“ಪಾಸಾಯಣ ” ನಾನು ಒಂದನೇ ತರಗತಿಯಿಂದ ಡಿಗ್ರಿವರೆಗೆ ನಮ್ಮೂರಲ್ಲೇ ಓದಿದ್ದೆ. ನಮ್ಮದು ರಾಯಚೂರು, ಚಿಕ್ಕ ನಗರ. ನಾಲ್ಕಾರು ಊರು ತಿರುಗಿದ ಅನುಭವವೂ ನನಗಿರಲಿಲ್ಲ. ನಾನು 2016 ರಲ್ಲಿ ಕೆಲಸಕ್ಕಾಗಿ ಹೈದರಾಬಾದ್ ನ ‘ಅಶೋಕ್ ನಗರ್’ ನಲ್ಲಿ ವಾಸವಾಗಿದ್ದೆ. ಸ್ವಂತ ಊರು ಬಿಟ್ಟು ಮೆಟ್ರೋ ಸಿಟಿಗೆ ಬಂದದ್ದು ಇದೇ ಮೊದಲು. ಮೆಟ್ರೋ ನಗರದ ಗಿಜು ಗಿಜು ಮೊದಲ ಬಾರಿಗೆ ಕೇಳಿಸತೊಡಗಿತ್ತು, ಅನುಭವವಾಗಿರಲಿಲ್ಲ. ನನ್ನ ಪಿ.ಜಿ(ಪೇಯಿಂಗ್ ಗೆಸ್ಟ್) ಇಂದ ಆಫೀಸ್ ಗೆ ಬಹು ಹತ್ತಿರ, ಕಾಲ್ನಡಿಗೆಯ ಹಾದಿ. ಆರು ತಿಂಗಳಾಗಿತ್ತು ಆಗಲೇ ನಾನು ಹೈದರಾಬಾದ್ ನಲ್ಲಿರಲು, ಆದರೆ ಆಫೀಸ್ ಮತ್ತು ರೂಮ್ ಬಿಟ್ಟು ಹೈದರಾಬಾದ್ ನ ಬಹಳಷ್ಟು ಪರಿಚಯ ನನಗಾಗಲಿಲ್ಲ. ಆಗಲಿಲ್ಲ ಎನ್ನುವದಕ್ಕಿಂತ ಪರಿಚಯ ಮಾಡಿಕೊಳ್ಳುವ ಪ್ರಯತ್ನ ನಾನು ಮಾಡಲಿಲ್ಲ. ಅದರಿಂದ ಸಮಯ ವ್ಯರ್ಥವಾಗುತ್ತೆ, ಅದೇ ಸಮಯದಲ್ಲಿ ಓದಿಕೊಳ್ಳಬಹುದಲ್ಲ(ಸರ್ಕಾರಿ ನೌಕರಿಗಾಗಿ) ಎಂದೆಲ್ಲ ಅಂದುಕೊಂಡು ಹೊರಗೆ ಸ್ನೇಹಿತರ ಜೊತೆ ಬಹಳಷ್ಟು ತಿರುಗಾಡಲೇ ಇಲ್ಲ. ಇದರಿಂದ ಕಲಿಯಬಹುದಾದ ಸಾಕಷ್ಟು ವಿಷಯಗಳಿಂದ ವಂಚಿತಳಾದೆ ಎಂದು ಈಗ ಅನಿಸುತ್ತಿದೆ. ನಾನು ಪ್ರೈವೇಟ್ ಇನ್ಸ್ಟಿಟ್ಯೂಟ್ ಒಂದರಲ್ಲಿ ಸಿವಿಲ್ ಇಂಜಿನಿಯರಿಂಗ್ instuctor ಆಗಿ ಕೆಲಸ ಮಾಡುತ್ತಿದ್ದೆ. ಸರ್ಕಾರಿ ಕೆಲಸ ಪಡೆಯಬೇಕೆಂಬುದು ನನ್ನ ಬಹು ದೊಡ್ಡ ಕನಸಾಗಿತ್ತು. ನನ್ನ ಕೆಲಸದ ವಿಷಯಕ್ಕೆ ಅನುಕೂಲವಾಗಲೆಂದು ಕೆಲವು ತಂತ್ರಾಂಶಗಳನ್ನು(software) ಕಲಿಯಬೇಕೆಂದು ನಿರ್ಧರಿಸಿದೆ. ನಾನು ವಾಸವಿರುವುದು ಅಶೋಕ್ ನಗರದಲ್ಲಿ. ಆದರೆ ಕಲಿಕೆಯ ಕೇಂದ್ರಗಳಿರುವುದು ‘ಮೈತ್ರಿವನಂ’ ಎಂಬಲ್ಲಿ. ಆಹಾ! ಎಂತಹ ಸೊಗಸಾದ ಹೆಸರು.’ಮೈತ್ರಿವನಂ’. ಆದರೆ ಅಲ್ಲಿ ಮೈತ್ರಿಯೂ ಇಲ್ಲ, ವನವೂ ಇಲ್ಲ. ಕೇವಲ ಕೋಚಿಂಗ್ ನ ಒಂದು ದೊಡ್ಡ ಸಂತೆ. ಕೊನೆಗೂ ಹೋಗಿ ಒಂದು ಕೋಚಿಂಗ್ ಗೆ ಸೇರಿಕೊಂಡೆ. ಹೊಸ ಸಮಸ್ಯೆಯೊಂದು ತಲೆದೋರಿತು. ಈಗಿರುವ ನನ್ನ ಸ್ಥಳದಿಂದ (ಅಶೋಕ್ ನಗರ್) ಈ ಮೈತ್ರಿವನಂಗೆ ಸುಮಾರು ಒಂದು ಗಂಟೆಯ ಬಸ್ ಪ್ರಯಾಣ ಮಾಡಬೇಕು. ಹಾಗೆಯೇ ಇಲ್ಲಿ ಸಂಜೆ 5.30ರಿಂದ 7.30 ರ ವರೆಗೆ ತರಗತಿಗಳು ನಡೆಯುತ್ತವೆ. ಸಂಜೆ 7.30 ರ ನಂತರ ಈ ಮಹಾನಗರದಲ್ಲಿ ಬಸ್ ಪ್ರಯಾಣ! ನನಗೋ ಎಲ್ಲವು ಹೊಸತು. ಇನ್ನೇನಾದರು ಉಪಾಯ ಮಾಡಲೇಬೇಕಲ್ಲ. ಅತ್ತ ಅಶೋಕ್ ನಗರ್ ನಲ್ಲಿ ಬೆಳಗ್ಗೆ ಇಂದ ಸಂಜೆ ವರೆಗೆ ಕೆಲಸ, ಸಂಜೆ ಇಲ್ಲಿ ತರಗತಿಗಳು. ಈ ಎರಡು ಏರಿಯಗಳ ಮಧ್ಯೆ ‘ಪಂಜಗುಟ್ಟ’ ಎಂಬಲ್ಲಿ ಪಿ.ಜಿ. ಗೆ ಬಂದೆ. ಅಪ್ಪ ಅಮ್ಮನ ಅನುಮತಿಯೂ ದೊರೆಯಿತು. ಇಲ್ಲಿಂದ ಶುರುವಾಯ್ತು ನೋಡಿ, ನನ್ನ ಮೆಟ್ರೋ ಜೀವನದ ಅನುಭವ. ಬೆಳಿಗ್ಗೆ ಬಸ್ ಸ್ಟಾಂಡ್ ನಲ್ಲಿ 8 ಗಂಟೆಗೆ ಬರುವುದು, 9 ಕ್ಕೆ ಅಶೋಕನಗರ್ , ಅಲ್ಲಿ ಸಂಜೆ 4 ಗಂಟೆವರೆಗೆ ಕೆಲಸ. 4.15 ಕ್ಕೆ ಬಸ್ ಹಿಡಿದು 5.30ರ ಒಳಗೆ ಮೈತ್ರಿವನಂ ಬಂದು ಸೇರುವುದು. ಇಲ್ಲಿ 5ನೇ ಮಹಡಿಯವರೆಗೆ ಹತ್ತುವುದು, ಏಕೆಂದರೆ ಲಿಫ್ಟ್ ಯಾವಾಗಲು ಫುಲ್. 7.30 ಕ್ಕೆ ಇಲ್ಲಿಂದ ಹೊರಟು 8 ಗಂಟೆ ಅಷ್ಟೊತ್ತಿಗೆ ನನ್ನ ರೂಮ್ ಸೇರುವುದು. ಇದು ನನ್ನ ದಿನಚರಿಯಾಯಿತು. ಈ ಮಧ್ಯೆ ನನಗೊಂದು ಭಯಂಕರವಾದ ಉಪಾಯವೊಂದು ಹೊಳೆಯಿತು. (ಭಯಂಕರವಾದ ಅನುಭವವಾದ್ದರಿಂದ) ದಿನವೂ ಸಿಟಿ ಬಸ್ ಹಿಡಿದು ಓಡಾಡುತ್ತಿರುವ ನನಗೆ ಈ ಚಿಲ್ಲರೆ (change) ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಬಸ್ ಪಾಸ್ ಮಾಡಿಸೋಣವೆಂದು ನಿರ್ಧರಿಸಿದೆ. ಬಸ್ ಪಾಸ್ ನಿಂದ ಅಲ್ಪ ಸ್ವಲ್ಪ ದುಡ್ಡೂ ಉಳಿಯುತ್ತವೆ. ಇಷ್ಟೇ ನನ್ನ ಯೋಚನೆಗೆ ಬಂದದ್ದು. ಒಂದು ದಿನ ಸಂಜೆ ಕ್ಲಾಸ್ ಇರಲಿಲ್ಲ. ಇನ್ನು ಬಸ್ ಪಾಸ್ ಯೋಚನೆಯನ್ನು ಕಾರ್ಯರೂಪಕ್ಕೆ ತರೋಣವೆಂದು ನಿರ್ಧರಿಸಿದೆ.ಎಂದಿನಂತೆ 4 ಗಂಟೆಗೆ ಹೊರಡಲು ಅಣಿಯಾದೆ. ಆಫೀಸ್ ನಲ್ಲೇ ಇದ್ದ ಒಬ್ಬರ ಬಳಿ ಹೋದೆ. ಅವರು ಕನ್ನಡಿಗರು ಎಂಬುದು ಮಾತ್ರ ನನಗೆ ಗೊತ್ತಿತ್ತು. ಹೋಗಿ ಕುಳಿತು ಹೆಸರು- ಊರು ಕುಶಲೋಪರಿ ಕೇಳಿದ ನಂತರ, ನಾನು ಬಸ್ ಪಾಸ್ ಮಾಡಿಸಬೇಕೆಂದಿದ್ದೇನೆ. ಹೈದರಾಬಾದ್ ನನಗೆ ಅಷ್ಟು ತಿಳಿಯದು. ತಮಗೆ ಗೊತ್ತಿದ್ದರೆ ಎಲ್ಲಿ ಮತ್ತು ಹೇಗೆ ಎಂದು ತಿಳಿಸುವಿರಾ ಎಂದು ಕೇಳಿದೆ. ಅದಕ್ಕೆ ಆ ವ್ಯಕ್ತಿ, ಹೇಗೆ ಎಂದರೆ ಎಂದು ಮುಖ ಗಂಟಿಕ್ಕಿ ನನ್ನನ್ನು ನೋಡಿದಳು. ಅದಕ್ಕೆ ನಾನು ‘ಅಂದರೆ ಪಾಸ್ ಪೋರ್ಟ್ ಸೈಜ್ ಫೋಟೋ ಎಷ್ಟು ಕೊಡಬೇಕು, ವೋಟರ್ ಐ.ಡಿ, ಆಧಾರ್ ಏನಾದರು ಕೇಳುತ್ತಾರೆಯೇ. ಏಕೆಂದರೆ ನೋಡಿ ಈಗ ಎಲ್ಲ ಕಡೆ ಆಧಾರ್ ಕಡ್ಡಾಯ ಬೇರೆ ಮಾಡಿದ್ದಾರೆ. ನನ್ನ ಬಳಿ ಎರಡೂ ಇ…..ದೆ……’ ಅಷ್ಟರಲ್ಲೇ ಮಾತು ತಡೆದ ಆ ವ್ಯಕ್ತಿ ‘ಕೋಟಿ’ ಬಸ್ ಸ್ಟಾಂಡ್ ನಲ್ಲಿ ಬಸ್ ಪಾಸ್ ಸಿಗುತ್ತೆ. ಇಲ್ಲಿಂದ ಇಂತಹ ಬಸ್ ನಂಬರ್ ಎಂದು ಹೇಳಿ, ತನ್ನ ಫೋನ್ ನಲ್ಲಿ ತಾನು ಮಗ್ನಳಾದಳು. ಆಗಲೇ ನನಗೆ ಅನಿಸಿದ್ದು ಓಹ್, ಬ್ಲೂಟೂತ್ ನಲ್ಲಿ ಯಾರೊಟ್ಟಿಗೋ ಮಾತಿನಲ್ಲಿದ್ದಳು, ನನ್ನಿಂದ ಭಂಗವಾಯಿತು ಎಂದು. ಸರಿ, ಈಗ ಬಸ್ ಪಾಸ್ ನ ಮೋಹ ಹೊಕ್ಕಿದೆ. ಅದು ತೀರುವುದೆಂತು? ‘ಕೋಟಿ’ ಎಲ್ಲಿದೆ? ಅಶೋಕ್ ನಗರದಿಂದ ಎಷ್ಟು ದೂರ ಎಂಬುದು ಎಲ್ಲೋ ಕೇಳಿದ ನೆನಪಾಗಿ, ನೋಡಿಯೇ ಬಿಡುವ ಎಂದು, ಆಕೆ ಹೇಳಿದ ಬಸ್ ನಲ್ಲಿ ಏರಿದೆ. ಬೇರೆ ಯಾರಿಗಾದರೂ ಕೇಳಲು ಅಲ್ಲಿ ಸ್ನೇಹಿತರಾರು ಇಲ್ಲ. ಟಿಕೆಟ್ ತೆಗೆದುಕೊಂಡು, ಬಸ್ ಕಂಡಕ್ಟರ್ ಗೆ ಕೋಟಿ ಬಸ್ ಸ್ಟಾಪ್ ಬಂದ ಕೂಡಲೇ ತಿಳಿಸಿ ಎಂದು ನನಗೆ ಬರುತ್ತಿದ್ದ ಅರ್ಧ ತೆಲುಗು ಮಿಶ್ರಿತ ಇಂಗ್ಲೀಷ್ ನಲ್ಲಿ ಹೇಳಿದೆ. ಅದಕ್ಕಾತ ಅದೇ ಕೊನೆಯ ಸ್ಟಾಪ್, ನಿಮಗೇ ತಿಳಿಯುತ್ತದೆ ಎಂದು ಹೇಳಿ ಹೊರಟುಹೋದ. ಸುಮಾರು ಮೂವತ್ತೈದು ನಿಮಿಷಗಳ ನಂತರ ಬಂತು ಸ್ಟಾಪ್. ಇಳಿದು, ಬಸ್ ಸ್ಟಾಪ್ ನಲ್ಲಿ ‘ಬಸ್ ಪಾಸ್’ ಗಾಗಿ ವಿಚಾರಿಸಿದೆ. ಅದಕ್ಕವರು ಇಲ್ಲಿ ವಿತರಿಸುವುದಿಲ್ಲ. ಮುಂದೆ MGBS(Mahatma Gandhi Bus Station)ನ ಎದುರಿನ ಸಿಟಿ ಬಸ್ ಸ್ಟಾಪ್ ನಲ್ಲಿ ಸಿಗುತ್ತೆ ಎಂದರು. ಇಲ್ಲಿಂದ 5 ನಿಮಿಷದ ಹಾದಿ ಎಂದು ಅವರಿಂದಲೇ ತಿಳಿದು ಹೊರಗಡೆ ಬಂದೆ. ಸ್ವಲ್ಪ ನಿರಾಶೆಯಾಗಿತ್ತು. ಗಡಿಯಾರ 5.15 ಎಂದು ತೋರಿಸುತ್ತಿತ್ತು. ಮನಸಿನಲ್ಲಿ ಎರಡು ಪ್ರಶ್ನೆ ಮೂಡಿದ್ದವು. ಮುಂದಕ್ಕೆ ಹೋಗುವುದೇ ಅಥವಾ ಹಿಂತಿರುಗಿ ರೂಮ್ ಗೆ ಹೋಗುವುದೇ ಎಂದು. ಆದರೆ ‘ಬಸ್ ಪಾಸ್’ನ ಪೆಡಂಭೂತ ಬಿಡಬೇಕಲ್ಲ. ಇಟ್ಟ ಹೆಜ್ಜೆ ಹಿಂದೆ ತೆಗೆಯುವುದೇ? ಛೇ.. ಛೇ.. ಆಟೋ ಮಾಡಿಕೊಂಡು ಬಂದದ್ದಾಯಿತು. ಇಲ್ಲಿ ನೋಡಿದರೆ ಹನುಮಂತನ ಬಾಲದ ಹಾಗೆ ನಿಂತಿದ್ದಾರೆ ಜನ. ಅಬ್ಬಾ! ಹೈದರಾಬಾದ್ ನಿಜಕ್ಕೂ ಮಹಾ ನಗರ ಎಂದುಕೊಂಡೆ. ಈ ಬಾಲದ ಕೊನೆಗೆ ನಾನು ಸೇರಿಕೊಂಡು ಬಾಲದ ಭಾಗವಾಗಿ ಪಾಸ್ ಪಡೆಯುವುದೇ? ಅದು ಯಾವಾಗ ದೊರಕುತ್ತೇ? ಈ ಜನರ ನಡುವೆ ನನ್ನ ಸರದಿ ಬರಲು ಸುಮಾರು ಮೂರು ಗಂಟೆ ಆಗಬಹುದಾ? ಎಂಬಿವೇ ಪ್ರಶ್ನೆಗಳ ಮಧ್ಯೆ, ನನ್ನ ಮುಂದಿರುವ ಒಬ್ಬರನ್ನು ಕೇಳಿಯೇ ಬಿಟ್ಟೆ. ಇಲ್ಲಿಯೇ ಬಸ್ ಪಾಸ್ ಸಿಗುತ್ತೋ ಅಥವಾ ಬೇರೆ ಕಡೆಯೂ ಉಂಟೋ ಎಂದು. ಅದಕ್ಕವರು ‘ಸಿಕಿಂದ್ರಾಬಾದ್ ‘ ನಲ್ಲಿ ಸಿಗುತ್ತೆ ಹಾಗೂ ಅಲ್ಲಿ ಇಲ್ಲಿಗಿಂತಲೂ ಜನ ಸ್ವಲ್ಪ ಕಡಿಮೆ ಎಂದು ಸೇರಿಸಿ ತಿಳಿಸಿದರು. ಬಸ್ ನಂಬರ್ ಕೂಡ ಹೇಳಿದರು ಮತ್ತು ನಲವತ್ತೈದು ನಿಮಿಷದ ಹಾದಿ ಎಂದು ತಿಳಿಸಲು ಮರೆಯಲಿಲ್ಲ. ಮರು ಯೋಚನೆ ಮಾಡದೆ ಬಸ್ ಹತ್ತಿದೆ. ಸಿಕಿಂದ್ರಾಬಾದ್ ಬಸ್ ಸ್ಟಾಪ್ ತಲುಪಿದಾಗ ಸಮಯ 6.30. ಇಲ್ಲಿ ಬಸ್ ಪಾಸ್ ಕೌಂಟರ್ ಹತ್ತಿರ ಬಂದು ನೋಡುತ್ತೇನೆ, ಇಲ್ಲಿಯೂ ಜನವೋ ಜನ. ಮೊದಲ ಬಾರಿಗೆ ನನಗೆ ನಮ್ಮ ದೇಶದ ಜನಸಂಖ್ಯೆಯ ಸ್ಪಷ್ಟ ಚಿತ್ರಣ ಕಣ್ಣ ಮುಂದೆ ಬಂದಿತು. ಹಿಂದಿನ ಸ್ಟಾಪ್ ನಲ್ಲಿ ಅವರು ಹೇಳಿದ ‘ಸ್ವಲ್ಪ ಕಡಿಮೆ ಜನ’ ಅನುಭವಕ್ಕೆ ಬಂತು. ಏನು ಮಾಡಲೂ ತೋಚದೆ, ಕ್ಯೂ ಸೇರಿಕೊಂಡೆ. ಅಲ್ಲಿಯಷ್ಟೇ ಇಲ್ಲಿಯೂ ಜನ. ತನ್ನಷ್ಟಕ್ಕೆ ತಾನೇ ಕ್ಯೂ ಆಮೆ ಗತಿಯಲ್ಲಿ ಮುಂದೆ ಸಾಗುತ್ತಾ ಇತ್ತು. ಸುತ್ತಲೂ ನೋಡಿದೆ. ಯಾರಿಗೆ ಯಾರೋ!! ಅವರ ಪಾಡಿಗೆ ಅವರು ಸ್ಮಾರ್ಟ್ ಫೋನ್ ನಲ್ಲಿ ಬ್ಯುಸಿ. ಒಂದು ಕ್ಷಣ ದಂಗು ಬಡಿದ ಹಾಗಾಯಿತು. ನಾನು ನಮ್ಮೂರಲ್ಲಿ ‘ದೇವರ ದರ್ಶನ’ಕ್ಕೂ ಇಷ್ಟು ದೊಡ್ಡ ಕ್ಯೂ ನಿಂತಿರಲಿಲ್ಲ. ಹಿಂದೆ ತಿರುಗಿದೆ, ನನ್ನ ಹಿಂದೆ ಮತ್ತೆ ಜನ ಬಂದು ಕ್ಯೂ ಸೇರಿಕೊಳ್ಳುತಿದ್ದಾರೆ. ಅಷ್ಟರಲ್ಲಿ ನನ್ನ ಹಿಂದಿನ ಅಂಕಲ್ ನನ್ನನ್ನು ಮಾತನಾಡಿಸಿದರು. ಸಂಕ್ಷಿಪ್ತ ಪರಿಚಯದ ನಂತರ ಎಲ್ಲಿಂದ ಎಲ್ಲಿಯವರೆಗೆ ಪಾಸ್ ಎಂದು ಕೇಳಿದರು, ಹೇಳಿದೆ. ನಂತರ ಯಾವ ಬಸ್ ಗಾಗಿ? ಆರ್ಡಿನರಿಯೋ, ಮೆಟ್ರೋ ನಾ ಅಥವಾ ಡೀಲಕ್ಸಾ ಎಂದರು. ಆ ತಕ್ಷಣಕ್ಕೆ ಡೀಲಕ್ಸ್ ಎಂದೇ. ಆದರೆ ನನ್ನ ತಲೆಯಲ್ಲಿ ರೆಕಾರ್ಡ್ ಓಡಲು ಶುರುವಾಯಿತು. ಮೂರಕ್ಕೂ ಏನು ವ್ಯತ್ಯಾಸ. ಹದಿನೈದು ದಿನಗಳಿಂದ ಓಡಾಡುತಿದ್ದೇನೆ ಬಸ್ ನಲ್ಲಿ. ನಾನು ಯಾವತ್ತು ಈ ವ್ಯತ್ಯಾಸ ಗಮನಿಸಿಲ್ಲವಲ್ಲ. ನನ್ನ ಗಮನಿಸುವ ಶಕ್ತಿಯೇ ಕಡಿಮೆಯೇ ಅಥವಾ ನಾನು ಹತ್ತಿದ ಬಸ್ ಗಳು ಒಂದೇ ತೆರನಾದುವಾ? ಎಷ್ಟೊಂದು ಪ್ರಶ್ನೆಗಳು. ಅಷ್ಟರಲ್ಲಿ , ಅವರೇ ನನ್ನ ಯೋಚನಾ ಲಹರಿಯನ್ನು ಮುರಿಯುತ್ತಾ ಒಂದು ವಿಷಯ ಹೇಳಲಾ ಎಂದರು. ಹೇಳಿ ಎಂದೇ. ನೀನು ಓಡಾಡುವ ಆ ದಾರಿಗೆ ಬಸ್ ಪಾಸ್ ನ ಅವಶ್ಯಕತೆ ಇಲ್ಲ. ಬಸ್ ಪಾಸ್ ನ ಖರ್ಚಿಗೂ, ದಿನದ ಬಸ್ ವೆಚ್ಚಕ್ಕೂ ಅಂತ ವ್ಯತ್ಯಾಸವೇನಿಲ್ಲ. ಬೇಕಿದ್ದರೆ ಈ ಚೇಂಜ್ ಸಮಸ್ಯೆಗೆ ಬೇಕಾದರೆ ನೀನು ಪಾಸ್ ಮೊರೆ ಹೋಗಬಹುದು ಎಂದರು. ನನ್ನ ಪಾಲಿಗೆ ದೇವರೇ ಬಂದ ಹಾಗಾಯಿತು. ಸಮಯ ಆಗಲೇ 7.15. ಇನ್ನು ಈ ಕ್ಯೂ ಮುಗಿಯುವುದೇ ಇಲ್ಲ ಎನಿಸಿ , ಥ್ಯಾಂಕ್ಸ್ ಅಂಕಲ್ ಎಂದು ಹೇಳಿ ಕ್ಯೂ ನಿಂದ ಹೊರಬಿದ್ದೆ. ಈ ಜನಗಳ ಜಾತ್ರೆಯಲ್ಲಿ ನಿಂತು ಪಾಸ್ ಪಡೆಯುವುದಕ್ಕಿಂತ, ದಿನವೂ ಚಿಲ್ಲರೆ ಕೊಡುವುದು ಉತ್ತಮವೆನಿಸಿತು. ಇನ್ನು ನಾನು ನನ್ನ ರೂಮ್ ಸೇರಬೇಕಲ್ಲ. ಬರುವಾಗ ಹೇಗೋ ‘ಅವರ್ ಬಿಟ್ಟ್ ಇವರ್ ಬಿಟ್ಟ್ ಇವರ್ ಯಾರ್’ ಅಂತ ಬಸ್ ಹಿಡಿದು ಬಂದು ಬಿಟ್ಟಿದ್ದೆ. ಈಗ ಇಲ್ಲಿಂದ ಹೋಗುವುದು ಹೇಗೆ. ನನ್ನ ಮೊಬೈಲ್ ಡಾಟಾ ದ ಸಹಾಯದೊಂದಿಗೆ ಸ್ಮಾರ್ಟ್ ಫೋನ್ ಅನ್ನು ಕೇಳಿದೆ. ಅದು ಎರಡು ಗಂಟೆಯ ಹಾದಿ ಎಂದು ತೋರಿಸಿತು. ಇನ್ನು ನಾನು ಮುಟ್ಟಿದ ಹಾಗೆ ಎಂದುಕೊಂಡೆ. ಅದರೊಂದಿಗೆ, ಹೌದಲ್ಲ ಎಂತಹ ಪೆದ್ದು ನಾನು, ಆಫೀಸ್ ನಿಂದ ಹೊರಡುವ ಘಳಿಗೆಯಿಂದಲೇ ಈ ಗೂಗಲ್ ಸರ್ಚ್ ಮಾಡಬಹುದಿತ್ತಲ್ಲ. ನನಗೆ ಹೊಳೆಯಲೇ ಇಲ್ಲವಲ್ಲಾ… ಹೀಗೆ ಯೋಚಿಸುತ್ತ ಅಲ್ಲಿರುವ ಬಸ್ ಗಳ ನಡುವೆ ಬಂದು ಹಾಗೂ ಹೀಗೂ ವಿಚಾರಿಸಿ ಬಸ್ ಹತ್ತಿದೆ. ನನ್ನ ಪುಣ್ಯಕ್ಕೆ ನೇರ ಬಸ್ ಸಿಕ್ಕಿತು, ಇಲ್ಲವಾದರೆ ಎರಡು ಬಸ್ ಬದಲಾಯಿಸಬೇಕಂತೆ. ಟಿಕೆಟ್ ಪಡೆದು ನಿಂತೆ, ಕೂರಲು ಸ್ಥಳವಿರಲಿಲ್ಲ. ಮೊಬೈಲ್ ಒಂದು ಕೈಯಲ್ಲಿ ಹಿಡಿದು ಇನ್ನೊಂದು ಕೈಯಿಂದ ಮೇಲಿನ ಬಸ್ ನ ಸರಳಿ ಹಿಡಿದು ನೇತಾಡುವುದು ಅಸಾಧ್ಯವೆನಿಸಿತು, ಮೊಬೈಲ್ ಅನ್ನು ಬ್ಯಾಗ್ ನಲ್ಲಿ ಹಾಕಿದೆ. ಮತ್ತದೇ ಹೇಳಿದೆ ಕಂಡಕ್ಟರ್ ಗೆ ‘ಪಂಜಗುಟ್ಟ’ ಸ್ಟಾಪ್ ಬರಲು ತಿಳಿಸಿ, ಹೊಸತು , ನನಗೆ ತಿಳಿಯುವುದಿಲ್ಲ ಎಂದು, ನಾನು ಏರಿದ ಅಷ್ಟೂ ಬಸ್ ಗಳಲ್ಲೂ ಆಟೋಮ್ಯಾಟಿಕ್ ವಾಯ್ಸ್ ರೆಕಾರ್ಡರ್ ಇರಲಿಲ್ಲ, ಸ್ಟಾಪ್ ಗಳನ್ನು ತಿಳಿಸಲು. ಸರಿ, ಸುಮಾರು ಒಂದು ಮುಕ್ಕಾಲು ಗಂಟೆ ಸಂದಿತ್ತು. ‘ಹೈದರಾಬಾದ್ ಸೆಂಟ್ರಲ್, ಹೈದರಾಬಾದ್ ಸೆಂಟ್ರಲ್’ ಅಂತ ಕೂಗಿ ಕಂಡಕ್ಟರ್ ನನ್ನನ್ನು ನೋಡಿದರು, ನಾನು ಪ್ರಶ್ನಾರ್ಥಕವಾಗಿ ಅವರನ್ನೇ ನೋಡಿದೆ. ಅದಕ್ಕವರು ಪಂಜಗುಟ್ಟ ಇಳಿಬೇಕು ಅಂದ್ರಲ್ಲ ಅಂದ್ರು. ನಾನು ಹೌದು ಅಂದೇ. ಇದೇ ಮತ್ತೆ ಅಂದರು. ಹೈದರಾಬಾದ್ ಸೆಂಟ್ರಲ್ ಅಂದಿರಲ್ಲ ಅಂದೆ. ಅಯ್ಯೋ ಇಳಿಯಮ್ಮ ಬೇಗ ಹೈದರಾಬಾದ್ ಸೆಂಟ್ರಲ್ ಅಂದ್ರು ಒಂದೇ ಪಂಜಗುಟ್ಟ ಅಂದ್ರು ಒಂದೇ. ಇಳಿ ಇಳಿ ಅಂತ ರೇಗಿದರು. ಪೆಚ್ಚಾಗಿ ಇಳಿದು, ಒಳಗಿನ ಗಲ್ಲಿಯೊಳಗೆ ಹಾದು ಅಂತು ರೂಮ್ ತಲುಪುವುದರೊಳಗೆ ರಾತ್ರಿ 9.30. ಅಮ್ಮನ ನಾಲ್ಕು ಮಿಸ್ಸ್ಡ್ ಕಾಲ್ ಆಗಿದ್ದವು. ಮಾತನಾಡಿದೆ. ನಂತರ ಐದು ನಿಮಿಷ ಮೌನವಾಗಿ ಕುಳಿತೆ. ಸಂಜೆ ನಾಲ್ಕು ಗಂಟೆ ಇಂದ ಇಲ್ಲಿಯವರೆಗಿನ ಎಲ್ಲವು ಕಣ್ಣ ಮುಂದೆ ಬಂದು ಹೋದವು. ಇನ್ನ್ಯಾವುದೋ ಬಸ್ ಹತ್ತಿದ್ದರೆ ಏನು ಗತಿ, ಎಂದು ಸಣ್ಣಗೆ ಒಂದು ಕ್ಷಣ ಮೈ ನಡುಗಿತು. ‘ಬಸ್ ಪಾಸ್’ ನ ಅವಾಂತರಕ್ಕೆ ನನ್ನ ಮೇಲೆ ನನಗೆ ಕೋಪ ಬಂತು. ನಗೆಯೂ ಬಂತು. ಒಂದೇ ಬಾರಿ ಇಡೀ ಹೈದರಾಬಾದ್ ಸುತ್ತಿದ ಅನುಭವವಾಯಿತು. ಒಂದು ಚಿಂತನೆಯೂ ಬಂದಿತು. ಸಣ್ಣ ಪಟ್ಟಣದಿಂದ ಮಹಾನಗರಗಳಿಗೆ ಓದಿಗಾಗಿಯೋ, ಕೆಲಸಕ್ಕಾಗಿಯೋ ಹೋಗುವ ಹುಡುಗಿಯರು ಎಷ್ಟು ಜಾಗರೂಕರಾಗಿದ್ದರು ಸಾಲದು. ನಂಬಿಕಸ್ಥ ಕೆಲವೇ ಸ್ನೇಹಿತರನ್ನು ಮಾಡಿಕೊಳ್ಳಬೇಕು. ಅವರೊಂದಿಗೇ ಊರು ಸುತ್ತಬೇಕು. ಅಪ್ಪ ಅಮ್ಮಂದಿರಿಗೆ ಸಮಯ ಸಮಯಕ್ಕೆ ನಾವು ಎಲ್ಲಿದ್ದೇವೆ ಎಂದು ತಿಳಿಸಬೇಕು. ಯಾವುದೇ ಊರಲ್ಲಿ ಸ್ನೇಹಿತರು, ಬಂಧುಗಳಿದ್ದರೆ ಒಳ್ಳೆಯದು. ತುರ್ತು ಪರಿಸ್ಥಿತಿಯಲ್ಲಿ ಸಹಾಯಕ್ಕಾದರೂ ಇರುತ್ತಾರೆ. ಸಣ್ಣ ಕೆಲಸವೇ ಆಗಿರಲಿ ಅಭ್ಯಾಸ ಆಗುವವರೆಗೆ ನಾಲ್ಕು ಜನರೊಂದಿಗೆ ಚರ್ಚಿಸಿ, ತಿಳಿದುಕೊಂಡು ಮುಂದುವರೆಯಬೇಕು. ಎಷ್ಟು ಓದಿ ತಿಳಿದರು ಅನುಭವ ಕಲಿಸುವ ಪಾಠ ದೊಡ್ಡದು. ಅಷ್ಟಿಲ್ಲದೇ ಹೇಳುತ್ತಾರೆಯೇ ದೊಡ್ಡವರು ‘ಗಿಳಿಯೋದು ಪುಸ್ತಕ ಜ್ಞಾನ, ನಿನ್ನನುಭವವೇ ನಿನಗೆ ಧರುಮದ ದೀಪ’ ಎಂದು. ಊಟದ ಶಾಸ್ತ್ರ ಮುಗಿಸಿದೆ. ತುಂಬಾ ಸುಸ್ತಾದ್ದರಿಂದ ಮಲಗಿಕೊಂಡೆ. ನಿದ್ದೆ ಯಾವಾಗ ಹತ್ತಿತೋ ತಿಳಿಯಲಿಲ್ಲ. ಎಲ್ಲಿ ನೋಡಿದರೆ ಅಲ್ಲಿ ಬಸ್ ಬಸ್ ಬಸ್! ಜನ ಓಡುತ್ತಿದ್ದಾರೆ. ಎಷ್ಟೊಂದು ಜನ ಓಡುತಿದ್ದಾರೆ. ಎಲ್ಲಿಗೆ ಓಡುತ್ತಿದ್ದಾರೆ? ಏಕೆ ಓಡುತ್ತಿದ್ದಾರೆ? ತಿಳಿಯದು. ನಾನೂ ಓಡುತ್ತಿದ್ದೇನೆ. ನನಗೂ ಏಕೆಂದು ತಿಳಿಯದು. ಬಸ್ ಹಿಡಿಯಲು ಓಡುವಾಗ ಜಾರಿ ಬಿದ್ದೆ. ತಕ್ಷಣ ಎಚ್ಚರವಾಯಿತು. ಓಹ್ ಕನಸು! ಆಗಲೇ ಬೆಳಗ್ಗೆ 7 ಗಂಟೆ. ಆಫೀಸ್ ಗೆ ಹೊರಡಬೇಕೆಂದು ದಡಬಡನೆ ಎದ್ದೆ!!

‘ನಗು ನಗುತ ಬಾಳ್ ತೆರಳ್’

ಡಿ.ವಿ.ಜಿ ಅವರ ಮಂಕುತಿಮ್ಮನ ಕಗ್ಗದಲ್ಲಿ ಬರುವ ಒಂದು ಪ್ರಚಲಿತ ಪದ್ಯ ಇದು.

‘ನಗು ಮನದಿ ಲೋಗರ ವಿಕಾರಂಗಳನು ನೋಡಿ

ಬಿಗಿ ತುಟಿಯ ಹಿಡಿವಂದು, ನೋವ ಪಡುವಂದು

ಪೋಗು ವಿಶ್ವ ಜೀವನದ ಜೀವಾಂತರಂಗದಲಿ

ನಗು ನಗುತ ಬಾಳ್-ತೆರಳ್ ಮಂಕುತಿಮ್ಮ !’

ನಮ್ಮ ಜೀವನದ ಒಂದು ಕಟು ಸತ್ಯ ಏನೆಂದರೆ ಜೀವನದ ಯಾವುದಾದರು ಒಂದು ಘಳಿಗೆಯಲ್ಲಿ ಎಲ್ಲ ನಮ್ಮವರಿದ್ದು ನಾವು ಒಬ್ಬಂಟಿಗರು ಅನ್ನೋ ಭಾವನೆ ಎಲ್ಲರನ್ನು ಕಾಡುತ್ತೆ. ಇದರಿಂದ ನಾವ್ಯಾರು ಹೊರತಲ್ಲ. ನೋಡುವವರಿದ್ದು, ಸಂತೈಸುವವರಿದ್ದು, ಪಾಲಕರಿದ್ದು, ಸ್ನೇಹಿತರಿದ್ದು, ಬಂಧು-ಬಾಂಧವರಿದ್ದು ಹೀಗೆ ಎಲ್ಲರು ಇದ್ದು ನಾವು ಒಬ್ಬರೇ ಹೊರಡುತ್ತಾ ಇದ್ದೇವೆ ಎಂಬ ಭಾವನೆ ಅಥವಾ ಪರಿಕಲ್ಪನೆ ಎಲ್ಲರಲ್ಲೂ ಒಂದು ಸಲವಾದರೂ ಬರುತ್ತದೆ. ಇದರಿಂದ ಆಗುವ ಲಾಭವೇನು? ಏನು ಇಲ್ಲ. ನಮ್ಮ ಪಾಡಿಗೇ ನಾವು ಮಂಕಾಗುವುದು, ಎಲ್ಲರು ಸಂತೋಷವಾಗಿದ್ದಾರೆ ನಾವೇ ಇಲ್ಲ ಎನ್ನುವ ಒಂದು ಭ್ರಾಂತಿ ನಮ್ಮನ್ನು ಕಾಡಲು ಪ್ರಾರಂಭಿಸುತ್ತದೆ. (ಎಲ್ಲರ ಮಟ್ಟಿಗೆ ಇದು ನಿಜ ಎಂದು ಭಾವಿಸುತ್ತೇನೆ, ನಿಮಗೆ ಇದು ಅನ್ವಯಿಸುವುದಿಲ್ಲ ಎಂದಾದರೆ, ನಿಮ್ಮಷ್ಟು ಅದೃಷ್ಟಶಾಲಿಗಳು ಯಾರು ಇಲ್ಲ, ಹಾಗು ನೀವು ಯಾವಾಗಲು ಹೀಗೆ ಇರಿ ಎಂದು ಹಾರೈಸುತ್ತೇನೆ.)

ಡಿ.ವಿ.ಜಿ ಅವರ ಮೇಲೆ ಹೇಳಿರುವ ಪದ್ಯಕ್ಕೂ ಹಾಗು ನಾನು ಮಾತನಾಡುತ್ತಿರುವುದಕ್ಕು ಏನಾದರು ಸಂಬಂಧ ಇದೆಯೇ ಎಂದಾದರೆ, ಹೌದು, ಖಂಡಿತ ಇದೆ. ನಿಮ್ಮ ಮನಸನ್ನು ಯಾವತ್ತು ಉಲ್ಲಸಿತವಾಗಿ ಇಟ್ಟುಕೊಳ್ಳಿ, ಆಗ ಬೇರೆ ಜನರ ವಿಕಾರ ಪ್ರವೃತ್ತಿಯನ್ನು ನೋಡಿ, ನೋವ ಪಡುವ ಬದಲು ಅವರೊಂದಿಗೆ ನೀವು ಒಬ್ಬರಾಗಿ ಬೆರೆತು ನಗುನಗುತಾ ಬಾಳಿ ಹಾಗು ಈ ಜೀವನದಿಂದ ಹೋರಾಡಿ ಎಂದು ಹೇಳುತ್ತಾರೆ. ನಿಜವಲ್ಲವೆ….. ಎಲ್ಲ ಕಷ್ಟ ನಮ್ಮ ಮೇಲೆ ಬಿದ್ದಿರುವ ಹಾಗೆ, ನಾವೇ ನೋವನ್ನು ಅನುಭವಿಸುತ್ತಿರುವ ಹಾಗೆ ಇದ್ದೇನು ಪ್ರಯೋಜನ. ಎಲ್ಲರೊಂದಿಗೆ ನಾವು ಬೆರೆತು, ಅವರೊಂದಿಗೆ ನಾವೊಬ್ಬರಾಗಿ ಸದಾ ನಗುತ್ತ ಇರಬಹುದಲ್ಲವೇ?

ಕುವೆಂಪುರವರ ಒಂದು ವಾಕ್ಯ ನೆನಪಿಗೆ ಬರುತ್ತಿದೆ ‘ಅದರರ್ಥ ಚಿತ್ತಗಳು ಸೃಷ್ಟಿಕರ್ತನಿಗಿರಲಿ, ವ್ಯರ್ಥ ಜಿಜ್ಞಾಸೆಯಲಿ ಕಾಲಹರಣವನೇಕೆ ಮಾಡುವೆ’ ಅಂತ. ಯಾವಾಗಲು ಸದಾ ‘ಮಂದಹಾಸ’ ಅಂತಾರಲ್ಲ ಆ ತರಹದ ಒಂದು ನಗುವನ್ನ ಒದವೆಯಾಗಿ ಸದಾ ಧರಿಸಿ. ಯಾರು ಒಬ್ಬಂಟಿಗರಲ್ಲ, ವಿಶ್ವ ಮಾನವರಾಗಲು ಬೇಕಿರುವುದು ತಾಳ್ಮೆ ಹಾಗು ಸಹಜ ಪ್ರೀತಿ. ಈ ಎರಡಿದ್ದರೆ ಜಗತ್ತೇ ನಿಮ್ಮದು, ಜಗತ್ತನ್ನು ಗೆಲ್ಲಬಹುದು ಕೂಡ. ನಿನ್ನ ಹತ್ತಿರ ಇಲ್ಲದಿರುವುದನ್ನು ನೋಡಿ ಕೊರಗುವುದಕ್ಕಿಂತ, ಇದ್ದದ್ದರಲ್ಲಿ ಸಂತೃಪ್ತಿಯಿಂದ ಬಾಳಿದರೆ ಅದೇ ಹರುಷ. ಅದಕ್ಕಿಂತ ಮಿಗಿಲಾದ ಹರುಷ ಇನ್ನೊಂದಿಲ್ಲ.

ಯುದ್ಧದಲ್ಲಿ ಹೋರಾಡಿ ಬಾಳಿ ಬದುಕಬೇಕಾದ ವಯಸ್ಸಿನ ಮಗನನ್ನು ಕಳೆದುಕೊಂಡ ತಾಯಿ ತಾಳ್ಮೆಯಿಂದ ಜೀವನ ಸಾಗಿಸುತ್ತಿರಬೇಕಾದರೆ ಅದಕ್ಕಿಂತ ಮಿಗಿಲಾದ ಕಷ್ಟವಾ ಎಂದು ಒಂದು ಕ್ಷಣ ನಾವು ನಮ್ಮನ್ನು ಪ್ರಶ್ನಿಸಿಕೊಂಡರೆ ಬಹುಶಃ ನಮ್ಮೆಲ್ಲ ಕಷ್ಟಗಳಿಗೆ ಪರಿಹಾರ ದೊರಕಿಬಿಡುತ್ತದೆ. ನಾಲ್ಕು ದಿನದ ಜೀವನದಲ್ಲಿ ನಿಮಗಾಗಿ ಹಾಗು ನಿಮ್ಮವರಿಗಾಗಿ ಬಾಳಿ ಅದಕ್ಕಿಂತ ಸಂತೋಷ ಬೇರೆ ಇಲ್ಲ. ಯಾರೋ ನಿಮ್ಮೊಂದಿಗೆ ಮಾತನಾಡುತ್ತಿಲ್ಲವಾ? ಬಿಡಿ. ನಿಮ್ಮೊಂದಿಗೆ ನೀವು ಮಾತನಾಡಿ ಆರಾಮವಾಗಿರಿ. ನೀವಂದುಕೊಂಡಂತೆ ಏನು ನಡೆಯುತ್ತಿಲ್ಲವಾ? ಚಿಂತೆ ಇಲ್ಲ. ಸ್ವಲ್ಪ ದಿನ ಅಂದುಕೊಳ್ಳುವುದನ್ನ ಬಿಟ್ಟು ಬಿಡಿ, ಹಾಯಾಗಿರಿ. ಎಷ್ಟೋ ದಿನದಿಂದ ಮಾಡದ ಕೆಲಸ ಏನಾದರು ಇದೆಯಾ, ಈಗ ಮಾಡಿ. ಯಾರಿಗಾದರು ಏನಾದರು ಹೇಳಬೇಕಾ, ಈಗ ಹೇಳಿ. ಕೇಳಲು ಸಿದ್ಧವಿಲ್ಲ ಅವರು ಎಂದಾದರೆ, ನಿಮ್ಮ ತಾಳ್ಮೆಗೆ ನಿಮಗೆ ನೀವೇ ಒಂದು ಶಭಾಸ್ ಹೇಳಿಕೊಂಡು ಮುನ್ನಡೆಯಿರಿ. ಅಪ್ಪ-ಅಮ್ಮನ ಹತ್ತಿರ, ಮನೆಯವರೊಟ್ಟಿಗೆ ಸಮಯ ಕಳೆದಿಲ್ಲವಾ? ಸರಿ, ಕುಳಿತು ಒಂದು ಯೋಜನೆ ಮಾಡಿ, ಯಾವಾಗ ಭೇಟಿ ಆಗಬೇಕು ಅಂತ. “Life is simple-don’t make it complicated!”…. ಜೀವನ ತುಂಬಾ ಸರಳ ಅದನ್ನು ಹಾಗೆಯೇ ಜೀವಿಸೋಣ.

ಎಲ್ಲರು ಸದಾ ನಗುತ್ತಾ ಇರಿ. ಏಕೆಂದರೆ ‘ನಗುವುದು ಸಹಜ ಧರ್ಮ! ನಗಿಸುವುದು ಪರಧರ್ಮ! ನಕ್ಕು-ನಗಿಸುವುದು ಅತಿಶಯದ ಧರ್ಮ!

 

 

ಕನ್ನಡ ಹಾಗೂ ಚಲನಚಿತ್ರ ಮಾಧ್ಯಮ

ನಿನ್ನೆ ಅಷ್ಟೇ ನೋಡಿದ ‘ರಂಗಿತರಂಗ’ ಚಿತ್ರದಿಂದ ತುಂಬಾ ಸಂತೋಷಗೊಂಡಿದ್ದೇನೆ, ಕಾರಣ ನಮ್ ಇಂಡಸ್ಟ್ರಿಲೂ ಒಳ್ಳೊಳ್ಳೆ ಸಿನಿಮಾ ಮಾಡುವವರ ಕೊರತೆ ಏನಿಲ್ಲ ಅಂತ. ಹಾಗಾದ್ರೆ ಇಷ್ಟು ದಿವಸ ಕೊರತೆ ಇದೆ ಅಂತ ಅನ್ನಿಸ್ತಿತ್ತೇನು? ಈ ಪ್ರಶ್ನೆಗೆ ಬಹುಶಃ ಎರಡು ಉತ್ತರ ಕೊಡಬಹುದು, ಅದು ಎರಡು ವಿಭಿನ್ನ ಸಂದರ್ಭಗಳಲ್ಲಿ ಹೊರಬಂದದ್ದು. ಒಂದು ರಂಗಿತರಂಗ ನೋಡೋದಕ್ಕೂ ಮುಂಚಿಂದು, ಆಮೇಲೆ ರಂಗಿತರಂಗ ನೋಡಿದ ಮೇಲಿನದು. ನೋಡೋದಕ್ಕೂ ಮುಂಚೆ ನನಗೆ ನಮ್ಮಲ್ಲಿಯೇ ವಿಭಿನ್ನ ಚಿತ್ರ ತೆಗೆಯುವವರ ಕೊರತೆ ಇದೆ ಅಂತ ಅನ್ನಿಸ್ತಿತ್ತು. ಈಗ ನೋಡಿದ ಮೇಲೆ ಚಿತ್ರ ತೆಗೆಯುವವರ ಕೊರತೆ ಇಲ್ಲ, ನೋಡಿ ಅದನ್ನ ಮೆಚ್ಚಿಕೊಳ್ಳುವವರ ಕೊರತೆ ಇದೆ ಅಂತ ಅನ್ನಿಸ್ತು.

ಚಿತ್ರ ತೆರೆಗೆ ಬಂದು ಸುಮಾರು 50 ದಿನ ಅದಮೇಲೆ ಎಲ್ಲ ಕಡೆ ಭರ್ಜರಿ ಪ್ರದರ್ಶನ ಕಂಡ ಮೇಲೆ ನಮ್ಮೂರಿಗೆ (ರಾಯಚೂರು) ಹಾಕಿದಾರೆ. ಆದ್ರೆ ಅದೇ ತೆಲುಗು ಸಿನಿಮಾ ಆಗಿದ್ರೆ ಎಂತದ್ದೆ ಇರಲಿ ಮೊದಲನೇ ದಿನ ಥೀಯೇಟರ್ ನಲ್ಲಿ ಹಾಜಿರ್. ಇದರಲ್ಲಿ ಥೀಯೇಟರ್ ಓನರ್ ಅವರದ್ದು ತಪ್ಪಿಲ್ಲ, ಪಾಪ ಅವ್ರು ಲಾಭಕ್ಕೆ ಅಂತಸಿನೆಮಾ ಓಡಿಸೋದು, ಆ ಲಾಭ ಯಾವ ಭಾಷೆ ಚಿತ್ರದಿಂದ ಬಂದ್ರೆ ಏನು, ಲಾಭ ಮುಖ್ಯ. ಮುಖ್ಯವಾಗಿ ನಾವು ಕನ್ನಡಿಗರು ಒಂದುರೀತಿಯ ಪೂರ್ವಾಭಿಪ್ರಾಯ,ಅದೇ ರೀ, Stereotype ಬೆಳೆಸಿಕೊಂಡಿದ್ದಿವಿ, ನಮ್ಮ ಸಿನಿಮಾಗಳು low ಬಜೆಟ್, ಚೆನ್ನಾಗಿರಲ್ಲ ಅಂತ. ಇದಕ್ಕೆ ಮಧ್ಯೆ ಕೆಲವು ದಶಕ ಒಳ್ಳೆ ಸಿನಿಮಾ ಬರದೆ ಇದ್ದದ್ದು ಕಾರಣ ಇರಬಹುದು, ಹಾಗೇ ನಾವು ಈ ಡಬ್ಬಿಂಗ್ ವಿರುದ್ಧ ಇದಿವಿ, ನಮ್ ಇಂಡಸ್ಟ್ರಿಗೇ ಧಕ್ಕೆ ಆಗತ್ತೆ ಅಂತ. ಹೌದು, ಡಬ್ಬಿಂಗ್ ತಂದಿಲ್ಲ, ಹಾಗಂತ ಚಂದನವನ (Sandalwood) ಬೆಳೆದಿದೆ ಏನು?? ಅದೇ ಪಕ್ಕದ ತೆಲುಗು, ತಮಿಳು ಇಂಡಸ್ಟ್ರಿ ನಲ್ಲಿ ಡಬ್ಬಿಂಗ್ allowed ಆದರು ಸಿಕ್ಕಾಪಟ್ಟೆ ಮುಂದುವರೆದಿದಾರೆ  ಮತ್ತೆ. ಇದಕ್ಕೆ ಕಾರಣ simple ಓಡುವವರ ಜೊತೆ ನಾವು ಸರಿಸರಿಯಾಗಿ ಓಡಬೇಕು ರೀ, ಹಿಂದೆ ಬಿದ್ರೆ ನಡಿಯಲ್ಲ. ಡಬ್ಬಿಂಗ್ allow ಮಾಡಿದ್ರೆ ನಮ್ಮಲ್ಲೂ ಬೇರೆ ಇಂಡಸ್ಟ್ರಿ producerಗಳು ಬರ್ತಾರೆ, so called big budget cinema ಮಾಡೋಕೆ. ಇಲ್ಲ ಅಂದ್ರೆ ಯಾವಾಗಲೋ 5 ವರ್ಷಕ್ಕೆ ಒಮ್ಮೊಮ್ಮೆ ಬರೋ ಮುಂಗಾರು ಮಳೆ, ಮಿಲನ, ಮೈತ್ರಿ, ಉಪ್ಪಿ 2, ರಂಗಿತರಂಗ ಅಂತ ಬೆರಳೆಣಿಕೆ ಸಿನೆಮಾಗಳ ವೈಭವವನ್ನ ಹೇಳುತ್ತಾ ಮುಂದೆ ಸಾಗುತ್ತಾ ಇರ್ಬೇಕು, ಈ ಕೆಲಸ ಕೂಡ ಕನ್ನಡಾಭಿಮಾನ ಇದ್ದವರು ಮಾಡ್ತಾರೆ, ಇಲ್ದೆ ಇರುವವರು ನಮಗ್ಯಾಕೆ ಬೇಕು ಬಿಡು, ಯಾವ ಸಿನಿಮಾ ಎಷ್ಟ್ ಓಡಿದ್ರೆ ನಮಗೇನು ಅಂತ, ಬಂದಂತಹ ಒಳ್ಳೆ ಸಿನಿಮಾ ನೋಡುತ್ತಾ ಆರಾಮಾಗಿ ಇರ್ತಾರೆ.

ಕನ್ನಡದ ಜನ ಸದಭಿರುಚಿಯ ಸಿನೆಮಾಗಳನ್ನ ಯಾವತ್ತಿಗೂ ಬರಮಾಡ್ಕೊತಾರೆ, ಇದು ಪುಟ್ಟಣ್ಣ ಕಣಗಾಲ್ ಅವರಿಂದ ಈಗಿನ ಅನುಪ್ ಭಂಡಾರಿ ಅವರವರೆಗೂ ಸತ್ಯ. ಒಳ್ಳೆ ಸಿನಿಮಾ ಮಾಡಿ, ಕಥೆ ಸೊಗಸಾಗಿ ಇರ್ಬೇಕು, ಸಂಗೀತ, ಮನೋರಂಜನೆ, ಒಟ್ಟಾರೆ ಈಗಿನ ಜನಕ್ಕೆ ಹಿಡಿಸುವಂತಹ ಸಿನಿಮಾ ಮಾಡಿದ್ರೆ ನೋಡೇ ನೋಡ್ತಾರೆ. ಅಮೆರಿಕಾದ ಪ್ರಸಿದ್ಧ ಪತ್ರಿಕೆಯ weekend blockbusterನಲ್ಲಿ ಮೊದಲ ಸಲ ಕನ್ನಡ ಚಲನಚಿತ್ರದ ಹೆಸರು ಬಂದಿದೆ ಅಂತೆ, ಅದು ರಂಗಿತರಂಗ. ಹೀಗೆ ಬರುವ ಎಲ್ಲ ಸಿನಿಮಾಗಳು, atleast ಮೂರರಲ್ಲಿ ಒಂದು ಸಿನಿಮಾ ಹೀಗೆ ಬಂದ್ರೆ ಎಷ್ಟು ಚೆನ್ನಾಗಿರತ್ತೆ ಅಲ್ವೇ. ಅದಕ್ಕೆ ಬೇರೆ ಭಾಷೆಯ ಸಿನಿಮಾಗಳು ನಮ್ಮ ಇಂಡಸ್ಟ್ರಿ ಗೆ ಅಡ್ಡ ಅಂತ ತಿಳಿಯೋದಕ್ಕಿಂತ ಸ್ಪರ್ಧೆ ಅಂತ ತಿಳಿದು ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಂಡು ಒಳ್ಳೆ ಚಲನಚಿತ್ರಗಳು ಬರಲಿ, ಜನರು ನೋಡಲಿ ಅಂತ ಹಾರೈಸುತ್ತೇನೆ. ಹಾ ಹೇಳೋದು ಮರೆತೇ, ಉಪ್ಪಿ 2 psychological ಥ್ರಿಲ್ಲರ್ ತುಂಬಾ ಚೆನ್ನಾಗಿದೆ ಅಂತ ಕೇಳ್ದೆ, ಆದ್ರೆ ಕ್ಷಮಿಸಿ ಅದರ ಬಗ್ಗೆ ಬರಿತಾ ಇಲ್ಲ ಯಾಕೆ ಅಂದ್ರೆ ಯಾವುದರ ಬಗ್ಗೆ ಬರಿಬೇಕಾದ್ರೆ ಅದು ಅರ್ಥ ಆಗ್ಬೇಕಲ್ವ 😉

ಹಾಗೆ ಸುಮ್ಮನೆ!!

ಶಿಕ್ಷಕರ ದಿನಾಚರಣೆ ಹತ್ತಿರವಿರುವ ಈ ಸಂದರ್ಭದಲ್ಲಿ ನನಗೆ ತೋಚಿದ ನಾಲ್ಕು ಮಾತುಗಳನ್ನ ಇಲ್ಲಿ ಬರೆಯುತ್ತಿದ್ದೇನೆ.

ಈಗಿನ ವೇಗ ಗತಿಯಲ್ಲಿ ಓಡುತ್ತಿರುವ ಯುಗದಲ್ಲಿ ಕಂಪ್ಯೂಟರ್ ಮೊಬೈಲ್ ಲ್ಯಾಪ್ಟಾಪ್ ಐಪಾಡ್ ಮುಂತಾದವುಗಳ ಮಧ್ಯೆ ದಿನದ 24 ಗಂಟೆ ಹೇಗೆ ಹೋಗುತ್ತವೆ ಎಂದು ತಿಳಿದು ತಿಳಿಯದ ಸ್ಥಿತಿಯಲ್ಲಿ ಬದುಕುತ್ತಿರುವ ನಾವುಗಳು ನಮ್ಮ ಜೀವನವನ್ನು ರೂಪಿಸುವಲ್ಲಿ ಮಹತ್ಕಾರ್ಯ ವಹಿಸುವ ನಮ್ಮ ಪಾಲಕರ ಹಾಗೂ ಶಿಕ್ಷಕರ ಕೊಡುಗೆಯ ಕುರಿತು ಕಿಂಚಿತ್ತಾದರೂ ಯೋಚಿಸಬೇಡವೇ ಎನಿಸಿತು. ಪ್ರತಿಯೊಬ್ಬರ ಜೀವನದಲ್ಲೂ ಪ್ರೇರಣೆ ನೀಡಿದವರು ಒಬ್ಬರಾದರು ಇದ್ದೇ ಇರುತ್ತಾರೆ (ಇಲ್ಲದವರು ಇರಬಹುದೇನೋ, ಅಥವಾ ಇದ್ದರು ಅವರೇನು ಮಹಾ ಎಂಬ ಧೋರಣೆಯವರು ಇರಬಹುದು). ನನ್ನ ಜೀವನದಲ್ಲಿ ನನ್ನ ಆದರ್ಶ ಹಾಗೂ ನಾನು ಗುರು ಎಂದು ಮೊದಲು ಪರಿಗಣಿಸಿದ್ದು ಸರ್.ಎಂ.ವಿಶ್ವೇಶ್ವರಯ್ಯ ಅವರು. ಅವರ ಸಾರ್ಥಕ ಬದುಕು, ನಿಸ್ವಾರ್ಥ ಸೇವೆ, ಪ್ರಾಮಾಣಿಕತೆ ಎಲ್ಲವು ನನಗೆ ಸ್ಪೂರ್ತಿ. ಈ ಸಂದರ್ಭದಲ್ಲಿ ನಾನು ಅವರಿಗೆ ತುಂಬು ಹೃದಯದ ಕೃತಜ್ಞತೆಗಳನ್ನು  ಅರ್ಪಿಸುತ್ತಿದ್ದೇನೆ.

ನನ್ನಲ್ಲಿ ‘ಏನನ್ನಾದರೂ ನೀನು ಸಾಧಿಸಬಲ್ಲೆ ಅಂತಹ ಶಕ್ತಿ ನಿನಗಿದೆ’ ಎಂದು ಹುರಿದುಂಬಿಸಿದವರು ಗೋಪಾಲ್ ರಾವ್ ಸರ್ ಅವರು. ಈಗ 3 ವರ್ಷಗಳಿಂದ ಅವರು ಬೆಂಗಳೂರಿನಲ್ಲಿದ್ದಾರೆ ಎಂದು ಮಾತ್ರ ತಿಳಿದಿದೆಯೇ ಹೊರತು ಮತ್ತೇನು ಗೊತ್ತಿಲ್ಲ. ಅವರೆಲ್ಲೇ ಇರಲಿ ಅವರ ಆಶಿರ್ವಾದ ಸದಾ ನನ್ನ ಮೇಲಿರುತ್ತದೆ ಎಂದು ಭಾವಿಸಿ ಅವರಿಗೂ ನಾನು ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇನೆ.

ಶಿಕ್ಷಕರು ನಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಹುರಿದುಂಬಿಸಿ ಪ್ರೋತ್ಸಾಹಿಸುವ ಆ ದೇವರು ನೀಡಿದ ವಿಶಿಷ್ಟ ಕೊಡುಗೆ. ಅಬ್ದುಲ್ ಕಲಾಂ ಅವರು ಕೂಡ ತಮ್ಮ ಗುರುಗಳನ್ನು ನೆನೆಸದೆ ಭಾಷಣ ಮಾಡಿದ್ದನ್ನು ನಾನು ಕಂಡಿಲ್ಲ.  ಒಳ್ಳೆಯ ಗುರಿ ಹಾಗೂ ಗುರು ಎರಡು ಇದ್ದಾರೆ ಜೀವನದಲ್ಲಿ ಸಾಧನೆಗೆ ಕೊನೆಯೇ ಇರುವುದಿಲ್ಲವೇನೋ, ಬಹುಶಃ ಅದಕ್ಕೆ ದಾಸರು ಹೇಳಿದ್ದು “ಗುರುವಿನ ಗುಲಾಮನಾಗುವತನಕ ದೊರೆಯದು ಮುಕುತಿ” ಎಂದು.

ಎಲ್ಲವನ್ನು ಅರಿತ ಗುರು ಸಿಕ್ಕಿಬಿಟ್ಟರೆ ನೀನೇ ಧನ್ಯ ಎಂದು ಡಿ.ವಿ.ಜಿ ಅವರು ತಮ್ಮ ‘ಮಂಕುತಿಮ್ಮನ ಕಗ್ಗ’ದಲ್ಲಿ ಹೀಗೆ ಹೇಳುತ್ತಾರೆ

“ತರಣಿ ದರ್ಶನಕ್ಕಿಂತ ಕಿರಣಾನುಭವ ಸುಲಭ; ಪರಮ ಶಾಸ್ತ್ರಕ್ಕಿಂತ ಸರಿಯುದಾಹರಣೆ; ಪರಮ ತತ್ವವ ಕಂಡ ಗುರುವನರಸುವುದೆಲ್ಲಿ; ದೊರೆ ತಂದು ನೀ ಧನ್ಯ ಮಂಕುತಿಮ್ಮ”

ಶಿಕ್ಷಕ ವೃತ್ತಿ ಬಹು ಕಠಿಣ. ಆದರೆ ಈಗಿನ ಜನತೆ ಏನು ಆಗಲಿಲ್ಲವೆಂದಾಗ ಟೀಚರ್ ಆಗಲು ಬಯಸುತ್ತಾರೆ. ಇದು ಎಷ್ಟರ ಮಟ್ಟಿಗೆ ಸರಿ? ಎಲ್ಲರಿಗೂ ಒಳ್ಳೆಯ ಗುರು ದೊರೆತರೆ ಶಿಶುನಾಳ ಶರೀಫರು ಆಗಬಹುದು, ಅಬ್ದುಲ್ ಕಲಾಂ ಕೂಡ ಆಗಬಹುದು. ಎಲ್ಲರಿಗೂ  ಒಳ್ಳೆಯ ಗುರು ದೊರೆಯಲಿ. ಒಂದುವೇಳೆ ಆಗಲೇ ದೊರೆತಿದ್ದರೆ ಒಂದು ಧನ್ಯವಾದವನ್ನು ತಿಳಿಸಿಬಿಡೋಣ ಅಲ್ಲವೇ?? ಏನಂತಿರ ………