ವ ರೂಪುಗೊಂಡ ಬಗೆಯಲ್ಲಿ ಕಾಣಬಹುದು. ಮಹಾಭಾರತದ ಕರ್ಣನ ಪಾತ್ರವನ್ನು ತುಂಬಾ ಮೆಚ್ಚಿದ್ದ ರಾಯರು ದಯಾಮಯರಾಗಿದ್ದರು ಎನಿಸುತ್ತದೆ. ಕರ್ಣನ ಮೇಲಿದ್ದ ತಮಗಿದ್ದ ಭಕ್ತಿ ಪ್ರೀತಿಗಳನ್ನು ಅವರು ಜೀವನದಲ್ಲಿಯೂ ಅಳವಡಿಸಿಕೊಂಡಂತೆ ತೋರುತ್ತದೆ. ಎರಡನೇ ಮದುವೆಗೆ ತಮ್ಮ ಪತ್ನಿಯೇ ಬಲವಂತ ಪಡಿಸಿದಾಗ, ತಾಯಿಯ ಮಾತಿಗೆ ಬೆಲೆಕೊಟ್ಟು ಕರ್ಣ ದುರ್ಯೋಧನನನ್ನು ಬಲಿ ಕೊಟ್ಟಂತೆ, ತಾವು ತಮ್ಮ ಮೊದಲ ಪತ್ನಿಯನ್ನು ಬಲಿ ಕೊಡುತ್ತೆವೇನೋ ಎಂದು ನೊಂದುಕೊಳ್ಳುತ್ತಾರೆ. ರಾಯರ ಔದಾರ್ಯ, ತುಂಬು ಕುಟುಂಬದ ಚಿತ್ರಣ, ಹಳ್ಳಿಯ ಬದುಕು, ಅದು ಒಂದಕ್ಕೊಂದು ಬೆಸೆದುಕೊಂಡ ರೀತಿ, ನಂತರ ಬೆಂಗಳೂರು ನಗರದ ವಾಸ, ಬದಲಾವಣೆಗೆ ಒಗ್ಗಿಕೊಳ್ಳುವ ಮನುಷ್ಯನ ಜೀವನ ಎಲ್ಲವೂ ಕಾದಂಬರಿಯಲ್ಲಿ ಸುಲಲಿತವಾಗಿ ನದಿಯ ಒಳ ಹರಿವಿನಂತೆ ಮೂಡಿ ಬಂದಿದೆ.

ಲಕ್ಷ್ಮಣನ ಸಂಗೀತ ಕಲೆಯನ್ನು ಹೇಳುವಲ್ಲಿ ಅ.ನ.ಕೃ ರವರು ಸೂಕ್ಷ್ಮವಾಗಿ ಮೀಮಾಂಸೆಯ ಭಾಗಗಳನ್ನೂ ಪರಿಚಯಿಸಿದ್ದಾರೆ. “ಕಲಿಯುವವರೆಲ್ಲರಿಗೂ ಶಾಸ್ತ್ರ ಬರುತ್ತೆ, ಅದು ಬುದ್ಧಿಗೋಚರ. ಆದರೆ, ಕಲೆ ಬರುವುದಿಲ್ಲ, ಅದು ಚಿತ್ತವೇದ್ಯ”. ಈ ಮಾತು ನನಗೆ ಪ್ರತಿಭೆ ಮತ್ತು ಪಾಂಡಿತ್ಯಕ್ಕೆ ಇರುವ ವ್ಯತ್ಯಾಸವನ್ನು ಹೇಳಿದಂತಿದೆ. ಅದೇ ರೀತಿ ಗೋಪಾಲನ ಬಾಯಿಂದ ಶಿಕ್ಷಣ ಪದ್ಧತಿಯ ಬಗೆಗೆ ನುಡಿಸುವ ಮಾತು ಇಂದಿಗೂ ಅನ್ವಯಿಸುತ್ತದೆ, “ಅಚ್ಚಿನ ಇಟ್ಟಿಗೆಗಳನ್ನು ತಯಾರಿಸಿದಂತೆ ಎಲ್ಲಾ ವಿದ್ಯಾರ್ಥಿಗಳಿಗೂ ಒಂದೇ ಬಗೆಯ ಶಿಕ್ಷಣವನ್ನಿತ್ತು, ಒಂದೇ ಎರಕದಲ್ಲಿ ಅವರನ್ನು ಹುಯ್ಯುತ್ತಿರುವುದು ಕಾರ್ಖಾನೆಯ ಪದ್ಧತಿ”. ಈ ಮಾತು ಈಗಿನ ನಮ್ಮ ಶಿಕ್ಷಣ ಪದ್ಧತಿಗೆ, ಬದಲಾಗದಿದ್ದರೆ, ಇನ್ನು ಮುಂದಕ್ಕೂ  ಅನ್ವಯಿಸುತ್ತದೆ.

ಸಂಧ್ಯಾರಾಗ ಮುಖ್ಯವಾಗಿ ಒಬ್ಬ ಕಲಾವಿದನ ಜೀವನವನ್ನು ಕೇಂದ್ರವಾಗಿಟ್ಟುಕೊಂಡು, ಅದರ ಸುತ್ತಲೂ ಬೇರೆಲ್ಲ ಪಾತ್ರಗಳನ್ನೂ ಹೆಣೆದಿರುವುದರಿಂದ ಸಹಜವಾಗಿ ಕಲೆಯ ಕುರಿತಾದದನ್ನು ಮನಮುಟ್ಟುವಂತೆ ಹೇಳಿದ್ದಾರೆ. “ಜನತೆಯ ಆಸೆ ಮುಗಿಯುವಲ್ಲಿ ಕಲಾವಿದನ ಆಸೆ ಪ್ರಾರಂಭವಾಗುತ್ತದೆ. ಜನತೆಗೆ ಯಾವುದು ಹಿತವಾಗುತ್ತದೋ ಅದು ಕಲಾವಿದನಿಗೆ ಅಹಿತವಾಗುತ್ತದೆ. ಜನತೆಗೆಲ್ಲಿ ತೃಪ್ತಿ ತೋರುವುದೋ ಕಲಾವಿದನಲ್ಲಿ ಅತೃಪ್ತಿ ಮೊಳೆಯುತ್ತದೆ”- ಈ ವಾಕ್ಯ ಇಡೀ ಕಲಾ ಸಮುದಾಯಕ್ಕೆ ಅಂದರೆ ಸಂಗೀತ, ಸಾಹಿತ್ಯ, ಶಿಲ್ಪಕಲೆ ಮುಂತಾದ ಎಲ್ಲರಿಗೂ ಅನ್ವಯಿಸುತ್ತದೆ. ಇನ್ನೇನೋ ಮಾಡಬೇಕು, ಮತ್ತೇನನ್ನೋ ಹೇಳಬೇಕು ಎನ್ನುವ ಮನಸ್ಸಿನ ಹಂಬಲವನ್ನು ಸೂಚಿಸುತ್ತದೆ. ಮನಸ್ಸಿನಲ್ಲಿ ಮೂಡಿದ ಎಲ್ಲವನ್ನು ಕಲೆಯ ಮೂಲಕ ವ್ಯಕ್ತಪಡಿಸುವುದು ಅಸಾಧ್ಯ. ಎಣಿಸಿದಷ್ಟನ್ನು ಅಭಿವ್ಯಕ್ತಪಡಿಸುವುದು ಸಾಧ್ಯವಾಗದಿರುವುದು ಬುದ್ಧಿಗಿರುವ ಸಹಜ ಕುಂಟುತನ.

ಶ್ರೀನಿವಾಸ ರಾಯರ ಮನೆಯಲ್ಲಿ ಪೂರ್ವಜರು ಯಾರು ಅಂತಹ ಸಂಗೀತ ವಿದ್ವಾನರಿಲ್ಲದಿದ್ದರೂ ಲಕ್ಷ್ಮಣನಲ್ಲಿ ಅವ್ಯಾಹತವಾಗಿ ಬಂದ ಸಂಗೀತ ವಿದ್ಯೆ ಪೂರ್ವ ಜನ್ಮದ ಸಂಸ್ಕಾರದ ಫಲ ಎಂಬುದನ್ನು ಎತ್ತಿ ತೋರಿಸುತ್ತದೆ. ನಾದದೇವಿ ಎಲ್ಲರಿಗೂ ಸುಲಭಕ್ಕೆ ಒಲಿಯುವುದಿಲ್ಲ, ಬಹು ಜನ್ಮದ ಸಂಸ್ಕಾರವಿದ್ದರೆ ಮಾತ್ರ ಆಕೆ ಬಂದು ನಮ್ಮಲ್ಲಿ ನೆಲೆಸುತ್ತಾಳೆ. ಈ ನಿಟ್ಟಿನಲ್ಲಿ ಅನಕೃ ರವರು ಅಲ್ಲಲ್ಲಿ ಮಾಡಿಕೊಡುವ ರಾಗಗಳ ಪರಿಚಯ, ಕೀರ್ತನೆಗಳ ಸಾಲುಗಳು ಕಾದಂಬರಿಯನ್ನು ಮತ್ತಷ್ಟು ಕಳೆಗಟ್ಟಿಸುತ್ತವೆ.

ಇನ್ನು ಕೇವಲ ಪತಿವ್ರತೆಯರ ಕಥೆಗಳನ್ನು ಕೇಳಿದ್ದ ನಮಗೆ ಅಪೂರ್ವ ಎನಿಸುವಂತಹ ಸತಿವ್ರತರು ಇದ್ದಾರೆ ಎಂಬುದನ್ನು ರಾಯರ ಪಾತ್ರದ ಮೂಲಕ ತೋರಿಸಿದ್ದಾರೆ. ನನಗೆ ಕೃತಿಯಲ್ಲಿ ಸ್ವಲ್ಪ ಅಸಮಾಧಾನ ಮೂಡಿಸಿದ ಸಂಗತಿ ಈ ವಿಷಯದಲ್ಲೇ, ಅದೂ ಲಕ್ಷ್ಮಣನ ವಿಷಯದಲ್ಲಿ. ಶ್ರೀನಿವಾಸ ರಾಯರ ಮರಣಾನಂತರ  ತಾನಾಯ್ತು, ತನ್ನ ಸಂಗೀತಾಭ್ಯಾಸವಾಯ್ತು ಎಂದು ಅದರಲ್ಲೇ ತಲ್ಲೀನನಾದ ಲಕ್ಷ್ಮಣ, ಗರ್ಭಿಣಿಯಾದ ತನ್ನ ಹೆಂಡತಿಯ ಕಾಳಜಿಯನ್ನು ತಾನು ಮಾಡಬೇಕಿತ್ತಲ್ಲವೇ? ತನ್ನ ಅಣ್ಣ ಮತ್ತು ಅತ್ತಿಗೆ, ತನ್ನ ಹೆಂಡತಿಯನ್ನು ಹೀನಾಯವಾಗಿ ದುಡಿಸಿಕೊಳ್ಳುತ್ತಿದ್ದಾರೆ ಎಂದು ನೋಡಿಯೂ ಏನೂ ಮಾಡದೇ ಇದ್ದದ್ದು ಎಷ್ಟು ಸರಿ? ಆಕೆಗೆ ತಾನು ಸಹಾಯಕನಾಗಿ ನಿಲ್ಲಬಹುದಿತ್ತಲ್ಲವೇ? ಹೆಂಡತಿಯ ಮರಣಾನಂತರ ಊರೂರಲೆದು ತಂಜಾವೂರಿಗೆ ಬಂದು ಅಲ್ಲಿ ಗುರುಗಳ ಸೇವೆ ಮಾಡುತ್ತಾ, ಗುರು ಪತ್ನಿಯನ್ನು ತಾಯಿ ಸ್ಥಾನದಲ್ಲಿ ನೋಡುತ್ತಾ ಅಲ್ಲಿ ಮನೆ ಕೆಲಸವನ್ನೆಲ್ಲವನ್ನೂ ಮಾಡುವಷ್ಟು ವಿವೇಚನೆ ಇದ್ದ ವ್ಯಕ್ತಿ, ಹೆಂಡತಿಗೂ ಸಹಾಯ ಮಾಡಬಹುದಿತ್ತಲ್ಲ? ತನ್ನ ಹೆಂಡತಿಯ ಸಾವಿಗೆ ತನ್ನ ಅಣ್ಣ ಮತ್ತು ಅತ್ತಿಗೆಯ ಕ್ರೂರ ನಡತೆ ಮಾತ್ರ ಹೊಣೆ ಎಂದು ತನಗೆ ತಾನೇ ಸಾಂತ್ವನ ಮಾಡಿಕೊಂಡು, ತನ್ನ ತಪ್ಪೇನೂ ಇಲ್ಲ ಎಂದು, ಕೇವಲ ಹೆಂಡತಿಯನ್ನು ನೆನೆದು ದುಃಖ ಪಡುವ ಲಕ್ಷ್ಮಣನ ಈ ಮುಖ ನನಗಷ್ಟು ಇಷ್ಟವಾಗಲಿಲ್ಲ.

ಹಿಂಸೆಯಿಂದ ದೊಡ್ದವರಾಗುವುದಕ್ಕಿಂತ ಕ್ಷಮಿಸಿ ಚಿಕ್ಕವರಾದರೂ ಚಿಂತೆಯಿಲ್ಲ ಎನ್ನುವ ಮನೋಭಾವ ಶಾಂತ ಮೂರ್ತಿಯಾದ ಶಾಂತಾಳಲ್ಲಿ ಕಾಣಿಸುತ್ತದೆ. ಅದೇ ಗಂಡನಿಗೆ ಪ್ರೇರಣೆಯಾಗಿ ವೆಂಕಟೇಶ, ರಾಮುವಿಗೆ ಸಹಾಯ ಮಾಡಲು ಕಾರಣವಾಗುತ್ತದೆ. ರಾಮುವಿನ ಪಾತ್ರ ಮೊದಲಿಗೆ ಕ್ರೂರಿಯಾಗಿ, ಭ್ರಷ್ಟನಾಗಿ ಕೊನೆಗೆ ಜೀವನದಲ್ಲಿ ಸಹಬಾಳ್ವೆಯ ಪಾಠ ಕಲಿತು ಬದಲಾವಣೆಯ ಗಾಳಿ ಬೀಸಿ ನೆಮ್ಮದಿಯಿಂದಿರುವದನ್ನು ಚಿತ್ರಿಸಿದ್ದಾರೆ. ಇದು ನಮ್ಮ ಜೀವನಕ್ಕೂ ಅನ್ವಯಿಸುತ್ತದೆ. ದ್ವೇಷ ಮತ್ತೆ ದ್ವೇಷಕ್ಕೆ ಮರಿ ಹಾಕುತ್ತದೆಯೇ ವಿನಃ ಮುಕ್ತಾಯವಾಗುವುದಿಲ್ಲ.

ದಕ್ಷಿಣಾದಿ ಸಂಗೀತವೆಂದರೆ ಕೇವಲ ಲಯ ಪ್ರಧಾನವಾದ ಸಂಗೀತವೆಂಬುದು ಈಗಲೂ ಮನೆ ಮಾಡಿದಂತಿದೆ. ಆದರೆ ನಿಜವಾದ ಸಂಗೀತ ಶ್ರುತಿ ಮತ್ತು ಲಯ ಎರಡಕ್ಕೂ ಸಮಾನ ಪ್ರಾಶಸ್ತ್ಯ ನೀಡುತ್ತದೆ ಎಂಬುದನ್ನು ಸ್ಥೂಲವಾಗಿ ಲೇಖಕರು ತಿಳಿಸಿದ್ದಾರೆ. ಸೂಕ್ಷ್ಮವಾಗಿ ಹಿಂದುಸ್ತಾನಿ ಮತ್ತು ಕರ್ನಾಟಕ ಸಂಗೀತದ ಪರಿಚಯವನ್ನೂ ಮಾಡಿಕೊಡುತ್ತಾರೆ. ನಮ್ಮಲ್ಲಿರುವ ಭಂಡಾರವನ್ನು ನಾವು ನಿರ್ಲಕ್ಷಿಸಿ ಕೇವಲ ಬೇರೆ ಭಾಷೆಗಳಿಂದ ಮಾತ್ರ ಕೀರ್ತನೆಗಳನ್ನು ಎರವಲು ಪಡೆಯಬಾರದು, ನಮ್ಮಲ್ಲಿರುವ ದಾಸರ ಕೀರ್ತನೆಗಳು, ಶರಣರ ವಚನಗಳನ್ನು, ಪಂಡಿತರಾದವರು ಸೂಕ್ತ ಸಂಗೀತಕ್ಕೆ ಅಳವಡಿಸಿ ಜನಮಾನಸಕ್ಕೆ ಉಣಬಡಿಸಬೇಕೆಂಬುದನ್ನು ಸಾರಿದ್ದಾರೆ ಲೇಖಕರು.

ಒಟ್ಟಿನಲ್ಲಿ, ಸಂಧ್ಯಾರಾಗ ಒಂದು ಅಪೂರ್ವ ಕೃತಿ. ಕನ್ನಡ ಸಾರಸ್ವತ ಲೋಕಕ್ಕೆ ಅನಕೃ ರವರ ಅತ್ಯಮೂಲ್ಯ ಕೊಡುಗೆ. ಕೊನೆಯಲ್ಲಿ ಕಾದಂಬರಿ ಮುಗಿಯುವ ಹೊತ್ತಿಗೆ ಡಾ.ರಾಜ್ ಕುಮಾರ್ ಅಭಿನಯದ ‘ಸಂಧ್ಯಾರಾಗ’ದ ಪಾತ್ರಗಳು ಕಣ್ಣ ಮುಂದೆ ಬಂದಿದ್ದವು, ಮತ್ತು ಇಬ್ಬರು ಮಹಾನ್ ದಿಗ್ಗಜರಾದ ಪಂಡಿತ್ ಬಾಲಮುರಳಿಕೃಷ್ಣ ಮತ್ತು ಪಂಡಿತ್ ಭೀಮಸೇನ್ ಜೋಶಿ ಅವರ ಕಂಠದಲ್ಲಿ ಅಪೂರ್ವವಾಗಿ ಮೂಡಿ ಬಂದ ‘ನಂಬಿದೆ ನಿನ್ನ ನಾದದೇವತೆಯೆ……..’ ಹಾಡು ಕಿವಿಯಲ್ಲಿ ಮೊಳಗುತ್ತಿತ್ತು.

 

ವಿ.ಸೂ: ನನ್ನ ಅನಿಸಿಕೆ ಅಭಿಪ್ರಾಯಗಳನ್ನು ಮಾತ್ರ ನಾನು ಬರೆದಿರುವುದು. ಇನ್ನೂ ಸಾಹಿತ್ಯದ ಅಧ್ಯಯನದಲ್ಲಿ ಪುಟ್ಟ ಹೆಜ್ಜೆಯನ್ನಿರಿಸುತ್ತಿರುವ ನಾನು, ಯಾರನ್ನೂ ವಿಮರ್ಶೆ ಮಾಡಿ ಅಳೆದು ನೋಡುವ ಎಂಬ ದೃಷ್ಟಿಯಿಂದ ಬರೆದುದಲ್ಲ. ನೀವು ಕಾದಂಬರಿಯನ್ನು ಓದಿದ್ದಾದಲ್ಲಿ ಸಲಹೆ, ಸೂಚನೆಗಳಿಗೆ ಸ್ವಾಗತ!

ಕೊಡಚಾದ್ರಿ-ನನ್ನ ತಂಗಿಯ ಕೊಡುಗೆ

ಹೆಚ್ಚಿನ ಊರು ಕೇರಿಗಳನ್ನ ತಿರುಗಿದವಳು ನಾನಲ್ಲ. ಹಾ! ತಿರುಗಬೇಕೆಂಬ ಆಸೆ ತುಂಬಾ ಇದೆ, ಆದರೆ ಅವಕಾಶ ಸಿಕ್ಕಿಲ್ಲ ಅಥವಾ ನಾನು ಅವಕಾಶ ಕಲ್ಪಿಸಿಕೊಂಡಿಲ್ಲ. ಈಗ ನಾನು ಹಂಚಿಕೊಳ್ಳ ಹೊರಟಿರುವುದು ಒಂದು ವಿಶೇಷವಾದ ಅನುಭವವನ್ನ. ಈ ಅನುಭವವನ್ನ ನನಗೆ ಕೊಡುಗೆಯಾಗಿ ಕೊಟ್ಟದ್ದು ನನ್ನ ಪ್ರೀತಿಯ ತಂಗಿ.

ಈಗ್ಗೆ ಐದು ತಿಂಗಳ ಹಿಂದೆ ಅಂದರೆ ಜೂನ್ 9 ಮತ್ತು 10ನೇ ತಾರೀಖು ಕೊಡಚಾದ್ರಿ ಪರ್ವತಕ್ಕೆ ಚಾರಣಕ್ಕೆ ಹೋಗಿದ್ದೆವು. ಸುಮಾರು ಐದು ವರ್ಷಗಳಿಂದ ನಾನು ನನಗಾಗಿ, ನನ್ನ ಮನರಂಜನೆಗಾಗಿಯೇ ಎಂದು ಸಮಯವನ್ನು ಮೀಸಲಿಟ್ಟಿರಲಿಲ್ಲ. ಆ ಎರಡು ದಿನದ ಅನುಭವ ಮಾತ್ರ ನನಗೆ ಇನ್ನಷ್ಟು, ಮತ್ತಷ್ಟು ತಿರುಗಬೇಕೆಂಬ ಹೊಸ ಆಸೆಯನ್ನು ಮತ್ತೆ ಚಿಗುರಿಸಿದವು.

ಕರ್ನಾಟಕದ ಹತ್ತನೇ ಎತ್ತರದ ಪರ್ವತ ಈ ಕೊಡಚಾದ್ರಿ, ಸಮುದ್ರದಿಂದ ಸುಮಾರು 1300 ಮೀ ಎತ್ತರದಲ್ಲಿರುವ ಈ ಪರ್ವತವನ್ನು, ಅದು ಕೂಡ ಮೊದಲ ಬಾರಿಗೆ ಚಾರಣಕ್ಕೆ ಹೊರಟ ನಾನು ಮತ್ತು ನನ್ನ ತಂಗಿ ಏರಿದ್ದು ಒಂದು ಸಾಹಸವೇ ಸರಿ. ಬೆಳಗ್ಗೆ 8 ಗಂಟೆಯ ಹೊತ್ತಿಗೆ ತಿಂಡಿ ಮುಗಿಸಿ ಹೊರಡಲು ಅಣಿಯಾದ ನಮ್ಮ ಗುಂಪಿನಲ್ಲಿದ್ದಿದ್ದು 10 ಜನ, ಗೈಡ್ ಒಬ್ಬರನ್ನು ಸೇರಿಸಿ 11 ಜನ.

ಜಿಟಿ ಜಿಟಿ ಮಳೆ, ಹುಲ್ಲು ಹಾಸಿದ ಹಾದಿ, ಸುತ್ತಲೂ ಆಕಾಶದೆತ್ತರಕ್ಕೆ ನಿಂತ ಮರಗಳು, ಕಾಟ ಕೊಡಲು ತಯಾರಾಗಿದ್ದ ತಿಗಣೆಗಳು, ಚೀರಲು ಅಣಿಯಾದ ಹುಡುಗಿಯರ ತಂಡ ಆಹಾ ಅದೊಂದು ಮಧುರ ಅನುಭವ! ಬಯಲುಸೀಮೆಯ ಒಣ ನೆಲ, ಬೆಂಗಳೂರಿನ ಕಾಂಕ್ರೀಟ್ ಕಾಡನ್ನು ಮಾತ್ರ ನೋಡಿದ್ದ ನಮಗೆ ಈ ಹಸಿರು ವನದೇವಿಯೇ ಮೈದಳೆದು ನಿಂತ ಕಾಡನ್ನು ನೋಡುತ್ತಾ ಸಾಗುವುದು ಬಹು ಸುಂದರವಾದ ಸಂಗತಿ. ನನ್ನ ತಲೆಯಲ್ಲಿ ಮಾತ್ರ ಕಾರಂತರ, ಕುವೆಂಪು ಅವರ ಕೃತಿಗಳಲ್ಲಿ ಬಂದ ಮಲೆನಾಡಿನ ವರ್ಣನೆ ರಮ್ಯವಾಗಿ ಕಣ್ಣ ಮುಂದೆ ಧಾರಾವಾಹಿಯ ಹಾಗೆ ನಿರಂತರವಾಗಿ ಹಾದು ಹೋಗುತ್ತಿತ್ತು.

ಅರ್ಧ ಹಾದಿ ಆದ ನಂತರ ಬಂದ ಹೀಡ್ಲು ಜಲಪಾತ ನಮ್ಮ ಅಲ್ಲಿಯವರೆಗಿನ ಆಯಾಸವನ್ನು ಪರಿಹಾರ ಮಾಡಲೆಂದೇ ಬಂದ ಜಲಧಾರೆಯಾಗಿತ್ತು. ಜಾರುತ್ತಿರುವ ಬಂಡೆಗಳನ್ನು ಹಿಡಿದು ಹತ್ತಿದ ಆ ಅನುಭವ ನೆನೆದರೆ ಈಗಲೂ ಒಂದು ಕ್ಷಣ ಮೈ ನವಿರೇಳುತ್ತದೆ. ಕಡಿದಾದ ದಾರಿ, ಸ್ವಲ್ಪ ಆಯ ತಪ್ಪಿದರೆ ಜಾರಿ ಕೆಳಗೆ ಬೀಳುವ ಸಂದರ್ಭ ಆದರೂ ಮೇಲೆ ಏರಬೇಕೆಂಬ ಹುಮ್ಮಸ್ಸು ಮಾತ್ರ ಕಡಿಮೆಯಾಗದ ನಮ್ಮ ತಂಡ ಜೊತೆ ಜೊತೆಯಾಗಿ ನಡೆಯುತ್ತಲೇ ಇದ್ದೆವು.

ಅಕ್ಕಂದಿರು ತಂಗಿಯರನ್ನು ನೋಡಿಕೊಳ್ಳುವುದು ರೂಢಿ. ನಾನೂ ಸಹಜವಾಗಿ ಅದೇ ಮಾಡುತ್ತೇನೆ. ಆದರೆ ಆ ದಿನ ಮಾತ್ರ ವಿಶೇಷ. ನನ್ನ ಸಂಪೂರ್ಣ ಕಾಳಜಿಯನ್ನು ವಹಿಸಿದ್ದು ನನ್ನ ತಂಗಿ. ಡೆಂಗ್ಯೂ ಬಂದು ಗುಣಮುಖವಾದ ನಂತರ ಮೊದಲ ಬಾರಿಗೆ ಇಷ್ಟು ದೊಡ್ಡ ಚಾರಣವಾದ್ದರಿಂದ ನಾನು ತುಂಬಾ ಸೋತು ಹೋಗುತ್ತಿದ್ದೆ. ನನಗಾಗಿ ನಿಂತು, ಸುಧಾರಿಸಿಕೊಂಡ ನಂತರ ಮತ್ತೆ ಮುನ್ನಡೆಯಲು ಸಹಕರಿಸಿದ್ದೇ ನನ್ನ ಕೂಸು (ನನ್ನ ತಂಗಿಗೆ ನಾನು ಪ್ರೀತಿಯಿಂದ ಕರೆಯುವುದು ಕೂಸು ಎಂದು).

ಸುಮಾರು 9.5 ಕೀ.ಮೀ ನಡೆಯುವ ಹೊತ್ತಿಗೆ, ಸಮಯ ಎರಡೂ ಮುಕ್ಕಾಲು. ಭಯಂಕರ ಹಸಿವೆಯಾಗಿತ್ತು. ನಾವು ತೆಗೆದುಕೊಂಡು ಬಂದ ಬುತ್ತಿಯಿಂದ ಎಲ್ಲರೂ ಒಂದೇ ಸಮನೆ ತಿನ್ನಲಾರಂಭಿಸಿದೆವು. ಸತತವಾಗಿ ಮಳೆ ಸುರಿಯುತ್ತಿದೆ, ಮೋಡಗಳು ನಮ್ಮನ್ನೇ ಹಾದು ಹೋಗುತ್ತಿವೆ, ಒಂದೊಂದು ತುತ್ತು ಊಟ ಹೊಟ್ಟೆ ಸೇರಿದ ಹಾಗೆಲ್ಲ ಮೈ ನಡುಕ ಇನ್ನಷ್ಟು ಜಾಸ್ತಿ ಆಗುತ್ತಿತ್ತೇ ವಿನಃ ಕಡಿಮೆಯಾಗುವ ಯಾವ ಸುಸಂದರ್ಭಗಳು ಇರಲಿಲ್ಲ. ಹಾಗೆಯೇ ಊಟ ಮುಗಿಸಿ ಅಲ್ಲಿಯೇ ಇದ್ದ ದೇವಸ್ಥಾನಕ್ಕೆ ಬಂದು ಕುಳಿತೆವು. ಇನ್ನು ಸ್ವಲ್ಪ ಮೇಲೆ ಏರಲು ಕೆಲವರು ಅಣಿಯಾದರು, ನಾನು ಇನ್ನಿಬ್ಬರ ಜೊತೆ ದೇವಸ್ಥಾನದಲ್ಲಿಯೇ ಕುಳಿತೆ. ಅವರು ತುತ್ತತುದಿ ಮುಟ್ಟಿ ಬಂದರು. ಜೀಪ್ ಹತ್ತಿ ಕೆಳಗೆ ಬಂದು ನಮ್ಮ ರೂಮ್ ಸೇರುವ ಹೊತ್ತಿಗೆ ಏಳು ಗಂಟೆಯಾಗಿತ್ತು. ರೂಮ್ ತಲುಪಿದ ನಂತರ ನನ್ನ ತಂಗಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಮತ್ತೆ ನನ್ನ ಮೇಲೆ ಬಂದಿತು ;)… ಹಾ ಹಾ ಹಾ…..

ಮರುದಿನ ಶಿವಪ್ಪ ನಾಯಕನ ಒಂದು ಕೋಟೆಯನ್ನು ನೋಡಿ ಮತ್ತೆ ಬೆಂಗಳೂರಿಗೆ ಪ್ರಯಾಣ ಬೆಳೆಸಿದೆವು. ಆರಾಮವಾಗಿ, ಮನಸ್ಸಿಗೆ ಮುದ ನೀಡುವ ಹಾಗೆ ಕಾಲ ಕಳೆಯುವುದೆಂದರೆ ಹೀಗೆ ಎಂದು, ಎಲ್ಲ ರೀತಿಯ ಬುಕಿಂಗ್ ಅನ್ನು ಮಾಡಿ ನನ್ನನ್ನು ಕರೆದುಕೊಂಡು ಹೋದ ನನ್ನ ತಂಗಿಗೆ ನನ್ನದೊಂದು ಪುಟ್ಟ ಸಲಾಂ!! ಮತ್ತೆ ಮತ್ತೆ ನಿನ್ನೊಡನೆ ತಿರುಗುವೆ ಕೂಸೇ, ಆದರೆ ಮುಂದಿನ ಬಾರಿ ನನ್ನಿಂದ ದೊಡ್ಡದಾದ ಖರ್ಚನ್ನೇ ಮಾಡಿಸು, ಪೂರ್ತಿ ಪ್ಲಾನಿಂಗ್ ನ ಹೊಣೆ ನಿನ್ನದು.

ಒಂದು ಬಾರಿಯಾದರೂ ಜೀವನದಲ್ಲಿ ಮಲೆನಾಡಿನ ಆ ಬೆಟ್ಟ ಗುಡ್ಡಗಳನ್ನು ದಾಟಿ, ಸುಸ್ತಾದರು ಸಂತೋಷ ಪಡುವ ಅನುಭವವನ್ನು ನೀವು ಪಡೆಯಿರಿ, ನಿಮ್ಮವರಿಗೂ ಆ ಅನುಭವವನ್ನು ಮಾಡಿಸಿ. ಸುಂದರ ಚಾರಣ ಸ್ಥಳ ಈ ಕೊಡಚಾದ್ರಿ. ಸಹ್ಯಾದ್ರಿ ಬೆಟ್ಟಗಳ ಮೋಹಕ ನೋಟಕ್ಕೆ ನಿಮ್ಮಲ್ಲಿಯ ಕವಿ ಜಾಗೃತನಾದರೂ ಆಗಬಹುದು. ಪ್ರಯತ್ನಿಸಿ………!!!

ಸಂಕು(ಚ)ಚಿತ

ಎಲ್ಲೆಡೆ ಹಬ್ಬಿರುವ “ಮೀ ಟೂ” ಅಭಿಯಾನದ ಸದ್ದಿನಲ್ಲಿ, ಬಹು ದಿನಗಳಿಂದ ಹೇಳಬೇಕೆಂದಿದ್ದ ಒಂದು ವಿಚಾರವನ್ನು ತಮ್ಮ ಮುಂದೆ, ಮಹಿಳೆಯರ ಪರವಾಗಿ ಮೀಟುವ ದನಿಯಲ್ಲಿ ನಿಂತು ಹೇಳಲು ಹೊರಟಿರುವೆ. ಏನಂತಹ ಗಹನವಾದ ವಿಚಾರ ಎಂದಿರಾ? ಇದು, ಬಹು ಸೂಕ್ಷ್ಮವಾದ ಸಂಗತಿ. ಸಮಾಜದಲ್ಲಿ ನಮಗೆ ತಿಳಿಯದೆಯೇ ಇದನ್ನು ಅತಿ ಸಹಜ ಎನ್ನುವಷ್ಟರ ಮಟ್ಟಿಗೆ ನಾವಿದನ್ನು ಒಪ್ಪಿಕೊಂಡು ಬಿಟ್ಟಿದ್ದೇವೆ. ಯಾವುದರ ಬಗ್ಗೆ ಮಾತನಾಡುತ್ತಿರುವೆ ಎಂದು ಯೋಚಿಸುತ್ತಿರುವಿರಾ? ಪ್ರೀತಿ, ಪ್ರೇಮ, ತ್ಯಾಗ, ಗಂಡು-ಹೆಣ್ಣಿನ ಅನೈತಿಕ ಸಂಬಂಧ ಇತ್ಯಾದಿ ಯಾವುದು ಅಲ್ಲ. ಹೆಣ್ಣಿನ ಸ್ತನದ ಗಾತ್ರದ ಕುರಿತು. ಹೌದು! ಗಾತ್ರದ ಕುರಿತು. Size does matter!!!!

 

ಇತ್ತೀಚಿಗೆ ‘ಸ್ತನ ಕ್ಯಾನ್ಸರ್’ನ (Breast cancer) ಕುರಿತು ಬಹಳಷ್ಟು ಪ್ರಚಾರಗಳು, ತಿಳುವಳಿಕೆಯ ಬರಹಗಳು, awareness campaignಗಳು ಸಾಕಷ್ಟು ನಡೀತಾ ಇವೆ. ಅದರಲ್ಲೂ ಈಗಿನ ಕೆಲವಷ್ಟು ನಟಿಯರು, ನಟರ ಪತ್ನಿಯರು ಈ ಮಾರಕ ರೋಗಕ್ಕೆ ಬಲಿಯಾಗಿ, ಗುಣಮುಖರಾಗಿ ಬಂದ ನಂತರ ಅದರ ಕಷ್ಟ-ನಷ್ಟಗಳು, ಮಾನಸಿಕ ತೊಳಲಾಟಗಳು ಎಲ್ಲದರ ಬಗ್ಗೆ ಮುಕ್ತವಾಗಿ ಹಂಚಿಕೊಳ್ಳುತ್ತಿದ್ದಾರೆ. ಇದರಿಂದ ಬಹಳಷ್ಟು ಅರಿವು ಸಹ ಮೂಡುತ್ತಿದೆ. ಮುಂಜಾಗ್ರತೆ ಕ್ರಮದ ಕುರಿತು ಚರ್ಚೆಗಳು ನಡೆಯುತ್ತಿವೆ. ಎಲ್ಲವೂ ಶ್ಲಾಘನೀಯ!

 

ಆದರೆ ನಾನು ಈಗ ಹೇಳುತ್ತಿರುವ ವಿಚಾರ ಸ್ತನ ಕ್ಯಾನ್ಸರ್ ಗೆ ಸಂಬಂಧ ಪಟ್ಟ ವಿಚಾರ ಅಲ್ಲ. ಸ್ತನದ ಗಾತ್ರದ ಒಂದೇ ಒಂದು ಕಾರಣಕ್ಕೆ ಅನೇಕ ರೀತಿಯ ಮಾನಸಿಕ, ದೈಹಿಕ ಹಿಂಸೆಗೆ ಒಳಗಾದವರ ಕುರಿತು. ಈಚೆಗೆ ನಾನೊಂದು ಬೆಂಗಾಲಿ ಸಿನಿಮಾ ನೋಡಿದೆ, ಇದೇ ವಿಷಯದ ಮೇಲೆ ತೆಗೆದ ಹೃದಯ ಸ್ಪರ್ಶಿ ಚಿತ್ರ ಎನ್ನಬಹುದು- “shunyo e bukey” (empty canvas) ಅಂತ ಸಿನೆಮಾದ ಹೆಸರು. ಪುರುಷರಲ್ಲಿ ಮಹಿಳೆಯ ಸ್ತನದ ಗಾತ್ರದ ಬಗ್ಗೆ ಇರುವ fantasy ಮತ್ತು ಅದರಿಂದ ಆಗುವ ಅನಾಹುತವನ್ನು, ಒಬ್ಬ ಮಹಿಳೆ ಅನುಭವಿಸುವ ಮಾನಸಿಕ ತುಮುಲವನ್ನು ಈ ಚಿತ್ರ ಬಹು ಸೂಕ್ಷ್ಮವಾಗಿ ವಿವರಿಸುತ್ತದೆ.

 

ಶ್ರೇಷ್ಠ ಚಿತ್ರಕಾರನಾಗಬೇಕು ಎಂದಿದ್ದ ಒಬ್ಬ ವ್ಯಕ್ತಿ ‘ಖುಜುರಾಹೋ ದೇವಸ್ತಾನ’ದ ಶಿಲ್ಪಕಲೆಯ ಮೋಹಕ ಕಲೆಯಿಂದ ಪ್ರೇರಣೆ ಹೊಂದೋಣ ಎಂದು ಹೊರಡುತ್ತಾನೆ. ವೀಕ್ಷಣೆಯ ಸಂದರ್ಭದಲ್ಲಿ ನಾಯಕಿಯನ್ನು ಭೇಟಿ ಮಾಡುತ್ತಾನೆ. ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿ ಬದಲಾಗುತ್ತದೆ. ಶ್ರೀಮಂತರ ಮನೆಯ ಹುಡುಗಿಯಾದರೂ, ಮನೆಯವರನ್ನು ಧಿಕ್ಕರಿಸಿ, ಶ್ರೇಷ್ಠ ಕಲಾಕಾರನಾಗಲು ಶ್ರಮ ಪಡುತ್ತಿರುವ ಈ ಮಧ್ಯಮ ವರ್ಗದ ಹುಡುಗನನ್ನು ಮದುವೆ ಆಗುತ್ತಾಳೆ.

 

ಮದುವೆಯಾದ ಮೊದಲ ರಾತ್ರಿ ಹೆಂಡತಿಯ ಚಪ್ಪಟೆ ಎದೆಯನ್ನು (flat chest) ನೋಡಿ ದಿಗ್ಭ್ರಾಂತನಾಗುತ್ತಾನೆ. ಆತನ ಕಲ್ಪನೆಯ ಸುಂದರಿ, ಶಿಲ್ಪಕಲೆಗಳಲ್ಲಿ ಇರುವಂತೆ ಕುಂಭ ಕುಚದವಳಾಗಿರದುದಕ್ಕೆ ಬೇಸರಿಸಿ, ಭ್ರಮನಿರಸನವಾಗಿ, ಹತಾಶನಾಗಿ ನೀನು ನನಗೆ ಮೋಸ ಮಾಡಿದೆ ಎಂದು ನಾಯಕಿಯ ಮೇಲೆ ಕಿಡಿ ಕಾರುತ್ತಾನೆ. ಅಲ್ಲಿಂದ ಹೊರಟು ಹೋಗುತ್ತಾನೆ. ಮರುದಿನ ಆತನ ಸ್ನೇಹಿತರ ಎದುರಿಗೆ ಹಿಂದಿನ ದಿನ ರಾತ್ರಿ ನಡೆದ ವಿಷಯವನ್ನೆಲ್ಲ ಹೇಳಿ ಗೇಲಿ ಮಾಡುತ್ತಾನೆ. ಬುದ್ಧಿವಾದ ಹೇಳಲು ಬಂದ ಸ್ನೇಹಿತನಿಗೆ ಅಸಹ್ಯವಾಗಿ ಬಯ್ಯುತ್ತಾನೆ. ಮದುವೆಗೆ ಮುಂಚೆ ಒಮ್ಮೆ ಆಕೆಯೊಂದಿಗೆ ಮಲಗಿದ್ದಿದ್ದರೆ ಇಂದು ಮದುವೆ ಮಾಡಿಕೊಂಡು ಈ ಯಾತನೆ ಅನುಭವಿಸುವ ಪ್ರಸಂಗವಿರುತ್ತಿರಲಿಲ್ಲ ಎಂಬ ಬಿರುಸಿನ ನುಡಿಯಾಡುತ್ತಾನೆ. ಗಂಡನ ಸ್ನೇಹಿತನಿಂದ ಈ ವಿಷಯ ತಿಳಿದ ನಾಯಕಿ ಆತನಿಗೆ ವಿಚ್ಛೇದನ ನೀಡುತ್ತಾಳೆ.

 

ಕೆಲವು ವರ್ಷಗಳ ನಂತರ ಆಕಸ್ಮಿಕವಾಗಿ ಮತ್ತೆ ಈ ಕಲಾಕಾರ ನಾಯಕಿಯನ್ನು ಭೇಟಿಯಾಗುತ್ತಾನೆ. ಆಕೆ ಒಂದು ಮಗುವಿನ ತಾಯಾಗಿರುತ್ತಾಳೆ. ಕಲಾಕಾರನ ಸ್ನೇಹಿತನೇ ಆಕೆಯನ್ನು ಮದುವೆಯೂ ಆಗಿರುವುದು ಗೊತ್ತಾಗುತ್ತದೆ. ಈತನ ಹತ್ತಿರ ಬಂದು ಆಕೆ ಆಡುವ ಆ ಮಾತುಗಳನ್ನು ಸಿನಿಮಾ ನೋಡಿಯೇ ಸವಿಯಬೇಕು! ಆಕೆ ಹೇಳುತ್ತಾಳೆ ‘ನೀನು ತಿರಸ್ಕರಿಸಿದ ಈ ಮೊಲೆಗಳಿಂದಲೇ ಈ ನನ್ನ ಕಂದನಿಗೆ ಹಾಲೂಡಿಸಿ ಆರೋಗ್ಯವಂತನನ್ನಾಗಿ ಮಾಡಿರುವೆ, ಸುಖ ಸಂಸಾರವನ್ನು ಮಾಡುತ್ತಿರುವೆ’ ಎಂದಾಗ ಅವನಿಗೆ ನಾಚಿಕೆಯಾಗುತ್ತದೆ. ನಾಯಕಿಗೆ ಕ್ಷಮೆ ಯಾಚಿಸುತ್ತಾನೆ. ಆದರೆ ಆಕೆ, ಕ್ಷಮಿಸಲರ್ಹವಾದ ತಪ್ಪು ನಿನ್ನದಲ್ಲ, ಕ್ಷಮಿಸುವಷ್ಟು ದೊಡ್ಡ ವ್ಯಕ್ತಿ ನಾನಲ್ಲ ಎಂದು ಹೇಳಿ ಹೊರಟು ಹೋಗುತ್ತಾಳೆ.

ಈ ಕಥೆಯನ್ನು ವಿವರಿಸುವುದರ ಹಿಂದಿನ ಉದ್ದೇಶ ಒಂದೇ, ಹೆಣ್ಣಿನ ವ್ಯಕ್ತಿತ್ವ, ಆಕೆಯ ಬುದ್ಧಿವಂತಿಕೆ, ಜಾಣ್ಮೆ ಎಲ್ಲ ಮೀರಿ ಆಕೆ ಕೇವಲ ಒಂದು ಭೋಗದ ವಸ್ತು, ಅಲ್ಲ ಸ್ತನದ ಗಾತ್ರದಿಂದ ಮಾತ್ರ ಅಳೆಯುವ ಒಂದು ಸಾಮಗ್ರಿಯಾಗಿ ಇಳಿದುಬಿಡುತ್ತಾಳೆಯೇ? ಎತ್ತರ, ರೂಪ, ಬಣ್ಣ, ಆರೋಗ್ಯವಂತ ದೇಹ ಇದೆಲ್ಲ ದೇವರ ಕೃಪೆ ಅಲ್ಲವೇ? ನಮ್ಮ ಕೈಯಲ್ಲಿ ಇರುತ್ತದೆಯೇ? ಬಣ್ಣದ ಅಸಮಾನತೆ racism, ಜಾತಿಯ ಆಧಾರದ ತಾರತಮ್ಯ castism, ಲಿಂಗ ತಾರತಮ್ಯ gender bias ಮತ್ತೆ ಈ ಸ್ತನದ ಗಾತ್ರದಿಂದಾಗುವ ತಾರತಮ್ಯ ಯಾವುದು??

 

ಒಂದು ಸಮೀಕ್ಷೆಯ ಪ್ರಕಾರ ಈಗಲೂ ಶೇಕಡಾ 55 ಕ್ಕೂ ಹೆಚ್ಚು ಪುರುಷರು ಸ್ತನದ ಗಾತ್ರದ ಆಧಾರದ ಮೇಲೆಯೇ ತಮ್ಮ ಪತ್ನಿ, ಪ್ರೇಯಸಿಯನ್ನು ಆರಿಸುತ್ತಾರಂತೆ. ಮದುವೆಯಾಗುವ ಹುಡುಗಿಯ ಅಥವಾ girl friend ನ ಸ್ತನದ ಗಾತ್ರವೇ ಮುಖ್ಯ ಎಂದು ಒಪ್ಪಿಕೊಳ್ಳುತಾರಂತೆ. ಲೈಂಗಿಕ ಜೀವನದಲ್ಲಿ ಹೆಣ್ಣಿನ ಸ್ತನ ಗಂಡಿಗೆ ಆಕರ್ಷಣೆ ನಿಜ, ಆದರೆ ಅದೇ ಅವಳಲ್ಲ. ಅವಳಲ್ಲಿಯೂ ಮನಸ್ಸಿದೆ, ಪ್ರೀತಿ-ಅಂತಃಕರಣ, ಅನುಕಂಪ, ಬುದ್ಧಿಮತ್ತೆ, ವ್ಯಕ್ತಿತ್ವ ಈ ಎಲ್ಲವೂ ಸೇರಿ ಅವಳಾಗಿರುತ್ತಾಳೆ! ಆದರೆ ಇದನ್ನು ಎಷ್ಟು ಜನ ಅರ್ಥ ಮಾಡಿಕೊಳ್ಳುತ್ತಾರೆ? ನಾಲ್ಕು ಗೋಡೆಯ ಮಧ್ಯೆ ನಡೆಯುವ ಅತ್ಯಂತ ಆಪ್ತ ಸುಖ ಘಳಿಗೆಯಲ್ಲಿ, ಗಂಡನಿಂದ ಈ ರೀತಿಯ ತಿರಸ್ಕಾರದ ಮಾತುಗಳನ್ನು ಕೇಳಿಸಿಕೊಂಡು, ಸಹಿಸಿಕೊಂಡು ಬದುಕುತ್ತಿರುವ ಹೆಣ್ಣುಮಕ್ಕಳದೆಷ್ಟು ಜನ?

 

ಈಗಿನ ಫ್ಯಾಷನ್ ಶೋಗಳು, ಸಿನೆಮಾಗಳು ಇವನ್ನೇ ಬಿಂಬಿಸುತ್ತವೆ. ದೇಹದ ಕೈ, ಕಾಲು, ಹೊಟ್ಟೆ ಒಟ್ಟಾರೆಯಾಗಿ ಎಲ್ಲೆಡೆ zero size ಬಂದಾಯಿತು. ಆದರೆ ಸ್ತನದ ಗಾತ್ರಕ್ಕೆ ಇದೆಯೇ zero size? ಇನ್ನು ಅದಕ್ಕೆ ಸರ್ಜರಿ ಮಾಡಿಸಿಯಾದರು ದೊಡ್ದದಾಗಿಸುತ್ತಾರೆ. ಇದೆಲ್ಲಿಯ ಹುಚ್ಚುತನ? ಒಂದು ವರದಿಯ ಪ್ರಕಾರ plastic surgeryಯಲ್ಲಿ ಮೊದಲ ಸ್ಥಾನದಲ್ಲಿರುವುದೇ ಈ breast augmentation ಸರ್ಜರಿ.

 

ಹೆಣ್ಣನ್ನು ಒಂದು ವಸ್ತುವಾಗಿ ಅಲ್ಲದೆ, ಪರಿಪೂರ್ಣ ವ್ಯಕ್ತಿಯನ್ನಾಗಿ ನೋಡಿ ಪ್ರಶಂಸಿಸುವ ಮನಸ್ಥಿತಿ ಯಾವಾಗ ಬರುತ್ತದೆಯೋ? ಸಂಕುಚಿತ ಮನೋಭಾವದ ಜನ ಕುಚದ ಮೋಹ ಬಿಟ್ಟು ಬಾಳುವ ದಿನ ಬರುತ್ತದೆಯೇ? ಬೇಗ ಬರಲಿ ಎಂದು ಆಶಿಸುತ್ತೇನೆ…………

ಸಂತೋಷವೆಂದರೆ

ತುಂಬಾ ದಿನಗಳಿಂದ ಈ ಸಂತೋಷ ಎಂದರೇನು? ಎನ್ನುವ ವಿಷಯದ ಬಗ್ಗೆ ಬರೆಯುವ ಆಸೆ ಇತ್ತು. ಸಂತರು, ದಾಸರು, ಶರಣರು, ಅನುಭಾವಿಗಳು ಇದರ ಬಗ್ಗೆ ತುಂಬಾ ಹೇಳಿದ್ದಾರೆ. ನಾನು ನನಗೆ ತಿಳಿದ ಮಟ್ಟಿಗೆ ಸಂತೋಷದ ಪರಿಭಾಷೆಯನ್ನು ನಿರೂಪಿಸೋಣ ಎಂದು ಹೊರಟಿರುವೆ.

ಈಗಿನ ಈ ಅಂತರ್ಜಾಲದ ಯುಗದಲ್ಲಿ, ಜನರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಬರಹ, ಚಿತ್ರಗಳಿಗೆ ಬರುವ ಮೆಚ್ಚುಗೆಯ ಆಧಾರದ ಮೇಲೆ ಸಂತೋಷ ಕಂಡುಕೊಳ್ಳುವ ಪರಿಪಾಠ ರೂಢಿಗೆ ಬಂದಂತಿದೆ. ಇದರ ತಳ-ಬುಡ ನನಗೆ ಅರ್ಥವಾಗಲಿಲ್ಲ. ಸಂತೋಷವನ್ನು ಎಲ್ಲರೊಂದಿಗೆ ಹಂಚಿಕೊಳ್ಳಬೇಕು, ಒಪ್ಪಬೇಕಾದದ್ದೇ! ಆದರೆ ನೋವು, ಸಂಕಟವನ್ನು ಕೂಡ ಪೋಸ್ಟ್ ಮಾಡುವವರನ್ನು ಏನನ್ನೋಣ? ಅದಕ್ಕೆ ಲೈಕ್ ಮಾಡುವವರ ಒಂದು ದೊಡ್ಡ ಗುಂಪೇ ಇದೆ. ಇದರಿಂದ ನಿಮ್ಮ ನೋವಿಗೆ, ಅಥವಾ ಸಮಸ್ಯೆಗೆ ಪರಿಹಾರ ಸಿಕ್ಕ ಹಾಗಾಯಿತೇನು? ಅಥವಾ ಇಷ್ಟು ಜನ ಇದನ್ನು ನೋಡಿದರಲ್ಲ ಅಂತ ಸಂತೋಷವಾಯಿತೇ?

ನಮ್ಮ ಈಗಿನ ಯುವಜನ ಮೊಬೈಲ್, ಟೀವಿ, ಕಂಪ್ಯೂಟರ್ ಎನ್ನುವ ಗೋಡೆಗಳನ್ನು ಕಟ್ಟಿಕೊಂಡು ಅದರೊಳಗೆ ಜೀವಿಸುತ್ತಿದ್ದಾರೆ. “ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗೆ ಅಂಜಿದರೆಂತಯ್ಯ” ಎನ್ನುವ ಹಾಗೆ ಸಾಮಾಜಿಕ ಜಾಲತಾಣದೊಳಗೊಂದು ಮನೆಯ ಮಾಡಿ, ಖಿನ್ನತೆಗೆ ಅಂಜಿದರೆಂತಯ್ಯ ಎನ್ನುವ ಸಮಯ ಬಂದಿದೆ. ಪ್ರತಿ ನಿಮಿಷಕ್ಕೊಮ್ಮೆ ಮೊಬೈಲ್ ನೋಡುವುದು, ಫೇಸ್ಬುಕ್, whatsapp, instagram ಅಂತೆಲ್ಲ ಭಯಂಕರ ಬ್ಯುಸಿ ಆಗಿರೋ ಈಗಿನ ಜನತೆಗೆ ಸಂತೋಷವನ್ನು ಹೇಗೆ ಕಲಿಸುವುದು?

ಬೆಳಿಗ್ಗೆ ಎದ್ದ ತಕ್ಷಣ ಮೊಬೈಲ್ ಮೂಲಕ ಎಲ್ಲರಿಗೆ ಶುಭೋದಯ ಹೇಳುವದರಲ್ಲೇ ಕಾಲ ಕಳೆಯುವ ಬದಲು, ಮನೆಯಲ್ಲಿರುವವರನ್ನು ಮೊದಲು ನೋಡಿ, ನಕ್ಕು, ಅವರೊಂದಿಗೆ ಕಾಫಿ ಕುಡಿತಾ ಮಾತನಾಡಿ, ದಿನ ಪತ್ರಿಕೆ ಓದೋದರಲ್ಲಿ ಇರುವ ಆನಂದವನ್ನು ತಿಳಿಯ ಹೇಳುವವರಾರು? ಎಲ್ಲರ ಜೀವನದಲ್ಲಿ ಒಂದಲ್ಲ ಒಂದು ರೀತಿಯ ಕಷ್ಟಗಳು ಇರುತ್ತವೆ, ಅದಿರದಿದ್ದರೆ ಜೀವನ ಅನುಭವಿಸುವ ಮಜಾ ಎಲ್ಲುಂಟು? ಆದರೆ ಸಾಮಾಜಿಕ ಜಾಲಗಳಲ್ಲಿ ಕೇವಲ ಊರು ತಿರುಗಿದ, ಹೊಸ ಮನೆ, ಕಾರು ತೆಗೆದುಕೊಂಡ ಚಿತ್ರಗಳನ್ನು ನೋಡಿ ತಮ್ಮ ಜೀವನವನ್ನು ಬೈದುಕೊಂಡವರು ಎಷ್ಟು ಜನ ಇದ್ದಾರೆ… ಇದೆಲ್ಲ ಯಾಕೆ ಬೇಕು? ನಮ್ಮ ಜೀವನವನ್ನು ಇನ್ನೊಬ್ಬರೊಂದಿಗೆ ಹೋಲಿಸಿಕೊಂಡು ಇರುವ ಸಂತೋಷವನ್ನು ಹಾಳು ಮಾಡಿಕೊಳ್ಳುವವರಿಗೆ ಏನು ಹೇಳಬೇಕು? ನಮ್ಮನ್ನು ನಾವು ನಮ್ಮೊಂದಿಗೆ ಮಾತ್ರ ಹೋಲಿಸಿ ನೋಡಬೇಕು. ಹೋದ ವರ್ಷ ಈ ಸಮಯ ನಾನು ಹೇಗಿದ್ದೆ, ಈಗ ಹೇಗಿದ್ದೇನೆ. ಬೆಳವಣಿಗೆ ಆಗಿದೆ, ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ, ಚಿಕ್ಕ ವಾಹನ ಕೊಂಡಿರುವೆ, ಮನೆಯಲ್ಲಿ ಮಕ್ಕಳ ಮದುವೆ ಆಗುತ್ತಿದೆ. ಸಾಕಲ್ಲವೇ ಈ ಅಭಿವೃದ್ಧಿ ಸಂತೋಷ ಪಡಲಿಕ್ಕೆ? ಇದು ಬಿಟ್ಟು ಪಕ್ಕದ ಮನೆಯವರು ಹೊರ ದೇಶಕ್ಕೆ ಹೋಗಿ ಬಂದರು, ಎದುರು ಮನೆಯವರು ಕಾರು ಕೊಂಡರು, ಇನ್ನೊಬ್ಬರು ಇನ್ನೇನೋ ಮಾಡಿದರು ಅಂತ ಖಿನ್ನತೆಗೆ ಒಳಗಾಗುವುದು ಎಷ್ಟು ಸರಿ?

ಪ್ರತಿಯೊಬ್ಬ ಮನುಷ್ಯನ ವ್ಯಕ್ತಿತ್ವ, ಬುದ್ಧಿವಂತಿಕೆ, ಜೀವನಾನುಭವ ಎಲ್ಲವೂ ವಿಭಿನ್ನ, ವಿಭಿನ್ನತೆಯೇ ಪ್ರಕೃತಿ ನಿಯಮ. ಊಹಿಸಿ ನೋಡಿ, ಎಲ್ಲ ಒಂದೇ ತೆರನಾದ ಮನೆಗಳು, ಮನೆಯ ಮುಂದೆ ಒಂದೇ ತೆರನಾದ ಮರಗಳು, ಒಂದೇ ರೀತಿಯ ಕಾರು… ಇಡೀ ಜಗತ್ತೇ ಹೀಗಿದ್ದಿದ್ದರೆ ಏನಾಗುತ್ತಿತ್ತು ಪರಿಸ್ಥಿತಿ? ಬೇರೆ ಬೇರೆ ಇರುವುದೇ ಸೃಷ್ಟಿ ನಿಯಮ. ವಿವಿಧತೆಯಲ್ಲಿ ಏಕತೆಯನ್ನು ಕಾಣುವುದು ನಮ್ಮ ಸಂವಿಧಾನದ ಮೂಲಭೂತ ತತ್ವ ಮಾತ್ರವಲ್ಲ ಜೀವನದ ಅವಿಭಾಜ್ಯ ಅಂಗ.

ಒಂದೊಳ್ಳೆ ಮುಗುಳ್ನಗೆ, ಜೀವನದ ಬಗ್ಗೆ ಗೌರವ, ಪ್ರೀತಿ ಮತ್ತು ಧನಾತ್ಮಕ ಚಿಂತನೆ, ನಮ್ಮ ಮೇಲೆ ನಮಗೆ ವಿಶ್ವಾಸ, ನಮ್ಮವರ ಬಗ್ಗೆ ಅಭಿಮಾನ ಇಷ್ಟಿದ್ದರೆ ಸಾಕಲ್ಲವೇ ಸಂತೋಷವಾಗಿರಲು?  ಸಂತೋಷವಾಗಿರಲು ಕಲಿಯಲು ಒಳ್ಳೆ ಗುರು ಯಾರು ಗೊತ್ತೇ? ಮಗು.. ಮಗುವನ್ನು ನೋಡಿ ಅದು ಯಾವಾಗಲು ಉತ್ಸಾಹದಿಂದ, ಹೊಸತನವನ್ನು ಹುಡುಕುತ್ತಿರುತ್ತದೆ, ಕಲಿಯುತ್ತಿರುತ್ತದೆ ಮತ್ತು ಸಂತೋಷವಾಗಿರುತ್ತದೆ, ನಡೆಯುವಾಗ ಬಿದ್ದರೆ, ಬಿದ್ದೆ ಎಂಬ ಅವಮಾನವಿಲ್ಲ, ಸೋತೆ ಎನ್ನುವ ಅಂಜಿಕೆಯಿಲ್ಲ. ಮತ್ತೆ, ಮತ್ತೆ ಪ್ರಯತ್ನ ಮಾಡುತ್ತದೆ, ಗೆಲ್ಲುತ್ತದೆ. ಹಾಗೆಯೇ ನಾವು ಆಗಬೇಕು. ನಮ್ಮೊಳಗಿನ ಮಗುವನ್ನು ಸದಾ ಜಾಗೃತವಾಗಿಟ್ಟುಕೊಳ್ಳಬೇಕು.

ಸಂತೋಷ ಎನ್ನುವುದೊಂದು ನಮ್ಮೊಳಗೆ ಇರುವ ಪರಿಕಲ್ಪನೆ, ಅದೊಂದು ಅನುಭೂತಿ. ಸಂತೋಷವಾಗಿದ್ದೇನೆ ಎಂದರೆ ಇದ್ದೇನೆ, ಇಲ್ಲ ಎಂದರೆ ಇಲ್ಲ. ಆಸೆಗಳ ಕುದುರೆಗೆ ನಮ್ಮ ಸಂತೋಷವನ್ನು ಕಟ್ಟಿ ಓಡಲು ಬಿಟ್ಟರೆ ನಾವು ಎಂದಿಗೂ ಸಂತೋಷವಾಗಿರುವುದಿಲ್ಲ. ಕುವೆಂಪುರವರು ಹೇಳಿದ ಹಾಗೆ “ಆನಂದಮಯ ಈ ಜಗ ಹೃದಯ”!!ಅದನ್ನು ನೋಡುವ, ತಿಳಿದುಕೊಳ್ಳುವ ಒಳಗಣ್ಣನ್ನು ನಾವು ಬೆಳೆಸಿಕೊಳ್ಳಬೇಕು. ಅನಾರೋಗ್ಯವಾದ ಈ ಹುಚ್ಚು ಜಗತ್ತಿನ ಬೆಪ್ಪು ಸ್ಪರ್ಧೆಗೆ ಒಳಗಾಗದೇ ಎಲ್ಲರೂ ಸಂತೋಷವಾಗಿರಿ, ನಗು ನಗುತ್ತಾ ಇರಿ!